ಕೂದಲಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಹೀಗೆ ಮಾಡಿ ನೋಡಿ

ಅಂದವಾಗಿ ಕಾಣಿಸಿಕೊಳ್ಳುವಲ್ಲಿ ನಮ್ಮ ತಲೆಕೂದಲು ಕೂಡಾ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಕೂದಲಿನ ಕಾಳಜಿ ಬಹಳ ಅಗತ್ಯ. ಅದಕ್ಕೆ ಬ್ಯೂಟಿಪಾರ್ಲರ್‍ಗೆ ಹೋಗಬೇಕಾಗಿಲ್ಲ, ಬ್ಯೂಟಿ ಪ್ರಾಡಕ್ಟ್‍ಗಳನ್ನು ಬಳಸಬೇಕಿಲ್ಲ. ಮನೆಯಲ್ಲಿ ದಿನನಿತ್ಯ ಬಳಕೆಯಲ್ಲಿರುವ ವಸ್ತುಗಳನ್ನು ಬಳಸಿ ಕೂದಲ ಆರೋಗ್ಯ ಕಾಪಾಡಿಕೊಳ್ಳಬಹುದು. ಅಂತಹ ಕೆಲವು ಟಿಪ್ಸ್ ಇಲ್ಲಿದೆ.

ಸುಂದರವಾದ, ನೀಳವಾದ ಕೇಶರಾಶಿ ಪಡೆಯಬೇಕೆಂಬುದು ಎಲ್ಲ ಹೆಂಗೆಳೆಯರ ಆಸೆ. ಆದರೆ ನಮ್ಮ ಜೀವನಶೈಲಿ, ಆಹಾರ ಕ್ರಮಗಳು ಇಂತಹ ಆಸೆಗಳಿಗೆ ತಡೆಯನ್ನು ಉಂಟುಮಾಡುತ್ತವೆ. ಅತಿಯಾದ ಶಾಂಪೂ ಬಳಕೆಯೂ ಕೂದಲು ತನ್ನ ನೈಜತೆಯನ್ನು, ಹೊಳಪನ್ನು ಕಳೆದುಕೊಳ್ಳಲು ಕಾರಣವಾಗುತ್ತವೆ.

ಅಷ್ಟೇ ಅಲ್ಲದೆ, ಕೂದಲು ಬಲಹೀನವಾಗುವುದರ ಜೊತೆಗೆ ಉದುರುವ ಸಮಸ್ಯೆ, ಹೊಟ್ಟಿನ ಸಮಸ್ಯೆ ಕೂಡ ಶುರುವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೈಸರ್ಗಿಕ ವಸ್ತುಗಳಿಂದಲೇ ಕೂದಲನ್ನು ನಯವಾಗಿಸಿ. ಆರೋಗ್ಯಪೂರ್ಣವಾಗಿರಿಸಿಕೊಳ್ಳಿ. ನೈಸರ್ಗಿಕ ಪರಿಹಾರೋಪಾಯಗಳು ಅಂಟುವಾಳ ಅಥವಾ ಸೀಗೆಕಾಯಿ ಬಳಸಿ ಸ್ನಾನ ಮಾಡಿ. ಕೂದಲ ಆರೋಗ್ಯಕ್ಕೂ ಒಳ್ಳೆಯದು.

ದಾಸವಾಳದ ಸೊಪ್ಪನ್ನು ರುಬ್ಬಿ, ಅದರ ಪೇಸ್ಟನ್ನು ತಲೆಗೆ ಹಚ್ಚಿಕೊಳ್ಳಿ. ಅರ್ಧ ಘಂಟೆ ಬಿಟ್ಟು ಸ್ನಾನ ಮಾಡಿ. ಕೂದಲು ನಯವಾಗಿ ಹೊಳೆಯುತ್ತದೆ. ಮದರಂಗಿ ಕೂಡ ನಿಮ್ಮ ಕೂದಲ ಹೊಳಪು ಹಾಗೂ ಬಣ್ಣವನ್ನು ಆಕರ್ಷಕಗೊಳಿಸಬಲ್ಲದು. ಬಿಸಿ ನೀರಿನಲ್ಲಿ ಮೊಟ್ಟೆಯ ಒಳಭಾಗವನ್ನು ಚೆನ್ನಾಗಿ ಕಲೆಸಿ ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿ. ಒಂದು ಗಂಟೆ ನಂತರ ತೊಳೆದುಕೊಂಡರೆ ಕೂದಲು ಹೊಳಪಾಗುತ್ತದೆ.

