ದಿಗಂಬರ ಜೈನ ಲಾಲ್ ಮಂದಿರ
ದೆಹಲಿಯ ಅತ್ಯಂತ ಹಳೆಯ ಜೈನ ಮಂದಿರ ಇದು. ದಿಗಂಬರ ಜೈನ ದೇವಾಲಯವು ದೆಹಲಿಯ ಕೆಂಪುಕೋಟೆಯ ಹತ್ತಿರದಲ್ಲಿಯೇ ಇದೆ. ಆಕರ್ಷಕ ಕೆಂಪು ಕಲ್ಲಿನಿಂದ ಈ ದೇವಾಲಯ ನಿರ್ಮಾಣಗೊಂಡಿದ್ದು, ಜನಪ್ರಿಯ ಜೈನ ಮಂದಿರ ಎಂಬ ಖ್ಯಾತಿ ಹೊಂದಿದೆ. ಈ ದೇವಾಲಯ 1656ರಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯ ಸುಂದರವಾದ ಚಿತ್ರಕಲೆಯನ್ನು ಒಳಗೊಂಡಿದೆ. ಕೆಂಪು ದೇವಾಲಯ, ಲಾಲ್ ಮಂದಿರ್ ಎಂದೆಲ್ಲಾ ಕರೆಸಿಕೊಂಡಿರುವ ಈ ಮಂದಿರವು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ದೇವಾಲಯನ್ನು 23ನೇ ತೀರ್ಥಂಕರ ಪಾಶ್ರ್ವನಾಥನಿಗೆ ಅರ್ಪಿಸಲಾಗಿದೆ. ಇಲ್ಲಿ ಮೊದಲ ತೀರ್ಥಂಕರ ಆದಿನಾಥರ ಪ್ರತಿಮೆ ಕೂಡಾ ಇದೆ. ಜೈನ ಧರ್ಮದ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಇಲ್ಲಿರುವ ಪುಸ್ತಕ ಮಳಿಗೆಯ ಪ್ರಯೋಜನ ಪಡೆದುಕೊಳ್ಳಬಹುದು. ಈ ದೇವಾಲಯ ಮೊಘಲ್ ರಾಜ ಔರಂಗಜೇಬನ ಕಾಲವನ್ನು ನೆನಪಿಸುತ್ತದೆ. ಈ ದೇವಸ್ಥಾನದ ಹತ್ತಿರದಲ್ಲಿಯೇ ಚಾಂದಿನಿ ಚೌಕ್ ಹಾಗೂ ನೇತಾಜಿ ಸುಭಾಷ್ಚಂದ್ರ ಭೋಸ್ ಮಾರ್ಗ ಇದೆ.
ಹೋಗುವುದು ಹೇಗೆ?
ದೆಹಲಿಯ ಇಂದಿರಾಗಾಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಾಲ್ ಮಂದಿರಕ್ಕೆ 25 ಕಿ.ಮೀ. ದೆಹಲಿಯ ರೈಲು ನಿಲ್ದಾಣದಿಂದ 2 ಕಿ.ಮೀ. ದೂರದಲ್ಲಿದೆ.
ದಿಲ್ವಾರ ಜೈನ ದೇವಾಲಯ
ಕ್ರಿ.ಶ. 11ರಿಂದ 13ನೇ ಶತಮಾನದ ನಡುವೆ ನಿರ್ಮಿಸಲಾದ ರಾಜಸ್ತಾನದ ದಿಲ್ವಾರ ಜೈನ ದೇವಾಲಯವು ಮೌಂಟ್ ಅಬುವಿನಲ್ಲಿ ನೋಡಲೇಬೇಕಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಅಮೃತಶಿಲೆಯಲ್ಲಿ ಸುಂದರವಾಗಿ ಕೆತ್ತಲಾದ ಈ ದೇವಾಲಯದ ಸೌಂದರ್ಯ ವರ್ಣನಾತೀತ. ಈ ದೇವಾಲಯದ ಸಂಕೀರ್ಣದಲ್ಲಿಯೇ ಐದು ಜೈನ ಸುಂದರ ದೇವಾಲಯಗಳನ್ನು ನೋಡಬಹುದು.
