ತಾಯಿ ಲಲಿತಾಂಬಿಕೆ ಧರಿಸಿದ ಆಯುಧಗಳ ಮಹತ್ವ ಏನು ಗೊತ್ತಾ?

*ಕೃಷ್ಣಪ್ರಕಾಶ್ ಉಳಿತ್ತಾಯ 

ಮನೋರೂಪೇಕ್ಷುಕೋದಂಡಾ ಪಂಚತನ್ಮಾತ್ರಸಾಕಾ|

ನಿಜಾರುಣಪ್ರಭಾಪೂರ ಮಜ್ಜದ್ಬ್ರಹ್ಮಾಂಡಮಂಡಲಾ||

ತಾಯಿಯ ಉಭಯ ಕರಗಳಲ್ಲಿ ರಾಗದ್ವೇಷಗಳ ಪ್ರತೀಕವಾಗಿಯೂ ಮತ್ತು ಅವುಗಳನ್ನು ನಿಯಂತ್ರಿಸುವ  ಪಾಶ ಅಂಕುಶಗಳನ್ನು ನೋಡಿದ್ದೇವೆ. ಲಲಿತೆಯ ಆಯುಧಪಾಣಿಯಾದ ಈ ರೂಪಿನ ನಾಮಗಳನ್ನು ನೋಡಿದ ಮೇಲೆ “ಮನೋರೂಪೇಕ್ಷುಕೋದಂಡಾ” ಎಂಬ ಹೆಸರನ್ನು ಧ್ಯಾನಿಸೋಣ. ತಾಯಿ ಇಕ್ಷು ಅಂದರೆ ಕಬ್ಬಿನ ಬಿಲ್ಲನ್ನು ಹಿಡಿದಿದ್ದಾಳೆ. ಇದು ಮನವೆಂಬ ಕಬ್ಬಿನ ಬಿಲ್ಲಾಗಿದೆಯಂತೆ-“ಮನೋರೂಪೇಕ್ಷುಕೋದಂಡ”. ಕಬ್ಬಿನಲ್ಲಿ ರಸವಿದೆ. ನಾನಾ ವಿಧದ ಭಾವರಸ.

ಶೃಂಗಾರಾದಿ ನವರಸಗಳೂ ಅದರಕ್ಕನುಚಿತವಾದ ಸ್ಥಾಯಿ ವ್ಯಭಿಚಾರಿ ಭಾವಗಳೂ ಮೈದಳೆದ ಮನವೆಂಬ ಕಬ್ಬಿನ ರಸಭರಿತ ಕೋದಂಡವನ್ನು ಹಿಡಿದವಳಾಗಿದ್ದಾಳೆ ಆ ತಾಯಿ. ಈ ಬಿಲ್ಲು ಎಂಬುದನ್ನು ಜೀವರ ಇಡೀ ಸ್ಥೂಲ ದೇಹಕ್ಕೂ ಮತ್ತು ಸೂಕ್ಷ್ಮ ದೇಹಕ್ಕೂ ಹೋಲಿಸಬಹುದು.

ಸ್ಥೂಲದೇಹದ ವಿಷಯವಾಗಿ ಯೋಚಿದಾಗ ನಮ್ಮ ದೇಹದಿಂದಲೂ ಮತ್ತು ಮಾತಿನಿಂದಲೂ (ಕಾಯೇನವಾಚಾ) ನಾವು ನಮ್ಮನ್ನು ತಾಯಿಗೆ ಅರ್ಪಿಸಿಕೊಂಡರೆ ನಮ್ಮ ಜೀವನದ ದಾರಿಯ ದಿಕ್ಕು ಪಲ್ಲಟವಾಗುತ್ತದೆ ಎಂಬ ಚಿಂತನೆಗೆ ಎಡೆ ಇದೆ. ಜೀವನವನ್ನು ಲಲಿತಾರ್ಪಣಮಸ್ತು ಎಂಬ ಸಂಕಲ್ಪದಿಂದ ನಡೆಸಬೇಕು ಎಂಬ ಹೊಳಹು ಮೂಡದಿರದು.  ಮನಸ್ಸು, ಚಿತ್ತ, ಬುದ್ದಿ ಮತ್ತು ಅಹಂಕಾರವನ್ನೂ ಇವಳ ಕೈಗೆ ಕೊಟ್ಟರೆ ಅವಳು ನಡೆಸಿದಂತೆ ಜೀವನ ಎಂಬ ದಾರಿಯೂ ಸಿಗುತ್ತದೆ. ಇದರ ತಾತ್ಪರ್ಯ ಸಂಪೂರ್ಣ ಶರಣಾಗತಿ.

“ಮನೋರೂಪೇಕ್ಷುಕೋದಂಡಾ ಎಂಬ ನಾಮ “ಪಂಚತನ್ಮಾತ್ರಸಾಯಕಾ” ಎಂಬುದರ ಜತೆಜತೆಯಾಗಿ ನೋಡಬೇಕು. ತಾಯಿ ಐದು ತನ್ಮಾತ್ರೆಯ ಪ್ರತೀಕವಾದ ಬಾಣಗಳನ್ನು ಹಿಡಿದಿದ್ದಾಳೆ. ಶಬ್ದ,ಸ್ಪರ್ಶ,ರೂಪ, ರಸ ಮತ್ತು ಗಂಧ. ಅಂದರೆ ನಮ್ಮ ದೇಹದ ಇಂದ್ರಿಯಗಳನ್ನೇ ಬಾಣವಾಗಿಸಿದ್ದಾಳೆ. ಮನವೆಂಬ ಬಿಲ್ಲಿನಲ್ಲಿ ತನ್ಮಾತ್ರೆಯೆಂಬ ಬಾಣ ಹೂಡಿ ಲಕ್ಷ್ಯ ತಾಯಿ ಲಲಿತೆಯೇ ಆಗಿರಬೇಕು ಎಂಬುದು ಈ ನಾಮಗಳ ಒಳಗು.

“ನಿಜಾರುಣಪ್ರಭಾಪೂರಮಜ್ಜದ್ಬ್ರಹ್ಮಾಂಡಮಂಡಲಾ” ಮೇಲೆ ಹೇಳಿದ ರೂಪಿನ ಲಲಿತೆ ತನ್ನ ಅರುಣಕಾಂತಿಯ ಪ್ರಭೆಯ ಪ್ರವಾಹದಲ್ಲಿ ಬ್ರಹ್ಮಾಂಡಮಂಡಲಗಳ ಸಮೇತವಾಗಿ ರಾರಾಜಿಸುತ್ತಾ ಇದ್ದಾಳೆ. ಹೀಗೆ ಲಲಿತೆಯ ಹುಟ್ಟು, ರೂಪು, ಧರಿಸಿದ ಆಯುಧಗಳು ಮತ್ತು ಕಾಂತಿಯ ಬಗೆ ಮೂರು ಪದ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವುಗಳ ಶ್ರದ್ಧಾಭಕ್ತಿಯ ಅನುಸಂಧಾನ ಆ ಹೆಸರಿನ ಗುಣದ ಪ್ರತಿಫಲನ ಆರಾಧಕನಲ್ಲಾಗಿ ಶ್ರೇಯಸ್ಸಿಗೆ ಕಾರಣವಾಗುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles