ಮಂಗಳೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಬೋಳಾರ ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಸ್ಥಳ ಪುರಾಣ “ಬೋಳಾರದ ಮಾರಿಯಮ್ಮ’ ಗ್ರಂಥವನ್ನು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅ.26ರಂದು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ‘ಧಾರ್ಮಿಕ ಕ್ಷೇತ್ರಗಳ ಪುರಾಣ ಐತಿಹ್ಯವನ್ನು ದಾಖಲಿಸುವ ಕಾರ್ಯ ಶ್ಲಾಘನೀಯ. ಬೋಳಾರ ಮಾರಿಗುಡಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಟಕಕಾರ, ಯಕ್ಷಗಾನ ಅರ್ಥಧಾರಿ ಕದ್ರಿ ನವನೀತ ಶೆಟ್ಟಿ ಈ ಕೃತಿಯನ್ನು ರಚಿಸಿದ್ದು ಪ್ರಶಂಸನೀಯ. ಧಾರ್ಮಿಕ ಕ್ಷೇತ್ರಗಳ ಪುರಾಣ, ಐತಿಹ್ಯಗಳ ದಾಖಲೀಕರಣ ನಿರಂತರ ನಡೆಯಬೇಕಿದೆ. ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಧಾರ್ಮಿಕ ನಂಬುಗೆ, ಆಚಾರ ವಿಚಾರಗಳಿಂದ ಯುವ ಸಮುದಾಯ ದೂರ ಸರಿಯುತ್ತಿರುವುದು ಖೇದಕರ, ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
ದೇವಳದ ಪ್ರಾಚೀನ ವಸ್ತುಗಳ ಸಂಗ್ರಹಾಲಯವನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ್ ಇದೇ ಸಂದರ್ಭ ಉದ್ಘಾಟಿಸಿದರು.
ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಪಾಲಿಕೆ ಸದಸ್ಯರಾದ ಭಾನುಮತಿ, ರೇವತಿ, ಸತೀಶ್ ಬೋಳಾರ, ಸುದರ್ಶನ್ ಮೂಡುಬಿದಿರೆ, ಭುವನರಾಮ ಉಡುಪಿ, ಗೋಪಾಲ್ ಕುತ್ತಾರ್, ಸಂಜೀವ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಪ್ರದೀಪ್ ಕುಮಾರ್ ಕಲ್ಕೂರ, ಮೋಹನ್ ಬೆಂಗ್ರ ಮೊದಲಾದವರು ಉಪಸ್ಥಿತರಿದ್ದರು.
ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ ಪ್ರಾರ್ಥಿಸಿದರು. ಸೀತಾರಾಮ ಎ. ಕುಮಾರ್ ಅಭಿನಂದನಾ ಭಾಷಣ ಮಾಡಿದರು.
ವ್ಯವಸ್ಥಾಪನಾ ಮಾಜಿ ಅಧ್ಯಕ್ಷ ತಾರನಾಥ ಶೆಟ್ಟಿ ಬೋಳಾರ್ ಸ್ವಾಗತಿಸಿ, ಟ್ರಸ್ಟಿ ವೇಣುಗೋಪಾಲ ಪುತ್ರನ್ ವಂದನಾರ್ಪಣೆ ಮಾಡಿದರು. ಸಾಹಿಲ್ ರೈ ಹಾಗೂ ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.