ಸಾಧನಾ ತಪಸ್ವಿ ಕನಕಗಿರಿ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ

  • ವೀರೇಂದ್ರ ಬೇಗೂರು

ಪರಮ ಪಾವನ ಅತಿಶಯ ಜೈನ ಸಿದ್ಧಕ್ಷೇತ್ರ, ಪೂಜ್ಯಪಾದರ ತಪೋಭೂಮಿಯಾದ ಕನಕಗಿರಿ ಕ್ಷೇತ್ರವನ್ನಪರಮ ಪುನೀತಗೊಳಿಸಿದ ಕೀರ್ತಿಶಾಲಿಗಳು, ಜಿನಧರ್ಮದ ಪ್ರಭಾವನೆಯನ್ನು ಗಿರಿಶೃಂಗವೇರಿಸಿದ ಸಾಧನ ಪುರುಷರು, ಯೋಗದಿಂದಲೇ ಧರ್ಮಬೆಳಗಿದ ಧರ್ಮಯೋಗಿಗಳು, ಕನಕಗಿರಿಯ ಕನಕಾಮೃತವನ್ನು ವಿಶ್ವದೆಲ್ಲಡೆಗೂ ಉಣಬಡಿಸಿದ ಯಶೋತಿಲಕರು, ಕನಕಗಿರಿ ಕ್ಷೇತ್ರವನ್ನು ಭುವನ ಮನೋಹರಗೊಳಿಸಿದ ಭಟ್ಟಾರಕ ಪರಂಪರೆಯ ಧ್ರುವತಾರೆಗಳಲ್ಲಿ ಒಬ್ಬರು. ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳು. ಜನಾನುರಾಗಿ ಆದರ್ಶ ಗುರು ಸಂತ ಶ್ರೇಷ್ಠರು.

ಪೂಜ್ಯರು ಪೂರ್ವಾಶ್ರಮದಲ್ಲಿ ಮಲೆನಾಡಿನ ಪ್ರಕೃತಿ ಮಡಿಲಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ
ಹೇರೂರು ಗ್ರಾಮದಲ್ಲಿ, ಜೈನ ಸಂಪ್ರದಾಯಸ್ಥ ಕುಟುಂಬವಾದ ನೇಮಿರಾಜ ಶೆಟ್ಟರು ಮತ್ತು ಮರುದೇವಮ್ಮನವರ ಕಿರಿಯ ಪುತ್ರರಾಗಿ ಕ್ರಿ.ಶ.1966ರ ಮಾರ್ಚ 27ರಂದು ಜನಿಸಿದರು. ಇವರ ಪೂರ್ವಶ್ರಮದ ಹೆಸರು ವಾಸುಪೂಜ್ಯರು.
ತಂದೆ ನೇಮಿರಾಜ ಶೆಟ್ಟರು ಸಹ ಸ್ವಾಧ್ಯಾಯ ನಿಷ್ಟರು,ಪುರೋಹಿತ ಪ್ರಾವೀಣ್ಯರು, ಪುರಾಣ ಪ್ರವಾಚಕರು,
ಪಂಡಿತ್ತೋಮರು ಆಗಿದ್ದರಿಂದ, ಮಗನನ್ನು ಧರ್ಮದ ಹಾದಿಯಲ್ಲಿ ಧಾರ್ಮಿಕ ಹಿನ್ನಲೆಯಲ್ಲಿ ಬೆಳಸಬೇಕೇಂಬ ಕನಸು ಕಂಡವರು. ಅದರಂತೆ ಪೂಜ್ಯರು ತಂದೆ ಹಾದಿಯಲ್ಲಿ ಸಾಗಿದರು. ಬಾಲ್ಯದಿಂದಲೇ ಧಾರ್ಮಿಕ ಮನೋಭಾವನೆಗಳು ಪೂಜ್ಯರಲ್ಲಿ ಚಿಗುರೊಡೆದು, ಅದೇ ಮುಂದೆ ಹೆಮ್ಮರವಾಗಿ ಬೆಳೆಯಿತು. ಪೂಜ್ಯರಲ್ಲಿ ಲೌಕಿಕ ಶಿಕ್ಷಣಕ್ಕಿಂತ ಧರ್ಮ ಮತ್ತು ಅಧ್ಯಾತ್ಮದ ಶಿಕ್ಷಣದ ಕಡೆ ಒಲವು ಹೆಚ್ಚಾಗಿ ಅವರ ನರ ನಾಡಿಗಳಲ್ಲಿ ಚಿಮ್ಮತೊಡಗಿದ್ದರಿಂದ ಪೂಜ್ಯರ ತಂದೆಯವರು, ಮಗನನ್ನು ಶ್ರವಣಬೆಳಗೂಳದಲ್ಲಿನ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಗುರುಕಲದಲ್ಲಿ ಶಿ್ಕ್ಷಣಕ್ಕಾಗಿ ಸೇರಿಸಿದರು. ತಮ್ಮ ಹದಿಮೂರನೇ ವಯಸ್ಸಿನಲ್ಲಿ ಮನೆ ತೊರೆದು ಶ್ರವಣಬೆಳಗೊಳ ಸೇರಿದವರು ಮತ್ತೆ ಮನೆಕಡೆ ಮುಖ ಮಾಡಲಿಲ್ಲ. ಗುರುಕುಲದಲ್ಲಿನ ಧಾರ್ಮಿಕ ವಾತಾವರಣ ಅವರನ್ನು ಧರ್ಮದೆಡೆ ಸಾಗಲು ಸಹಕಾರಿಯಾಯಿತು. ಇದಕ್ಕೆ ಪೂರಕವೆಂಬಂತೆ ಶ್ರವಣಬೆಳಗೊಳದ ಭಟ್ಠಾರಕರಾದ ಚಾರುಕೀರ್ತಿ ಸ್ವಾಮೀಜಿಯವರ ಆಶೀರ್ವಾದ,ಮಾರ್ಗದರ್ಶನ ಹಾಗೂ ಸಹಯೋಗ ದೊರೆತು ಜೈನಾಗಮಗಳ ಅಧ್ಯಯನಕ್ಕೆ ನಾಂದಿಯಾಯಿತು ಹಾಗೂ ಅವರ ಬಾಲ್ಯದ ಹಂಬಲವು ಸಾಕಾರಗೊಳ್ಳಲು ಸಹಕಾರಿಯಾಯಿತು, ಇದರೊಂದಿಗೆ ಗುರುಕುಲದಲ್ಲಿ ಪೂಜ್ಯರು ಲೌಕಿಕ ಹಾಗೂ ಧಾರ್ಮಿಕ
ಶಿಕ್ಷಣದೊಂದಿಗೆ ವ್ಯಾಕರಣ,ಛಂದಸ್ಸ ಮತ್ತು ಪ್ರಾಕೃತ, ಸಂಸ್ಕೃತ, ಹಿಂದಿ, ಆಂಗ್ಲಭಾಷೆಯ ಅಪರಿಮಿತ ಜ್ಞಾನವನ್ನು ಪಡೆದರು. ಪೂಜ್ಯರು ಉನ್ನತ ಶಿಕ್ಷಣವನ್ನು ಮದ್ಯಪ್ರದೇಶದ ಜಬಲ್ ಪುರದಲ್ಲಿ,ಇಂದೂರಿನ ಕುಂದಕುಂದ ವಿದ್ಯಾಪೀಠದಲ್ಲಿ, ರೀವಾ ವಿಶ್ವವಿದ್ಯಾನಿಲಯದಲ್ಲಿ ಕಲಿತು ಕ್ರಿ.ಶ.1991ರಲ್ಲಿ ಶಾಸ್ತ್ರಿ ಪದವಿಯನ್ನು, ಕ್ರಿ.ಶ.1994ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ,ಎ, ಪದವಿಯನ್ನು, ಕ್ರಿ.ಶ.1997ರಲ್ಲಿ ಕಾಶಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದಿಂದ “‘ಪ್ರಾಕೃತ ಆಚಾರ್ಯ” ಪದವಿಯನ್ನು ಪಡೆದರು ಜೈನ ಆರಾಧನೆಗಳ ಬಗ್ಗೆ, ಜೈನ ಆಗಮಗಳ ಬಗ್ಗೆ ಅಪ್ರತಿಮ ವಿದ್ವತ್ ಪಡೆದಿದ್ದ ಶ್ರೀಗಳು ಭಾರತದ ನಾನಾ ಕಡೆಗಳಲ್ಲಿ ಇಂದ್ರದ್ವಜ, ಕಲ್ಪಧ್ರುಮ, ಬೃಹತ್ ಸಿದ್ಧಚಕ್ರ ಆರಾಧನೆಗಳನ್ನು ಕೈಗೊಂಡು “ಆರಾಧನಾ ವಿಶಾರದ” ರೆನಿಸಿದರು.

ಕ್ರಿ.ಶ. 1993ರ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಮಹಾರಾಜರ ಹಿಂದಿ ಭಾಷೆಯ ಪ್ರವಚನಗಳನ್ನು ಕನ್ನಡದಲ್ಲಿ ಅನುವಾದಿಸಿ ಹೇಳುವ ಕಾರ್ಯದಲ್ಲಿ ಯಶಸ್ವಿಯಾಗಿ ಒಬ್ಬ ವಿದ್ವತ್ ಪೂರ್ಣ ಪ್ರವಚನಕಾರರೆನಿಸಿದರು. ಆನಂತರ ಜೋತಿಷ್ಯ ಕಲಿತು ಜೋತಿಷ್ಯವಿಶಾರದ ರೆನಿಸಿದರು. ಸನ್ಯಾಸದೆಡೆಗೆ ಸಾಗಿದ ಶ್ರೀಗಳು ಸಂಸಾರ ಜೀವನದ ಬಗ್ಗೆ ಬಾಲ್ಯದಿಂದಲೂ ತಿರಸ್ಕಾರ ಭಾವ ಹೊಂದಿದ್ದ ಪೂಜ್ಯರು, ಉತ್ತರ ಭಾರತದಲ್ಲಿ ಶಿಕ್ಷಣ ಪಡೆಯುವಾಗಲೇ ಜೈನ ಮುನಿ ಶ್ರೇಷ್ಠರಾದ ವಿದ್ಯಾಸಾಗರ ಮಹಾಮುನಿ ಮಹಾರಾಜರ ಪ್ರಭಾವಕ್ಕೆ ಒಳಾಗಾಗಿ ತಮ್ಮ ಮನಸ್ಸನ್ನು ಸಾಂಸಾರಿಕ ಜೀವನದೆಡೆಗೆ ಸಾಗಬಿಡದೆ, ತ್ಯಾಗ ಜೀವನದ ಹಾದಿಯಲ್ಲಿ ಮುನ್ನೆಡೆಯಲು ಸಂಕಲ್ಪಮಾಡಿ, 1986ರಲ್ಲಿ ಶ್ರುತ ಪಂಚಮಿಯ ದಿನದಂದು ಮುನಿಗಳಿಂದ ಬ್ರಹ್ಮಚರ್ಯ ದೀಕ್ಷೆಯನ್ನು ಪಡೆದರು. ಬ್ರಹ್ಮಚರ್ಯ ದೀಕ್ಷೆ ಪಡೆದ ದಿನದಿಂದಲೂ, ಸರಳ ಜೀವನ ಶೈಲಿಯನ್ನು ಅಳವಡಿಸಿಕೊಂಡು,ವ್ರತ ನಿಯಮಗಳನ್ನು ಚಾಚು ತಪ್ಪದೆ ಪಾಲನೆ ಮಾಡತೊಡಗಿದ್ದರು.

