ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿರುವ ಶ್ರೀಕ್ಷೇತ್ರ ಅನಂತಪದ್ಮನಾಭ ದೇವಸ್ಥಾನದಿಂದಾಗಿಯೇ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಶಿವಮೊಗ್ಗ – ತೀರ್ಥಹಳ್ಳಿ ಪಟ್ಟಣಗಳನ್ನು ಹಾದು ಆಗುಂಬೆ ಘಾಟಿ ಇಳಿದು ಬರುವಾಗ ಸಿಗುವ ದೊಡ್ಡ ಪಟ್ಟಣ ಪೆರ್ಡೂರು. ಹುತ್ತವಿದ್ದ ಜಾಗದಲ್ಲಿಯೆ ಅನಂತಪದ್ಮನಾಭ ಸ್ವಾಮಿಯ ಪ್ರತಿಷ್ಠೆಯಾಗಿ ಭಕ್ತ ಜನರಿಂದ ನಿತ್ಯಪೂಜೆಗೊಳ್ಳುತ್ತಿರುವ ಪುಣ್ಯ ಕ್ಷೇತ್ರ.
ಹುತ್ತದೊಳಗಿಂದ ಹುಟ್ಟಿ ಅಂದರೆ ಅನಂತದಿಂದ ಆವಿರ್ಭವಿಸಿ ಅನಂತ ಪದ್ಮನಾಭನೆಂದು ಕರೆಸಿಕೊಂಡು ಪ್ರಕೃತಿಯ ಎಲ್ಲ ಶಕ್ತಿಯನ್ನೂ ಮೈಗೂಡಿಸಿಕೊಂಡ ಈ ಸ್ವಾಮಿ ಪ್ರತೀ ತಿಂಗಳು ಸಂಕ್ರಮಣದ ಪರ್ವ ದಿನದಂದು ಇಲ್ಲಿ ವಿಶೇಷವಾಗಿ ಪೂಜೆಗೊಳ್ಳುತ್ತಿದ್ದಾನೆ.
ಪೂರ್ವದಲ್ಲಿ ಸಹ್ಯಾದ್ರಿಯ ಪರ್ವತಶ್ರೇಣಿ, ದಕ್ಷಿಣದಲ್ಲಿ ಸುವರ್ಣ ನದಿ, ಪಶ್ಚಿಮದಲ್ಲಿ ಮಡಿಸಾಲು ನದಿ, ಉತ್ತರದಲ್ಲಿ ಸೀತಾನದಿಯೇ ಮೇರೆಯಾಗಿರುವ ಶ್ರೀ ಕ್ಷೇತ್ರ ಒಂದು ಕಾಲದಲ್ಲಿ ವ್ಯಾಪಾರ ಕೇಂದ್ರವೂ ಆಗಿತ್ತು.
ಹಾಗೆಯೇ ಈ ಕಡೆಯಿಂದ ಉಡುಪಿ ಪಟ್ಟಣ ದಾಟಿದರೆ ಬಳಿಕ ಪೆರ್ಡೂರೇ ದೊಡ್ಡ ಪಟ್ಟಣವೆನಿಸಿತ್ತು. ಸೇತುವೆಗಳಿಲ್ಲದ ಆ ಕಾಲದಲ್ಲಿ ಮೂರು ಕಡೆಯೂ ಶ್ರೀ ಕ್ಷೇತ್ರವನ್ನು ನದಿಗಳೇ ಸುತ್ತುವರಿದಿದ್ದರಿಂದ ಆಸುಪಾಸಿನ ಗ್ರಾಮದವರೆಲ್ಲ ದೋಣಿಯಲ್ಲಿಯೇ ಈ ಪಟ್ಟಣಕ್ಕೆ ಬರುತ್ತಿದ್ದರು. ವಾರದ ಸಂತೆಗಳೇ ಇರದಿದ್ದ ಆ ಕಾಲದಲ್ಲಿ ಪೆರ್ಡೂರಿನಲ್ಲಿ ತಿಂಗಳಿಗೊಂದು ಸಂಕ್ರಮಣ ಉತ್ಸವ ಜರಗುತ್ತಿತ್ತು. ಮಾರುವ-ಕೊಳ್ಳುವ ಜನರಿಂದ ಗಿಜಿಗಿಜಿಗುಟ್ಟುತ್ತಿತ್ತು. ಪರಿಸರದ ಹಳ್ಳಿ ಜನರೆಲ್ಲ ಅಂದು ದೇವರ ದರ್ಶನದೊಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು.
ಉಡುಪಿಯಿಂದ 20ಕಿ.ಮೀ. ದೂರದಲ್ಲಿ ಆಗುಂಬೆಗೆ ಹೋಗುವ ರಾಜ್ಯರಸ್ತೆಯಲ್ಲಿ ಹಾಗೆಯೇ ಆಗುಂಬೆಯಿಂದ 32 ಕಿ.ಮೀ. ದೂರದಲ್ಲಿ ಉಡುಪಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ ಈ ಪುಣ್ಯಕ್ಷೇತ್ರ ಪೆರ್ಡೂರು.
ಯಕ್ಷಗಾನಪ್ರಿಯನಿವನು
ಶತಮಾನಗಳ ಹಿನ್ನೆಲೆಯಿರುವ ಪೆರ್ಡೂರಿನ ಅನಂತ ಪದ್ಮನಾಭ ಸ್ವಾಮಿಯ ಹೆಸರಿನ ಮೇಳವೊಂದು ಬಹು ಜನಪ್ರಿಯತೆ ಪಡೆದಿದೆ. ಹರಕೆಯ ಬಯಲಾಟಗಳು ಅಂದು ಯಥೇಚ್ಛ ಸಿಗುತ್ತಿದ್ದವು. ಕಾರ್ಕಳ, ಕುಂದಾಪುರ ಮತ್ತು ಘಟ್ಟದ ಮೇಲೆ ಈ ಮೇಳಕ್ಕೆ ವಿಶೇಷ ಬೇಡಿಕೆ ಇತ್ತು. ಜಿಲ್ಲೆಯ ಪುರಾತನ ಮೇಳಗಳಲ್ಲಿ ಒಂದಾದ ಈ ಮೇಳದಲ್ಲಿ ಹೆಸರಾಂತ ಕಲಾವಿದರನೇಕರು ಸೇವೆ ಸಲ್ಲಿಸಿದ್ದರು. ಬಯಲಾಟ ಆಡುತ್ತಿದ್ದ ಈ ಮೇಳ ಕಳೆದ ಇಪ್ಪತ್ತು ವರ್ಷಗಳಿಂದ ಟೆಂಟ್ ಮೇಳವಾಗಿ ಪರಿವರ್ತನೆಗೊಂಡು, ಈಗಲೂ ಯಶಸ್ವೀ ಪ್ರಸಂಗಗಳೊಂದಿಗೆ ತಿರುಗಾಟ ನಡೆಸುತ್ತಿದೆ.
ಹೋಗುವುದು ಹೇಗೆ?
ಉಡುಪಿ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಪೆರ್ಡೂರಿನಲ್ಲಿ ಮೇಲ್‍ಪೇಟೆ ಮತ್ತು ಕೆಳಪೇಟೆ ಎಂಬ 2 ಬಸ್ ನಿಲ್ದಾಣಗಳಿವೆ. ಮೇಲ್‍ಪೇಟೆ ಪ್ರಧಾನ ಬಸ್ ನಿಲ್ದಾಣವಾಗಿದ್ದು, ಅದು ದೇವಸ್ಥಾನದ ಮುಖ್ಯ ದ್ವಾರದ ಎದುರು ಇದೆ. ಕೇಳಪೇಟೆ ಬಸ್ ನಿಲ್ದಾಣ ದೇವಸ್ಥಾನದ ಉತ್ತರದ ದ್ವಾರದ ಬಳಿ ಇದೆ.