ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೀಗ ಜಾತ್ರಾ ಸಂಭ್ರಮ. ಹತ್ತು ದಿನಗಳ ಕಾಲ ನಡೆಯುವ ಜಾತ್ರೋತ್ಸವದಲ್ಲಿ ಹಲವು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತ ಜನಸಾಗರವೇ ನೆರೆದಿರುತ್ತದೆ.
ಪುರಾಣ ಐತಿಹ್ಯ
ಹಿಂದೆ ಕಾಶಿಯಿಂದ ದಕ್ಷಿಣ ಪಥಕ್ಕೆ ಬಂದಿದ್ದ ವಿಪ್ರರೊಬ್ಬರು ಉಪ್ಪಿನಂಗಡಿಗೆ ಬರುತ್ತಾರೆ. ಅಲ್ಲಿ ಗೋವಿಂದಭಟ್ಟರೆಂಬ ವಿಪ್ರರ ಸ್ನೇಹ ಬೆಳೆಯುತ್ತದೆ. ನಿತ್ಯವೂ ಮಧ್ಯಾಹ್ನ ಭೋಜನಕ್ಕೆ ಮುನ್ನ ತಮ್ಮಲ್ಲಿದ್ದ ಶಿವಲಿಂಗವನ್ನು ಪೂಜಿಸುತ್ತಿದ್ದರು. ಒಂದು ದಿನ ಆ ಲಿಂಗವನ್ನು ಗೋವಿಂದಭಟ್ಟರಿಗೆ ನೀಡಿ, ಈ ಲಿಂಗವನ್ನು ಕೈಯಲ್ಲಿ ಹಿಡಿದೇ ಪೂಜಿಸಬೇಕು. ಭೂಸ್ಪರ್ಶ ಮಾಡಬಾರದು ಎಂದು ಹೇಳಿ ಸ್ನಾನಕ್ಕೆ ಹೋದರು. ಎಷ್ಟು ಹೊತ್ತಾದರೂ ಮರಳಿ ಬರಲಿಲ್ಲ. ಅವರು ಬರುತ್ತಾರೆಂದು ಕಾಯುತ್ತಿದ್ದ ಭಟ್ಟರು ಲಿಂಗದೊಂದಿಗೆ ರಾತ್ರಿ ಪುತ್ತೂರಿಗೆ ಬರುತ್ತಾರೆ. ಬೆಳಗಾದ ಮೇಲೆ ಲಿಂಗಪೂಜಿಸಲು ಅದಕ್ಕೆ ಅಗತ್ಯವಾದ ಪರಿಕರ ತರಲು, ರಾಜ ಬಂಗರಾಯನ ಆಸ್ಥಾನಕ್ಕೆ ಹೋಗುತ್ತಾರೆ. ಆ ಹೊತ್ತಿನಲ್ಲಿ ರಾಜನ ಸೋದರಿ, ಪ್ರಸವದ ನೋವಿನಿಂದ ಬಳಲುತ್ತಿದ್ದಳು. ರಾಜ ಭಟ್ಟರಿಗೆ ಸ್ಪಂದಿಸುವುದಿಲ್ಲ. ಆದರೆ, ಮಂತ್ರಿ ರಾಜನ