ಪೌಷ್ಟಿಕ, ವಿಟಮಿನ್, ಕ್ಯಾಲ್ಸಿಯಂ ಆಹಾರಗಳಾದ ಹಸಿ ತರಕಾರಿ, ಹಣ್ಣುಗಳ ಸೇವನೆ ಹೆಚ್ಚಿಸಿ. ತಲೆ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಸಾಕು. ಸಾಧ್ಯವಾದಷ್ಟು ಬಾರಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿ. ವಾರಕ್ಕೊಮ್ಮೆಯಾದರೂ ಎಣ್ಣೆ ಹಚ್ಚಿ ಸ್ನಾನ ಮಾಡಿ. ಕೊಬ್ಬರಿ ಎಣ್ಣೆಯಲ್ಲಿ ನೆಲ್ಲಿಕಾಯಿ ಪುಡಿ, ಮೆಂತ್ಯ ಪುಡಿ, ದಾಸವಾಳ ಹೂ, ಕರಿಬೇವು ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಕಿ, ಬಿಸಿ ಮಾಡಿ ಸೋಸಿ ಆಗಾಗ್ಗೆ ಕೂದಲಿಗೆ ಹಚ್ಚಿ. ಸಾಧ್ಯವಾದಷ್ಟೂ ಶ್ಯಾಂಪೂವಿನ ಬಳಕೆ ಕಡಿಮೆ ಮಾಡಿ. ಮಾಡಲೇಬೇಕಿದ್ದರೆ ಬಾಟಲ್‌ಗಿಂತ ಶ್ಯಾಸೆಗಳನ್ನು ಬಳಸಿ.

ಹೊರಗೆ ಹೋದಾಗೆಲ್ಲ ತಲೆಗೆ ಸ್ಕಾರ್ಫ್ ಬಳಸಿ ಧೂಳಿನಿಂದ ಕೂದಲ ರಕ್ಷಣೆ ಮಾಡಿ. ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.

ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ. ಸೀಗೆಕಾಯಿಯನ್ನು ತಲೆ ತೊಳೆಯಲು ಬಳಸುವುದರಿಂದ ತಲೆ ಹೊಟ್ಟಿನ ಸಮಸ್ಯೆ ಇರುವುದಿಲ್ಲ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಸೀಗೆಕಾಯಿಯನ್ನು ಒಣಗಿಸಿ ಅದರ ಪುಡಿಯನ್ನು ತಲೆ ಶುಚಿಗೆ ಬಳಸಲಾಗುವುದು ಎಂದು ಎಲ್ಲರಿಗೂ ಗೊತ್ತು. ಆದರೆ ಸೀಗೆಕಾಯಿ ಪುಡಿಯನ್ನು ಈ ಕೆಳಗಿನಂತೆ ಬಳಸಿದರೆ ಹೆಚ್ಚು ಪರಿಣಾಮಕಾರಿ.

ಒಂದು ಲೀಟರ್ ತೆಂಗಿನ ಎಣ್ಣೆಯನ್ನು ಕುದಿಸಿ ಉರಿಯಿಂದ ಇಳಿಸಿ 1 ಕಪ್ ಸೀಗೆಕಾಯಿ ಪುಡಿ, ಅರ್ಧ ಕಪ್ ನೆಲ್ಲಿಕಾಯಿ ಪುಡಿ ಹಾಕಿ ಚೆನ್ನಾಗಿ ಕಲೆಸಿ 24 ಗಂಟೆಗಳ ಕಾಲ ಇಡಿ. ನಂತರ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಕುದಿಸಿ. ನಂತರ ಈ ಎಣ್ಣೆಯ ಮಿಶ್ರಣವನ್ನು ತಲೆಗೆ ಹಚ್ಚಿ 15 ನಿಮಿಷದ ಬಳಿಕ ತಲೆ ತೊಳೆಯಿರಿ.

ಸೀಗೆಕಾಯಿ ಪುಡಿಯನ್ನು ಮೊಟ್ಟೆಯ ಬಿಳಿ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆದು ನಂತರ ಕೂದಲನ್ನು ಒಣಗಿಸಿದರೆ ಕೂದಲು ತುಂಬಾ ಮೃದುವಾಗಿರುವುದು ನಿಮ್ಮ ಗಮನಕ್ಕೆ ಬರುವುದು.

ದಾಸವಾಳ ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ 3 ಚಮಚ ಸೀಗೆ ಕಾಯಿ ಪುಡಿ, 3 ಚಮಚ ಮದರಂಗಿ ಪುಡಿ (ಮದರಂಗಿ ಎಲೆಯನ್ನು ಒಣಗಿಸಿ ಮಾಡಿದ ಪುಡಿ) ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದು ಶ್ಯಾಂಪೂ ಹಾಕಿ ತಲೆ ತೊಳೆದರೆ ಕೂದಲಿಗೆ ತುಂಬಾ ಒಳ್ಳೆಯದು.

ಮೆಂತೆಯನ್ನು ನೆನೆ ಹಾಕಿ ಅದನ್ನು ಪೇಸ್ಟ್ ರೀತಿ ಮಾಡಿ, ಅದಕ್ಕೆ ಸೀಗೆಕಾಯಿ ಮತ್ತು ಆಮ್ಲ ಪುಡಿ ಹಾಕಿ ಮಿಕ್ಸ್ ಮಾಡಿ, ಬೇಕಿದ್ದರೆ ಒಂದು ಮೊಟ್ಟೆಯ ಬಿಳಿ ಹಾಕಿ ತಲೆಗೆ ಹಚ್ಚಬಹುದು.

ಸೀಗೆಕಾಯಿ, ಅಂಟ್ವಾಳ, ಅಗಸೆ ಬೀಜ, ದಾಸಾವಾಳ ಎಲೆ ಇವುಗಳನ್ನು ಅರ್ಧ ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಶ್ಯಾಂಪೂ ರೀತಿ ಕೂಡ ಬಳಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles