ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಈ ಬಾರಿಯ ಕಾರ್ತಿಕ ಮಾಸದ ದೀಪಾರಾಧನೆ ನವೆಂಬರ್ 16 ರಿಂದ ಮೊದಲ್ಗೊಂಡು ಡಿಸೆಂಬರ್ 14 ರವರೆಗೆ ಇದ್ದು 14 ರಂದು ಶ್ರೀದೇವರ ವಾರ್ಷಿಕ ದೀಪೋತ್ಸವವು ತೆಪ್ಪೋತ್ಸವದೊಂದಿಗೆ ಜರುಗಲಿರುವುದು.
ಚಾಂದ್ರಮಾನ ಮಾಸಗಳಲ್ಲಿ ಕಾರ್ತಿಕ ಮಾಸವು ತನ್ನದೇ ಆದ ಪಾವಿತ್ರ್ಯತೆ ಹಾಗೂ ಶ್ರೇಷ್ಠತೆಯನ್ನು ಹೊಂದಿದ್ದು ಬೆಳಕಿನ ಮಾಸವೆಂದೇ ಗುರುತಿಸಲ್ಪಟ್ಟಿದೆ. ಹಾಗೇ ದೀಪಗಳನ್ನು ಬೆಳಗುವುದರ ಮೂಲಕ ದೇವತೆಗಳನ್ನು ಆರಾಧಿಸುವ ಕ್ರಮವು ನಮ್ಮಲಿ ಚಾಲ್ತಿಯಲ್ಲಿದ್ದು ಬಹಳ ಶ್ರೇಷ್ಠವೂ ಹಾಗೂ ಅತ್ಯಧಿಕ ಪುಣ್ಯಫಲದಾಯಕ ಎಂಬುದು ನಮ್ಮ ನಿಮ್ಮೆಲ್ಲರ ನಂಬಿಕೆಯಾಗಿದೆ.
ದೀಪಗಳನ್ನು ಬೆಳಗುವುದರಿಂದ ಸಕಲ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದಲ್ಲದೆ, ಜ್ಯೋತಿಯ ದಿವ್ಯ ಪ್ರಭಾವಳಿಯಿಂದ ಧನಾತ್ಮಕ ಶಕ್ತಿಯು ಪ್ರಬಲವಾಗಿ ಋಣಾತ್ಮಕ ಶಕ್ತಿಗಳು ನಾಶವಾಗುವುದಲ್ಲದೆ ಈ ದೀಪಾರಾಧನೆಯಿಂದ ಪ್ರಸನ್ನನಾದ ಭಗವಂತನು ಆರೋಗ್ಯಭಾಗ್ಯದೊಂದಿಗೆ ಸಕಲ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆಯನ್ನ ಬಹಳ ಹಿಂದಿನಿಂದಲೂ ಹೊಂದಿದ್ದೇವೆ.
ಅಂತೆಯೇ ಶ್ರೀಗುರುನರಸಿಂಹ ಮತ್ತು ಶ್ರೀಆಂಜನೇಯ ದೇವರುಗಳಿಗೆ ಪ್ರತಿನಿತ್ಯ ನಂದಾದೀಪವನ್ನು ಬೆಳಗುತ್ತಿದ್ದು ಈ ನಂದಾದೀಪಗಳು ಬಹಳ ಹಿಂದಿನ ಕಾಲದಿಂದಲೂ ಆರದೇ ಬೆಳಗಿಗೊಂಡು ಬರುತ್ತಿದೆ ಎನ್ನುವ ಐತಿಹ್ಯವಿದೆ ಹಾಗೇ ಕಾರ್ತಿಕ ಮಾಸದ ಅಮವಾಸ್ಯೆಯಂದು ಶ್ರೀದೇವಳದ ಒಳ ಹಾಗೂ ಹೊರಪೌಳಿಗಳಲ್ಲಿ ಮತ್ತು ರಥಬೀದಿಗಳಲ್ಲಿ ಅಸಂಖ್ಯಾತ ಹಣತೆಗಳ ದೀಪಗಳನ್ನು ಬೆಳಗುವುದರ ಮೂಲಕ ಶ್ರೀದೇವರ ವಾರ್ಷಿಕ ದೀಪೋತ್ಸವನ್ನು ವಿಜೃಂಭಣೆಯಿಂದ ಜರುಗಿಸಲಾಗುತ್ತದೆ.