ನೋವನ್ನು ಭಟ್ಟರಿಗೆ ತಿಳಿಸಿದಾಗ, ಭಟ್ಟರು, ತಮ್ಮ ಬಳಿಯಲ್ಲಿದ್ದ ಲಿಂಗಕ್ಕೆ ಪೂಜಿಸಿ, ಎಲ್ಲವೂ ನಿನ್ನ ಇಚ್ಛೆಯಂತೆ ಆಗಲಿ ಎಂದರಂತೆ. ಮರುಕ್ಷಣವೇ ಆಕೆಗೆ ಸುಖ ಪ್ರಸವವಾಗುತ್ತದೆ. ಅದನ್ನು ತಿಳಿದ ರಾಜ ಭಟ್ಟರಿಗೆ ಪೂಜೆಗೆ ಬೇಕಾದ ಎಲ್ಲ ಅಗತ್ಯ ವಸ್ತು ನೀಡುತ್ತಾರೆ. ಗೋವಿಂದ ಭಟ್ಟರು, ಆಗ ಭಂಡಾರಿ ಹಿತ್ತಿಲು ಎಂದು ಕರೆಸಿಕೊಳ್ಳುತ್ತಿದ್ದ ಈಗ ದೇವಾಲಯವಿರುವ ಜಾಗದಲ್ಲಿ ಮರೆತು ತಾವು ತಂದಿದ್ದ ಶಿವಲಿಂಗವನ್ನಿಟ್ಟು ಪೂಜಿಸಿದರಂತೆ. ಲಿಂಗ ಭೂಸ್ಪರ್ಶವಾಗಿತ್ತು. ಬೆಳಗ್ಗೆ ಲಿಂಗ ತೆಗೆಯಲು ಪ್ರಯತ್ನಿಸಿದಾಗ ಆಗಲಿಲ್ಲ. ಕೊನೆಗೆ ರಾಜನ ನೆರವು ಪಡೆದು ಲಿಂಗಕ್ಕೆ ಹಗ್ಗ ಕಟ್ಟಿ, ಪಟ್ಟದಾನೆಯಿಂದ ಎಳೆಸಿದರಂತೆ. ಲಿಂಗ ಬೆಳೆದು ಬೃಹದಾಕಾರವಾಯಿತು. ಮಹಾಲಿಂಗವಾಯ್ತು. ಲಿಂಗ ಎಳೆದ ಆನೆಯ ಅಂಗಾಂಗ ಬೇರೆಬೇರೆಯಾಗಿ ದೂರ ದೂರ ಎಸೆಯಲ್ಪಡುತ್ತದೆ. ಈ ಪವಾಡ ಕಂಡ ರಾಜ ಮಹಾಲಿಂಗೇಶ್ವರನಿಗೆ ಗುಡಿ ಕಟ್ಟಿಸಿದನಂತೆ.
ದೇವಸ್ಥಾನ ವಿಶೇಷತೆ
ಮಹಾಲಿಂಗೇಶ್ವರ ದೇವಾಲಯ ಪೂರ್ವಾಭಿಮುಖವಾಗಿದೆ. ಪಶ್ಚಿಮಕ್ಕೆ ದೊಡ್ಡ ಕೆರೆ ಇದೆ. ಎದುರು ಭಾಗದಲ್ಲಿ ರುಧ್ರಭೂಮಿ ಇದೆ. ವಿಶ್ವೇಶ್ವರ ನೆಲೆಸಿಹ ಕಾಶಿಯನ್ನು ಬಿಟ್ಟರೆ, ಶಿವದೇವಾಲಯದ ಬಳಿ ರುದ್ರಭೂಮಿ ಇರುವುದು ಪುತ್ತೂರಿನಲ್ಲಿ ಮಾತ್ರ. ಈ ದೇವಾಲಯದ ಹೊರಭಾಗದಲ್ಲಿ ಅಂದರೆ ದ್ವಾರದಲ್ಲಿ ಶಿವನ 16 ಅಡಿ ಎತ್ತರದ ಶಿವನ ಮೂರ್ತಿಯಿದೆ. ಪ್ರವೇಶ ದ್ವಾರ ದಾಟಿ ಬಂದರೆ, ಪ್ರದಕ್ಷಿಣ ಪಥದಲ್ಲಿ ಪಾರ್ವತಿ, ಸುಬ್ರಹ್ಮಣ್ಯ, ಗಣಪತಿ ಮೊದಲಾದ ಪರಿವಾರ ದೇವತೆಗಳ ಗುಡಿಗಳಿವೆ. ಪ್ರಧಾನ ಗರ್ಭಗೃಹದಲ್ಲಿ ಶಿವಲಿಂಗವಿದೆ.