ನಾವು ನಾವಾಗಿರಲು ಬಿಡಿ

ರಚನೆ: ಶ್ರೀಮತಿ ಜ್ಯೋತಿ ಕೋಟಗಿ

ಬಿ ಆರ್ ಪಿ ಚ ಕಿತ್ತೂರು

ಯಾಕೆಂದರೆ ನಾವು ಎಳೆಯರು..

ನಮಗೂ ಕೊಡಿ ನಿಮ್ಮ ಸಮಯ

ಸ್ನೇಹ ಪ್ರೀತಿ ತುಂಬಿದ ಒಲುಮೆಯ

ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ

ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ

ಯಾಕೆಂದರೆ ನಾವು ಎಳೆಯರು..

ನಮ್ಮ ಭಾವಗಳಿಗೂ ಬೆಲೆ ಕೊಡಿ

ನಿಮ್ಮ ಆಸೆಗಳಿಗೆ ಬಲಿ ತೆಗೆದುಕೊಳ್ಳದಿರಿ

ತೋಟದಲಿರುವ ಮೊಗ್ಗು ನಾವು

ಬಿರಿವ ಮುನ್ನವೇ ಹಿಸುಕದಿರಿ

ಯಾಕೆಂದರೆ ನಾವು ಎಳೆಯರು..

ಹಾರಾಡುವ ಹಕ್ಕಿಗಳು ನಾವು

ರೆಕ್ಕೆ ಕತ್ತರಿಸುವದ ಬಿಟ್ಟುಬಿಡಿ

ನಿಮ್ಮ ಹಾರಾಟಕ್ಕೆ ಏಣಿಯನು

ಮಾಡಿ ಮನಬಂದಂತೆ ಏರಿಳಿಯಬೇಡಿ

ಯಾಕೆಂದರೆ ನಾವು ಎಳೆಯರು..

ಅರಿವೇ ಇಲ್ಲದ ವಯಸ್ಸಿನಲಿ

ಪರಿಪರಿಯಾಗಿ ಪೀಡಿಸದಿರಿ

ಬದುಕಲು ಬಿಡಿ ಸರಳತೆಯಲಿ

ದೊಡ್ಡಸ್ಥಿಕೆಯನೆಂದೂ ಹೇರದಿರಿ

ಯಾಕೆಂದರೆ ನಾವು ಎಳೆಯರು..

ಭಾವಿ ಭವಿಷ್ಯದ ನಾಯಕರು ನಾವು

ಚಿಗರೊಡೆವ ಮುಂಚೆ ಚಿವುಟದಿರಿ

ಉತ್ತಮ ಸಂಸ್ಕಾರ ನೀಡುತಲಿ

ಬೆಂಗಾವಲಾಗಿ ನಮ್ಮನು ರಕ್ಷಿಸಿರಿ 

ಯಾಕೆಂದರೆ ನಾವು ಎಳೆಯರು..

ಅವರ ಮಕ್ಕಳು ಇವರ ಮಕ್ಕಳು

ಎಂದೆನ್ನುತ ನಿಷ್ಕಾಳಜಿಯ ಮಾಡದಿರಿ

ಎಲ್ಲ ಮಕ್ಕಳೂ ನಮ್ಮವರೇ

ಎನ್ನುತ ಕಾಳಜಿಯ ನೀವು ವಹಿಸಿರಿ

ಇದೇ ನಮ್ಮ ಕೋರಿಕೆ ನಿಮ್ಮಲಿ

ಯಾಕೆಂದರೆ ನಾವು ಎಳೆಯರು ನೀವು ಹಿರಿಯರು…..

Related Articles

ಪ್ರತಿಕ್ರಿಯೆ ನೀಡಿ

Latest Articles