ಗಣಪತಿ ಪದದ ಅರ್ಥ
ಗ ಎಂದರೆ ಬುದ್ದಿ, ಣ ಎಂದರೆ ಜ್ಞಾನ, ಪತಿ ಎಂದರೆ ಹಿಡಿತ ಸಾಧಿಸುವನು. ಅಂದರೆ ಯಾರು ಬುದ್ಧಿ ಮತ್ತು ಜ್ಞಾನದ ಮೇಲೆ ಹಿಡಿತ ಸಾಧಿಸುತ್ತಾನೋ ಆತನೇ ಗಣಪತಿ. ಜಲತತ್ವರಾಶಿಯಾದ ಕಟಕ, ವೃಶ್ಚಿಕ ಮತ್ತು ಮೀನ ರಾಶಿಯವರು ಹೆಚ್ಚು ಗಣಪತಿಯನ್ನು ಪೂಜಿಸುವರು. ಗಣಪತಿಯದು ಕನ್ಯಾ ರಾಶಿ. ಈ ರಾಶಿಯವರೂ ಸಹ ಹೆಚ್ಚು ಪೂಜಿಸುವರು ಹಾಗೂ ಪೂಜಿಸಬೇಕು.
ವಿನಾಯಕನು ಮಹಾಪಂಡಿತ ಹಾಗೂ ಬುದ್ಧಿವಂತ. ಈ ಕಾರಣದಿಂದಲೇ ಯಾವುದೇ ಕಾರ್ಯಸಿದ್ಧಿ ಆಗಬೇಕಾದರೆ ಬುದ್ಧಿಶಕ್ತಿಯನ್ನು ಆರಾಧಿಸಬೇಕು. ಅಂದರೆ ಗಣಪತಿಯನ್ನು ಪೂಜಿಸಬೇಕು.
ಬುಧನು ಹಸಿರು ಬಣ್ಣದಲ್ಲಿರುವುದರಿಂದ ಗಣಪತಿಯನ್ನು ಹಸಿರು ಪತ್ರೆಗಳಿಂದ ಪೂಜಿಸಬೇಕು. ಈ ಪತ್ರೆಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಲಭಿಸುತ್ತವೆ. ಭಾದ್ರಪದ ಮಾಸದಲ್ಲಿ ಮಳೆ ಇರುವುದರಿಂದ ಈ ಸಮಯದಲ್ಲಿ ಎಲೆಗಳು ಹಸಿರಿನಿಂದ ಕೂಡಿರುತ್ತದೆ. ಆದ್ದರಿಂದ 21 ಪತ್ರೆಗಳಿಂದ ಪೂಜಿಸಬೇಕು.
ಗಣಪತಿ ಮತ್ತು 21ಕ್ಕೂ ಇರುವ ಸಂಬಂಧ
ಗಣಪತಿಗೆ ಇಷ್ಟವಾದ ಸಂಖ್ಯೆ 21. ಇದನ್ನು ಕೂಡಿದರೆ 2+1=3 ಆಗುವುದು. ಇದು ಓಂಕಾರಕ್ಕೆ ಸಂಕೇತವಾಗಿರುತ್ತದೆ. ಸಂಸ್ಕೃತದ ಓಂ ಅನ್ನು ಬಳಸಿ ಗಣಪತಿಯನ್ನು ರಚಿಸಬಹುದು. ಗಣಪತಿ ಹಬ್ಬದ ದಿನ ವಿನಾಯಕನಿಗೆ ಏಕವಿಂಶತಿ ಪತ್ರೆ ಪೂಜೆ ಮಾಡುವೆವು. ಅಂದರೆ 21 ಬಗೆಯ ಪತ್ರೆಗಳಿಂದ. ಮಾನವ ದೇಹದಲ್ಲಿ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಹತ್ತು. ಅವು ಮಾಡುವ ಕಾರ್ಯಗಳು ಹತ್ತು. ಇದರ ಜೊತೆಗೆ ಮನಸ್ಸು ಸೇರಿದರೆ 21 ಆಗುವುದು. ಈ 21 ತತ್ವವು ಒಟ್ಟಿಗೆ ಸೇರಿದಾಗ ಪೂಜೆ ಏಕಾಗ್ರತೆ ಹೊಂದಿ ಪೂರ್ಣವಾಗುವುದು. ಆದ್ದರಿಂದ ಗಣಪತಿಗೆ 21 ಹೂ, 21 ಗರಿಕೆ, 21 ಹಣ್ಣು, 21 ಕಾಯಿ, 21 ಪತ್ರೆಗಳು, 21 ಕಡುಬು. 21 ಮೋದಕ ಹೀಗೆ ಗಣಪತಿಗೆ 21 ಬಗೆಪ್ರಿಯವಾದ ತಿಂಡಿಗಳನ್ನು ಮಾಡಿ ಸಮರ್ಪಿಸಬೇಕು.
ಶನಿದೋಷ ಪರಿಹಾರಕ್ಕೆ ಗಣೇಶನ ಆರಾಧಿಸಿ
ಶನಿಗ್ರಹವು ತ್ರಿಮೂರ್ತಿಗಳನ್ನೂ ಬಿಡದೆ ಎಲ್ಲಾ ದೇವಾನುದೇವತೆಗಳನ್ನೂ ಕಾಡಿರುವನು. ಆದರೆ ಗಣಪತಿ ಮತ್ತು ಆಂಜನೇಯನನ್ನು ಮಾತ್ರ ಹಿಡಿಯಲು ಆಗಲಿಲ್ಲವಂತೆ. ಆದ್ದರಿಂದ ಸಾಡೇ ಸಾತ್ ಶನಿ, ಶನಿದೋಷ, ಶನಿ ದೆಶೆ ಪಂಚಮ ಶನಿಯ ತೊಂದರೆ ಇರುವವರು ಗಣಪತಿಯನ್ನು ಹೆಚ್ಚು ಆರಾಧಿಸಿದರೆ ಉತ್ತಮ. ಆಗ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುವುದು.
ಗಣಪತಿಯನ್ನು ನೀರಿಗೆ ಏಕೆ ಬಿಡಬೇಕು?
ಆನೆಗೆ ನೀರು ಎಂದರೆ ಬಲು ಪ್ರಿಯ, ಹಾಗೆ ಗಣಪತಿಗೂ ನೀರು ಎಂದರೆ ಬಲು ಇಷ್ಟ. ವಿಷ್ಣು ಅಲಂಕಾರ ಪ್ರಿಯ. ಶಿವ ಭಕ್ತಿಪ್ರಿಯ. ಹಾಗೆ ಗಣಪತಿ ತರ್ಪಣ ಪ್ರಿಯ. ಈ ಕಾರಣಕ್ಕಾಗಿಯೇ ಗಣಪತಿಯನ್ನು ನೀರಿನಲ್ಲಿ ಬಿಡುವುದು. ಆ ಸಮಯದಲ್ಲಿ ಭಕ್ತರು, ಚಿಕ್ಕ ಚಿಕ್ಕ ಮಕ್ಕಳು ‘ಚಿಕ್ಕೆರೆಯಲ್ಲಿ ಬಿದ್ದಾ, ದೊಡ್ಡ ಕರೆಯಲ್ಲಿ ಎದ್ದಾ’ ಎನ್ನುತ್ತಾ ಸಂತೋಷ ಪಡುತ್ತಾರೆ. ಇದರ ಒಳ ಅರ್ಥ ದೊಡ್ಕೆರೆ ಎಂದರೆ ಸಪ್ತ ಸಮುದ್ರಗಳ ವೈಶಾಲ್ಯ ಮೀರಿಸಿ ನಿಂತಿರುವ ಮಾನವನ ಹೃದಯ. ಅಂದರೆ ಮತ್ತೆ ಏಳಲಿ ಎದ್ದುರಾಷ್ಟ್ರಕ್ಕೆ, ಸಮಾಜಕ್ಕೆ ರಕ್ಷಣೆ ನೀಡಲಿ ಹಾಗೂ ತೊಂದರೆಗಳನ್ನು ಪರಿಹರಿಸಿ ಶುಭವನ್ನು ನೀಡಲಿ ಎಂದು.
