ನವದುರ್ಗೆಯರು ಆವಿರ್ಭಸಲಿ

ನವ ಅನ್ನುವ ಪದಕ್ಕೆ ಹೊಸ, ಒಂಬತ್ತು ಎನ್ನುವ ಅರ್ಥವೂ ಇರುವುದರಿಂದ ನವರಾತ್ರ ಅನ್ನಬೇಕೇ ಅಥವಾ ನವರಾತ್ರಿ ಎನ್ನುವ ಪದ ಸೂಕ್ತವೇ? ನವರಾತ್ರ ಅಥವಾ ನವರಾತ್ರಿ ಶಬ್ದದ ಪದ ಬಳಕೆಯಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲ ಅನೇಕರಲ್ಲಿದೆ. ಅದನ್ನು ಸರಳವಾಗಿ ನಿವಾರಿಸಿದ್ದಾರೆ ಕಟೀಲು ಆನುವಂಶಿಕ ಅರ್ಚಕರಾದ ವಿದ್ವಾನ್ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅವರು.

ನವಾನಾಮ್ ರಾತ್ರೀಣಾಮ್ ಸಮಾಹಾರಃ ನವರಾತ್ರಮ್. ಒಂಬತ್ತು ರಾತ್ರಿಗಳು ಸೇರಿರುವಂಥದ್ದು ನವರಾತ್ರ ಎಂಬ ಹಬ್ಬ. ಹೀಗೆಯೇ ಕೆಲವೆಡೆ ಪ್ರಯೋಗವಿದೆ. ಆದರೆ ನಮ್ಮ ಕರಾವಳಿಯಲ್ಲಿ ಮತ್ತು ಇತರ ಹೆಚ್ಚಿನೆಡೆ ನವರಾತ್ರೀ ಎಂದೇ ಪ್ರಯೋಗ. ಈ ಪ್ರಯೋಗಕ್ಕೆ ನಮಗೆ ವ್ಯಾಕರಣದಲ್ಲಿ ಸಾಮಾನ್ಯವಾಗಿ ಹುಡುಕಿದರೆ ಅರ್ಥ ನಿಷ್ಪತ್ತಿ ದೊರೆಯಲಾರದು.

ನವರಾತ್ರಿಯು ಪಾಡ್ಯದಿಂದ ನವಮೀವರೆಗೆ ಒಟ್ಟು ಒಂಬತ್ತು ತಿಥಿಗಳಲ್ಲಿ ಆಚರಿಸಲ್ಪಡುವುದರಿಂದ  ಒಂಬತ್ತು ರಾತ್ರಿಗಳು ಎನ್ನುವ ಸಾಮಾನ್ಯ ಅರ್ಥ  ಇದಕ್ಕೆ ಕೂಡುವುದಾದರೂ ಆವಾಗ ನವರಾತ್ರ ಎಂದೇ ಪದಪ್ರಯೋಗವಾಗಬೇಕು.

ಹೀಗೆ ಹೇಳೋಣವೇ?  ಕೆಲವೊಮ್ಮೆ ತಿಥಿಗಳು ದೀರ್ಘವಾಗಿ ಬಂದಾಗ  ಹತ್ತು ದಿನಗಳಷ್ಟು ದೀರ್ಘವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ತಿಥಿಗಳು ಹ್ರಸ್ವವಾದಲ್ಲಿ ಆಗ ಎಂಟೇ ದಿನಗಳಲ್ಲಿ ನವರಾತ್ರಿಯು ಮುಗಿಯುತ್ತದೆ. ಇದೂ ಅಲ್ಲದೆ ವಿಜಯದಶಮಿಯನ್ನೂ ನವರಾತ್ರಿಯ ಅಂಗತ್ವೇನ ಆಚರಿಸಲ್ಪಡುವುದರಿಂದ ಆ ರೀತಿಯಲ್ಲಿ ನೋಡುವುದಾದರೆ ಹತ್ತು ತಿಥಿಗಳು ಆಗುತ್ತವೆ. ಹಾಗಿರುವಾಗಲೂ ನವರಾತ್ರಿ ಎನ್ನುವುದು ಕೂಡಲಾರದು. ಆದರೆ ಬಹ್ವರ್ಥಕಗಳನ್ನು ನವ ಶಬ್ದಕ್ಕೂ ರಾತ್ರಿ ಶಬ್ದಕ್ಕೂ  ಹುಡುಕುವಾಗ ಮಾತ್ರ  ನವರಾತ್ರೀ ಎನ್ನುವ ಅರ್ಥ ಕೂಡುತ್ತದೆ. ನವ ಎನ್ನುವುದು ಒಂಬತ್ತು ಮತ್ತು ಹೊಸತು ಎನ್ನುವ ಅರ್ಥವಿದೆ. ಅದೇ ರೀತಿ ರಾತ್ರಿ ಎನ್ನುವುದಕ್ಕೆ ಸೂರ್ಯನ ಬೆಳಕಿನ ಅಭಾವದ ಕತ್ತಲು ಮತ್ತು ದುರ್ಗಾ ಎನ್ನುವ ಅರ್ಥವಿದೆ. ನವ ಶಬ್ದಕ್ಕೆ ಒಂಬತ್ತು ಎನ್ನುವ ಬದಲು ಹೊಸತು ಎನ್ನುವ ಅರ್ಥವನ್ನೂ, ರಾತ್ರಿ ಎನ್ನುವುದಕ್ಕೆ ದುರ್ಗಾ ಎನ್ನುವ ಅರ್ಥವನ್ನೂ ತೆಗೆದುಕೊಂಡಲ್ಲಿ ಇಲ್ಲಿ ಹೊಂದಿಸುವುದು ಬಲು ಸುಕರ.

