ಪ್ರತಿದಿನ ನಮ್ಮ ಜೀವನಶೈಲಿ ಈ ರೀತಿ ಇದ್ದರೆ ನವಗ್ರಹಗಳ ಪ್ರಭಾವ ಹೇಗಾಗುತ್ತದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ರವಿಯ ಅನುಗ್ರಹ : ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ ‘ಡಿ’ ಮತ್ತು ‘ಇ’ ಪ್ರೋಟೀನ್ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ.
ಚಂದ್ರನ ಅನುಗ್ರಹ : ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.
ಕುಜನ ಅನುಗ್ರಹ : ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ ‘ಅನ್ನಂ ಬ್ರಹ್ಮ’ ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು.
ಬುಧನ ಅನುಗ್ರಹ: ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು.
ಗುರುವಿನ ಅನುಗ್ರಹ : ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. ‘ಕೋಶ ಓದಬೇಕು ಲೋಕ ಸುತ್ತಬೇಕು’ ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು.
ಶುಕ್ರನ ಅನುಗ್ರಹ: ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು.
ಶನಿಯ ಅನುಗ್ರಹ: ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು.
ರಾಹುವಿನ ಅನುಗ್ರಹ : ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ. *ಕೇತುವಿನ ಅನುಗ್ರಹ* : ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.
(ಸಂಗ್ರಹ: ಹೆಚ್ ಎಸ್ ರಂಗರಾಜನ್)