ಜನವರಿ 19 ರಂದು ವೇಮನ ಜಯಂತಿ

ಜೀವನವೆಂಬ ಸಂತೆಯಲ್ಲಿದ್ದುಕೊಂಡೆ ಸಂತನಾಗಿ ಬೆಳೆದ ಚಿಂತಕ ‘ಮಹಾಯೋಗಿ ವೇಮನ’

ಜನಸಾಮಾನ್ಯರ ಕವಿಯಾದ ಯೋಗಿ ವೇಮನ ಜಾತೀಯತೆ , ಅಂಧ ಶ್ರದ್ಧೆ ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯಲ್ಲಿದ್ದುಕೊಂಡೆ ಸಂತನಾಗಿ ಬೆಳೆದ ಅವರು ಒಬ್ಬ ಅಪೂರ್ವ ಸಮಾಜ ಸುಧಾರಕ. ಜನವರಿ 19 ರಂದು ಅವರ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ.


* ಜಗದೀಶ ಹದ್ಲಿ, ತಿಮ್ಮಾಪೂರ

‘ವೇಮನರು 15ನೇ ಶತಮಾನದಲ್ಲಿ ಆಗಿ ಹೋದ ಮಹಾಕವಿ. ಅವರ ಕವಿತೆಗಳು ತಾಳೆಯ ಗರಿಯಲ್ಲಿ ನಿದ್ರಿಸುತ್ತಿದ್ದವು, ಕೆಲವು ಕವಿತೆಗಳಂತೂ ಜನರ ಬಾಯಲ್ಲಿ ಆಡು ಮಾತಿನಂತಿದ್ದವು. ಆದರೆ ಪುಸ್ತಕ ರೂಪದಲ್ಲಿ ಹೊರಬರಲು ಮೂರು ನೂರು ವರ್ಷಗಳೆ ಕಾಯಬೇಕಾಯಿತು’- ಇದು ದಾರ್ಶನಿಕರೊಬ್ಬರ ವ್ಯಥೆಯ ಬಹು ದೊಡ್ಡ ಕಥೆ.
ಒಂದು ದೇಶಕ್ಕಾಗಲಿ, ಒಂದು ಜನಾಂಗಕ್ಕಾಗಲಿ, ಅದರ ಸಾಹಿತ್ಯದಿಂದಲೇ ಬೆಲೆ ಇರುತ್ತದೆ. ದೊಡ್ಡ ಜೀವನವನ್ನು ಬದುಕಲಿಲ್ಲದ ಜನರಿಂದ ಹೇಳಿಕೊಳ್ಳುವಂತ ಸಾಹಿತ್ಯ ಬರುವುದಿಲ್ಲ ಎಂಬ ಮಾತೊಂದಿದೆ. ವೇಮನರು ಸರಳತೆಯಿಂದ ಬದುಕಿ, ಸಂತ ಜೀವನಕ್ಕೆ ಮಾದರಿ ಎನಿಸಿದ್ದರು. ಆದುದರಿಂದಲೆ ಅವರಿಂದ ಉತ್ಕೃಷ್ಠವಾದ ಸಾಹಿತ್ಯ ಬಂದಿತು. ವೇಮನರ ಸಾಹಿತ್ಯವು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ, ಜೀವನದಲ್ಲಿ ಪ್ರತಿಕೂಲ ಪ್ರಸಂಗ ಬಂದಾಗ ಅದು ಸಾಂತ್ವನ ಹೇಳುತ್ತದೆ, ಅವರ ಕಾವ್ಯವನ್ನು ಓದಿದವರಿಗೆಲ್ಲ ಪ್ರಸನ್ನತೆಯನ್ನು ತಂದುಕೊಡುತ್ತದೆ.


ಇಂದಿನ ಆಂಧ್ರ ಪ್ರದೇಶದ ಗುಂಟೂರ ಜಿಲ್ಲೆಯ ಕೊಂಡವೀಡು ಗ್ರಾಮದಲ್ಲಿ ಕ್ರಿ.ಶ.1412 ರಲ್ಲಿ ವೇಮನರ ಜನನವಾಯಿತು. ಈ ಪ್ರದೇಶವನ್ನು ಆಳಿದ ದೊರೆ ಕುಮಾರ ಗಿರಿರಡ್ಡಿ ವೇಮನರ ತಂದೆ. ರಾಣಿ ಮಲ್ಲಮಾಂಬೆ ವೇಮನರ ತಾಯಿ. ಕೊಂಡವೀಡು ಅವರ ಜನ್ಮಸ್ಥಳ ಎಂಬುದಕ್ಕೆ ಅವರ ಪದ್ಯವೇ ಸಾಕ್ಷಿ.
ಊರು ಕೊಂಡವೀಡು ವಾಸ ಪಶ್ಚಿಮವೀಧಿ
ಮೂಗಚಿಂತೆಪಲ್ಲೆ ಮೊದಲ ಮನೆಯು
ಎಡ್ಡಿ ರೆಡ್ಡಿ ಕುಲವು ಅದನೇನು ಹೇಳ್ವದು
ವಿಶ್ವದಾಭಿರಾಮ ಕೇಳು ವೇಮ.


ಅನಂತಪುರ ಜಿಲ್ಲೆಯ ಕದಿರು ತಾಲೂಕಿನ ಕಟಾರುಪಲ್ಲಿಯಲ್ಲಿ ಕೊನೆಯ ದಿನಗಳನ್ನು ಕಳೆದು ಕ್ರಿ.ಶ 1480ರಲ್ಲಿ ಐಕ್ಯರಾದರು. ಈಗಲೂ ಅವರ ಸಮಾಧಿಯು ಅಲ್ಲಿದೆ. ಅದೊಂದು ಪುಣ್ಯ ಕ್ಷೇತ್ರವಾಗಿ ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿದೆ. ಅಲ್ಲಿಗೆ ಈಗಲೂ ವೇಮನರ ಅಭಿಮಾನಿ ಭಕ್ತರು ಬೇಟಿಕೊಡುತ್ತಾರೆ.
ವೇಮನರು ತನ್ನ ಜೀವಿತದ ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿರಲಿಲ್ಲ, ಬಟ್ಟೆಯಿಲ್ಲದೆ ಊರು ಊರು ತಿರುಗಿ ಭಿಕ್ಷಾನ್ನವನ್ನುಂಡು ಜನರ ನೋವು ನಲಿವುಗಳನ್ನು ಸ್ವತಹ ಕಣ್ಣಾರೆ ಕಂಡು ಕಾವ್ಯ ರಚಿಸಿದ್ದಾರೆ. ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವವಿದೆ. ವಾಸ್ತವಿಕ ಸಮಾಜವನ್ನು ನಿರ್ಮಿಸುವ ಕಳಕಳಿಯನ್ನು ಅವರ ಕಾವ್ಯದುದ್ದಕ್ಕೂ ಕಾಣಬಹುದಾಗಿದೆ.

ವೇಮನರ ಕಾವ್ಯದ ಕಳಕಳಿ

ಸಮಾಜದಲ್ಲಿ ದಿನನಿತ್ಯ ನಡೆಯುವ ಜಾತಿ ಸಂಘರ್ಷ, ಮೇಲು ಕೀಳುಗಳ ತಾರತಮ್ಯ, ನೋವು ಕ್ರೌರ್ಯಗಳಿಗೆ ವೇಮನರ ಸಾಹಿತ್ಯದಲ್ಲಿ ಉತ್ತರವಿದೆ. ಹಣ, ಆಸ್ತಿ, ಕಾಮ, ಹಿಂಸೆಗಳಿ0ದ ನಮ್ಮ ಕೌಟುಂಬಿಕ ವ್ಯವಸ್ಥೆ ಅಸ್ತವ್ಯಸ್ತವಾಗುವ ರೂಢಿಗತ ಶೋಷಣೆಯನ್ನು ಧಿಕ್ಕರಿಸಿದ್ದಾರೆ. ಈ ನೋವುಗಳಿಗೆ ಉತ್ತರಿಸಲು ಎಲ್ಲ ಕಾಲ ಘಟ್ಟಕ್ಕೂ ಅನ್ವಯಿಸುವಂತೆ ವೇಮನರು ಕಾವ್ಯವನ್ನು ಬರೆದಿದ್ದಾರೆ, ತಪ್ಪು ಮಾಡುವವರಿಗೆ ಎಚ್ಚರಿಸಿದ್ದಾರೆ. ಆದ್ದರಿಂದ ಅವರ ಕಾವ್ಯ ಎಲ್ಲ ಕಾಲಕ್ಕು ಎಲ್ಲ ಜನಾಂಗಕ್ಕೂ ಅನ್ವಯಿಸುವಂತದ್ದು.


ಬಹಳಷ್ಟು ವಿಷಯದ ಬಗ್ಗೆ ಹೊಸ ಆಲೋಚನೆಗಳನ್ನು ಅವರ ಕಾವ್ಯ ಕಟ್ಟಿ ಕೊಡುತ್ತದೆ. ವೇಮನರ ಕಾವ್ಯ ಕೇವಲ ಕವಿಗಳಿಗೆ ಅಷ್ಟೆ ಸೀಮಿತವಾದುದಲ್ಲ, ಅವರ ಕಾವ್ಯವನ್ನು ಜನ ಸಾಮಾನ್ಯರು ಓದಿ ಅರ್ಥೈಸಿಕೊಳ್ಳಬಹುದು. ಮಾನವನ ಬದುಕಿನ ಭಾಗವಾಗಿ ಅವರ ಕಾವ್ಯ ನಮ್ಮ ಮೈಮನದಲ್ಲಿ ಸಂಚರಿಸುತ್ತದೆ. ದಿನನಿತ್ಯ ಹೇಗೆ ತಪ್ಪು ಮಾಡುತ್ತೇವೆ ಅದನ್ನು ತಿದ್ದಿಕೊಂಡು ಸುಂದರವಾದ ಬದುಕನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದು ವೇಮನರ ಕಾವ್ಯದ ಕಳಕಳಿ.


ಕನ್ನಡದಲ್ಲಿ ಸರ್ವಜ್ಞ ಕವಿ ಊರು ಊರು ಸುತ್ತಿ ಜನರ ಹತ್ತಿರ ಇದ್ದು ಆ ಅನುಭವದಿಂದ ತ್ರಿಪದಿಗಳನ್ನು ರಚಿಸಿದರು, ಹಾಗೆ ತೆಲುಗಿನಲ್ಲಿ ಯೋಗಿ ವೇಮನರು ಸಂಚಾರಿಯಾಗಿ ಜನರ ನೋವು ನಲಿವುಗಳನ್ನು ಕಣ್ಣಾರೆ ಕಂಡು ಕವಿತೆಗಳನ್ನು ರಚಿಸಿದರು.
ವೇಮನರು ತಮ್ಮ ಕಾವ್ಯದುದ್ದಕ್ಕೂ ಮೌಢ್ಯ, ಅಂಧ, ಶ್ರದ್ಧೆ, ಜಾತಿ, ಗುಣ, ನಡತೆ, ದೇವರು, ಮೂರ್ತಿಪೂಜೆ, ಮಾನವೀಯ ಮೌಲ್ಯ, ಜೀವನ ಪ್ರೀತಿ, ಅರಿಷಡ್ವರ್ಗಗಳು, ಸುಳ್ಳು, ಮೋಸ, ವಂಚನೆ ಮುಂತಾದ ಗಹನವಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾರೆೆ. ಇವೆಲ್ಲ ತತ್ವಗಳು ಸಮಾಜಮುಖಿಯಾಗಿ ಜನಸಾಮಾನ್ಯರ ಹೃದಯವನ್ನು ಮುಟ್ಟುತ್ತವೆ, ತಟ್ಟುತ್ತವೆ. ಈ ಲೋಕದಲ್ಲಿ ಎಲ್ಲವೂ ಸರಿ ಇಲ್ಲ ಹಲವಾರು ತಪ್ಪುಗಳು ಸೇರಿಕೊಂಡಿವೆ. ಅವುಗಳನ್ನು ಸರಿಪಡಿಸಿ ಸಮಾಜವನ್ನು ಬದಲಿಸಬೇಕು ಎಂಬುದು ವೇಮನರು ಕಾವ್ಯದ ನಿಲುವು.