ನವರಾತ್ರಿಯಲ್ಲಿ ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಕಾಲರಾತ್ರೀ, ಮಹಾಗೌರೀ, ಸಿದ್ಧಿದಾತ್ರೀ  ಎಂಬ ಒಂಬತ್ತು ರೂಪದ ನವದುರ್ಗೆಯರನ್ನು ಆರಾಧಿಸುವ ಕ್ರಮವಾದರೆ ದುರ್ಗಾ, ಆರ್ಯಾ, ಭಗವತೀ, ಅಂಬಿಕಾ, ಚಂಡಿಕಾ,  ಸರಸ್ವತೀ, ಚಂಡಿಕಾ, ಮಹಿಷಮರ್ದಿನೀ,  ವಾಗೀಶ್ವರೀ ಎನ್ನುವ ಒಂಬತ್ತು ರೂಪದ ನವದುರ್ಗೆಯರನ್ನೂ ಪ್ರತಿದಿನಕ್ಕೆ ಪ್ರತ್ಯೇಕಪ್ರತ್ಯೇಕವಾಗಿ ಆರಾಧಿಸುವ ಕ್ರಮವೂ ಇದೆ. ಇದು ಒಂದೊಂದು ತಿಥಿಗೆ ಒಂದೊಂದು ದುರ್ಗೆಯ ಆರಾಧನೆ ಅಂದರೆ ಒಂಭತ್ತು ತಿಥಿಗೆ ಒಂಬತ್ತು ದುರ್ಗೆಯರು.ಹೀಗೆ ಒಂದೊಂದು ತಿಥಿಗೆ ಒಂದೊಂದು ಹೊಸ ದುರ್ಗೆಯರಂತೆ ಒಟ್ಟು ಒಂಬತ್ತು ದುರ್ಗೆಯರ  ಆರಾಧನೆಯಾಗುತ್ತದೆ. ಇಂತಹ ಹೊಸ ಹೊಸ ದುರ್ಗೆಯರ ಆರಾಧನೆಯ ವ್ರತಕ್ಕೆ ನವರಾತ್ರಿ ಎಂದೂ ನವ ಅಂದರೆ ಎಂಟರ ನಂತರದ ಒಂಬತ್ತು ದುರ್ಗೆಯರ ಆರಾಧನೆಯ ವ್ರತ ಎನ್ನುವ ಅರ್ಥದಲ್ಲಿ ನವರಾತ್ರ ಎಂದೂ ಅರ್ಥೈಸಿದಲ್ಲಿ  ಸಂಗತವೆನಿಸುತ್ತದೆ. ಆಗ ಶಬ್ದದ ಗೊಂದಲ ನಿವಾರಣೆಯಾಗುತ್ತದೆ. ಆವಾಗ ನವಾ ಚ ಸಾ ರಾತ್ರಿಶ್ಚ ನವರಾತ್ರಿಃ ಎಂಬ ವ್ಯುತ್ಪತ್ತಿ ಹೊಂದಿಸಬಹುದಾಗಿದೆ.

ಹೀಗೆ ನವರಾತ್ರಿಯಲ್ಲಿ ಆರಾಧಿಸಲ್ಪಡುವ ದುರ್ಗೆಯ ಅನಂತ ಹೊಸ ಹೊಸ ರೂಪಗಳು ನಮ್ಮನ್ನು ದುರ್ಗಗಳಾಗಿ ಸುತ್ತಿ ರಕ್ಷಿಸಲಿ. ನಮ್ಮ ಆಶೋತ್ತರಗಳನ್ನು‌ ಈಡೇರಿಸಲಿ ಎಂದು ‌ಪ್ರಾರ್ಥಿಸೋಣ.

ಚಿತ್ರ: ಖ್ಯಾತ ಕಲಾವಿದರಾದ ಶ್ರೀ ಬಿಕೆಎಸ್ ವರ್ಮಾ

Related Articles

ಪ್ರತಿಕ್ರಿಯೆ ನೀಡಿ

Latest Articles