ಪ್ರಮುಖ ಜೈನ ದೇವಾಲಯಗಳು -ವಿಮಲ್ ವಸಹಿ ದೇವಾಲಯ, ಲುನ ವಸಹಿ ದೇವಾಲಯ, ಪೀಥಲ್ಹರ್ ದೇವಾಲಯ, ಖರ್ತರ್ ವಸಹಿ ದೇವಾಲಯ ಮತ್ತು ಶ್ರೀ ಮಹಾವೀರ ಸ್ವಾಮಿ ದೇವಾಲಯ. ಈ ಐದೂ ದೇವಾಲಯಗಳು ವಿಭಿನ್ನವಾಗಿ ನಿರ್ಮಾಣಗೊಂಡಿವೆ. ಇಲ್ಲಿರುವ ತೀರ್ಥಂಕರರಿಗೆ ಪೂಜೆ ಸಲ್ಲಿಸಲು ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ. ದಿಲ್ವಾರ ಜೈನ ದೇವಾಲಯಗಳು ಮೌಂಟ್ ಅಬುವಿನಿಂದ ಎರಡೂವರೆ ಕಿ.ಮೀ. ದೂರದಲ್ಲಿದೆ.
ಹೋಗುವುದು ಹೇಗೆ?
ಹತ್ತಿರದ ವಿಮಾನ ನಿಲ್ದಾಣ ಉದಯಪುರ 185 ಕಿ.ಮೀ. ದೂರದಲ್ಲಿದೆ. ಅಬು ರೋಡ್ ರೈಲು ನಿಲ್ದಾಣದಿಂದ 29 ಕಿ.ಮೀ. ದೂರದಲ್ಲಿ ದಿಲ್ವಾರ ದೇವಾಲಯವಿದೆ.
ಆದಿನಾಥ ದೇವಾಲಯ
ಆದಿನಾಥ್ ದೇವಾಲಯವು ಖಜುರಾಹೊದಲ್ಲಿರುವ ಜೈನ ದೇವಾಲಯಗಳಲ್ಲಿ ಅತ್ಯಂತ ಪ್ರಮುಖವಾದುದು. ಇದು ಪಾಶ್ರ್ವನಾಥ ದೇವಾಲಯದ ಉತ್ತರ ಭಾಗದಲ್ಲಿದೆ. ಜೈನ ತೀರ್ಥಂಕರ ಆದಿನಾಥರಿಗೆ ಈ ದೇವಾಲಯವನ್ನು ಅರ್ಪಿಸಲಾಗಿದೆ. ಈ ದೇವಾಲಯವನ್ನು ಚಂಡೇಲ ರಾಜರು 11ನೇ ಶತಮಾನದಲ್ಲಿ ನಿರ್ಮಿಸಿದರು. ಈ ದೇವಾಲಯವು ಸಪ್ತ- ರಥ ಸೂತ್ರದ ಆಧಾರದ ಮೇಲೆ ನಿರ್ಮಾಣಗೊಂಡಿದೆಯಂತೆ. ಇದು ಏಕ ಗೋಪುರ ಶಿಖರದಿಂದ ಅಲಂಕೃತಗೊಂಡಿದ್ದು ದೇವಾಲಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ದೇವಾಲಯದ ಗೋಡೆಯ ಮೇಲೆ ಆಸ್ಥಾನ ಸಂಗೀತ ವಿದ್ವಾಂಸರ ಸುಂದರ ಚಿತ್ರಗಳನ್ನು ಕೆತ್ತಲಾಗಿದ್ದು, ಪ್ರತಿ ಗೋಡೆಯೂ ಸುಂದರ ಕೆತ್ತನೆಗಳನ್ನು ಒಳಗೊಂಡಿದೆ.
ರಣಕ್ಪುರ ಜೈನ ದೇವಾಲಯ
ರಣಕ್ಪುರ ಜೈನರ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಅರಾವಳಿ ಪರ್ವತಶ್ರೇಣಿಯಲ್ಲಿ 14-15ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಬೆಟ್ಟದ ಮೇಲೆ ಮೂರು ಅಂತಸ್ತಿನಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಕೆತ್ತಿದ ಅಮೃತ ಶಿಲೆಯ 1444 ಕಂಬಗಳನ್ನು ಹೊಂದಿದೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿಬಂದಿವೆ. ಈ ದೇವಾಲಯನ್ನು ಜೈನರ ಮೊದಲ ತೀರ್ಥಂಕರ ಆದಿನಾಥರಿಗೆ ಅರ್ಪಿಸಲಾಗಿದೆ.
ಹೋಗುವುದು ಹೇಗೆ?
ಹತ್ತಿರದ ವಿಮಾನ ನಿಲ್ದಾಣ ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣ ಉದಯಪುರ. ದೆಹಲಿ, ಮುಂಬಯಿಯಿಂದ ವಿಮಾನ ಹಾರಾಟ ಸೌಲಭ್ಯವಿದೆ. ಹತ್ತಿರದ ರೈಲು ನಿಲ್ದಾಣ ಉದಯಪುರ.
ಸಾವಿರ ಕಂಬದ ಬಸದಿ
ಮೂಡುಬಿದಿರೆಯ ಸಾವಿರ ಕಂಬಗಳ ಬಸದಿ ಕರಾವಳಿಯ ಪ್ರಸಿದ್ಧ ಪ್ರವಾಸೀ ತಾಣಗಳಲ್ಲೊಂದು. ಈ ಜೈನ ದೇವಾಲಯದಲ್ಲಿ ಸಾವಿರ ಕಂಬಗಳಿವೆ. ಆದರೆ ಒಂದು ಕಂಬದಂತೆ ಇನ್ನೊಂದಿಲ್ಲ. ವೈವಿಧ್ಯಮಯ ಕೆತ್ತನೆಗಳಿಂದ ಕೂಡಿದ ಇಲ್ಲಿನ ಸಾವಿರ ಕಂಬಗಳನ್ನು ತಟ್ಟಿದಾಗ ಸಾವಿರ ಸ್ವರಗಳು ಹೊಮ್ಮುತ್ತವೆ. ಸಾವಿರ ಕಂಬಗಳಿವೆ ಎಂದು ಹೇಳುತ್ತಾರಾದರೂ, ಇಲ್ಲಿನ ಕಂಬಗಳನ್ನು ಎಣಿಸಿದವರಿಲ್ಲ. ಕಾರಣ ಎಣಿಸಿದರೆ ಇನ್ನೊಂದು ಕಂಬವಾಗುತ್ತಾರೆ ಅನ್ನುವ ಪ್ರತೀತಿ ಇದೆ.
ಇಲ್ಲಿ ತ್ರಿಭುವನ ತಿಲಕ ಚೂಡಾಮಣಿ ಎಂಬ ಜೈನ ಬಸದಿ ಇದೆ. ಹತ್ತಿರದಲ್ಲೇ ಅಮ್ಮನವರ ಬಸದಿ ಇದೆ. ಇದನ್ನು ಶಿಲಾಶಾಸನಗಳಿಂದ ಕೆತ್ತಲಾಗಿದೆ. ಅದರ ಪಕ್ಕದಲ್ಲೆ ತ್ರಿಭುವನ ತಿಲಕ ಚೂಡಾಮಣಿಯನ್ನು ಹೋಲುವ ಇನ್ನೊಂದು ಬಸದಿ ಇದೆ.
