ಒಬ್ಬ ವ್ಯಕ್ತಿಗೆ ತನ್ನ ವ್ಯಕ್ತಿತ್ವದಿಂದಲೇ ಗೌರವ ಸಿಕ್ಕಿದೆ ಎಂದಾದರೆ, ಅದು ಶಾಶ್ವತ. ದಕ್ಕಿಸಿಕೊಂಡಿದ್ದು, ಬಿಟ್ಟಿಯಾಗಿ ಸಿಕ್ಕಿದ್ದು ಎಲ್ಲವೂ ನಶ್ವರ. ಒಂದು ಹಂತದವರೆಗೆ ಅಂದರೆ ಉದಾಹರಿಸುವುದಾದರೆ ಅಧಿಕಾರ, ಶ್ರೀಮಂತಿಕೆ … ಇರುವವರೆಗೆ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ.
- ದೇವಿಪ್ರಸಾದ್ ಗೌಡ ಸಜಂಕು
ಗೌರವ ಸಂಪಾದನೆಯಲ್ಲಿ ಮೂರು ವಿಧ. ಅವುಗಳೇ ದಕ್ಕಿಸಿಕೊಂಡದ್ದು, ಸಿಕ್ಕಿದ್ದು ಮತ್ತು ಗಳಿಸಿದ್ದು.
1. ದಕ್ಕಿಸಿಕೊಂಡದ್ದು: ಇತರರು ಏನು ಬೇಕಾದರೂ ಅಂದುಕೊಳ್ಳಲಿ, ಏನಾದರೂ ಆಗಲಿ, ಅದು ಅಡ್ಡ ದಾರಿಯೇ ಇರಲಿ ಅಥವಾ ಇನ್ನೊಬ್ಬರನ್ನು ತುಳಿದೇ ಆಗಲಿ ತನಗೆ ಗೌರವ ದೊರೆಯಬೇಕು ಎಂದು ಪಡೆಯವ ಗೌರವ. ತಾನು ಗೌರವಕ್ಕೆ ಅರ್ಹನಲ್ಲದಿದ್ದರೂ ಯೋಗ್ಯನಲ್ಲದಿದ್ದರೂ ಇನ್ನೊಬ್ಬರನ್ನು ದಮನಿಸಿ ಪಡೆಯುವ ಗೌರವ. ಇಂದು ಸಮಾಜದಲ್ಲಿ ಇಂತಹವರೇ ತುಂಬಿದ್ದಾರೆ. ಇಂತಹವರೇ ಸಮಾಜಕ್ಕೆ ಇಂದು ಗೌರವಾನ್ವಿತರು. ಆದರೆ ಇದು ಶಾಶ್ವತ ಅಲ್ಲ. ಇಂತಹ ಗೌರವಕ್ಕೆ ಬೆಲೆಯೂ ಇಲ್ಲ.
2. ಸಿಕ್ಕಿದ್ದು: ತನ್ನ ಶ್ರಮ ಇಲ್ಲದೇ ದೊರಕಿದ ಗೌರವ. ಪಿತನಾದವನಿಗೆ ಆತನ ಪಿತ ಮೂಲಕ ದೊರಕಿದ ಅನುವಂಶೀಯ ಗೌರವವೇ ಇರಬಹುದು ಅಥವಾ ಸ್ವಾರ್ಜಿತ ಗೌರವವೇ ಇರಬಹುದು ಅದನ್ನು ಮಗನಾದವ ಕೂಡಾ ಪಡೆದರೆ ಅಥವಾ ಅನುಭವಿಸಿದರೆ ಅದು ಸಿಕ್ಕಿದ್ದು. ಈ ಗೌರವಕ್ಕೆ ಅರ್ಹನೋ ಅಥವಾ ಅನರ್ಹನೋ, ಯೋಗ್ಯನೋ ಅಥವಾ ಅಯೋಗ್ಯನೋ ಎಂಬುವುದಕ್ಕಿಂತಲೂ ಆತನ ವಂಶದ ಗೌರವ ಆತನಿಗೂ ಸಿಗುವುದು. ಇಂತಹ ಗೌರವವನ್ನು ಪಡೆಯಲು ಹೆಚ್ಚಿನವರು ಪರದಾಡುವುದು. ಆದರೆ ಅದು ಶ್ರೇಷ್ಠ ಗೌರವ ಅಲ್ಲ, ಮತ್ತು ಆ ವ್ಯಕ್ತಿಗೆ ನೀಡಿದ ಗೌರವ ಅಲ್ಲ. ಆತನ ವಂಶಕ್ಕೆ, ಸ್ಥಾನಕ್ಕೆ ನೀಡಿದ ಗೌರವ. ಇಂತಹ ಗೌರವ ಪಡೆದ ವ್ಯಕ್ತಿಗಳು ಯೋಗ್ಯರಾಗಿದ್ದರೆ ಆ ಗೌರವವನ್ನು ಉಳಿಸಿಕೊಳ್ಳಲು ಶ್ರಮಿಸಿ ಗೌರವವನ್ನು ಗಳಿಸುತ್ತಾರೆ ಮತ್ತು ಶ್ರೇಷ್ಠತೆಯೆಡೆಗೆ ಪಯಣಿಸುತ್ತಾರೆ. ಒಂದು ವೇಳೆ ಅಯೋಗ್ಯರಾಗಿದ್ದರೆ ಗೌರವದ ಬೆಲೆ ತಿಳಿಯದಿದ್ದರೆ ಮುಂದೊಂದು ದಿನ ಅವಮಾನಿತನೂ ಆಗಬಹುದು.
3. ಗಳಿಸಿದ್ದು: ತನ್ನ ಸ್ವಂತ ಪರಿಶ್ರಮದಿಂದ ಪಡೆದ ಗೌರವ. ಇದು ಅತ್ಯಂತ ಶ್ರೇಷ್ಠ ಗೌರವ. ತನ್ನ ಉತ್ತಮ ನಡೆಯಿಂದ, ಯೋಗ್ಯತೆಯಿಂದ ಪಡೆದ ಗೌರವ. ಇಂತಹ ಗೌರವವನ್ನು ಸಮಾಜ ಗೌರವದ ಜೊತೆ ಪ್ರೀತಿಯಿಂದ ನೀಡುತ್ತಾರೆ. ಇಂತಹ ಗೌರವ ಪಡೆಯಬೇಕಾದರೆ ಹಲವಾರು ತ್ಯಾಗ ಮಾಡಬೇಕಾಗುತ್ತದೆ. ಒಮ್ಮೆ ಓರ್ವ ಇಂತಹ ಗೌರವ ಪಡೆದರೆ ಅದನ್ನು ಚ್ಯುತಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ಆ ಗೌರವ ಪಡೆದ ವ್ಯಕ್ತಿ ಆ ಗೌರವವನ್ನು ಕಾಪಾಡಲು ಸದಾ ಸನ್ಮಾರ್ಗದಲ್ಲೇ ಇರುತ್ತಾನೆ. ಹಾಗಾಗಿ ನಮಗೆ ಗೌರವ ಸಂಪಾದನೆ ಮಾಡಬೇಕೆಂದಿದ್ದರೆ ಅದನ್ನು ಗಳಿಸುವತ್ತ ಯೋಚಿಸುವ. ಏನಂತೀರಿ?