ವೇಮನರ ದೃಷ್ಟಿಕೋನ ಇಂದಿಗೂ ಪ್ರಸ್ತುತ
ವೇಮನರು ತಮ್ಮ ವಚನದ ಅಂಕಿತವನ್ನು ತಮ್ಮ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಕೇಳು ವೇಮ ಎಂದಿದೆ, ಮನುಷ್ಯರೆಲ್ಲರು ಪರಿಪೂರ್ಣರಲ್ಲ ಪ್ರತಿಯೊಬ್ಬರು ತಮ್ಮನ್ನು ತಾವು ತಿದ್ದಿಕೊಂಡು ನಡೆಯುವ ಅವಶ್ಯಕತೆ ಇದೆ ಎಂಬ ಸಂದೇಶವು ನಮಗೆ ದಾರಿ ದೀಪದಂತಿದೆ. ಆದ್ದರಿಂದ ವೇಮನರು ನೀನು ಹೀಗೆ ಇರಬೇಕೆಂದು ತನ್ನನ್ನು ತಾನೇ ಕೇಳಿಕೊಂಡಿದ್ದಾನೆ. ಅಂದರೆ ನಾವೂ ತಿದ್ದಿಕೊಂಡು ನಡೆಯಬೇಕೆಂಬ ಅರಿವು ಸಂದೇಶ ಇದರಲ್ಲಿದೆ, ವೇಮನರು ಧರ್ಮದ ಆಳದಲ್ಲಿ ಬೇರೂರಿದ ಅಂಧಶ್ರದ್ಧೆಗಳನ್ನು ಮೂಢನಂಬಿಕೆಗಳನ್ನು ಜನಸಾಮಾನ್ಯರಿಗೆ ಅವರ ಭಾಷೆಯಲ್ಲಿಯೇ ತಿಳಿಸಿದ್ದಾರೆ. ಪ್ರತಿಯೊಂದನ್ನು ವಿಮರ್ಶಾತ್ಮಕ ದೃಷ್ಠಿಯಿಂದ ನೋಡಿದ ಪ್ರಯುಕ್ತ ವೇಮನರು ಇಂದಿಗೂ ಪ್ರಸ್ತುತರಾಗಿದ್ದಾರೆ.


ಹದಿನೈದು ಸಾವಿರ ಪದ್ಯಗಳನ್ನು ವೇಮನರು ರಚಿಸಿದ್ದು ಅವುಗಳನ್ನು ಸಂಗ್ರಹಿಸಲಾಗಿದೆ ಎಂದು ಕಡಪಾದ ವೇಮನ ವಿಶ್ವವಿದ್ಯಾಲಯವು ಪ್ರಕಟಿಸಿದೆ. ಅಭಿರಾಮನೆಂಬ ಅಕ್ಕಸಾಲಿಗನು ವೇಮನರ ಜ್ಞಾನವೃದ್ಧಿಗೆ ಕಾರಣವಾಗಿದ್ದರಿಂದ ಅವನ ಹೆಸರನ್ನು ಅಂಕಿತನಾಮದಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತದೆ.
ವೇಮನರು ಸಂತೆಯೊಳಗಿದ್ದ ಸಂತಕವಿ, ಕಾಲಾತೀತ ಕವಿ, ಮಾನವನ ಅಂತರ0ಗ ಬಹಿರಂಗದ ಬಗ್ಗೆ ವಿಶ್ಲೇಸುತ್ತ ಬದಲಾವಣೆಯಾಗಲು ಇಂಬುಕೊಡುತ್ತಾರೆ. ತತ್ವಜ್ಞಾನಿಯಾಗಿ, ಗುರುವಾಗಿ, ಹಿತೈಷಿಯಾಗಿ, ಗೆಳೆಯನಾಗಿ, ಬಂಧುವಾಗಿ, ಯೋಗಿಯಾಗಿ, ದೇವರ ಭಕ್ತನಾಗಿ, ನಮಗೆ ಮಾರ್ಗದರ್ಶನ ನೀಡುತ್ತಾನೆ, ವಿಚಾರ ಮಾಡಲು ಹಚ್ಚುತ್ತಾನೆ, ಕವಿಯಾಗಿ ನಮ್ಮನ್ನು ಕಾಡುತ್ತಾನೆ, ಆದ್ದರಿಂದ ವೇಮನರು ಇಂದಿಗೂ ಪ್ರಸ್ತುತ.

ವಿಶ್ವಮಾನವ ಸಂದೇಶ


ಬುದ್ದನ ಕರುಣೆ, ಗಾಂಧೀಜಿಯವರ ಮಾನವೀಯತೆ, ಅಂಬೇಡ್ಕರರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದತೆಯನ್ನು ಹಾಗೂ ಬಸವಣ್ಣ, ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ವೇಮನರ ಕಾವ್ಯದಲ್ಲಿ ಕಾಣಬಹುದು. ಸರ್ವಜ್ಞ, ಕಬೀರ, ತಿರುವಳ್ಳರ್, ಚೈತನ್ಯಸ್ವಾಮಿ, ಬಸವಣ್ಣನವರಿಗೆ ಪ್ರಚಾರ ಸಿಕ್ಕಂತೆ ವೇಮನರಿಗೆ ಪ್ರಚಾರ ಸಿಗಲಿಲ್ಲ. ಆಂಧ್ರದಲ್ಲಿಯ ಸಾಹಿತ್ಯ ಮತ್ತು ರಾಜಕೀಯ ವಲಯ ತಾಳಿದ ಮಲತಾಯಿ ಧೋರಣೆಯಿಂದ ವೇಮನರು ಪ್ರಚಾರವಿಲ್ಲದೆ ಸೀಮಿತವಾಗಿ ಉಳಿದು ಬಿಟ್ಟರು.
ಕೆಲವು ಸಂಪ್ರದಾಯಸ್ತರಿಗೆ ವೇಮನರ ಪದ್ಯಗಳು ಹಿಡಿಸಲಿಲ್ಲ, ಹೀಗಾಗಿ ಆಂಧ್ರದಲ್ಲಿ ವೇಮನ ಸಾಹಿತ್ಯವನ್ನು ವಿರೋಧಿಸುವ ಒಂದು ವರ್ಗವೆ ಹುಟ್ಟಿಕೊಂಡಿತು. ಇದರ ಪರಿಣಾಮ ಸುಮಾರು ಮೂರು ನೂರು ವರ್ಷ ಪ್ರಚಾರ ಪಡೆಯದೆ ಜನಸಾಮಾನ್ಯರ ಹತ್ತಿರಕ್ಕೆ ವೇಮನರ ಕಾವ್ಯ ತಲುಪದೆ ಹೋಯಿತು, ಇದು ಭಾರತೀಯ ಸಾಹಿತ್ಯದ ದುರಂತವೆ0ದೆ ಹೇಳಬಹುದು.


ಕನ್ನಡಕ್ಕೆ ಕಿಟೆಲ್ ಹೇಗೊ ತೆಲುಗಿನವರಿಗೆ ಸಿ.ಪಿ.ಬ್ರೌನ್. ಬ್ರಿಟಿಷ್ ಸರಕಾರದ ಸೇವೆಯಲ್ಲಿದ್ದ ಚಾರ್ಲಸ ಪಿಲಿಪ್ ಬ್ರೌನ್‌ರು ಮಹಾ ಮೇಧಾವಿಯಾಗಿದ್ದರು. ಮಹಾಕವಿ ವೇಮನ ಅವರನ್ನು ಪ್ರ-ಪ್ರಥಮವಾಗಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹಾಮಹಿಮರಾದ ಸಿ.ಪಿ.ಬ್ರೌನರಿಗೆ ಸಲ್ಲುತ್ತದೆ.


ಸಿ.ಪಿ.ಬ್ರೌನ್‌ರ ಪರಿಶ್ರಮದಿಂದ ವೇಮನರ ಪದ್ಯಗಳು ಇಂಗ್ಲಿಷಿಗೆ ಅನುವಾದಗೊಂಡವು ಇದ್ದರಿಂದ ಭಾರತದಲ್ಲಷ್ಟೆ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಅನೇಕ ಬಾಷೆಗಳಲ್ಲಿ ವೇಮನರ ವಚನಗಳು ಅನುವಾದಗೊಂಡವು. ಹೀಗಾಗಿ ವೇಮನರ ತತ್ವಗಳನ್ನು, ಆದರ್ಶಗಳನ್ನು, ಕಂಡ ಜನ ಹೆಮ್ಮ ಪಟ್ಟರು, ಆದ್ದರಿಂದ ವೇಮನರು ವಿಶ್ವಕವಿಯಾಗಿ ನಮ್ಮ ನಡುವೆ ನಿಲ್ಲುತ್ತಾರೆ.


ವೇಮರ ಕೆಲವು ವಚನಗಳು ಇಲ್ಲಿ ಉಲ್ಲೇಖನೀಯ
ಗುರುವಿನ ಶಿಕ್ಷೆಯಿರದೆ, ಗುರುತು ದೊರೆಯುವುದೆಂತು? ಅಜನೆ ಇರಲಿ; ಅವನ ಅಪ್ಪನಿರಲಿ.
ಬೀಗದ ಕೈಯಿರದೆ, ಬೀಗ ತೆರೆವುದೆಂತು?
ವಿಶ್ವದಾಭಿರಾಮ ಕೇಳು ವೇಮಾ.

ಯೋಗಿ ವೇಮನರು ಗುರು ಎನ್ನುವುದು ಬೀಗದ ಕೈ ಇದ್ದಂತೆ ಎಂದು ಹೇಳಿ ಗುರುವಿಗೆ ಹೊಸ ಅರ್ಥ ಕೊಟ್ಟಿದ್ದಾರೆ. ಬೀಗದ ಕೈಯಿಂದ ಬೀಗ ತೆಗೆದರೆ ಬಹಳ ಸುಲಭ. ಬೀಗದ ಕೈ ಇರದೆ ತೆಗೆಯಲು ಹೋದರೆ ಎಷ್ಟು ಕಷ್ಟ, ಹೀಗೆ ಜ್ಞಾನ ಸಂಪಾದನೆಗೆ ಗುರುವಿನ ಮಾರ್ಗದರ್ಶನ ಇದ್ದರೆ ಬೀಗದ ಕೈಯಿಂದ ಬೀಗ ತೆಗೆದಷ್ಟು ಜ್ಞಾನ ಸಂಪಾದನೆ ಸುಲಭ. ಆದ್ದರಿಂದ ಭಾರತ ಶ್ರೇಷ್ಠವಾದ ಗುರು ಪರಂಪರೆಗೆ ಪ್ರಸಿದ್ಧವಾಗಿದೆ.
ಧ್ವಜವನೆತ್ತಿ ಸಾರು ದೇವನೊಬ್ಬನೆಂದು
ನಿಜವಿದಿಹುದು ಒಳಗೆ ನಿಂತಿರುವನು
ಚೊಕ್ಕ ನೋಡಲವನ ಸಂತಸದಿ ಮುಳುಗವೆ
ವಿಶ್ವದಾಭಿರಾಮ ಕೇಳು ವೇಮ

ದೇವರು ಒಬ್ಬನೇ ಅವನನ್ನು ಬೇರೆ ಬೇರೆ ಜನರು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಆದರೆ ವೇಮನರು ಏಕದೇವ ಉಪಾಸನೆಯ ಬಗ್ಗೆ ಬೆಳಕು ಚಲ್ಲಿದ್ದಾರೆ. ಮೂರ್ತಿ ಪೂಜೆಯನ್ನು ಖಂಡಿಸಿದ್ದಾರೆ. ಅಂತರ0ಗದಲ್ಲಿಯೇ ದೇವರಿದ್ದಾನೆ ಎನ್ನುವ ಭಾವ ನಮಗೆ ಬರಬೇಕು. ಅಂತರ0ಗದಲ್ಲಿರುವ ದೇವರನ್ನು ಗುರ್ತಿಸಿ ಏಕಭಾವದಿಂದ ನೋಡುವ ಕಲೆಯನ್ನು ಬೆಳೆಸಿಕೊಂಡರೆ ಮಹಾದಾನಂದವಾಗುವುದು.
ಶಿಲೆಯ ನೋಡಿ ನರರು ಶಿವನೆಂದು ಭಾವಿಪರು
ಶಿಲೆಯು ಶಿಲೆಯೆ ಹೊರತು ಶಿವನಲ್ಲವೈ
ತನ್ನೊಳಗಿಹ ಶಿವನ ತಾನೇಕೆ ತಿಳಿಯನೊ
ವಿಶ್ವದಾಭಿರಾಮ ಕೇಳೈ ವೇಮ

ಜನರು ಕಲ್ಲಿನ ಮೂರ್ತಿಯನ್ನು ಕಂಡು ಶಿವನೆಂದು ಭಾವಿಸಿ ಕೈ ಮುಗಿಯುತ್ತಾರೆ. ತಮ್ಮ ಶರೀರದಲ್ಲಿಯೆ ನೆಲೆಗೊಂಡಿರುವ ಶಿವನನ್ನು ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ ಎನ್ನುತ್ತಾರೆ ವೇಮನರು. ಮಾನವನು ತನ್ನೊಳಗಿನ ದೇವರನ್ನು ಹುಡುಕುತ್ತಾ ಸಾಗಬೇಕು, ಆಗ ತನ್ನಲ್ಲಿರುವ ದೇವರನ್ನೇ ನೋಡಿ ಮೋಕ್ಷ ಪಡೆಯಬಹುದು.
ಒಂದಾದ ದಂಪತಿಗಳು ಚಂದದ ಸಂಸಾರ,
ನ0ದನನ ನಡೆನುಡಿ ನಂದಿನಿಯೊಳು;
ಸತಿಗಿತ್ತಿ ರಕ್ಷಣೆಯು ಸ್ವಂತಕ್ಕೆ ರಕ್ಷಣೆ
ವಿಶ್ವದಾಭಿರಾಮ ಕೇಳು ವೇಮ

