ಈ ದೀಪಾವಳಿ ಹಬ್ಬಕ್ಕೆ ಮನೆಯಲ್ಲೇ ಮಾಡಬಹುದಾದ ಸಿಹಿತಿನಿಸುಗಳ ರೆಸಿಪಿಯನ್ನು ಇಲ್ಲಿ ನೀಡಿದ್ದಾರೆ ಬೆಂಗಳೂರಿನ ಪಾಕಪ್ರವೀಣೆ ಶ್ರೀಮತಿ ವೇದಾವತಿ ಎಚ್.ಎಸ್.
ಸಿಹಿತಿನಿಸುಗಳು ಇಲ್ಲದೇ ಯಾವ ಹಬ್ಬಗಳೂ ಸಂಪನ್ನಗೊಳ್ಳುವುದೇ ಇಲ್ಲ. ಅವುಗಳು ಹಬ್ಬಕ್ಕೆ ಮತ್ತಷ್ಟು ಸಂಭ್ರಮವನ್ನು ನೀಡುತ್ತದೆ.
ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಮೂರು ದಿನಗಳ ಕಾಲ ಮತ್ತು ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ಆಚರಿಸುತ್ತಾರೆ. ದೀಪಗಳ ಹಬ್ಬ ದೀಪಾವಳಿಯಂದು ಹೊಸ್ತಿಲಿನಲ್ಲಿ ಬಣ್ಣದ ಬಣ್ಣದ ರಂಗೋಲಿಗಳನ್ನಿಟ್ಟು, ಹಣತೆ ಹಚ್ಚಿ, ಪಟಾಕಿ ಸಿಡಿಸಿ ದೀಪದ ಬೆಳಕಿನಲ್ಲಿ ಸಂಭ್ರಮಿಸಿದರೆ ಸಾಕೇ? ಸಿಹಿ ಹಂಚಿ ಸಂಭ್ರಮಿಸುವುದು ಬೇಡವೇ? ಅದಕ್ಕೆ ಮನೆಯಲ್ಲೇ ಮಾಡಿ ಸವಿಯಬಹುದಾದ ಸಿಹಿತಿನಿಸುಗಳ ರೆಸಿಪಿ ಇಲ್ಲಿದೆ.
ಬಾದುಷಾ
ಬೇಕಾಗುವ ಸಾಮಗ್ರಿ: ಮೈದಾ 150ಗ್ರಾಂ, ವನಸ್ಪತಿ 75 ಗ್ರಾಂ, ಅಡುಗೆ ಸೋಡಾ ಚಿಟಿಕೆ, ಸಕ್ಕರೆ 3/4 ಕಪ್, ನೀರು 1/2 ಕಪ್, ಬಾದಾಮಿ ಮತ್ತು ಪಿಸ್ತಾ ಚೂರು ಸ್ವಲ್ಪ. ಎಣ್ಣೆ ಅಥವಾ ವನಸ್ಪತಿ ಕರಿಯಲು. ಒಂದು ಸಮತಳದ ತಟ್ಟೆಯಲ್ಲಿ ವನಸ್ಪತಿ ಮತ್ತು ಅಡುಗೆ ಸೋಡಾ ಹಾಕಿ ಅಂಗೈಯಲ್ಲಿ ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ ನೊರೆ ಬರುವರೆಗೆ ಉಜ್ಜಿ.
ಇದು ಪದರದಂತೆ ಬಂದಾಗ ಮೈದಾವನ್ನು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ನೀರನ್ನು ಹಾಕಿ ಮೃದುವಾದ ಹಿಟ್ಟಿನಂತೆ ಮಾಡಿಕೊಳ್ಳಿ. ಅದನ್ನು ನಾದಿಕೊಳ್ಳಬಾರದು. ನಂತರ ಒದ್ದೆ ಬಟ್ಟೆಯಿಂದ ಐದು ನಿಮಿಷಗಳ ಕಾಲ ಮುಚ್ಚಿಡಿ. ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಎಲ್ಲಾ ಉಂಡೆಗಳನ್ನು ಚಪ್ಪಟೆಯಾಗಿ ತಟ್ಟಿಕೊಳ್ಳಿ. ಅದರ ನಡುವೆ ಒಂದು ತೂತು ಮಾಡಿ. ಎಲ್ಲಾ ಉಂಡೆಗಳನ್ನು ಹಾಗೆ ಮಾಡಿದ ನಂತರ ಮುಚ್ಚಿಡಿ. ಒಂದು ಬಾಣಲೆಯಲ್ಲಿ ವನಸ್ಪತಿಯನ್ನು ಬಿಸಿ ಮಾಡಿ. ಸಣ್ಣ ಉರಿಯಲ್ಲಿ ಬಾದುಷಾಗಳನ್ನು ಕೆಂಬಣ್ಣ ಬರುವವರೆಗೆ ಕರಿಯಿರಿ. ಎರಡು ಕಡೆ ಕೆಂಬಣ್ಣ ಬಂದಾಗ ಎಣ್ಣೆಯಿಂದ ತೆಗೆದು ತಟ್ಟೆಯಲ್ಲಿ ಜೊಡಿಸಿ. ಇನ್ನೊಂದು ಬಾಣಲೆಯಲ್ಲಿ ಸಕ್ಕರೆ, ನೀರು ಹಾಕಿ ಒಂದೆಳೆ ಪಾಕ ತಯಾರಿಸಿ. ಒಲೆಯಿಂದ ಇಳಿಸಿ. ಪಾಕ ತಣ್ಣಗಾದ ನಂತರ ಬಾದುಷಾವನ್ನು ಅದರಲ್ಲಿ ಮುಳುಗಿಸಿ. ಪಾಕ ಎರಡು ಕಡೆ ಚೆನ್ನಾಗಿ ಹೀರಿಕೊಂಡ ನಂತರ ಒಂದು ತಟ್ಟೆಯಲ್ಲಿ ಜೋಡಿಸಿ ಪಿಸ್ತಾ ಮತ್ತು ಬಾದಾಮಿ ಚೂರುಗಳನ್ನು ಹಾಕಿ ಅಲಂಕರಿಸಿ.
ನೆವ್ರಿ
ನೋಡಲು ಕರ್ಜಿಕಾಯಿಯಂತೆ ಕಾಣುವ ಈ ಸಿಹಿತಿನಿಸು ಕೊಂಕಣಿ ಸಮುದಾಯದವರು ತಯಾರಿಸುವ ಸಿಹಿ ಖಾದ್ಯ. ಇದು ಮಹಾರಾಷ್ಟದವರ ಕರಂಜಿ, ಉತ್ತರ ಪ್ರದೇಶದಲ್ಲಿ ಪ್ರಸಿದ್ಧಿಯಾಗಿರುವ ಗುಜಿಯಾ ಸಿಹಿ ತಿನಿಸಿನಂತೆ ಕಾಣಿಸುತ್ತದೆ. ಬಾದಾಮಿ ಹಾಗೂ ಕೊಬ್ಬರಿ ತುರಿಯ ಹೂರಣವನ್ನು ಒಳಗೊಂಡಿರುತ್ತದೆ.
ಬೇಕಾಗುವ ಸಾಮಗ್ರಿಗಳು ಒಂದು ಕಪ್ ಗೋಧಿ ಹಿಟ್ಟು, ತುಪ್ಪ ಅಥವಾ ಎಣ್ಣೆ ಎರಡು ಚಮಚ, ಕಾಲು ಕಪ್ ನೀರು, ಉಪ್ಪು ರುಚಿಗೆ.
ಹೂರಣ ತಯಾರಿಸಲು: ತುಪ್ಪ ಒಂದು ಚಮಚ, ತೆಂಗಿನ ತುರಿ ೧ಕಪ್, ಬೆಲ್ಲದ ಪುಡಿ ಅರ್ಧ ಕಪ್, ಏಲಕ್ಕಿ ಪುಡಿ ಸ್ವಲ್ಪ, ಗೋಡಂಬಿ ಎಂಟು.
ಗೋಧಿ ಹಿಟ್ಟಿಗೆ ಉಪ್ಪು ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ. ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಗೋಧಿ ಹಿಟ್ಟು ಮಿಶ್ರಣವನ್ನು ಹಾಕಿ ತುಪ್ಪದೊಂದಿಗೆ ಮಿಶ್ರಣ ಮಾಡಿ. ನಂತರ ಅದಕ್ಕೆ ಕಾಲು ಕಪ್ ನೀರು ಹಾಕಿ ನಾದಿಕೊಳ್ಳಿ. ತುಂಬಾ ಮೃದುವಾಗಬಾರದು ಅಥವಾ ತುಂಬಾ ಗಟ್ಟಿಯಾಗಬಾರದು. ನಾದಿದ ಮಿಶ್ರಣದ ಪಾತ್ರೆಯನ್ನು ಬಟ್ಟೆಯಿಂದ ಸುತ್ತಿಡಿ. ಒಂದು ಪಾತ್ರೆಯಲ್ಲಿ ಒಂದು ಚಮಚ ತುಪ್ಪವನ್ನು ಬಿಸಿ ಮಾಡಿಕೊಂಡು ಅದಕ್ಕೆ ತೆಂಗಿನತುರಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಹೋಳು, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹೂರಣ ತಯಾರಿಸಿಕೊಳ್ಳಿ. ನಾದಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿಸಿ, ಲಟ್ಟಿಸಿ ಅದರೊಳಗೆ ಹೂರಣವನ್ನು ತುಂಬಿ ಮಡಿಚಿ. ಎಣ್ಣೆಯಲ್ಲಿ ಕರಿಯಿರಿ.