* ಕೃಷ್ಣಪ್ರಕಾಶ ಉಳಿತ್ತಾಯ
ದಾಸ ಸಾಹಿತ್ಯ ಜನಮನದಲ್ಲಿ ಅಚ್ಚಾಗಿ ನಿಲ್ಲಲು ಕಾರಣ ಪದ್ಯಗಳು ಸರಳವಾಗಿರುವುದು. ಸಾಮಾನ್ಯ ಜನರ ಮನಸ್ಸಿನ ಭಾವತರಂಗಗಳಿಗೆ ಅನುವಾಗಿ ಪದ್ಯಗಳು ಹೆಣೆದಿರುವುದು. ಮಾತ್ರವಲ್ಲದೆ ಸಾಹಿತ್ಯದಲ್ಲಿರುವ ಸಂಗೀತ ಮತ್ತು ನಾದ ಸಮೃದ್ಧಿ ದಾಸರ ಪದಗಳನ್ನು ಚಿರಸ್ಥಾಯಿಯಾಗಿ ಸಮಾಜದಲ್ಲಿ ನೆಲೆಗೊಳಿಸಿದೆ. ಹಾಡುಗಳಲ್ಲಿರುವ ನೀತಿ ಒಂದು ಬಗೆಯಾದರೆ ಭಕ್ತಿ ಜನರನ್ನು ಭಾವವನ್ನು ತಟ್ಟುವಂತಹಾದ್ದು. ಭಕ್ತಿ ಮನಸ್ಸನ್ನು ಏಕಾಗ್ರಗೊಳಿಸಿ ಮನದ ಅತಂತ್ರತೆಯನ್ನು ಹೋಗಲಾಡಿಸುತ್ತದೆ. ಸಮಾಜದ ಒಗ್ಗಟ್ಟಿಗೆ ಕಾರಣವಾಗುತ್ತದೆ. ಭಕ್ತಿ ಜ್ಞಾನವನ್ನು ಕರುಣಿಸುತ್ತದೆ ಎನ್ನುವುದು ಭಗವಂತನ ನಲ್ನುಡಿ.
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್| ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ|| ಕಷ್ಣ ಮಾತುಕೊಡುತ್ತಾನೆ- ಯಾರು ಆ ಪರಾತ್ಪರ ತತ್ತ್ವದಲ್ಲಿ ಭಕ್ತಿ, ವಿಶ್ವಾಸ ಇಟ್ಟು ಆರಾಧಿಸುತ್ತಾರೋ ಅವರಿಗೆ ಆ ತತ್ತ್ವವನ್ನು ಸೇರಲು ಬೇಕಾದ ಜ್ಞಾನವನ್ನು ಕೊಡುತ್ತೇನೆ. ಭಕ್ತಿ ಜ್ಞಾನಕ್ಕೆ ಮೂಲ ಎಂದು ಇಲ್ಲಿ ತಿಳಿಯುತ್ತದೆ. ಭಕ್ತಿಗೆ ಪೂರಕವಾದ ಸಾತ್ವಿಕ ಸಂಗೀತ, ಮಾಧುರ್ಯ ಮುಂತಾದ ಶಬ್ದಗುಣಗಳ ಸಾಹಿತ್ಯ, ಭಗವಂತನ ಅನಂತಗುಣಗಳ ವಿವರ ಇವೆಲ್ಲ ಎರಕವಾದಾಗ ಭಕ್ತಿಯ ಉದ್ದೀಪನವಾಗುತ್ತದೆ.
ಜ್ಞಾನದೀಪದಿಂದ...
“ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ” ಅಜ್ಞಾನದ ಕತ್ತಲೆಯನ್ನು ಜ್ಞಾನದೀಪದಿಂದ ತೊಲಗಿಸುತ್ತೇನೆ ಎಂಬ ಕೃಷ್ಣನ ಭರವಸೆಗೆ ಭಕ್ತಿಯ ಸುಧೆಯನ್ನು ಸಮಾಜದಲ್ಲಿ ಪಸರಿಸುವ ಭಗವಂತನ ಸೇವೆ ಪುರಂದರದಾಸರಾದಿ ದಾಸಕೂಟದ್ದು.
ಜಯತು ಕೋದಂಡರಾಮ|ಜಯತು ದಶರಥರಾಮ|| ಜಯತು ಸೀತಾರಾಮ|ಜಯತು ರಘುರಾಮ|| ಜಯತು ಜಯತು||ಪಲ್ಲವಿ|| ತಮ್ಮ ದೈತ್ಯನನು ಮಡುಹಿ ಮಂದರಾಚಲ ನೆಗಹಿ|ಪ್ರೀತಿಯಿಂದಲಿ ಸಂದ ಸಕಲ ಭೂತಳವ| ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ| ಭೀತಿಯನ್ನು ಬಿಡಿಸಿ ನೆರೆಕಾಯ್ದ ರಘುರಾಮ|| ಜಯತು||1||
ರಾಮನ ಕುರಿತಾಗಿ ಹಾಡುವ ದಾಸರಿಗೆ ಕೂರ್ಮ, ವರಾಹ, ನರಸಿಂಹವ ವಾಮನ, ಪರಶುರಾಮ, ರಾಮ, ಕೃಷ್ಣ ಅವತಾರಗಳನ್ನು ಅನುಸಂಧಾನ ಮಾಡುತ್ತಾರೆ. ಇಲ್ಲಿ ಕೇವಲ ಭಕ್ತಿಯೇ ಸ್ಥಾಯಿಯಾಗಿ ಮೈಮರೆತು ರಾಮನಲ್ಲಿ ಪರವಾಸುದೇವನ ಲೀಲಾವಿಭೂತಿ ಸ್ವರೂಪಗಳ ಆರಾಧನೆ ಮಾಡುತ್ತಾರೆ-ಮಾಡುವಂತೆ ಪ್ರೇರೇಪಿಸುತ್ತಾರೆ.
ಬಲಿಯೋಳ್ ದಾನವ ಬೇಡಿ ನೆಲವ ಈರಡಿ ಮಾಡಿ| ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ|| ಲಲನೆಗೋಸುಗ ಬಂದ ನೆವದಿಂದ ರಾವಣನ| ತಲೆಯನ್ನು ಚೆಂಡಾಡಿ ಮೆರೆದ ರಘುರಾಮ||ಜಯತು||2|| ವಸುದೇವ ಸುನೆನಿಸಿ ವನಿತೆಯರ ವ್ರತಗೆಡಿಸಿ| ಎಸೆವ ತುರಗವನೇರಿ ಮಲ್ಲರನು ಸವರಿ| ವಸುಧೆಯೊಳು ಪುರಂದರ ವಿಠಲನೆ ನೀ ಪಾಲಿಸೈ|| ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ||ಜಯತು||
ಕೃಷ್ಣನ ರಾಸಲೀಲೆಯೂ ಗೋಪಿಕೆಯರ ಭಕ್ತಿಯ ಸ್ವರೂಪ. ಇದು ರಾಮನ ನೆನಪಿನಲ್ಲಿ ಬಂದರೂ ಕೃಷ್ಣನ ರೂಪಿನ ನೆನಪಿನೊಡನೆ ಸಹಜವಾಗಿ ಈ ಗೋಪಿಕೆಯರ ಭಕ್ತಿಯ ಸ್ವರೂಪವನ್ನು ನೆನಪಿಸುತ್ತಾರೆ ದಾಸರು. ಕುವಲಯಾಪೀಡ ಎಂಬ ಆನೆಯ ಮದವನ್ನು ಇಳಿಸಿ, ಚಾಣೂರಮುಷ್ಟಿಕರನ್ನು ಕೊಂದು ಎಂಬಲ್ಲಿ ಕೃಷ್ಣಾತಾರದ ದುಷ್ಟ ಹನನವನ್ನು ನೆನಪಿಸುತ್ತಾರೆ. ಒಂದನ್ನು ಹೇಳುತ್ತಾ ವಸ್ತುವಿನ ಮತ್ತೊಂದು ಮುಖದ ಅನುಸಂಧಾನ ಇಲ್ಲಿ ನಡೆದಿದೆ. ಮುಖ್ಯವಾಗುವುದು ಅತೀತದ ಅನುಸಂಧಾನವನ್ನು ಮಾಡುವುದರಿಂದ ಸಮಾಜದಲ್ಲಿ ಮೂಡುವ ನೈತಿಕ ಮೌಲ್ಯಗಳು ಮತ್ತು ಜ್ಞಾನೋದಯ.
ಆನುಷಂಗಿಕವಾಗಿ ನೆನಪಾಗುವುದು ದ.ರಾ.ಬೇಂದ್ರೆಯವರ ಈ ಹಾಡಿನ ಸೊಲ್ಲು.
ನಾವೂ ನೀವು ಇರುವಲ್ಲಿ ನೋವು ಅದ , ಇಲ್ಲಾ- ಅದು ಗುರುವಿನ ತಾವು ಅಲ್ಲಿ ಆವು, ಶ್ರೀ ಗುರುವೇ ಬಲ್ಲಾ.
ಬೇಂದ್ರೆಯವರೆನ್ನುತ್ತಾರೆ. ಈ ಜೀವನದಲ್ಲಿ ನೋವೆಂಬುದು ಸಹಜ ಆದರೆ ಆ ನೋವಲ್ಲೇ ಇದೆ ಪರಾತ್ಪರ ಮೂಲದ ಶಕ್ತಿ. ಭಕ್ತಿಯೆಂಬ ಸಾಧನದ ಮೂಲಕ ಅಲ್ಲೇ ನಾವು ಆರಿಸಿಕೊಳ್ಳಬೇಕು.
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು. ಮಂಗಳೂರು)
ಲೇಖನಗಳು ಉತ್ತಮ ರೀತಿಯಲ್ಲಿ ಮೂಡಿ ಬರುತ್ತ ಇದೆ.
Thank you so much