ಇದೇ ನವಂಬರ್ 20 ಕಾರ್ತೀಕ ಶುದ್ಧ ಷಷ್ಠಿ ಶುಕ್ರವಾರದಿಂದ ಡಿಸಂಬರ್ 1 ಕಾರ್ತೀಕ ಬಹುಳ ಪಾಡ್ಯಮಿ ಮಂಗಳವಾರದವರೆಗೆ ತುಂಗಾಭದ್ರಾ ಪವಿತ್ರ ಪುಷ್ಕರ ಸ್ನಾನ ಪರ್ವ ನಡೆಯಲಿದೆ.
*ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ
ಗುರು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿರುವ ಗುರು ಸಂಕ್ರಮಣ ಪುಣ್ಯಕಾಲದ ಪ್ರಯುಕ್ತ ಇದೇ ನವಂಬರ್ 20 ಕಾರ್ತೀಕ ಶುದ್ಧ ಷಷ್ಠಿ ಶುಕ್ರವಾರದಿಂದ ಡಿಸಂಬರ್ 1 ಕಾರ್ತೀಕ ಬಹುಳ ಪಾಡ್ಯಮಿ ಮಂಗಳವಾರದವರೆಗೆ ತುಂಗಾಭದ್ರಾ ಪವಿತ್ರ ಪುಷ್ಕರ ಸ್ನಾನ ಪರ್ವ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ತುಂಗಾಭದ್ರಾ ಪುಷ್ಕರ ಸ್ನಾನ ಘಟ್ಟ ಕ್ಷೇತ್ರಗಳ ಪರಿಚಯ ಇಲ್ಲಿದೆ.
೧. ತುಂಗಭದ್ರಾ ಸಂಗಮ ಕ್ಷೇತ್ರವಾದ ಕೂಡಲಿ: ಕೂಡಲಿ ಶಿವಮೊಗ್ಗ ಪಟ್ಟಣದಿಂದ ೧೮ ಕಿ.ಮೀ.ದೂರದಲ್ಲಿರುವ ಸುಮಾರು ೨೦೦ ಮನೆಗಳುಳ್ಳ ಒಂದು ಸಣ್ಣ ಹಳ್ಳಿಯಾದರೂ ಪವಿತ್ರ ನದಿಗಳ ಸಂಗಮ ಕ್ಷೇತ್ರವಾಗಿದೆ. ಕೂಡಲಿ ಶೃಂಗೇರಿ ಮಠ ಹಾಗೂ ನಿಲುವಾಂಬೆ ಶಾರದೆ ದೇವಾಲಯ ಹಾಗೂ ಪುರಾತನ ರಾಮೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ.
೨. ಉಕ್ಕಡಗಾತ್ರಿ ( ಅಜ್ಜಯ್ಯನ ಕ್ಷೇತ್ರ ) ದಾವಣಗೆರೆಜಿಲ್ಲೆಯ ಹರಿಹರ ತಾಲೂಕಿನ ಗುರು ಕರಿಬಸವೇಶ್ವರರ ಕ್ಷೇತ್ರ. ಇಲ್ಲಿ ಪ್ರವಾಸಿ ಸೌಕರ್ಯಗಳು ಲಭ್ಯವಿದೆ.
೩. ಹರಿಹರ: ಇದೇ ಪಟ್ಟಣದ ಹರಿಹರೇಶ್ವರ ದೇವಾಲಯದ ಹಿಂಭಾಗದಲ್ಲೇ ಸ್ನಾನ ಘಟ್ಟವಿದೆ..
೪. ಹಂಪಿ: ಪಂಪಾಪತಿ ವಿರೂಪಾಕ್ಷ ಕ್ಷೇತ್ರ. ಇಲ್ಲಿ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳೂ ಲಭ್ಯವಿದೆ.
೫. ಹುಲಿಗೆಮ್ಮ ಕ್ಷೇತ್ರ : ಇದು ಕಂಪ್ಲಿ ಬಳಿಯಿದ್ದು ಪ್ರವಾಸೀ ಸೌಲಭ್ಯಗಳು ಲಭ್ಯವಿದೆ. ೬.ಮಾರ್ಕಂಡೇಶ್ವರ ದೇವಾಲಯ, ಶಿವಪುರ್: ಇದು ಕೊಪ್ಪಳ ಜಿಲ್ಲಯಲ್ಲಿದೆ. ಹಂಪಿಯ ಆಚಿನ ದಡದ ಸಣ್ಣ ಹಳ್ಳಿ. ಪವಿತ್ರ ಕ್ಷೇತ್ರವಾಗಿದ್ದರೂ ಯಾವುದೇ ಸೌಲಭ್ಯಗಳಿಲ್ಲ.
೭. ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಹಿಂಭಾಗದಲ್ಲೇ ಸ್ನಾನ ಘಟ್ಟವಿದೆ ಹಾಗೂ ಯಾತ್ರಿಕರಿಗೆ ಸಕಲ ಸೌಲಭ್ಯಗಳೂ ಲಭ್ಯವಿದೆ.
