ಲಲಿತಾಸಹಸ್ರನಾಮದ ಎರಡನೇ ಶ್ಲೋಕ. ಅದರ ಅರ್ಥವನ್ನು ರಸವತ್ತಾಗಿ ವಿವರಿಸಿದ್ದಾರೆ ಬರಹಗಾರ ಶ್ರೀ ಕೃಷ್ಣಪ್ರಕಾಶ್ ಉಳಿತ್ತಾಯ ಅವರು.
ಉದ್ಯದ್ಭಾನುಸಹಸ್ರಾಭಾ ಚತುರ್ಬಾಹು ಸಮನ್ವಿತಾ| ರಾಗಸ್ವರೂಪಪಾಶಾಢ್ಯಾ ಕ್ರೋಧಾಕಾರಾಂಕುಶೋಜ್ವಲಾ||
ಚಿದಗ್ನಿಕುಂಡದಲ್ಲಿ ಹುಟ್ಟಿದವಳಾದ ಲಲಿತೆ ಹೇಗಿದ್ದಾಳೆ ಎಂದು ವಿಮರ್ಶನ ಮಾಡುತ್ತದೆ ಐದನೆಯ ಹೆಸರು. ಅಗ್ನಿಯಲ್ಲಿ ಹುಟ್ಟಿದವಳು ಹೇಗಿದ್ದಾಳು?. ಉದಯಕಾಲದ ಸೂರ್ಯ ತನ್ನ ಕೆಂಪಾದ ವರ್ಣದಿಂದ ಮನಸ್ಸನ್ನು ಮುದಗೊಳಿಸುತ್ತಿದ್ದಾನಲ್ಲಾ ಅಂತಹಾ ಸಾವಿರ ಸೂರ್ಯರ ವರ್ಣಕ್ಕೆ ಸಮವಾದ ಕಾಂತಿಯಿಂದ ಕಂಗೊಳಿಸುತ್ತಾ ಬೆಳಗುತ್ತಾ ಇದ್ದಾಳೆ ತಾಯಿ ಲಲಿತೆ ಎಂದು ಹೇಳುತ್ತಾರೆ. ದೇವತೆಗಳು ಯಜ್ಞವೇದಿಯಲ್ಲಿ ಆಕೆಯನ್ನು ಕಂಡ ಬಗೆ ಇದಲ್ಲವೇ! ಹಾಗಾಗಿಯೇ ಈ ಹೆಸರು “ಉದ್ಯದ್ಭಾನುಸಹಸ್ರಾಭಾ ಚತುರ್ಬಾಹು ಸಮನ್ವಿತಾ” ದೇವತೆಗಳಿಗೆ ತಾಯಿ ಚತುರ್ಬಾಹುಗಳನ್ನು ಹೊಂದಿದವಳಾಗಿ ಕಂಡಳು. ನಾಲ್ಕು ಕೈಗಳಲ್ಲಿ ಏನೇನು ಹಿಡಿದಿದ್ದಾಳೆಂಬುದು ತಾಯಿಯ ಮುಂದಿನ ಹೆಸರಲ್ಲಿ ಬರುತ್ತದೆ.
“ರಾಗಸ್ವರೂಪಪಾಶಾಢ್ಯಾ”. ಒಂದು ಕೈಯ್ಯಲ್ಲಿ ಪಾಶವನ್ನು ಹಿಡಿದಿದ್ದಾಳೆ. ರಾಗವೆಂಬ ಪಾಶವನ್ನು ಹಿಡಿದು ಕಾಣಿಸಿಕೊಳ್ಳುತ್ತಾಳೆ ತಾಯಿ. ರಾಗವಿದ್ದಾಗ ಜಗತ್ತಿನಲ್ಲಿ ಸಕಲ ವ್ಯವಹಾರಗಳೂ ನಡೆಯುತ್ತದೆ. ರಾಗವು ಪ್ರತಿ ಜೀವಿಯನ್ನು ಹಿಡಿದಿಟ್ಟುಕೊಂಡಿದೆ. ರಾಗವು ಪಾಶದ ಸ್ವರೂಪದಿಂದ ಅಮೂರ್ತವಾಗಿ ಕಾರ್ಯನಿರ್ವಹಿಸುತ್ತದೆ. ದೇವಿಯು ಜಗತ್ತಿನ ಅಭಿವ್ಯಕ್ತಿಯ ಸ್ವರೂಪವೆಂದಿರುವೆವಲ್ಲಾ?.
ಆದುದರಿಂದಲೇ ಜಗತ್ತಿನ ಈ ಹರಿವಿಗೆ ರಾಗದ ಪಾಶಕ್ಕೆ ಒಡ್ಡಿಕೊಂಡ ಜೀವಿಗಳು ಬೇಕು. ಆದರೆ ಇಲ್ಲಿ ವಿವೇಚನೆ ಮಾಡಬೇಕಾದದ್ದು ಜೀವಿಗಳೆಲ್ಲ ಒಪ್ಪಿಸಿಕೊಂಡದ್ದು ತಾಯಿಯ ಪಾಶಕ್ಕೆ ಎಂಬುದಾಗಿ. ಈ ವಿವೇಚನೆ ಬಂದಾಗ ಈ “ರಾಗ” ಎಂಬುದು ತಾಯಿಯ ಕಡೆಗೆ ತಿರುಗಿ ನಮ್ಮ ಸ್ತರ ಮೇಲ್ಮಟ್ಟಕ್ಕೆ ಹೋಗುತ್ತದೆ.
ಜೀವನ ಅಧೋಪಾತದ ಬದಲು ಊರ್ಧ್ವಪಾತವಾಗುತ್ತದೆ. ‘ರಾಗಪಾಶ’ ಉಜ್ಜೀವನಕ್ಕೆ ಹೇತುವಾಗುತ್ತದೆ. ಅಂತಹಾ ಚಿಂತನೆಯಲ್ಲಿ ತಾಯಿಯ “ರಾಗಪಾಶ”ವನ್ನು ಧ್ಯಾಸಿಸಬೇಕು. “ಕ್ರೋಧಾಕಾರಾಂಕುಶೋಜ್ವಲಾ” ಕ್ರೋಧ ಮತ್ತು ವಿಷಯ ಜ್ಞಾನ(ಆಕಾರ) ಎಂಬ ಅಂಕುಶವನ್ನು ತನ್ನ ಕೈಯಲ್ಲಿ ಹಿಡಿದಿದ್ದಾಳೆ.
ಅಂಕುಶ ಲಲಿತಾ ಪರಮೇಶ್ವರಿಯ ಕೈಯ್ಯಲ್ಲಿದೆ. ಕ್ರೋಧ-ವಿಷಯ ವಾಸನೆ ಜೀವಿಗಳಲ್ಲಿದೆ. ಅವಳನ್ನು ಕುರಿತಾಗಿ ನಮ್ಮ ಸಮರ್ಪಣಾ ಬುದ್ಧಿಯ ನಡವಳಿಕೆ ಇವೆರಡನ್ನೂ ಮುಕ್ತಿಯ ಪಥದೆಡೆಗೆ ಹರಿಸುವಂತೆ ನಮ್ಮ ಕ್ರೋಧ ಮತ್ತು ವಿಷಯ ಜ್ಞಾನ, ವಿಷಯ ವಾಸನೆಗಳೆರಡರನ್ನೂ ನಿಯಂತ್ರಿಸುತ್ತಾಳೆ.
ಇಂತಹಾ ತಾಯಿಯ ಹೆಸರಿನ ಸ್ಮರಣೆ ನಮ್ಮೆಲ್ಲರ ಅಜ್ಞಾನವನ್ನು ದೂರೀಕರಿಸಿ ಕಾಪಾಡಲಿ ಎಂಬ ಪ್ರಾರ್ಥನೆ.