ಆಹಾರ ಕ್ರಮ ಹೀಗಿದ್ದರೆ ಮಧುಮೇಹ ನಿಯಂತ್ರಣ ಖಂಡಿತಾ ಸಾಧ್ಯ

  • ಡಾ. ನಿತಿನ್ ವೀರನಾಗಪ್ಪ

ಡಯಾಬೆಟಿಸ್ ಮೆಲ್ಲಿಟಸ್‌ ಅಥವಾ ಪ್ರಮೇಹ ಎಂಬುದು ಚಯ – ಅಪಚಯ ಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು ಶರೀರದಲ್ಲಿ ಇನ್ಸುಲಿನ್‌ ಉತ್ಪಾದನೆ ಕಡಿಮೆಯಾದಾಗ ಅಥವಾ ಇನ್ಸುಲಿನ್‌ ಚಟುವಟಿಕೆಗೆ ತಡೆ ಉಂಟಾಗಿ ದೇಹದ ಜೀವಕೋಶಗಳು ಶರೀರದ ಒಂದು ಬಹುಮುಖ್ಯ ಶಕ್ತಿ ಮೂಲವಾದ ಗ್ಲೂಕೋಸ್ ಅನ್ನು ಉಪಯೋಗಿಸಿಕೊಳ್ಳಲು
ಅಸಮರ್ಥವಾಗುವಾಗ ಈ ಅಸ್ವಸ್ಥತೆ ಬಾಧಿಸುತ್ತದೆ.

ಗ್ಲೂಕೋಸ್ ಶರೀರದ ಜೀವಕೋಶಗಳನ್ನು ಪ್ರವೇಶಿಸಿ ಚಯಾಪಚಯ ಕ್ರಿಯೆಯ ಮೂಲಕ ಶಕ್ತಿಯನ್ನು ಉತ್ಪಾದಿಸಬೇಕಾದರೆ ಇನ್ಸುಲಿನ್‌ ಆವಶ್ಯಕ. ಕಣ್ಣು, ನರಗಳು, ಮೂತ್ರಪಿಂಡ ಮತ್ತು ರಕ್ತನಾಳಗಳಲ್ಲಿನ ತೊಂದರೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶರೀರದಲ್ಲಿ ಉತ್ತಮ ಗ್ಲೂಕೋಸ್ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಬಹಳ ಆವಶ್ಯಕ. ಆಹಾರ ಕ್ರಮದ ಬದಲಾವಣೆಗಳು, ವ್ಯಾಯಾಮ ಮತ್ತು ಜೀವನಶೈಲಿಯ
ಸುಧಾರಣೆಗಳನ್ನು ಮಧುಮೇಹದ ಯಾವುದೇ ಹಂತದಲ್ಲಿ ಮತ್ತು ಅವಧಿಯಲ್ಲಿ ಕಡೆಗಣಿಸುವಂತಿಲ್ಲ. ಇದನ್ನು ಒಟ್ಟಾಗಿ ವೈದ್ಯಕೀಯ ಪೋಷಣಾ ಚಿಕಿತ್ಸೆ ಎಂಬುದಾಗಿ ತಿಳಿಯಲಾಗುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ
ರೋಗಿಗಳಿಗೆ ಮತ್ತು ಮಧುಮೇಹದ ಆರೈಕೆಯಲ್ಲಿ ಇದರ ಪಾತ್ರವು ಬಹಳ ಮಹತ್ವದ್ದಾಗಿರುತ್ತದೆ.

ಆಹಾರ ಕ್ರಮ

ಮಧುಮೇಹವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವುದು ಅಂದರೆ ಆಹಾರ ಸೇವಿಸದೆ ಇರುವುದು ಆಥವಾ ಕಡಿಮೆ ಆಹಾರವನ್ನು ಸೇವಿಸಿ ಬಳಲುವುದು ಎಂದಲ್ಲ. ಇದರ ಅರ್ಥ ಹೆಚ್ಚು ಆರೋಗ್ಯಶಾಲಿಯಾದ
ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸುವುದು ಎಂದು.

