ಇಂದು ಚೆಂಡೆ ಹಾಗೂ ಮದ್ದಳೆ ಜುಗಲ್ ಬಂಧಿ


ಮಂಗಳೂರು: ಮುರಾರಿ ಕಡಂಬಳಿತ್ತಾಯ ಹಾಗೂ ಪ್ರಕಾಶ್ ಉಳಿತ್ತಾಯ ಅವರಿಂದ ನವರಾತ್ರಿ ವಿಶೇಷ ಕಾರ್ಯಕ್ರಮ ಇಂದು ಅ.21 ರ ಸಂಜೆ 7ರಿಂದ 8 ಗಂಟೆವರೆಗೆ ನಡೆಯಲಿದೆ.
ನೇರ ಪ್ರಸಾರ ಕಾರ್ಯಕ್ರಮವನ್ನು ಡೈಜಿವಲ್ರ್ಡ್ ಟಿವಿಯಲ್ಲಿ ವೀಕ್ಷಿಸಬಹುದು.

ಕಲಾವಿದರ ಪರಿಚಯ:

ಶ್ರೀ ಮುರಾರಿ ಕಡಂಬಳಿತ್ತಾಯ

ಹನ್ನೆರಡು ವರ್ಷ ಕಟೀಲು ಮೇಳ ಹಾಗೂ 2 ವರ್ಷ ಧರ್ಮಸ್ಥಳ ಮೇಳದಲ್ಲಿ ಸಕ್ರಿಯರಾಗಿದ್ದ ಶ್ರೀ ಮುರಾರಿ ಕಡಂಬಳಿತ್ತಾಯ ತೆಂಕುತಿಟ್ಟಿನ ಯುವ ಮದ್ದಳೆಗಾರ . ಚೆಂಡೆ ಮದ್ದಳೆಯ ಮೂಲ ಪಾಟಾಕ್ಷರಗಳ ನೆಲೆಗಟ್ಟಿನಲ್ಲೇ ಇವರ ನುಡಿಸಾಣಿಕೆಗಳೆಲ್ಲ ಮೂಡುವುದು. ವಿಷಮದಿಂದ ತೆಗೆಯುವ ಕ್ರಮದಿಂದ ಇವರು ಮಾರು ದೂರ. ಎಲ್ಲಾ ನುಡಿಸಾಣಿಕೆ ಸಮದಿಂದಲೇ, ಘಾತದಲ್ಲೇ ಆರಂಭ.

ತಾಳಕ್ಕೆ ಕಚ್ಚಿಕೊಂಡೇ ಸಾಗುವ ಚೆಂಡೆ-ಮದ್ದಳೆಯ ಪಾಟಗಳು.  ಇವರ ವ್ಯಕ್ತಿತ್ವವೂ ಬಹುಮಟ್ಟಿಗೆ ವಿದ್ಯೆಯ ಪಡಿಯಚ್ಚೇ.  ಮುರಾರಿಯವರ ವಾದನ ಕ್ರಮದ ಮೂಲಸೂತ್ರ ನರ್ತಕನ ಹೆಜ್ಜೆಗಾರಿಕೆಗೆ ಆಧಾರವಾಗಿ ನುಡಿತವಿರಬೇಕು ಮತ್ತು ಎಂದಿಗೂ ಭಾಗವತನ ಸ್ವರವನ್ನು ಮೀರಿ ನುಡಿತ ಹೋಗಬಾರದು ಎಂಬುದು. ಗಮನಿಸಿದಾಗ ನಿಚ್ಚಳವಾಗಿ ಕಾಣುವುದು.

ಹಿರಿಯ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರ ಪ್ರಭಾವ ಮುರಾರಿಯ ಮೇಲಾದದ್ದು. ಚೆಂಡೆ ಹಿಡಿಯುವ ಶೈಲಿ, ಕರೆ,  ನಡು ಪೆಟ್ಟಿನಲ್ಲಿ ಇವರು ತೋರುವ ಸಂವೇದನೆ, ಜಾಗ್ರತೆ ಇವೆಲ್ಲಾ ಇದನ್ನು ಸೂಚಿಸುತ್ತದೆ. ಮದ್ದಳೆವಾದನವೂ ಅತ್ಯಂತ ಸರಳವಾಗಿ ಧೀರ ಗಂಭೀರ ಶೈಲಿ. ಯಾವುದೇ ಗೊಂದಲವಿಲ್ಲದ ಅನುಸರಣೀಯ ಶೈಲಿ.

ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಮತ್ತು ವೆಂಕಟೇಶ ಉಳಿತ್ತಾಯರ ಶಿಷ್ಯನಾಗಿ ಅತ್ಯಂತ ಶ್ರದ್ಧೆಯಿಂದ ವಿದ್ಯೆ ಕಲಿತವರಿವರು. ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಮತ್ತು ಶ್ರೀ ಪುರುಷೋತ್ತಮ ಪೂಂಜರ ಗರಡಿಯಲ್ಲಿ ಬೆಳೆದವರು.

