*ಕೃಷ್ಣಪ್ರಕಾಶ್ ಉಳಿತ್ತಾಯ
ಲಲಿತಾ ಸಹಸ್ರನಾಮಾವಳಿಯ ಈ ಹಾಡಿನಲ್ಲಿ ಎರಡು ಹೆಸರುಗಳನ್ನು ಬಣ್ಣಿಸಲಾಗಿದೆ. ಅಲ್ಲಿ ತಾಯಿಯ ಹಣೆಯನ್ನೂ ಮತ್ತು ಹಣೆಯ ಮೇಲಿರುವ ಕಸ್ತೂರಿ ತಿಲಕವನ್ನೂ ವರ್ಣಿಸಿದೆ. ಅಷ್ಟಮೀಚಂದ್ರವಿಭ್ರಾಜದಲಿಕಸ್ಥಲಶೋಭಿತಾ ಮುಖಚಂದ್ರಕಲಂಕಾಭಮೃಗನಾಭಿವಿಶೇಷಕಾ|| ಅಷ್ಟಮಿಯ ಚಂದ್ರನಂತೆ ತಾಯಿಯ ಹಣೆ ಹೋಲುತ್ತಿದೆ ಎಂಬ ಅರ್ಥವು ಇಲ್ಲಿ ಸ್ಫುರಿಸುತ್ತದೆ. ಅಷ್ಟಮಿಯ ಚಂದ್ರನ ಕಾಂತಿಯಂತೆ ತಾಯಿಯ ಹಣೆ ಬೆಳಗುತ್ತಿದೆ ಎಂಬ ಚಿಂತನೆಗೂ ಅವಕಾಶವಿದೆ. ಮನಃಕಾರಕ ಚಂದ್ರ. ಹಾಗಾಗಿಯೇ ಚಂದ್ರನನ್ನು ತಾಯಿಯ ಹಣೆಗೆ ಸಮೀಪೀಕರಿಸಿ ಹೋಲಿಸಿದ್ದಾರೆ.
ಚಂದ್ರ ತಾಯಿಯ ಹಣೆಯಲ್ಲಿದ್ದು ತನ್ನ ಶಕ್ತಿಯನ್ನು ಪಡೆದಿದ್ದಾನೆ ಎಂಬುದಾಗಿಯೂ ಚಿಂಚಿಸಬಹುದು. ತಂಗದಿರ ತಾಯಿಯ ಹಣೆಯಮೇಲಿದ್ದು ಸುತ್ತಲೂ ತಂಪನೀಯುತ್ತಾ ತಾಯಿಯ ಸೇವೆಗೈಯುತ್ತಿದ್ದಾನೆ ಎಂಬುದಾಗಿಯೂ ವಿವಕ್ಷಿಸಬಹುದು.
ಇಲ್ಲಿ ಆಚಾರ್ಯ ಶಂಕರರು ರಚಿಸಿದ “ಸೌಂದರ್ಯಲಹರಿಯ” ಸ್ತೋತ್ರಮಾಲಿಕೆಯ ಹಾಡೊಂದನ್ನು ನೋಡಬಹುದು.
ಶರಜ್ಜ್ಯೋತ್ಸ್ನಾಂ ಶುದ್ಧಾಂ ಶಶಿಯುತಜಟಾಜೂಟಮಕುಟಾಂ ವತ್ರಾಸತ್ರಾಣಸ್ಫಟಿಕಘುಟಿಕಾಪುಸ್ತಕಕರಾಮ್| ಸಕೃನ್ನತ್ವಾ ನತ್ವಾ ಕಥಮಿವ ಸತಾಂ ಸನ್ನಿದಧತೇ ಮಧುಕ್ಷೀರದ್ರಾಕ್ಷಾಮಧುರಿಮಧುರಿಣಾಃ ಫಣಿತಯಃ||
ಅಮ್ಮಾ ಶರತ್ಕಾಲದ ಬೆಳದಿಂಗಳಂತೆ ಶುಭ್ರಳಾದ, ಚಂದ್ರಕಲೆಯೇ ಸಮಾವೇಶಗೋಂಡ ಜಡೆಗಳ ಸಮೂಹವೇ ಕರೀಟವಾಗಿರುವ ನಿನ್ನನ್ನು ಸ್ಮರಿಸಿ ನಮಿಸದಿದ್ದರೆ ನಮ್ಮಿಂದೆಂತು ಮಧುಕ್ಷೀರದ್ರಾಕ್ಷೆಯ ಮಿಶ್ರಣದಂತಹಾ ಸಿಹಿಸಿಹಿಯಾದ ಮಧುರವಾದ ಮಾತುಗಳು ಬರಲು ಸಾಧ್ಯ?
ಆಚಾರ್ಯ ಶಂಕರರೂ ಚಂದ್ರನ ಕಾಂತಿಯನ್ನು ಚಂದ್ರ ಪ್ರಭೆಯನ್ನು ಹಣೆಯನ್ನು ಅಥವಾ ತಾಯಿಯ ಶಿರೋಭಾಗವನ್ನು ಉದ್ದೇಶಿಸಿಯೇ ಸ್ಮರಿಸಿದ್ದಾರೆ. ಲಲಾಟ ಬುದ್ಧಿಗೆ ಮಾತುಹುಟ್ಟಲು ಬೇಕಾದ ಮತಿಗೆ ತಾವು ಎಂಬುದನ್ನು ಕಂಡಿದ್ದೇವೆ. ಹಾಗಾಗಿಯೇ ಚಂದ್ರನ ಪ್ರಭೆಯ ಉಪಮೆ.
“ಮುಖಚಂದ್ರಕಂಕಾಭಮೃಗನಾಭಿವಿಶೇಷಕಾ” ಚಂದ್ರಬಿಂಬದಲಲ್ಲಿ ಕಳಂಕವಿರುವುದನ್ನು(ಮಚ್ಚೆ) ನಾವು ಕಾಣುತ್ತೇವೆ. ತಾಯಿಯ ಮುಖವೆಂಬ ಚಂದ್ರನಿಗೆ ಕಳಂಕವಾಗಿರುವಂತೆ ಹಣೆಯಲ್ಲಿ ಕಸ್ತೂರಿ ತಿಲಕವನ್ನು ಧರಿಸಿದ್ದಾಳೆ ಎಂಬ ವಿವಕ್ಷೆ ಈ ಹೆಸರಲ್ಲಿ ಇದೆ.
ದೇವಿ ತ್ರಿಪುರಸುಂದರಿಯ ಆರಾಧನೆಯನ್ನು “ಚಂದ್ರವಿದ್ಯಾ” ಎಂದೂ ಕರೆಯುತ್ತಾರೆ. ಈ ಆರಾಧನೆಯ ಸ್ವರೂಪದಲ್ಲಿ ಚಂದ್ರನ ಬಿಂಬದಲ್ಲೇ ದೇವಿಯನ್ನು ಸ್ಮರಿಸಿ, ದೇವಿಯ ಇರವನ್ನು ಅಲ್ಲಿ ಗುರುತಿಸಿ ಪಾರಾಯಣ ಅಥವಾ ಜಪ-ತಪ ಮಾಡುವುದೋ ಪದ್ಧತಿಯಾಗಿದೆ. ಇಲ್ಲಿಯೂ ಚಂದ್ರ ಮತ್ತು ದೇವಿಯನ್ನು ಸಮೀಕರಿಸಿ ಚಿತ್ರಿಸಿದ್ದಾರೆ. ಇಂತಹಾ ದೇವಿಯ ಸ್ವರೂಪ ಚಿಂತನದಿಂದ ನಮ್ಮ ಚಿತ್ತಶುದ್ಧಿಯಾಗಲಿ ಮನದ ಆಲೋಚನೆಗಳೆಲ್ಲ ಮಂಗಲಸ್ವರೂಪದ್ದಾಗಲಿ ಎಂಬುದೇ ಪ್ರಾರ್ಥನೆ.
ಲೇಖಕರು: ಕರ್ನಾಟಕ ಬ್ಯಾಂಕ್ ಉದ್ಯೋಗಿ,
ಬರಹಗಾರ, ಖ್ಯಾತ ಮದ್ದಳೆಕಾರ, ಮಂಗಳೂರು