ಮಧುಮೇಹದ ಆಹಾರಕ್ರಮ ಅಂದರೆ ಆರೋಗ್ಯಶಾಲಿ ಆಹಾರ ಸೇವನಾ ಯೋಜನೆ, ಅಂದರೆ ಸ್ವಾಭಾವಿಕವಾಗಿ ಪೋಷಕಾಂಶಗಳಿಂದ ಭರಿತವಾದ ಮತ್ತು ಕಡಿಮೆ ಕೊಬ್ಬು ಇರುವ ಮತ್ತು ಸೂಕ್ತ ಪ್ರಮಾಣದ ಕ್ಯಾಲೊರಿಯನ್ನು ಒಳಗೊಂಡಿರುವ ಆಹಾರವನ್ನು
ಸೇವಿಸುವುದು. ಈ ಆಹಾರ ಕ್ರಮದಲ್ಲಿನ ಬಹುಮುಖ್ಯ ಅಂಶಗಳು ಅಂದರೆ ತರಕಾರಿಗಳು, ಕೆಲವು ಹಣ್ಣುಗಳು ಮತ್ತು ಧಾನ್ಯಗಳು.

ಮಧುಮೇಹದ ಆಹಾರ ಕ್ರಮ ಅಂದರೆ, ಖಂಡಿತವಾಗಿಯೂ ಕಾಯಿಲೆ ಇರುವ ಹಾಗೂ ಇಲ್ಲದಿರುವ ಪ್ರತಿಯೊಬ್ಬರಿಗೂ ಯೋಗ್ಯವೆನಿಸುವ ಮತ್ತು ಆರೋಗ್ಯಕರ ಆಹಾರ ಯೋಜನೆ. ರಕ್ತದ ಸಕ್ಕರೆ ಮಟ್ಟವನ್ನು ಸೂಕ್ತ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು ಪಾಲಿಸಬೇಕಾದ ಕೆಲವು ಆಹಾರ ಕ್ರಮಗಳು:
ಆಹಾರವೇ ನಿಮ್ಮ ಔಷಧಿಯಾಗಿರಲಿ” ಅನ್ನುವುದು ಆಯುರ್ವೇದದ ಒಂದು ಜನಪ್ರಿಯ ನಾಣ್ಣುಡಿ. ಯಾವುದೇ ಕಾಯಿಲೆಯ ನಿರ್ವಹಣೆಯಲ್ಲಿ ಆಹಾರದ ಪಾತ್ರ ಏನು ಎಂಬುದನ್ನು ಇದು ಒತ್ತಿ ಹೇಳುತ್ತದೆ. ಆಹಾರ ಕ್ರಮವು ಕೇವಲ ಮಧುಮೇಹದ
ನಿರ್ವಹಣೆಯಲ್ಲಿ ಮಾತ್ರ ಅಲ್ಲ, ಇತರ ಕಾಯಿಲೆಗಳಾದ ಅತಿ ರಕ್ತದೊತ್ತಡ, ಹೈಪರ್‌ ಕೊಲೆಸ್ಟ್ರೋಲೆಮಿಯಾ ಮತ್ತು ಬೊಜ್ಜಿನ ನಿರ್ವಹಣೆಯಲ್ಲಿಯೂ ಸಹ ವಿಶೇಷ ಪಾತ್ರವನ್ನು ವಹಿಸುತ್ತದೆ.


ಮಧುಮೇಹದ ಆಹಾರ ಕ್ರಮಗಳು:

ಮಧುಮೇಹದ ಆಹಾರ ಕ್ರಮವು ಮೂರು ಮುಖ್ಯ ಆಹಾರಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಒಂದು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ, ಮುಂಜಾನೆ ನಂತರ ಮತ್ತು ಸಾಯಂಕಾಲದ ಎರಡು ಉಪಾಹಾರಗಳು, ರಾತ್ರಿ ಮಲಗುವ ಸಮಯದಲ್ಲಿ ಸೇವಿಸುವ ಹಣ್ಣು ಅಥವಾ ಒಂದು ಗ್ಲಾಸ್‌ ಹಾಲು/ ಮಜ್ಜಿಗೆಗಳು ಸೇರಿರುತ್ತವೆ.