೮. ದಕ್ಷಿಣ ಶಿರಡಿ ಕರ್ನೂಲು: ಇದು ಕರ್ನೂಲು ಪಟ್ಟಣಕ್ಕೆ ಅತ್ಯಂತ ಸಮೀಪವಿದ್ದು ಪಟ್ಟಣದಲ್ಲಿ ಪ್ರವಾಸಿ ಸೌಲಭ್ಯಗಳಿವೆ.
೯. ಸಂಗಮೇಶ್ವರ ದೇವಾಲಯ,ಕರ್ನೂಲು: ಇದು ಗುಡ್ಡಗಾಡು ಪ್ರದೇಶವಾಗಿದ್ದು ಯಾವುದೇ ಸೌಲಭ್ಯಗಳಿರುವುದಿಲ್ಲ. ಆದರೆ ಇದು ೭ ನದಿಗಳು ಸಂಗಮಿಸುವ ಪವಿತ್ರ ಕ್ಷೇತ್ರವಾಗಿದೆ. ಆಂಧ್ರಪ್ರದೇಶ ಸರ್ಕಾರ ತಾತ್ಕಾಲಿಕ ಸೌಲಭ್ಯಗಳನ್ನು ಕಲ್ಪಿಸುತ್ತದೆ.
೧೦. ಆಲಂಪುರ ಜೋಗುಳಾಂಬಾ ಕ್ಷೇತ್ರ: ಇದು ಶಕ್ತಿಪೀಠ ಕ್ಷೇತ್ರವಾಗಿದ್ದು, ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಸಂಗಮ ಕ್ಷೇತ್ರವಾಗಿದೆ.
ಪುಷ್ಕರ ಸ್ನಾನ ವಿಧಿ
ಮೊದಲು ಸಂಕಲ್ಪ ಮಾಡಿ ನದಿ ದೇವತೆಗೆ ಹಾಗೂ ಪುಷ್ಕರ ದೇವನಿಗೆ ನಮಸ್ಕರಿಸಿ ನಂತರ ಸ್ನಾನವನ್ನಾಚರಿಸಬೇಕು. ಸ್ನಾನದ ನಂತರ ಪಿತೃಕಾರ್ಯಕ್ಕೆ ಅಧಿಕಾರಿಗಳಾದವರು ಪಿಂಡಪ್ರದಾನ, ತರ್ಪಣಾದಿಗಳನ್ನು ಆಚರಿಸಬೇಕು. ನಂತರ ಯಥಾಶಕ್ತಿ (ದಶ ) ದಾನಗಳನ್ನು ನೀಡಬೇಕು. ನದಿ ದೇವತೆಗೆ ಬಾಗಿನವನ್ನು ಸಮರ್ಪಣೆ ಮಾಡಿ ಪುಷ್ಕರ ದೇವನನ್ನೂ ಪ್ರಾರ್ಥಿಸಿ ನಂತರ ಕ್ಷೇತ್ರ ದೇವತೆಯ ದರ್ಶನ ಪಡೆಯಬೇಕು.
ಪುಷ್ಕರ ಸ್ನಾನಕ್ಕೆ ಈ ಹನ್ನೆರಡು ದಿನಗಳೂ ಯಾವುದೇ ಸಮಯದ ನಿಯಮವಿರುವುದಿಲ್ಲ. ಬ್ರಾಹ್ಮಿ ಮುಹೂರ್ತದಿಂದ ಗೋಧೂಳಿ ವಿಜಯಾ ಮುಹೂರ್ತದ ಒಳಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನಾನವನ್ನು ಆಚರಿಸಬಹುದು. ರಾತ್ರಿ ಸ್ನಾನ ಆಚರಿಸಬಾರದು. ತಮ್ಮ ಸ್ನಾನದ ಸಮಯಕ್ಕೆ ತಕ್ಕಂತೆ ಸಂಕಲ್ಪದಲ್ಲಿ ಪ್ರಾತಃ ಸಂಧ್ಯಾ ಸ್ನಾನ ಅಥವಾ ಮಾಧ್ಯಾಹ್ನಿಕ ಸಂಧ್ಯಾ ಸ್ನಾನ ಅಥವಾ ಸಾಯಂ ಸಂಧ್ಯಾ ಸ್ನಾನಂ ಎಂದು ಹೇಳಿಕೊಳ್ಳಬೇಕು.
ಪುಷ್ಕರ ದೇವತಾ ಸಮೇತ ಗಂಗಾಭಾಗೀರಥಿ ಸ್ವರೂಪಿಣಿ ತುಂಗಭದ್ರಾ ಕೃಪಾಶೀರ್ವಾದ ಸಿದ್ದಿರಸ್ತು.
ಲೇಖಕರು: ಮಾಚರ್ಲ ಕೇಶವಮೂರ್ತಿ ಭಾರ್ಗವಾಚಾರ್ಯ, ಧರ್ಮಾಧಿಕಾರಿ ಶ್ರೀಮದ್ ದತ್ತಾತ್ರೇಯ ಆಶ್ರಮ ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.