ತಲೆನೋವು, ಅಜೀರ್ಣ, ಪಿತ್ತ, ಗ್ಯಾಸ್‍ಗಳಂತಹ ಸಮಸ್ಯೆಯಿಂದ ವಾಂತಿ ಉಂಟಾಗುವುದು. ಹೀಗೆ ಉಂಟಾದಾಗ ಬಹಳ ಬೇಗ ಚೇತರಿಕೆ ಅನುಭವವನ್ನು ಶುಂಠಿ ನೀಡಬಲ್ಲದು. ವಾಂತಿಯಾದ ನಂತರ ಅಥವಾ ವಾಕರಿಕೆ ಸಂವೇದನೆ ಉಂಟಾದಾಗ ಚೂರು ಶುಂಠಿ ಮತ್ತು ಚಿಟಿಕೆ ಉಪ್ಪನ್ನು ಬಾಯಲ್ಲಿ ಇರಿಸಿಕೊಂಡರೆ ತೊಂದರೆ ಶಮನವಾಗುವುದು. ಕೆಲವೊಮ್ಮೆ ಮನೆಯಲ್ಲಿ ವಿಶೇಷ ಅಡುಗೆ ಊಟ ಮಾಡಿದಾಗ ಅಥವಾ ಸ್ನೇಹಿತರು/ಸಂಬಂಧಿಕರ ಮನೆಯಲ್ಲಿ ವಿಶೇಷ ಊಟ ಮಾಡಿದಾಗ, ಗ್ಯಾಸ್ ತೊಂದರೆಯಿಂದ ಅಜೀರ್ಣ ಉಂಟಾಗುವುದು. ಈ ಸಮಸ್ಯೆಗೆ ಪರಿಹಾರವೆಂದರೆ ಶುಂಠಿ. ಶುಂಠಿ ಕಷಾಯ ಅಥವಾ ಹಸಿ ಶುಂಠಿ ಚೂರನ್ನು ಬಾಯಲ್ಲಿರಿಸಿಕೊಂಡು, ಅದರ ರಸವನ್ನು ನುಂಗುತ್ತಿದ್ದರೆ ವಾಕರಿಕೆ ಆಗದು. ಆಹಾರವೂ ಜೀರ್ಣವಾಗುವುದು.
ಅನಾರೋಗ್ಯದಿಂದ ಮನಸ್ಸಿಗೆ ವಾಕರಿಕೆ ಆಗಬಹುದು ಎನ್ನುವ ಸಂದೇಹ ರವಾನೆಯಾಗುತ್ತಿದೆ ಎಂದರೆ ಬಾಯಲ್ಲಿ ಚೂರು ಶುಂಠಿಯನ್ನು ಇಟ್ಟುಕೊಂಡು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಸಾಗಿ. ಆಗ ವಾಕರಿಕೆ/ವಾಂತಿ ಉಂಟಾಗದು.
ಕೆಲವೊಮ್ಮೆ ಊಟ ತಿಂಡಿಯ ಸಮಯದಲ್ಲಿ ಆಹಾರ ನಮ್ಮ ಹೊಟ್ಟೆಗೆ ತಲುಪದಿದ್ದರೆ ಗ್ಯಾಸ್ ಉಂಟಾಗುವುದು. ಆನಂತರ ಊಟ ಸೇವಿಸಿದಾಗ ಕೆಲವೊಮ್ಮೆ ವಾಂತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಶುಂಠಿ ಜ್ಯೂಸ್, ಶುಂಠಿ ಕಷಾಯ ಅಥವಾ ಶುಂಠಿ ಚೂರನ್ನು ತಿಂದರೆ ಶಮನವಾಗುವುದು.
ತಲೆನೋವು ನಿವಾರಣೆಗೆ
ಕೆಲವರಿಗೆ ತಲೆ ನೋವು ಹೆಚ್ಚಾದರೆ ವಾಂತಿಯಾಗುವುದು. ಇಂತಹವರು ಶುಂಠಿಯನ್ನು ತೇಯ್ದು ಹಣೆಗೆ ಹಚ್ಚಿಕೊಂಡರೆ ತಲೆನೋವು ಶಮನವಾಗುವುದು. ವಾಂತಿಯೂ ಉಂಟಾಗದು. ಇಲ್ಲವಾದರೆ ಒಂದು ಕಪ್ ನೀರಿಗೆ ಸ್ವಲ್ಪ ಶುಂಠಿಯನ್ನು ಜಜ್ಜಿ ಹಾಕಿ ನಂತರ ಚೆನ್ನಾಗಿ ಕುದಿಸಿ. ಬಳಿಕ ಟೀಯಂತೆ ಸೇವಿಸಬೇಕು.
ಸಂಗ್ರಹ: ಎಚ್.ಎಸ್.ರಂಗರಾಜನ್