ಗಣಪತಿಗೆ ಕೆಂಪು ಬಣ್ಣ ಬಲು ಇಷ್ಟ:
ಗಣಪತಿಯು ರಕ್ತವರ್ಣ ಶರೀರದವನು. ಅಂದರೆ ಕುಜನ ಅಂಶ ಹೆಚ್ಚು ಇರುವನು. ಕುಜನು ಕೆಂಪು ಬಣ್ಣಕ್ಕೆ ಅಧಿಪತಿ. ಆದ್ದರಿಂದ ಇವನನ್ನು ರಕ್ತಗಂಧಾನು ಲಿಪ್ತಾಂಗಂ ರಕ್ತ ಪುಷ್ಪೈಸ್ಸುಪೂಜಿತಂ ಎಂದು ವರ್ಣಿಸಲಾಗಿದೆ. ಆದ್ದರಿಂದ ಗಣಪತಿಗೆ ಕೆಂಪು ಬಣ್ಣದ ಹೂ, ಕೆಂಪು ಬಣ್ಣದ ಅಕ್ಷತೆ ಹಾಗೂ ಕೆಂಪು ಬಣ್ಣದ ಬಟ್ಟೆಯಿಂದ ಪೂಜಿಸಬೇಕು.
ವಿನಾಯಕನ ಅಧಿಪತಿ ರವಿಗ್ರಹ. ಈ ವಿನಾಯಕನಿಗೆ ನಾಯಕನೇ ಇಲ್ಲ. ಅವನಿಗೆ ಅವನೇ ನಾಯಕ, ಆದ್ದರಿಂದ ಇವನು ಶಿವನ ಪ್ರಮಥ ಗಣಗಳಿಗೆ ಅಧಿಪತಿಯಾಗಿದ್ದಾನೆ. ಈ ಕಾರಣದಿಂದಲೇ ಈತನನ್ನು ಗಣನಾಥ ಅಥವಾ ಗಣಪತಿ ಎನ್ನುವರು.
12 ಮಾಸಗಳಲ್ಲಿ ಕೆಲವು ಮಾಸಗಳು ಗಣಪತಿಗೆ ಅತಿ ಶ್ರೇಷ್ಠ. ಭಾದ್ರಪದ ಮಾಸದಲ್ಲಿ ಶುಕ್ಲಪಕ್ಷದ ಚೌತಿ ದಿನ ಪೂಜಿಸಿದರೆ ಅಪನಿಂದನೆಗಳು ತೊಲಗಿ ಶುಭವಾಗುವುದು. ಆಶ್ವೀಜ ಮಾಸದಲ್ಲಿ ಪೂಜಿಸಿದರೆ ಸಂತಾನ ಭಾಗ್ಯ ಸಿಗುವುದು. ಫಾಲ್ಗುಣ ಮಾಸದಲ್ಲಿ ಪೂಜಿಸಿದರೆ ಧನಲಾಭವಾಗುವುದು. ಚೈತ್ರ ಮಾಸದಲ್ಲಿ ಪೂಜಿಸಿದರೆ ವಾಹನದಿಂದ ಆಗುವ ಅಪಾಯವನ್ನು ತಪ್ಪಿಸಬಹುದು. ಪ್ರತಿ ಮಾಸದಲ್ಲಿ ಕೃಷ್ಣ ಪಕ್ಷದ ಚೌತಿದಿನ ಪೂಜಿಸಿದರೆ ಸಂಕಟಗಳು ನಿವಾರಣೆ ಆಗುವುದು. ಇದಕ್ಕೆ ಸಂಕಷ್ಟಹರ ಗಣಪತಿ ಪೂಜೆ ಎನ್ನುವರು.