ಭಕ್ತನ ಒಳಗಣ್ಣು ತೆರೆದಿರಬೇಕು

*ಕೃಷ್ಣಪ್ರಕಾಶ್ ಉಳಿತ್ತಾಯ

ಕದಂಬಮಂಜರೀಕ್ಲೃಪ್ತಕರ್ಣಪೂರಮನೋಹರಾ /ತಾಟಂಕಯುಗಲೀಭೂತತಪನೋಡುಪಮಂಡಲಾ||  

ಕದಂಬಪುಷ್ಪಗಳ ಗುಚ್ಛಗಳನ್ನು ತಾಯಿಯ ಕಿವಿಯ ಮೇಲ್ಬಾಗದಲ್ಲಿ ಕಾಣುತ್ತಿದ್ದಾಗ ಋಷಿಯ ಬಾಯಲ್ಲಿ “ಕದಂಬಮಂಜರೀಕ್ಲೃಪ್ತಕರ್ಣಪೂರಮನೋಹರಾ” ಎಂಬ ನಾಮವು ಹುಟ್ಟುತ್ತದೆ. ತಾಯಿ ಕಾಣುತ್ತಾಳೆ ಮತ್ತು ಕಾಣಿಸುತ್ತಾಳೆ ಎಂಬುದು ಇಲ್ಲಿಯ ವಿವಕ್ಷೆ.

ಅವಳೇ ಕೊಟ್ಟ ನೋಟವನ್ನು ಕಂಡು ಕಾಣುವುದಷ್ಟೇ ಭಕ್ತರ ಕೆಲಸ. ಕಾಣಲು ಒಳಗಣ್ಣು ತೆರೆದ ಕವಿಯಾಗಿರಬೇಕು. ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಅಂತಹಾ ಒಳನೋಟಗಳನ್ನುಳ್ಳವರಾಗಿದ್ದರು. ಪರಾತ್ಪರೆಯನ್ನು ಕುರಿತು ಅನೇಕ ಕವನಗಳನ್ನು ರಚಿಸಿದ್ದಾರೆ. ಅವು ಧ್ವನಿಪೂರ್ಣವಾಗಿ ಮಾತ್ರವಲ್ಲ ಅಲಂಕಾರಿಕವಾಗಿ ಸೌಂದರ್ಯದಿಂದ ಕೂಡಿತ್ತು.

ಅಂತಹ ಒಂದು ಕವನ ಅವರ “ಅರಳುಮರಳು” ಕವನ ಸಂಕಲನದ “ಶ್ರೀ ಮಾತೃಶ್ರೀಗೆ” ಎನ್ನುವ ಕವಿತೆಯನ್ನು ನೋಡೋಣ: ನಿನ್ನ ನೋಟವೇ ಹಾಲು ತಾಯಿ ನೀನು ಕಂಗಳಿಂದಲೆ ಕುಡಿವೆ, ಕೂಸು ನಾನು ಕಂಗಳಿಂದಲೆ ನುಡಿವೆ ತಾಯಿ ನೀನು ನನ್ನ ಕಣ್ಣೇ ಕಿವಿಯು ಕವಿಯು ನಾನು   “ನಿನ್ನ ನೋಟವೇ ಹಾಲು, ತಾಯಿ ನೀನು” “ಕಂಗಳಿಂದಲೆ ಕುಡಿವೆ ಕೂಸು ನಾನು” ಎಂಬ ಸಾಲಿನಲ್ಲಿ ತಾಯಿಯ ಚಿತ್ರವನ್ನೇ ಅಥವಾ ನೋಟ (ಕಾಣುವುದು)ವನ್ನು ಹಾಲಾಗಿ ಕಂಡ ಕವಿ ಅದನ್ನು ಕಾಣುವ ಪ್ರಕ್ರಿಯೆಯನ್ನು ಅಂದರೆ ಕಣ್ಣಲ್ಲಿ ಕಾಣುವ ಬಗೆಯನ್ನು ತಾಯಿಯ ಹಾಲನ್ನು ಕುಡಿಯುವ ಕ್ರಿಯೆಯಂತೆ ಕಾಣುತ್ತಾನೆ.

ಆಹಾ! ತಾಯಿ ಮಗುವಿನ ಸಂಬಂಧವೇ! ಇಂತಹಾ ಕಾಣ್ಕೆಯನ್ನು ಪ್ರಕೃತಿಯೇ ಕೊಡದಿದ್ದರೆ ವಿಧಿಯೇ ಇಲ್ಲ. ಅವಳು ಕೊಟ್ಟ ನೋಟ; ಅವಳು ಕೊಟ್ಟ ಕಣ್ಣು; ಅವಳು ಕೊಟ್ಟ ಕಾಣ್ಕೆ, ಅಷ್ಟೆ. “ಕಂಗಳಿಂದಲೆ ನುಡಿವೆ ತಾಯಿ ನೀನು” “ನನ್ನ ಕಣ್ಣೇ ಕಿವಿಯು ಕವಿಯು ನಾನು” ಇಲ್ಲೂ ಮೇಲಿನ ಮನೋಲಹರಿಯೇ ವಿಸ್ತರಿಸಿದೆ. ತಾಯಿಯನ್ನು ನೋಡುತ್ತಾ ತಾಯಿ ತನ್ನಲ್ಲಿ ಕಣ್ಣಿನಿಂದಲೇ ಮಾತನಾಡುತ್ತಿದ್ದಾಳೆ ಎಂಬ ಭಾವ ಕವಿಯಲ್ಲಿ ಉಕ್ಕಿ ಹರಿದಿದೆ. ಇದರ ಫಲ ಮತ್ತಿನ ಸಾಲು: ತಾಯಿಯ ಕಣ್ಣ ಮಾತನ್ನು ಕವಿಯು ಕೇಳುವುದು ತನ್ನ ಕಣ್ಣಿನಿಂದಲೇ. ಇದು ಕಾವ್ಯ. ಕಣ್ಣಿಗೆ ಸಿಗುವ ಭಾಗ್ಯ ಕಾಣ್ಕೆ ಅದರ ಪ್ರತಿಫಲನ ಹೃದಯದಲ್ಲಿ.  

“ತಾಟಂಕಯುಗಲೀಭೂತತಪನೋಡುಪಮಂಡಲಾ” ಇಂತಹಾ ಪ್ರತಿಭಾಶಾಲಿಯಾದ/ದ್ರಷ್ಟಾರರಾದ ಋಷಿಯ ಕಣ್ಣುಗಳಿಗೆ ತಾಯಿಯ ಕಿವಿಯ ಆಭರಣಗಳು ಸೂರ್ಯ- ಚಂದ್ರರ ತೇಜೋಮಂಡಲಗಳೇ ಇವೆಯೆಂದು ಗೋಚರಿಸುತ್ತದೆ. ತಾಯಿಯ ಈ ದೃಶ್ಯವೆಂಬ ಹಾಲನ್ನು ತನ್ನ ಕಂಗಳಿಂದ ಕುಡಿದ ಕವಿ ಹೃದಯದ ಋಷಿಗೆ ಇಂತಹಾ ಮಾತುಗಳಲ್ಲದೆ ಮತ್ತಿನ್ನೇನು ಬಂದೀತು.

Related Articles

ಪ್ರತಿಕ್ರಿಯೆ ನೀಡಿ

Latest Articles