  • ಪ್ರತಿ ಎರಡೂವರೆಯಿಂದ ಮೂರು ಗಂಟೆಯ ನಡುವೆ ಆಗಾಗ ಮತ್ತು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿಆಹಾರವನ್ನು ಸೇವಿಸುವುದು ಈ ಕ್ರಮದ ಮುಖ್ಯ ಅಂಶ. ಏರಿಳಿತಗಳು ಮತ್ತು ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಏರಿಕೆಯಾಗುವುದು ಮತ್ತು ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸುವುದು ಹೆಚ್ಚು ಸೂಕ್ತ.
  • ಮಧುಮೇಹ ಇರುವ ರೋಗಿಗಳು ಅಧಿಕ ನಾರಿನಂಶ ಇರುವ ಆಹಾರ ವಸ್ತುಗಳನ್ನು ಹೆಚ್ಚು ಸೇವಿಸಬೇಕು. ಇಂತಹ ಆಹಾರಗಳು ಅಂದರೆ, ಗೋಧಿ, ರಾಗಿ, ಓಟ್ಸ್‌, ಸಿರಿ ಧಾನ್ಯಗಳು ಮತ್ತು ಬೇಳೆಗಳು, ಬೀನ್ಸ್‌ನಂತಹ ತರಕಾರಿಗಳು, ಹಸುರು ಸೊಪ್ಪು ತರಕಾರಿಗಳು ಮತ್ತು ಕ್ಯಾಬೇಜ್‌. ಈ ಆಹಾರಗಳು ಕಡಿಮೆ ಕ್ಯಾಲೊರಿ ಮತ್ತು ಸಕ್ಕರೆ ಅಂಶವನ್ನು ಹೊಂದಿರುತ್ತವೆ.
  • ಮತ್ತು ಇವು ರಕ್ತದ ಸಕ್ಕರೆ ಮಟ್ಟವನ್ನು ನಿಧಾನವಾಗಿ ಮತ್ತು ಒಂದೇ ಕ್ರಮದಲ್ಲಿ ಹೆಚ್ಚಿಸುತ್ತವೆ.
  • ಆಹಾರ ಸೇವಿಸಿದ ಬಳಿಕ ರಕ್ತದ ಗ್ಲೂಕೋಸ್ ಮಟ್ಟವು ಹಠಾತ್ತಾಗಿ ಏರಿಕೆಯಾಗುವುದನ್ನು ನಿರ್ವಹಿಸುವುದರಲ್ಲಿ ಇದು ವಿಶೇಷ ಪ್ರಯೋಜನಕಾರಿ.
  • ಸೇವಿಸಬಹುದಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಅಂದರೆ ಕೆನೆರಹಿತ ಹಾಲು ಮತ್ತು ಮಜ್ಜಿಗೆ.
  • ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುವ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ಚೀಸ್‌ ಮತ್ತು ಪನೀರ್‌ಗಳನ್ನು ಸೇವಿಸಬಾರದು. ಸಸ್ಯಜನ್ಯ ಎಣ್ಣೆಗಳಾದ ಸೂರ್ಯಕಾಂತಿ, ತೆಂಗಿನೆಣ್ಣೆ, ನೆಲಗಡಲೆ ಮತ್ತು ಎಳ್ಳಿನ ಎಣ್ಣೆಗಳನ್ನು ಅಡುಗೆಗೆ ಬಳಸಬಹುದು. ಡಾಲ್ಡಾ, ವನಸ್ಪತಿ ಮತ್ತು ಬೆಣ್ಣೆಗಳನ್ನು ಬಳಸಬಾರದು. ಕೊಬ್ಬಿನ ಆಮ್ಲದ ಪ್ರಮಾಣದಲ್ಲಿ ಒಂದು ಅಡುಗೆ ಎಣ್ಣೆಯಿಂದ ಇನ್ನೊಂದಕ್ಕೆ ವ್ಯತ್ಯಾಸ ಆಗುವುದರಿಂದ ಅಡುಗೆಗೆ ಬೇರೆ ಬೇರೆ ರೀತಿಯ ಎಣ್ಣೆಯನ್ನು ನಿಯಮಿತವಾಗಿ ಬದಲಿಸುತ್ತಾ ಬಳಸಬಹುದು.
  • ಮೊಟ್ಟೆಯೂ ಸಹ ವಿಶೇಷ ಪೋಷಣಾಭರಿತ ಆಹಾರವಾಗಿದ್ದು, ಇದನ್ನೂ ಸಹ ಸೇವಿಸಬಹುದು. ಮೊಟ್ಟೆಯ ಬಿಳಿಯ ಭಾಗವು ಪ್ರೋಟೀನ್‌ನಿಂದ ಮತ್ತು ಹಳದಿಯ ಭಾಗವು ಕೊಲೆಸ್ಟ್ರಾಲ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಮಧುಮೇಹ
    ರೋಗಿಗಳು ಮೊಟ್ಟೆಯ ಹಳದಿ ಭಾಗವನ್ನು ಹೆಚ್ಚು ಸೇವಿಸದೆ ಬಿಳಿಯ ಭಾಗವನ್ನು ಮಾತ್ರ ಹೆಚ್ಚು ಸೇವಿಸಬಹುದು.
  • ಮಧುಮೇಹ ರೋಗಿಗಳು ದಿನಕ್ಕೆ ಕನಿಷ್ಠ ಒಂದು ಹಣ್ಣನ್ನು ಸೇವಿಸಬಹುದು ಎಂದು ಶಿಫಾರಸು ಮಾಡಲಾಗುತ್ತದೆ. ಶಿಫಾರಸು ಮಾಡುವ ಹಣ್ಣುಗಳು ಅಂದರೆ ಸೇಬು, ಕಿತ್ತಳೆ, ಮೂಸಂಬಿ, ಪೇರಳೆ, ಪಪ್ಪಾಯ (ದಿನಕ್ಕೆ 50 ಗ್ರಾಂ ಪಪ್ಪಾಯ ಅಥವಾಅಷ್ಟೇ ಪ್ರಮಾಣದ ಮಧ್ಯಮ ಗಾತ್ರದ ಸೇಬು). ರಕ್ತದ ಸಕ್ಕರೆ ಮಟ್ಟವನ್ನು ಹಠಾತ್ತಾಗಿ ಹೆಚ್ಚಿ ಸುವ ಕಾರಣ ಬಾಳೆಹಣ್ಣು, ಮಾವಿನ ಹಣ್ಣು, ಚಿಕ್ಕು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬಾರದು.
  • ಒಣ ಹಣ್ಣುಗಳಾದ ಬಾದಾಮಿ ಮತ್ತು ವಾಲ್ನಟ್‌ಗಳನ್ನು ಸೇವಿಸಬಹುದು. ಆದರೆ ಗೋಡಂಬಿಯಲ್ಲಿ ಅಧಿಕ ಕೊಬ್ಬಿನ ಅಂಶ ಮತ್ತು ಒಣ ದ್ರಾಕ್ಷಿಯಲ್ಲಿ ಅಧಿಕ ಸಕ್ಕರೆ ಅಂಶ ಇರುವ ಕಾರಣ ಇವನ್ನು ಸೇವಿಸಬಾರದು.
  • ಮಧುಮೇಹ ರೋಗಿಗಳು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮೊದಲು ಹಸಿ ತರಕಾರಿಗಳನ್ನು ಸಲಾಡ್‌ ರೂಪದಲ್ಲಿ ಸೇವಿಸಬಹುದು. ಸಲಾಡ್‌ನ‌ಲ್ಲಿ ಕ್ಯಾಲೊರಿ ಬಹಳ ಕಡಿಮೆ ಇರುತ್ತದೆ ಮತ್ತು ನಾರಿನ ಅಂಶ ಹೆಚ್ಚು ಇರುತ್ತದೆ. ಇದು ರಕ್ತದ
    ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಗಿ ಮಲವಿಸರ್ಜನೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
  • ಆಲೂಗಡ್ಡೆ, ಸಿಹಿ ಗೆಣಸು, ಬೀಟ್ರೂಟ್ ಗಳನ್ನು ಸೇವಿಸದೆ ಇರುವುದು ಉತ್ತಮ. ನುಗ್ಗೆ
    ಎಲೆ, ಮೆಂತ್ಯೆ ಬೀಜ ಮತ್ತು ಹಾಗಲಕಾಯಿಗಳ ಸೇವನೆ ಉತ್ತಮ. ಈ ತರಕಾರಿಗಳು ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತವೆ.
  • ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಬೆಳ್ತಿಗೆ ಅಕ್ಕಿಯ ಅನ್ನ, ಮೈದಾದ ಉತ್ಪನ್ನಗಳಾದ ಬಿಸ್ಕಿಟ್‌ಗಳು ಮತ್ತು ಬೇಕರಿ ಉತ್ಪನ್ನಗಳನ್ನು ಮಧುಮೇಹ ರೋಗಿಗಳು ಸೇವಿಸಬಾರದು.

ಡಾ.ನಿತಿನ್ ವೀರನಾಗಪ್ಪ , ಎಂ.ಡಿ (ಪಂಚಕರ್ಮ) ಸಹಾಯಕ ಪ್ರಾಧ್ಯಾಪಕರು ಹಾಗೂ ಪಂಚಕರ್ಮ ವಿಶೇಷ ತಜ್ಞರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅಂಚೆಪಾಳ್ಯ, ಕೆಂಗೇರಿ, ಬೆಂಗಳೂರು – ಮೈಸೂರು ಹೆದ್ದಾರಿ, ಬೆಂಗಳೂರು
.

Related Articles

ಪ್ರತಿಕ್ರಿಯೆ ನೀಡಿ

Latest Articles