ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ಶ್ರೀ ವಚನಾನಂದ ಸ್ವಾಮೀಜಿ ಅವರು ಹಿಮಾಲಯಕ್ಕೆ ಇಂದು ನ.4ರಂದು ಭೇಟಿ ನೀಡಿದ್ದರು. ಇದೇ ಸಂದರ್ಭ ಉತ್ತರಾಖಂಡದ ಚಮೋಲಿಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಭೇಟಿ ಮಾಡಿದರು.
ಅಲ್ಲಿನ ಅನುಭವಗಳನ್ನು ಸ್ವಾಮೀಜಿ ಅವರು ಸ್ವತಃ ಇಲ್ಲಿ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದಾರೆ.
“ನಾವೀಗ ಹಿಮಾಲಯದ ಸನ್ನಿಧಿಯಲ್ಲಿದ್ದೇವೆ. ಮಹಾ ಚಳಿ ಆರಂಭವಾಗಿದೆ. ಮುಂದಿನ ಆರು ತಿಂಗಳು ಹಿಮಾಲಯದ ಎಲ್ಲಾ ದೇಗುಲಗಳೂ ಮುಚ್ಚುತ್ತವೆ.
ಹಿಮ ಏಕಾಂತ ಅನುಭವಿಸುವ ಕಾಲ ಇದು. ಹಿಮಾಲಯದ ಸ್ನಿಗ್ಧ ಸೌಂದರ್ಯ ಅನುಭವಿಸುತ್ತಾ ನಾವು ಮತ್ತು ಋಷಿಕೇಷದ ವೇದ ನಿಕೇತನ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮಿಗಳು ಬದ್ರಿನಾಥ ನಾರಾಯಣ ದರ್ಶನ ಪಡೆದು ಹಿಂದಿರುಗುತಿದ್ದೆವು.
ಚಮೋಲಿಯ ದಾರಿಯಲ್ಲಿ ಹಾಗೆ ಹಿಂದಿರುಗುವಾಗ ನಮಗೆ ಆಕಸ್ಮಿಕವಾಗಿ ಸಿಕ್ಕಿದ್ದು ಪರಮಪೂಜ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು. ಸರಳ ವ್ಯಕ್ತಿತ್ವದ ಸಹೃದಯ ಸಂಪನ್ನರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಉಡುಪಿಯ ಪೇಜಾವರ ಮಠಾಧೀಶರಾಗಿದ್ದಾರೆ. ಶ್ರೀ ಪೇಜಾವರ ಶ್ರೀಗಳು ಹಾಕಿಕೊಟ್ಟ ಪಥದಲ್ಲೇ ಸಾಗುತ್ತಿದ್ದಾರೆ. ಅವರ ಮುಖದಲ್ಲಿ ಕೃಷ್ಣಕಳೆ ಇದೆ. ಮುಕುಂದ ಮಾಧವನ ಮಂದಸ್ಮಿತೆ ಇದೆ.
ಶ್ರೀ ವಿಶ್ವಪ್ರಸನ್ನ ತೀರ್ಥರು ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ನ ವಿಶ್ವಸ್ಥರೂ ಆಗಿದ್ದಾರೆ. ಪೂಜ್ಯರನ್ನ ಭೇಟಿಯಾಗಿ ಬಹಳ ದಿನಗಳಾಗಿದ್ದವು. ಪರಸ್ಫರ ಉಭಯ ಕುಶಲೋಪರಿ ಜೊತೆ ನಮ್ಮ ಹಿಮಾಲಯದ ಅನುಭವವನ್ನೂ ಹಂಚಿಕೊಂಡೆವು. ತುಂಬಾ ಖುಷಿ ನೀಡಿತು’.