ಬ್ರಹ್ಮಚರ್ಯದಲ್ಲಿದ್ದರೂ ಪೂಜ್ಯರ ಜೀವನ ಶೈಲಿ ಮಹಾಮುನಿಗಳ ಮಟ್ಟದಲ್ಲಿತ್ತು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಶ್ರವಣಬೆಳಗೊಳದ ಶ್ರೀಗಳು, ಚಾಮರಾಜನಗರ ಜಿಲ್ಲೆಯ
ಪ್ರಾಚೀನ ಅತಿಶಯ ಜೈನ ಕ್ಷೇತ್ರವಾದ ಕನಕಗಿರಿಯ ಸಂವರ್ಧನೆಯ ಸಂಕಲ್ಪ ಮಾಡಿ, ಕ್ಷೇತ್ರದ ಪ್ರಾಚೀನ ಧರ್ಮಪೀಠಕ್ಕೆ ವಾಸು ಪೂಜ್ಯರೇ ತಕ್ಕವರೆಂದು ತೀರ್ಮಾನಿಸಿ ಕ್ರಿ.ಶ.1997ರ ಮೇ 9ರ ಶುಕ್ರವಾರ ಈಶ್ವರ ನಾಮ ಸಂವತ್ಸರ ವೈಶಾಖ ಶುದ್ಧ ತದಿಗೆ ಅಕ್ಷಯ ತೃತೀಯದಂದು ವಿಚಾರ ಪಟ್ಟ ಕ್ಷುಲ್ಲಕ ದೀಕ್ಷೆಯನ್ನು ನೀಡಿ ಆಶೀರ್ವದಿಸಿದರು. ಮತ್ತು ಭುವನಕೀರ್ತೀ ಭಟ್ಠಾರಕರೆಂದು ಹೆಸರಿಸಿ ನಂತರ 1997ರ ಜೂನ್ 12ರಂದು ಕನಕಗಿರಿ ಕ್ಷೇತ್ರದ ಭಟ್ಟಾರಕರಾಗಿ ಪಟ್ಟಾಭಿಷಿಕ್ತಗೊಳಿಸಿದರು.


