ದೇವಸ್ಥಾನದಲ್ಲಿ ದೇವರಿಗೆ ನಮಸ್ಕಾರ ಹೀಗೆ ಮಾಡಿ

ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು.

ಏಕೆಂದರೆ ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ | ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ || ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು. ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿದಂತಾಗುತ್ತದೆ.

`ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ.` ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. `ಅಗ್ರೇ ಮೃತ್ಯುಮವಾಪ್ನೋತಿ` ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು. ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆಗಳಿಗೆ ಪಾದ ತೋರಿಸಿದಂತಾಗುವುದರಿಂದ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದರಲ್ಲಿ ಅಪಜಯವುಂಟಾಗುವುದು. ಆದುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು. ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ `ವಾಮಭಾಗೇ ಭವೇನ್ನಾಶಃ` ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು. ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಒಂದು ವೇಳೆ ನಾವು ದೇವರ ಎಡಭಾಗದಲ್ಲಿ ನಮಸ್ಕರಿಸುವುದರಿಂದ ಭಗವಂತನ ಆಯುಧ ಗಳಿಂದ ನಮ್ಮ ಶರೀರದ ನಾಶವಾಗುವ ಸಂಭವವಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು ಎಂದು ಹೇಳಿ ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕೆಂದು ಹೇಳುತ್ತಿದ್ದಾರೆ. `ದಕ್ಷಿಣೇ ಸರ್ವಕಾಮದಃ` ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.

(ಸಂಗ್ರಹ)

Related Articles

ಪ್ರತಿಕ್ರಿಯೆ ನೀಡಿ

Latest Articles