ಭಕ್ತಿ ಮುಕ್ತಿ ಉಂಟು ಭಾಗ್ಯ ಮತ್ತೆ ಉಂಟು ;
ಚಿತ್ತವರಿತ ಮಡದಿ ಜೊತೆಯೊಳಿರಲು,
ಚಿತ್ತವರಿಯದ ಸತಿ ಹತ್ತಿರಿರಲು ಹೊಲ್ಲ
ವಿಶ್ವದಾಭಿರಾಮ ಕೇಳು ವೇಮ

ಸಂಸಾರ ಸರಿಯಾಗಿ ಇರಬೇಕಾದರೆ ಗಂಡ ಹೆಂಡತಿ ಅನೋನ್ಯವಾಗಿರಬೇಕು ಎಂಬುದು ಸಾಮಾನ್ಯ ಮಾತು. ದಂಪತಿಗಳ ನಡೆ ನುಡಿ ಚೆನ್ನಾಗಿದ್ದರೆ ಅಂಥ ಮನೆಯೇ ಸ್ವರ್ಗ. ಸತಿಯನ್ನು ರಕ್ಷಿಸಿಕೊಂಡರೆ ತನ್ನನ್ನೇ ರಕ್ಷಿಸಿಕೊಂಡತೆ ಎಂಬ ಮಾತು ಇಂದು ವಿರಸಗೊಂಡು ಬೇರೆಯಾಗುತ್ತಿರುವ ಸಂಸಾರಗಳಿಗೆಲ್ಲ ಹೇಳಿದ ಕಿವಿಮಾತು. ಹೆಂಡತಿಯನ್ನು ಕಳೆದುಕೊಂಡ ಗಂಡನ ಸ್ಥಿತಿ ಹಾಗೂ ಗಂಡನನ್ನು ಕಳೆದುಕೊಂಡ ಹೆಂಡತಿಯ ಸ್ಥಿತಿ ಅಯೋಮಯ ಎಂಬುದನ್ನು ನಿತ್ಯ ನೋಡುತ್ತೇವೆ.
ಪತಿಯನ್ನು ಅರ್ಥ ಮಾಡಿಕೊಂಡು ನಡೆವ ಸತಿ ಇದ್ದರೆ ಭಕ್ತಿ, ಮುಕ್ತಿ, ಭಾಗ್ಯ ಎಲ್ಲವು ನಮ್ಮದಾಗುವುದು ಎಂದು ಹೇಳುವ ವೇಮನರು ಅದೇ ಅರ್ಥ ಮಾಡಿಕೊಳ್ಳದ ಹೆಂಡತಿ ಇದ್ದರೆ ಆ ಮನೆ ಪ್ರತ್ಯಕ್ಷ ನರಕ ಎಂದು ಸೂಚ್ಯವಾಗಿ ಹೇಳುತ್ತಾರೆ. ಅಂಥವರ ಸಂಸಾರ ಮುಳುಗುತ್ತಿರುವ ನಾವೆಯಂತೆಯೆ ಸರಿ.

ಆಶೆಗಿಂತ ದುಃಖ ಅತಿಶಯಾಗಿ ಅಲ್ಲ.

ನೋಟ ನಿಲಿಸದಿರಲು ನೆಮ್ಮದಿಯಿಲ್ಲ.
ಮನಸು ನಿಲಿಸದಿರಲು ಮುಕ್ತಿ ಇಲ್ಲ.
ವಿಶ್ವದಾಭಿರಾಮ ಕೇಳು ವೇಮ

ಆಸೆಗಿಂತ ದೊಡ್ಡ ದುಃಖವಿಲ್ಲವೆಂದು ಹೇಳುತ್ತಾರೆ. ದುಃಖವು ನಿಯಂತ್ರಣಕ್ಕೆ ಬರಬೇಕಾದರೆ ಆಸೆ ನಿಯಂತ್ರಣದಲ್ಲಿರಬೇಕು. ಆಸೆಯ ನಿಯಂತ್ರಣಕ್ಕೆ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು. ನಮ್ಮ ದೃಷ್ಟಿಯನ್ನು ಅಂತರAಗದೊಳಗೆ ನಿಲ್ಲಿಸುವುದನ್ನು ಕಲಿಯಬೇಕು. ಇದಕ್ಕೆ ಯೋಗದಲ್ಲಿ ಧ್ಯಾನ ಎಂದು ಹೇಳುವರು. ಧ್ಯಾನದ ಬಗ್ಗೆ ತಿಳುವಳಿಕೆ ಇದ್ದರೆ ಆಸೆಯನ್ನು, ದುಃಖವನ್ನು, ನಿಯಂತ್ರಿಸಬಹುದು. ಮನಸ್ಸನ್ನು ನಿಯಂತ್ರಣದಲ್ಲಿಡಲು ಅಂತರ0ಗದಲ್ಲಿ ಶಾಂತಿಯನ್ನು ನೆಲೆಗೊಳಿಸಬೇಕು, ನಮ್ಮೊಳಗೆ ನೋಡಬೇಕು, ಆಗ ಮಾನಸಿಕ ನೆಮ್ಮದಿ ಸಿಗುತ್ತದೆ, ಆಸೆ ಕಡಿಮೆಯಾಗುತ್ತದೆ.

ಅಲ್ಪ ಸುಖವನೆಲ್ಲ ಆಶಿಸುತ ಮನುಜರು,
ಬಹಳ ದುಃಖ ಬಾಧೆ ಪಡುತಲಿಹರು
ಪರ ಸುಖವನು ಹೊಂದಿ ಬದುಕಲರಿಯರಲ್ಲ!
ವಿಶ್ವದಾಭಿರಾಮ ಕೇಳು ವೇಮ

ಆಸೆಯ ಭ್ರಮೆಯಲ್ಲಿ ಮನುಷ್ಯ ಆಯುಷ್ಯದಾದ್ಯಂತ ತಿರುಗುತ್ತಾನೆ. ಆಸೆ ಬೆನ್ನು ಹತ್ತಿದರೆ ಯಾವುದು ಕಾಣುವುದಿಲ್ಲ. ಆತನಿಗೆ ದೇವರು ಕಾಣುವುದಿಲ್ಲ. ಮುಸುರೆ ಪಾತ್ರೆಗೆ ನೊಣ ಮುತ್ತಿದಂತೆ ಮನುಷ್ಯ ಅಲ್ಪ ಸುಖಕ್ಕೆ ಹಾತೊರೆದು ಶಾಶ್ವತವಾದದ್ಧನ್ನು ಮರೆತು ಬಿಡುತ್ತಾನೆ. ಇತರರ ಸುಖಕ್ಕೆ ಕಂಟಕವಾದದ್ದುಆತನಿಗೆ ಗೊತ್ತಾಗದು. ಇದು ಆಸೆಯು ಮಾಡುವ ಕೆಡಕು. ಪರರ ಸುಖವನ್ನು ಬಯಸಬೇಕು, ನೋಡಿ ಸಂತಸವನ್ನೂ ಪಡಬೇಕು. ಇದೇ ಸಂತ ಬದುಕು. ಇಂಥ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅರಿಯಬೇಕೆಂದು ಹೇಳುತ್ತಾರೆ ವೇಮನರು.

  ಹೀಗೆ ವೇಮನರು ಜನಸಾಮಾನ್ಯರಂತೆ ಇದ್ದು ಅವರ ನೋವುಗಳನ್ನು ಕಣ್ಣಾರೆ ಕಂಡು ಅವುಗಳ ಅನುಭವದಿಂದ ಅದ್ವಿತೀಯ ಹಾಗೂ ಮೌಲಿಕವಾದ ಸಾಹಿತ್ಯವನ್ನು ನೀಡಿದ್ದಾರೆ. ಆತನ ಪದ್ಯಗಳು ಮಾನವ ಕುಲ ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವ ಅಮೂಲ್ಯ ರತ್ನಗಳು, ಆ ಸಾಹಿತ್ಯ ರತ್ನದ ಬೆಳಕಿನಲ್ಲಿ ನಾವು ನಡೆದು ಪುನೀತರಾಗಬೇಕಾಗಿದೆ.
                                                   

Related Articles

ಪ್ರತಿಕ್ರಿಯೆ ನೀಡಿ

Latest Articles