ಕನಕಗಿರಿಗೆ ಬೆಳಕಾದ ಶ್ರೀಗಳು
ಕನಕಗಿರಿ ಕ್ಷೇತ್ರಕ್ಕೆ ಚಂದ್ರನು ಉಚ್ಚಾಂಶದಲ್ಲಿದ್ದ ವೃಷಭ ಲಗ್ನದಲ್ಲಿ ಶ್ರೀಗಳು ಪ್ರಥಮ ಮಂಗಲ ಪ್ರವೇಶ
ಮಾಡಿದ ತಕ್ಷಣವೇ, ಕನಕಗಿರಿಯಲ್ಲಿ ಜಿನಧರ್ಮ ಸೂರ್ಯ ಪ್ರಕಾಶಮಾನ ಗೊಂಡು ಪ್ರಾಚೀನ ವೈಭವದ ಕಾಂತಿ
ಮರುಕಳಿಸಿ ಜ್ವಾಜಲ್ಯಮಾನವಾಗಿ ಬೆಳಗ ತೊಡಗಿತು. ಅಂದಿನಿಂದಲೇ ಕನಕಗಿರಿಯ ಕ್ಷೇತ್ರಾಭಿವೃದ್ದಿಯ ಕನಸುಕಂಡು,ಗುರುಗಳ ಮಾರ್ಗದರ್ಶನ ದಲ್ಲಿ ಹತ್ತು ಹಲವು ಕಾರ್ಯಯೋಜನೆ ಕೈಗೊಂಡು ಕಾರ್ಯೋನ್ಮುಖರಾದರು. ಹಲವು ವರ್ಷಗಳಿಂದ ನಿಂತು ಹೋಗಿದ್ದ ಪಾರ್ಶ್ವನಾಥರ ಮೋಕ್ಷ ಕಲ್ಯಾಣ “ಮುಕುಟ ಸಪ್ತಮಿ” ಮಹೋತ್ಸವಕ್ಕೆ ಚಾಲನೆ ನೀಡಿ ಸಾಕಾರಗೊಳಿಸಿದರು. ಕನಕಗಿರಿಯಲ್ಲಿ ಧರ್ಮಶಾಲೆ, ಧ್ಯಾನಮಂದಿರ, ಯಾತ್ರಿನಿವಾಸ, ಪೂಜ್ಯಪಾದ ಆಯುರ್ವೇದ ಆಸ್ಪತ್ರೆ, ಪೂಜ್ಯಪಾದ ಗುರುಕುಲ, ತ್ಯಾಗಿಭವನಗಳು ಕೆಲವೇ ವರ್ಷಗಳಲ್ಲಿ ತಲೆಎತ್ತಿ ಸುಂದರ ಆಧ್ಯಾತ್ಮಿಕ ಕ್ಷೇತ್ರವಾಗಿ ಬೆಳಗ ತೊಡಗಿತು.
ಇಂದಿನ ಯುಗಮಾನಕ್ಕೆ ಅಗತ್ಯವಾದ ಲೌಕಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಚಾಮರಾಜನಗರದಲ್ಲಿ
ಶಿಕ್ಷಣ ಸಂಸ್ಥೆ ತೆರೆದು ಬಡಮಕ್ಕಳಿಗೆ ಬೆಳಕಾದರು. ಮೈಸೂರಿನಲ್ಲಿ ಜೈನ್ ಎಜುಕೇಷನ್ ಸೊಸೈಟಿ ತೆರೆದು ಅದರ
ಮೂಲಕ ‘ಅನಾಥ ಮಕ್ಕಳ ಸೇವಾ ಕುಟೀರ’ ಸ್ಥಾಪಿಸಿ ಆ ಮೂಲಕ ಅನಾಥ ಮಕ್ಕಳ ಬಾಳಿಗೆ ಬೆಳಕಾದರು,
ಕನಕಗಿರಿಯ ಕ್ಷೇತ್ರದ ಇತಿಹಾಸದಲ್ಲೇ ಪ್ರಪ್ರಥಮ ಎನ್ನಬಹುದಾದ, ವಿಶ್ವ ಮಟ್ಟದ ‘ಗಜರಥ ಮಹೋತ್ಸವ’
ವನ್ನು ಕ್ರಿ.ಶ.1999ರಲ್ಲಿ ಆಯೋಜಿಸಿ ಕನಕಗಿರಿ ಕ್ಷೇತ್ರವನ್ನು ಜಾಗತಿಕವಾಗಿ ಒಂದು ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪರಿಚಯಿಸುವಲ್ಲಿ ಯಶಸ್ವಿಯಾದರು. ಮುಂದೆ ಇದೆ ಕಾರ್ಯಕ್ರಮ ‘’ಕನಕಗಿರಿ ಅತಿಶಯ
ಮಹೋತ್ಸವ”ವಾಗಿ ಪ್ರತಿ ಆರು ವರ್ಷಗಳಿಗೊಮ್ಮೆ ವಿವಿಧ ಧಾರ್ಮಿಕ,ಸಾಂಸ್ಕೃತಿಕ,ಸಾಮಾಜಿಕ ಕಾರ್ಯಕ್ರಮ ಗಳೊಂದಿಗೆ ಎಲ್ಲಾ ಸಮಾಜದವರ ಹಿತ ಕಾಯುವ ಕಾರ್ಯಕ್ರಮವಾಗಿ ಹೆಸರು ಪಡೆದು ನೆಡಯುತ್ತಿದೆ. ಈ ಕಾರ್ಯಕ್ರಮದಲ್ಲಿ ಜಗತ್ತಿನ ನಾನಾ ಕಡೆಗಳಿಂದ 1ಲಕ್ಷಕ್ಕೂ ಮಿಗಿಲಾದ ಜನರು ಭಾಗವಹಿಸಿ ಭಕ್ತಿ ಪರವಶರಾಗಿದ್ದಾರೆ. ಇದೇ ವರ್ಷ ಎಪ್ರಿಲ್ 27ರಿಂದ ಮೇ5ರ ವರೆಗೆ ಕನಕಗಿರಿ ಮಹೋತ್ಸವ ಜರುಗಲಿರುವುದು ನಮ್ಮಲ್ಲರ ಭಾಗ್ಯೋದಯವಾಗಿದೆ.
ಕನಕಗಿರಿಯಲ್ಲಿ ಒಂದು ಬಾಹುಬಲಿ ಸ್ಥಾಪಿಸ ಬೇಕೆಂಬ ಹಾಗೂ ಅದು ಶ್ರವಣ ಬೆಳಗೊಳದ ಬಾಹುಬಲಿ
ಮೂರ್ತಿಯ ಪ್ರತಿರೂಪದಂತಿರಬೇಕೆಂಬ ಶ್ರೀಗಳ ಬಹುದಿನದ ಕನಸು ಅದನ್ನು 2016ರಲ್ಲಿ ದಾನಿಗಳಾದ ಮೈಸೂರಿನ ಶ್ರೀ ವಿಶಾಲೇಂದ್ರಯ್ಯ ಮತ್ತು ಕುಟುಂಬದವರ ಸಹಕಾರದೊಂದಿಗೆ ಸಾಕಾರ ಗೊಳಿಸಿದರು. ಹಾಗೂ ಪ್ರಥಮ ಮಹಾಮಸ್ತಕಾಭಿಷೇಕ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು.
ಪ್ರಾಚೀನ ಕಾಲದಲ್ಲಿ ‘ನಾಕೋಪಮಾನ ಶೈಲ’ ಎಂದೇ ಖ್ಯಾತಿ ಹೊಂದಿದ್ದ ಕನಕಗಿರಿಯ ಬೆಟ್ಟದ ಮೇಲೆ,
ಪ್ರಾಚೀನ ವೈಭವಕ್ಕೆ ಚ್ಯುತಿ ಬರದಂತೆ, ಬಸದಿಯ ಸುತ್ತಲಿನ ಕೋಟೆಯ ಪುನರುತ್ಥಾನ ಕಾರ್ಯ ಕೈಗೊಂಡು ಇಡಿ
ಗಿರಿಯೇ ಕಂಗೊಳಿಸುವಂತೆ ಮಾಡಿ ಜಿನಧರ್ಮದ ಪವಿತ್ರಗಿರಿಯನ್ನಾಗಿಸಿದ ಕೀರ್ತಿಗೆ ಪೂಜ್ಯರು ಪಾತ್ರರಾದರು. ಗಿರಿಯ ತಪ್ಪಲಿನಲ್ಲಿ ಬ್ರಹ್ಮಯಕ್ಷ ಮಂದಿರ, ಭಗವಾನ್ ಪಾರ್ಶ್ವನಾಥರ ಭವ್ಯ ವಿಶಾಲ ಮಂದಿರ, ಬೆಟ್ಟದ ಮೇಲೆ
ಇಪ್ಪತ್ತನಾಲ್ಕು ಜೈನ ತೀರ್ಥಂಕರರ ಕೂಟಗಳ ಜೀರ್ಣೋದ್ದಾರ ಕಾರ್ಯವನ್ನು ಹಗಲಿರಳು ಶ್ರಮಿಸಿ ಪುನರುತ್ಥಾನ
ಕ್ಷೇತ್ರವನ್ನು ಭುವನ ಮನೋಹರ ಗೊಳಿಸಿದರು. 2016ರ ಕನಕಗಿರಿ ಮಹೋತ್ಸವ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಮಿಗಿಲಾದ ವಿದ್ಯಾರ್ಥಿಗಳನ್ನು ಸೇರಿಸಿ ಒಂದೆ ಭಾರಿಗೆ ಪೂಜ್ಯಪಾದರ ದೊಡ್ಡಪಾದ ನಿರ್ಮಿಸಿ ಗಿನ್ನಿಸ್ ದಾಖಲೆ ಮಾಡಲು ಸಹಕರಿಸಿದ್ದಾರೆ. ಇದು ಪೂಜ್ಯರ ಕಾರ್ಯವೈಖರಿಯ ಬಗ್ಗೆ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಲ್ಲದೇ ಕ್ಷೇತ್ರದಲ್ಲಿ ಜನರಿಗೆ ಅಗತ್ಯವಾದ ಕುಡಿಯುವನೀರು ಸೌಲಭ್ಯ, ಬೆಟ್ಟದ ಮೇಲ್ಭಾಗಕ್ಕೆ ಸಾಗಲು
ಉತ್ತಮವಾದ ರಸ್ತೆ, ಕ್ಷೇತ್ರಕ್ಕೆ ಬರುವ ಜನರಿಗೆ ಅನ್ನ ದಾಸೋಹ, ಸೂಕ್ತ ಚಿಕಿತ್ಸಾ ಸೌಲಭ್ಯಕ್ಕಾಗಿ ಆಸ್ಪತ್ರೆ,
ಮುಂತಾದವನ್ನು ತೆರೆದು ಪ್ರವಾಸಿಗರ,ಭಕ್ತರ ನಮ್ಮದಿ ತಾಣವನ್ನಾಗಿ ಕನಕಗಿರಿಯನ್ನು ಬೆಳಗಿದವರು ಪೂಜ್ಯ ಕನಕಗಿರಿ ಶ್ರೀಗಳು.

ಜೈನ ಕ್ಷೇತ್ರಗಳ ಸಂವರ್ಧಕರು
ಭುವನಕೀರ್ತಿ ಭಟ್ಟಾರಕರು ಹೆಸರಿಗೆ ತಕ್ಕಂತೆ ಜೈನ ಕ್ಷೇತ್ರಗಳ ಭುವನಕ್ಕೆ ಬೆಳಕಾದವರು, ಕನಕಗಿರಿಯ
ಸುತ್ತಲೂ ಇದ್ದ,ಜನಮಾನಸದಿಂದ ಕಣ್ಮರೆಯಾಗುವಂತಿದ್ದ ಪ್ರಾಚೀನ ಕ್ಷೇತ್ರಗಳ ಅಭಿವೃದ್ಧಿಗೆ ಪಣ ತೊಟ್ಟು
ಮುನ್ನಡೆದರು, ಕ್ಷೇತ್ರದ ಹಾಸುಪಾಸಿನಲ್ಲಿದ್ದ ಚೋಳ,ಗಂಗ,ಹೊಯ್ಸಳರ ಕಾಲದ ಕೆಲಸೂರು, ಮೂಗೂರು,
ಏಚಿಗನಹಳ್ಳಿ, ಉಮ್ಮತ್ತೂರು, ಹರವೆ, ಕುದೇರು.ಅನಿವಾಳು. ಸೇರಿದಂತೆ. ತೆಮಿಳನಾಡಿನ ದೀಪಂಗುಡಿ, ಕೇರಳದ
ವೈನಾಡಿನ ಪುಳಿಯಾರು ಮಲೈ ಜೈನ ಕ್ಚೇತ್ರಗಳ ಬಸದಿಗಳ ಜೀರ್ಣೋದ್ಧಾರ ಮಾಡಿಸಿ, ಆ ಕ್ಷೇತ್ರಗಳಲ್ಲಿ ಎಲ್ಲಾ
ರೀತಿಯ ಪೂಜಾವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಜನಮಾನಸದಲ್ಲಿ ಪ್ರಾಚೀನ ಕ್ಷೇತ್ರಗಳು
ಉಳಿಯುವಂತೆ ಕ್ಷೇತ್ರ ಸಂವರ್ಧನೆಗೊಳಿಸಿದರು.ಕ್ಚೇತ್ರದ ಹೊರತು ಪಡಿಸಿ ನಾಡಿನ ಹಲವು ಕಡೆ ಜೈನ ಬಸದಿಗಳ
ಜೀರ್ಣೋದ್ದಾರ ಕಾರ್ಯಮಾಡಿಸಿ ಕ್ಷೇತ್ರ ಉಳಿಸುವಲ್ಲಿ ಅಹರ್ನಿಶ ಸೇವೆ ಸಲ್ಲಿಸಿ ಸಂವರ್ದನೆ ಗೊಳಿಸಿದ್ದಾರೆ
ಶಿಕ್ಷಣ ಮತ್ತು ಸಾಮಾಜಿಕ ಸೇವಾನಿರತ ಶ್ರೀಗಳು

ಪೂಜ್ಯರು ಪೀಠಾಧ್ಯಕ್ಷರಾದ ದಿನದಿಂದಲೂ, ಅಪಾರ ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದು, ಜೈನ
ಸಮಾಜವಷ್ಟೇ ಅಲ್ಲದೆ, ಇತರ ಸಮುದಾಯಗಳ ಅಭಿವೃದ್ಧಿಯ ಕಡೆಗೂ ಗಮನ ಹರಿಸಿದರು.ಎಲ್ಲಾ ಜನಾಂಗದ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ,ಪ್ರತಿಭಾ ವೇತನ, ಉಚಿತ ಶಿಕ್ಷಣ ಸಲಕರಣೆಗಳನ್ನು ಸುತ್ತಲಿನ ಶಾಲೆಗಳಿಗೆ ನೀಡಿ ಅಭಿವೃದ್ದಿಗೆ ಶ್ರಮಿಸಿದರು. ಶ್ರೀಕ್ಷೇತ್ರದಲ್ಲಿ ಆರೋಗ್ಯ ಶಿಬಿರಗಳು,ಸಮಾಜ ಕಲ್ಯಾಣ ಕಾರ್ಯಕ್ರಮಗಳು, ಕೃತಕ ಕಾಲು ಜೋಡಣಾ ಶಿಬಿರ, ನೇತ್ರಚಿಕಿತ್ಸಾ ಶಿಬಿರ, ಯೋಗ ಶಿಬಿರಗಳನ್ನು ಆಯೋಜಿಸಿ ಸುತ್ತಲಿನ ಸಮಾಜದವರಿಗೆ ನೆರವಾದರು. ಕ್ಷೇತ್ರದಲ್ಲಿ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪೂಜ್ಯಪಾದ ಆಸ್ಪತ್ರೆ ತೆರೆದು ಉಚಿತ ಸೇವಾ ಸೌಲಭ್ಯ ನೀಡಿದ್ದಾರೆ.


ಪರಿಸರ ಪ್ರೇಮಿ ಶ್ರೀಗಳು
ಪೂಜ್ಯರು ಕ್ಷೇತ್ರದ ಪ್ರಾಚೀನತೆಯನ್ನು ಸಂಪೂರ್ಣವಾಗಿ ಅರಿತು,ಹಿಂದೆ ಕ್ಷೇತ್ರವು ಪ್ರಾಕೃತಿಕವಾಗಿ ಗಿಡಮರಗಳಿಂದ ತುಂಬಿ ದಟ್ಟ ಕಾನನದಿಂದ ತುಂಬಿತ್ತು. ಮಲಯಗಿರಿ ಚಂದನಕ್ಕೆ ಹೆಸರಾಗಿತ್ತು.ಇಲ್ಲಿ ಅಪೂರ್ವ ಔಷಧ ಸಸ್ಯಗಳು ಯಥೇಚ್ಚವಾಗಿದ್ದು,ಇಲ್ಲಿನ ಒಂದು ಮಾದರಿಯ ಸಸ್ಯದಿಂದಲೇ ರಸವಿದ್ಯೆ ಮಾಡುವುದನ್ನು ನಾಗಾರ್ಜುನ ಪಡೆದಿದ್ದ ಎಂದು ಇತಿಹಾಸ ಗಳಿಂದ ತಿಳಿದು ಬಂದಿದ್ದು ಅರಿತ ಶ್ರೀಗಳು, ಆನಂತರದಲ್ಲಿ ಬರಿದು ಬೆಂಗಾಡಗಿದ್ದ
ಗಿರಿಯಲ್ಲಿ ಸಸ್ಯ ಸಂಪತ್ತನ್ನು ಸಮೃದ್ಧಿ ಗೊಳಿಸಲು ಅರಣ್ಯ ಇಲಾಖೆಯ ಸಹಕಾರ ದೊಂದಿಗೆ, ‘ಆಯುರ್ವೇದ
ಸಸ್ಯೋದ್ಯಾನ ‘ ವನ್ನು ಮಾಡಿದ್ದಾರೆ. ಹಾಗೂ ತಾವು ನಾಡಿನಾದ್ಯಂತ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಟಿ ಕೊಟ್ಟು ಕ್ಷೇತ್ರಕ್ಕೆ ಹಿಂದಿರುಗುವ ಸಂದರ್ಭದಲ್ಲಿ, ತಮ್ಮ ಜೊತೆಯಲ್ಲಿ ಹಲವು ಬಗೆಯ ಔಷದ ಸಸ್ಯಗಳು, ಶ್ರೀಗಂಧ, ಚಂದನ ಸಸ್ಯಗಳನ್ನು ತಂದು ಸ್ವತಃ ನಿಂತು, ನೀರೆರೆದು ಬೆಳಸಿ, ತಾಯಿ ತನ್ನ ಮಗುವನ್ನು ಸಲಹುವಂತೆ ಕ್ಷೇತ್ರದಲ್ಲಿ ಗಿಡಮರಗಳನ್ನು ಸಲಹಿ, ಕ್ಷೇತ್ರವನ್ನು ಪ್ರಕೃತಿಯ ರಮ್ಯ ತಾಣವಾಗಿ ಕಂಗೊಳಿಸುವಂತೆ ಮಾಡಿದರು.


ಜನಾನುರಾಗಿ ಶ್ರೀಗಳು
ಪೂಜ್ಯರು ಎಂದಿಗೂ ಜನಸಾಮಾನ್ಯರೊಂದಿಗೆ ಗತ್ತು ಗಾಂಭಿರ್ಯ ತೋರಿದವರಲ್ಲ. ಸಾಧು ಸ್ವಭಾವದವರು,
ಯಾರಿಗೂ ನೋವಾದಂತೆ ಎಂದು ಮಾತಾನಾಡದವರು. ಜನರ ಸಮಸ್ಯೆಗಳಿಗೆ ನೆರವಾದವರು.ಬಡ ಜನರ ಬಗ್ಗೆ ಅತೀವ ಕಾಳಜಿ ಹೊಂದಿದವರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರ ಜೊತೆ ಗುರುತಿಸಿ ಕೊಂಡವರು ಕೇವಲ ಜೈನ ಸಮಾಜದವರಿಗಷ್ಟೇ ಅಲ್ಲದೇ ಎಲ್ಲರಿಗೂ ಮಾರ್ಗದರ್ಶನ ಮಾಡಿದವರು. ಕ್ಷೇತ್ರಕ್ಕೆ ಹಲವಾರು ಜನ ಕ್ಷೇತ್ರ ನೋಡಲು, ದೇವರ ದರ್ಶನ ಪಡೆಯಲು ಬರುವುದಕ್ಕಿಂತ, ಪೂಜ್ಯರನ್ನು ಕಾಣ ಬರುವವರೆ ಹೆಚ್ಚು. ಪೂಜ್ಯರು ಕ್ಷೇತ್ರಕ್ಕೆ ಬರುವ ಜನರಿಗಾಗಿಯೇ ಹೆಚ್ಚಿನ ಸಮಯ ಮೀಸಲಿಟ್ಟು ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಮಾರ್ಗದರ್ಶನ ಮಾಡುವ ಸೇವೆ ಇಂದಿಗೂ ನಿರಂತರವಾಗಿ ನೆಡಯುತ್ತಿರುವುದನ್ನು ಕಾಣಬಹುದು. ಇದರಿಂದಾಗಿ ಎಷ್ಟೋ ಬಾರಿ ಅನ್ನ ಅಹಾರವನ್ನೆ ಮರೆತು ಜನರೊಂದಿಗೆ ಬೆರತು ಹೋದ ನಿದರ್ಶನಗಳನ್ನು ಜನರೇ ಹೇಳುತ್ತಾರೆ. ಕ್ಷೇತ್ರಕ್ಕೆ ಬರುವ ಎಲ್ಲರನ್ನು ಸಮಭಾವದಿಂದ ಕಂಡು, ಅವರ ಕ್ಷೇಮ ವಿಚಾರಿಸಿದ ನಂತರವೇ ಅವರ ಮುಂದಿನ ಕಾರ್ಯ.ಅದಕ್ಕಾಗಿಯೇ ಜನರು ಪ್ರೀತಿ ಪಾತ್ರ ಗುರುಗಳಾಗಿ ಜನಾನುರಾಗಿಯಾಗಿದ್ದಾರೆ. ಪಟ್ಟಾಭಿಷೇಕ ರಜತೋತ್ಸವ ಸಂಭ್ರಮದಲ್ಲಿ ಶ್ರೀಗಳು ಕನಕಗಿರಿ ಕ್ಷೇತ್ರದ ಭಟ್ಟಾರಕರಾಗಿ ಪೂಜ್ಯ ಸ್ವಸ್ತೀಶ್ರೀ ಭುವನ ಕೀರ್ತೀ ಭಟ್ಟಾರಕ ಸ್ವಾಮೀಜಿಯವರು, ಪಟ್ಟಾಭಿಷಿಕ್ತರಾಗಿ 25 ವರ್ಷಗಳಾಗಿ ರಜತ ಮಹೋತ್ಸವದ ಅಂಚಿ ನಲ್ಲಿದ್ದರೂ, ಈ 25 ವರ್ಷಗಳಲ್ಲಿ ಹತ್ತಾರು ಯೋಜನೆಗಳನ್ನು ಕಾರ್ಯಗತಗೊಳಿಸಿ, ಸಾಧು ಶ್ರೇಷ್ಟರ ಸಾಲಿನಲ್ಲಿ ನಿಲ್ಲವಂತ ಸಾಧನೆಯನ್ನು ಮಾಡಿದವರಾಗಿದ್ದರೂ ಸಹ, ಅವರು ಹೇಳುವುದೊಂದೇ “ಇದೆಲ್ಲಾ ಜನರಿಂದ ಆಗಿರುವುದು. ಇದರಲ್ಲಿ ನಮ್ಮ ಕಿಂಚಿತ್ ಪಾತ್ರವಿಲ್ಲ.ಈಗ ಕ್ಷೇತ್ರದಲ್ಲಿ ಆಗಿರುವ ಕಾರ್ಯ ಅತ್ಯಲ್ಪ. ಇನ್ನೂ ಕಾರ್ಯಗತಗೊಳಿಸ ಬೇಕಿರುವುದು ಬಹಳ ಇದೆ. ಸಮಾಜದ ಸಹಕಾರದೊಂದಿಗೆ ಅವೆಲ್ಲಾವನ್ನು ಕಾರ್ಯಗತ ಗೊಳಿಸ ಬೇಕಾಗಿದೆ. ಅವಲ್ಲಾವನ್ನು ಜಾರಿಗೊಳಿಸಿದ ನಂತರವೇ ನಮಗೆ
ರಜತ ಸಂಭ್ರಮ. ಆದರೂ ಶ್ರೀಮಠದ ಭಕ್ತರ, ಸಮಾಜದ ಮುಖಂಡರ ಅಪೇಕ್ಷೆ ಮತ್ತು ಒತ್ತಾಯದೊಂದಿಗೆ ಇದೆ ಎಪ್ರಿಲ್ 29ರಂದು ಶ್ರೀ ಗಳ ಪಟ್ಟಾಭಿಷೇಕ ರಜತ ಮಹೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವುದು ನಾಡಿನ ಜೈನ ಸಮಾಜದ ಹಿರಿಮೆಯಾಗಿದೆ.
ಕಲೆ ಮತ್ತು ಸಾಹಿತ್ಯದ ಆರಾಧಕರು.

ಪೂಜ್ಯರು ಪೂಜೆ ವಿಧಿ ,ಆರಾಧನೆ,ವಿಧಾನಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯ ಮತ್ತು ಕಲೆಗೆ ಮಹತ್ವದ
ಸ್ಥಾನವನ್ನು ಕ್ಷೇತ್ರದಲ್ಲಿ ನೀಡಿದ್ದಾರೆ, ಅದಕ್ಕಾಗಿ ಕನಕಗಿರಿ ಪ್ರಕಾಶನ ಸಂಸ್ಥೆಯನ್ನು ತೆರೆದು ಪೂಜ್ಯಪಾದ ಚರಿತೆ,
ಕನಕಗಿರಿ ಚರಿತೆ,. ರಾಜಾವಳಿ ಕಥಾಸಾರ, ಸತಿಧರ್ಮಸಾರ, ಸೇರಿದಂತೆ ಹಲವಾರು ಜೈನ ಸಿದ್ದಾಂತ ಗ್ರಂಥಗಳನ್ನು
ಪ್ರಕಟಗೊಳಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ. ಈಗಾಗಲೇ ಜೈನ ಸಮಾಜಕ್ಕೆ ಹಾಗೂ ಜೈನ
ಸಿದ್ದಾಂತಗಳ ಅಧ್ಯಯನ ಮಾಡುವವರಿಗೆ ಅಗತ್ಯವಾದ ‘ಜೈನ ಸಿದ್ಧಾಂತ ಕೋಶ’ದ ಬೃಹತ್ ಕನ್ನಡ ಅನುವಾದ
ಯೋಜನೆಯನ್ನು ಕೈಗೊಂಡು 9 ಸಂಪುಟಗಳನ್ನು ಹೊರತರುವ ಯೋಜನೆಯು ಪ್ರಗತಿಯಲ್ಲಿದ್ದು, ಕನಕಗಿರಿ
ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಗೊಳ್ಳಲಿದೆ. ಅಲ್ಲದೇ ಕನಕಗಿರಿಯ ಬೆಟ್ಟದ ಮೇಲೆ ಒಂದು ಸುಂದರ
ಮೌಲ್ಯಯುತ ಗ್ರಂಥಗಳನ್ನುಳ್ಳ ಪೂಜ್ಯಪಾದ ಗ್ರಂಥ ಭಂಡಾರ, ಹಾಗೂ ತಾಳೆಗರಿ ಗ್ರಂಥಮಾಲೆ ತೆರೆದು
ಅಧ್ಯಯನಾಸಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಕ್ಷೇತ್ರದಲ್ಲಿ ಹಲವು ವಿಚಾರಣ ಸಂಕಿರಣ ಗಳನ್ನು ಕೈಗೊಂಡು

ಚಿಂತನ ಮಂಥನಕ್ಕೆ ಅವಕಾಶ ಮಾಡಿರುವುದು ಇವರ ಸಾಹಿತ್ಯದ ಬಗ್ಗೆ ಪೂಜ್ಯರಿಗೆ ಇರುವ ಒಲವನ್ನು
ಎತ್ತಿತೋರಿಸುತ್ತದೆ. ಇಂತಹ ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಗಳಾದ ಪೂಜ್ಯಶ್ರೀ ಭುವನಕೀರ್ತಿ ಭಟ್ಟಾರಕ
ಸ್ವಾಮೀಜಿಯವರು, ಸದಾ ಹಸನ್ಮುಖಿಗಳು, ಭಕ್ತರ ಪಾಲಿನ ಭಗವತ್ಪಾದರು, ಧರ್ಮಯೋಗಿಗಳು, ಸಾಧನೆಯ ಹಾದಿ ಹಿಡಿದು ಸಾಕಾರ ಗೊಳಿಸಿದ ಸಾಧನಾ ತಪಸ್ವಿಗಳು ಎನಿಸಿದ್ದಾರೆ, ಇಂತಹ ಒಬ್ಬ ಜೈನ ಸಂತ ಸಾಧನಾ
ತಪಸ್ವಿಯನ್ನೊಂದಿರುವುದು ಜೈನ ಸಮಾಜವಷ್ಟೇ ಅಲ್ಲದೇ ಇಡಿ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿ.

Related Articles

ಪ್ರತಿಕ್ರಿಯೆ ನೀಡಿ

Latest Articles