ಸಾವಿರ ಕಂಬದ ಬಸದಿಯ ಮರದ ಬಾಗಿಲಿನಲ್ಲಿ ನವನಾರಿ ಕುಂಜರದ ಕಲಾಕೃತಿಯನ್ನು ಚಿತ್ರಿಸಲಾಗಿದೆ. ಬಸದಿ ಒಳಪ್ರವೇಶಿಸುತ್ತಿದ್ದಂತೆಯೇ 15 ಮೀ. ಎತ್ತರದ ಏಕಶಿಲೆಯಿಂದ ನಿರ್ಮಿತವಾದ ಸ್ಥಂಭ ನಮ್ಮನ್ನು ಎದುರುಗೊಳ್ಳುತ್ತದೆ. ಇದನ್ನು ಗೇರುಸೊಪ್ಪೆಯ ನಾಗಲಾದೇವಿ ಕ್ರಿ.ಶ. 1462ರಲ್ಲಿ ನಿಲ್ಲಿಸಿದಳು ಎಂಬುದನ್ನು ಇತಿಹಾಸ ಹೇಳುತ್ತದೆ. ಇದು ಬಯಲು ಮಂಟಪವಾಗಿದೆ.
ನಾಗಲಾದೇವಿ ಗೇರುಸೊಪ್ಪೆಯ ಭೈರವ ಅರಸನ ಪಟ್ಟದ ರಾಣಿ. ಈ ಸ್ಥಳದಿಂದ ಮುಂದೆ ಸಾಗಿದರೆ ಭೈರವಾದೇವಿ ಮಂಟಪ, ನಮಸ್ಕಾರ ಮಂಟಪ, ಚಿತ್ರಾದೇವಿ ಮಂಟಪ, ತೀರ್ಥಂಕರ ಮಂಟಪ, ಲಕ್ಷ್ಮೀ ಮಂಟಪ, ಗರ್ಭಗೃಹ ಮಂಟಪದಲ್ಲಿ ಚಂದ್ರಪ್ರಭ, ಸುಪಾಶ್ರ್ವ ತೀರ್ಥಂಕರರ ವಿಗ್ರಹಗಳಿವೆ. 2.5.ಮೀ ಎತ್ತರದ ಚಂದ್ರನಾಥ ಸ್ವಾಮಿಯ ವಿಗ್ರಹ ಇದೆ. ಇಲ್ಲಿನ ಕಂಬಗಳು ವಿಜಯನಗರ ಕಲಾಶೈಲಿಯಲ್ಲಿವೆ. ಇಲ್ಲಿನ ಗುರುಬಸದಿ ಜೈನರ 23ನೆಯ ತೀರ್ಥಂಕರನಾದ ಪಾಶ್ರ್ವನಾಥ ಪೂಜಿಸುತ್ತಿದ್ದ ಬಸದಿ ಎಂಬುದನ್ನು ಚರಿತ್ರೆ ಹೇಳುತ್ತದೆ. ಇದೇ ಬಸದಿಯಲ್ಲಿ ಪಾಶ್ರ್ವನಾಥನ 3.5ಮೀ ಎತ್ತರದ ವಿಗ್ರಹವಿದೆ.
ಮೂಡುಬಿದಿರೆ ಚೌಟರ ಆಡಳಿತ ಪ್ರದೇಶವಾಗಿತ್ತು. 17ನೇ ಶತಮಾನದಲ್ಲಿ ಅವರು ತಮ್ಮ ರಾಜಧಾನಿಯನ್ನು ಪುತ್ತಿಗೆಯಿಂದ ಮೂಡುಬಿದಿರೆಗೆ ವರ್ಗಾಯಿಸಿಕೊಂಡರು. ಮೂಡುಬಿದಿರೆಯನ್ನಾಳಿದ ಸ್ಥಳೀಯ ರಾಜಮನೆತನದ ಚೌಟರ ಅರಮನೆ ಇಲ್ಲಿ ಇದೆ. ಇದನ್ನು ಮರದ ಸುಂದರ ಕೆತ್ತನೆಗಳಿಂದ ನಿರ್ಮಿಸಲಾಗಿದೆ. ಹೀಗೆ ಹಲವು ಬಸದಿಗಳು ನೆಲೆ ನಿಂತಿರುವ ಮೂಡುಬಿದಿರೆ ಜೈನಕಾಶಿ ಎಂದೇ ಖ್ಯಾತಿ.