ಶ್ರೀದೇವಳದಲ್ಲಿ ಈ ಕಾರ್ತಿಕ ಮಾಸದ ದೀಪಾರಾಧನೆಯು ಅತ್ಯಂತ ಶ್ರೇಯಸ್ಕರವಾಗಿದ್ದು ಈ ಮಾಸದಲ್ಲಿ ಶ್ರೀದೇವರಿಗೆ ದೀಪ ಬೆಳಗುವುದರಿಂದ ನಂಬಿದ ಭಕ್ತರಿಗೆ ಪುಣ್ಯದ ಪ್ರಾಪ್ತಿಯೊಂದಿಗೆ, ಸಕಲ ಐಶ್ವರ್ಯ, ಸಂಪತ್ತು, ಆಯುರಾರೋಗ್ಯ, ನೆಮ್ಮದಿಯ ಜೀವನದೊಂದಿಗೆ ಬೇಡಿದ ಸಕಲ ಇಷ್ಟಾರ್ಥಗಳನ್ನು ಆ ಸರ್ವಶಕ್ತ ಭಗವಂತನು ಕರುಣಿಸುತ್ತಾನೆ.
ದೀಪೋತ್ಸವ ಸೇವೆ
ಈ ಬಾರಿಯ ಕಾರ್ತಿಕ ಮಾಸವು ನವೆಂಬರ್ 16 ರಿಂದ ಮೊದಲ್ಗೊಂಡು ಡಿಸೆಂಬರ್ 14 ರವರೆಗೆ ಇದ್ದು 14 ರಂದು ಶ್ರೀದೇವರ ವಾರ್ಷಿಕ ದೀಪೋತ್ಸವವು ತೆಪ್ಪೋತ್ಸವದೊಂದಿಗೆ ಜರುಗಲಿರುವುದು.
ನಂದಾದೀಪ ಸೇವೆಗೆ ಅವಕಾಶ
ಶ್ರೀಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರಿಗೆ ಈ ಕಾರ್ತಿಕಮಾಸದಲ್ಲಿ ನಂದಾದೀಪ ಸೇವೆಯನ್ನು ಅರ್ಪಿಸಲು ಅವಕಾಶವಿದ್ದು ಭಕ್ತರು ಒಂದು ಮಾಸಕ್ಕೆ ತಲಾ ರೂ. 350-00 ರಂತೆ ಸೇವಾಕಾಣಿಕೆಯನ್ನು ಪಾವತಿಸುವುದರ ಮೂಲಕ ನಂದಾದೀಪ ಸೇವೆಯನ್ನು ಎರಡು ದೇವರುಗಳಿಗೆ ಮಾಡಬಹುದಾಗಿದೆ.
ಈ ಸೇವೆಯನ್ನು ಮಾಡಲಿಚ್ಚಿಸುವ ಭಕ್ತಾದಿಗಳು ಸೇವಾ ಕಚೇರಿಯನ್ನು ಸಂಪರ್ಕಿಸಬಹುದು ಹಾಗೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಿ ಸೇವೆಯನ್ನು ಮಾಡುವವರು ತಮ್ಮ ವಿಳಾಸ ಮತ್ತು ಸಂಕಲ್ಪದ ವಿವರಗಳೊಂದಿಗೆ, ಖಾತೆಗೆ ಜಮಾ ಮಾಡಿದ ಮಾಹಿತಿಗಳನ್ನು 9449545714 ಕ್ಕೆ ವಾಟ್ಸಪ್ ಮೂಲಕ ತಿಳಿಸಿದಲ್ಲಿ ಸೇವೆ ಮಾಡಿ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 0820-2987444, 9449545714 ನ್ನು ಸಂಪರ್ಕಿಸಬಹುದು ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷರು, ಮತ್ತು ಸರ್ವಸದಸ್ಯರು ಆಡಳಿತ ಮಂಡಳಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.