ಮಹಿರಾವಣ ಕಾಳಗ, ತಾಮ್ರಧ್ವಜ, ಶಬರಾರ್ಜುನ ಇತ್ಯಾದಿ ಪ್ರಸಂಗಗಳೆಲ್ಲಾ ಇದಮಿತ್ಥಂ ಆದ ರಂಗ ಸೂತ್ರಗಳನ್ನು ಒಳಗೊಂಡು ಆಡಬೇಕಾದದ್ದು. ಇಂತಹಾ ಪ್ರಸಂಗಗಳ ನಿಖರ ಮಾಹಿತಿ , ರಂಗ ನಡೆಗಳೂ ಇವರಿಗೆ ಸಿದ್ದಿಸಿದೆ.

ಕಲಾವಿದ : ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ

ಕಾನೂನಿಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ ಅವರು ಕರ್ಣಾಟಕ ಬ್ಯಾಂಕ್ ನ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಬ್ಬಣಕೋಡಿ ರಾಮ ಭಟ್ ಅವರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿದ್ದಾರೆ.

ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆ ಗುರುಗಳು ದಿ.ಪುಂಡಿಕಾಯಿ ಕೃಷ್ಣ ಭಟ್, ಶ್ರೀ ಮೋಹನ ಬೈಪಾಡಿತ್ತಾಯರು ಮತ್ತು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ. ಕರ್ಣಾಟಕ ಶಾಸ್ತ್ರೀಯ ಮೃದಂಗವಾದನದ ಗುರುಗಳು ವಿ. ತ್ರಿಚ್ಚಿ ಕೆ.ಆರ್ ಕುಮಾರ್ ಮತ್ತು ವಿ. ಕುಕ್ಕಿಲ ಶಂಕರ ಭಟ್.

ಗಣೇಶ ಕೊಲೆಕಾಡಿ ಅವರ ಬಳಿ ಯಕ್ಷಗಾನ ಛಂದಸ್ಸು ಕಲಿಕೆ ಮತ್ತು ಮದ್ದಲೆವಾದನ ಛಂದಸ್ಸು ಅಭ್ಯಸಿಸಿದ್ದಾರೆ.

ಕಲೆ, ಕನ್ನಡ ಇಂಗ್ಲೀಷ್, ಸಾಹಿತ್ಯದ ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಅಗರಿ ಮಾರ್ಗ, ಸುಘಾತ( ಪ್ರಕಟಣೆಗೆ ಸಿದ್ಧವಾಗಿದೆ) ಪುಸ್ತಕ ಬರೆದಿದ್ದಾರೆ. ಉದಯವಾಣಿ, ದಿ ಹಿಂದು(ಆಂಗ್ಲ ಬರಹ), ಪ್ರಜಾವಾಣಿ, ಕಣಿಪುರ, ಯಕ್ಷದೀಪ, ತುಷಾರ, ರಾಗಸುಧಾ ಇತ್ಯಾದಿ ಪತ್ರಿಕಗಳಲ್ಲಿ ನೂರಾರು ಲೇಖನಗಳು ಪ್ರಕಟಗೊಂಡಿವೆ. ಅಗರಿ ಶ್ರೀನಿವಾಸ ಭಾಗವತರ  ಮತ್ತು ಬಲಿಪ ನಾರಾಯಣ ಗಾಯನದ ಬಗೆಗೆ ಅಧ್ಯಯನ ಸಂಶೋಧನ ಸದ್ಯ ನಡೆಸುತ್ತಿದ್ದಾರೆ. ಅಗರಿ ಶ್ರೀನಿವಾಸ ಭಾಗವತರ ಶಿಷ್ಯ ಶ್ರೀ ಗಜಂತೋಡಿ ಸುಬ್ರಾಯ ಭಟ್ ಅವರಿಂದ ಶ್ರೀದೇವೀ ಲಲಿತೋಪಾಖ್ಯಾನ ಪ್ರಸಂಗದ ದಾಖಲೀಕರಣ ನಡೆಸುತ್ತಿದ್ದಾರೆ. ಯಕ್ಷಗಾನ ಸಂಬಂಧೀ ಉಪನ್ಯಾಸ, ಭಾಷಣಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ, ಕಮ್ಮಟಗಳಲ್ಲಿ ಕೊಟ್ಟಿದ್ದಾರೆ. ಹಲವು ಸಂಸ್ಮರಣಾ ಗ್ರಂಥಗಳಿಗೆ ಲೇಖನ ಕೊಡುಗೆ. ಎಲ್ಲಾ ಮೇಳಗಳಿಗೆ ಅತಿಥಿ ಕಲಾವಿದನಾಗಿ ಪಾಲ್ಗೊಳ್ಳುವಿಕೆ.

ಪುರಸ್ಕಾರಗಳು: ಕರ್ಣಾಟಕ ಯಕ್ಷಗಾನ ಅಕಾಡಮಿ ಪುರಸ್ಕಾರ- 2019 ಯುವ ಯಕ್ಷಕಲಾರಾಧಕ ಪ್ರಶಸ್ತಿ ಪುರಸ್ಕಾರ ದೊರಕಿದೆ. ಕೇಂದ್ರ ಮಂಗಳೂರು ಸಂಸ್ಥೆಯಿಂದ ಯಕ್ಷಕಲಾರಾಧನಾ, ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆಯಿಂದ “ಅಗರಿ ಭಾಗವತಾನುಗ್ರಹ” ಪುರಸ್ಕಾರ ಪಡೆದಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles