ಪವಾಡ ಪುರುಷ ಜಡಿ ಸಿದ್ಧೇಶ್ವರರ ಪುಣ್ಯಕ್ಷೇತ್ರ ಸುಣಧೋಳಿ

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುಣಧೋಳಿ ಪುಟ್ಟ ಗ್ರಾಮ. ಈ ಗ್ರಾಮದ ಆರಾಧ್ಯ ದೈವ ಜಡಿ ಸಿದ್ದೇಶ್ವರ. ವಿಶೇಷವೆಂದರೆ ಜಾತ್ರೆಯ ದಿನದಂದು ರಥ ತನ್ನಿಂತಾನೇ ಹಗ್ಗವಿಲ್ಲದೇ ಚಲಿಸುವುದು.

  • ವೈ.ಬಿ.ಕಡಕೋಳ

ಗೋಕಾಕದಿಂದ 30 ಕಿ.ಮೀ. ಕುಲಗೋಡದಿಂದ 14, ತಿಗಡಿ ಗ್ರಾಮದಿಂದ 13 ಕಿ.ಮೀ ಅಂತರದಲ್ಲಿದೆ ಗೋಕಾಕದಿ0ದ ಈ ಗ್ರಾಮದವರೆಗೂ ಬಸ್ ಸೌಕರ್ಯವುಂಟು. ಗೋಕಾಕ ರಾಮದುರ್ಗ, ಲೋಕಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳಲ್ಲಿ ಕೂಡ ಸುಣಧೋಳಿ ಕ್ರಾಸ್ ವರೆಗೂ ಬರಬಹುದು. ಅಲ್ಲಿಂದ 3 ಕಿ.ಮೀ ಆಟೋ ಅಥವಾ ಬಸ್‌ಗಳಲ್ಲಿ ಈ ಊರು ತಲುಪಬಹುದು.
ಜಡಿಸಿದ್ದೇಶ್ವರ ದೇವಾಲಯ ಹತ್ತಿರವೇ ಬಸ್ ನಿಲುಗಡೆ ಉಂಟು ಅಲ್ಲಿಂದ ಕಾಲ್ನಡಿಗೆಯಲ್ಲಿ ನಡೆದು ಬಂದರೆ ಮಹಾದ್ವಾರವುಳ್ಳ ಹಲವು ದೇಗುಲ ಹೊಂದಿದ ಪುರಾತನ ದೇವಾಲಯ ಕಾಣುವುದು. ಒಳಗೆ ಬಂದರೆ ದೇವಾಲಯ ಅದರ ಎದುಗಿರುವ ದೀಪಮಾಲಿಕಾ ಸ್ಥಂಭ. ಪ್ರಸಾದನಿಲಯ, ಮಠದ ಆವರಣ, ಅಲ್ಲೊಂದು ದೇಗುಲ. ದೇವಾಲಯ ಪಕ್ಕದಲ್ಲಿ ಘಟಪ್ರಭಾ ನದಿ ಹೀಗೆ ಇಲ್ಲಿನ ಪರಿಸರ ಕಂಗೊಳಿಸುತ್ತದೆ. ದೇವರ ದರ್ಶನ ಪಡೆದು ಸ್ವಾಮೀಜಿಗಳಿಗೆ ಭೇಟಿಯಾಗಿ, ಜೊತೆಗೆ ಪ್ರಸಾದನಿಲಯದಲ್ಲಿ ಊಟದ ವ್ಯವಸ್ಥೆಯಿದೆ ಮಾಡಬಹುದು.

ಈ ಕರ್ತೃ ಗದ್ದುಗೆ ಕುರಿತು ಹಾಗೂ ರಥೋತ್ಸವ ಕುರಿತು ದೃಷ್ಟಾಂತವೊಂದಿದೆ. ಸುಮಾರು 400 ವರ್ಷಗಳ ಹಿಂದೆ ಒಬ್ಬ ದೈವಾಂಶ ಸಂಭೂತವ್ಯಕ್ತಿ ಸುಣಧೋಳಿ ಗ್ರಾಮದ ಹತ್ತಿರಬೈರನಟ್ಟಿ ಎಂಬಲ್ಲಿ ಬಂದು ನದಿದಂಡೆಯಲ್ಲಿ ವಾಸಗೈದು ತದ ನಂತರ ಸುಣಧೋಳಿಗೆ ಬರುವಾಗ ಮಾರ್ಗಮದ್ಯದಲ್ಲಿ ಒಂದು ಹೊಲ(ಗದ್ದೆ)ದಲ್ಲಿ ಹಸಿವೆಯಾಗಿ ರೊಟ್ಟಿ ಬೇಡಿದನಂತೆ ಆಗ ಆ ಹೊಲದವನು “ಒಬ್ಬಂಟಿಗನಾದ ನನ್ನಲ್ಲಿ ಏನೂ ಇಲ್ಲ” ಎನ್ನಲು. ಈತ “ಒಳಗೆ ಗುಡಿಸಲಿನಲ್ಲಿ ರೊಟ್ಟಿ ಬಳ್ಳೊಳ್ಳಿ, ಖಾರ ಇಟ್ಟಿಲ್ಲವೇ ಅದನ್ನು ಸ್ವಲ್ಪ ತಂದು ಕೊಡು” ಎನ್ನಲು, ಆತನಿಗೆ ಸೋಜಿಗ ಮರುಮಾತಾಡದೇ ಅವನಿಗೆ ತನ್ನಲ್ಲಿದ್ದ ರೊಟ್ಟಿ ಖಾರ ಕೊಟ್ಟು ಉಪಚರಿಸಿದನಂತೆ. ಆತ ಆ ದಿನ ರಾತ್ರಿಯಿಡೀ ಹೊಲದವನೊಡನೆ ಕಾವಲುಗಾರನ ಕೆಲಸ ನಿರ್ವಹಿಸಿ ಮರುದಿನ ಸುಣಧೋಳಿಯತ್ತ ಬಂದು ಘಟಪ್ರಭ ನದಿ ದಡದಲ್ಲಿ ವಾಸಮಾಡತೊಡಗಿದನಂತೆ.
ದಿನವೂ ಗ್ರಾಮದಲ್ಲಿ ಸಂಚರಿಸುತ್ತ ಒಂದಲ್ಲ ಒಂದು ಪವಾಡಗೈಯುತ್ತ ಜನರಲ್ಲಿ ಪವಾಡಪುರುಷನಾಗತೊಡಗಿದ. ಇವನ ಬಗ್ಗೆ ಜನರಿಗೂ ಕೂಡ ಭಕ್ತಿಭಾವ ಉಂಟಾಗತೊಡಗಿತು. ಒ0ದು ದಿನ ಜಡೆಯಪ್ಪ ನಾಲ್ಕು ಜನರೊಡನೆ ನದಿ ದಡದಲ್ಲಿ ಪಗಡೆ ಆಟ ಆಡುತ್ತ ಕುಳಿತಿರಲು ಓರ್ವ ಸ್ತ್ರೀ ನೀರು ತರಲೆಂದು ನದಿ ದಡಕ್ಕೆ ಹೋಗಿದ್ದವಳು ಚಿಟ್ಟನೇ ಚೀರುತ್ತ ಭಯಭೀತಳಾಗಿ ಓಡಿ ಬರಲು ಕಾರಣ ಕೇಳಿದ ಜಡೆಯಪ್ಪ ಅವಳು ಹಾವೊಂದನ್ನು ಕಂಡು ಭಯಭಿತಳಾಗಿದ್ದನ್ನು ಕೇಳಿ ತಾನೇ ಸ್ವತಃ ಆ ಸ್ಥಳಕ್ಕೆ ಹೋಗಿ ಬೃಹದಾಕಾರದ ಭಯಂಕರ ಸರ್ಪವನ್ನು ಕೈಯಲ್ಲಿ ಎತ್ತಿ ಹಿಡಿದನಂತೆ. ಆ ಹಾವು ಆಗ ಅವನಿಗೆ ಕಚ್ಚಲು, ನಸುನಗುತ್ತ ಅಲ್ಲಿ ನೆರೆದಿದ್ದ ಜನರಿಗೆ “ನನ್ನ ಅವಧಿ ಇಂದಿಗೆ ಮುಗಿಯಿತು, ಇನ್ನು ನನ್ನ ಶವಸಂಸ್ಕಾರ ಇದೇ ಸ್ಥಳದಲ್ಲಿ ಮಾಡಿರಿ, ಐದನೆಯ ದಿನಕ್ಕೆ ಈ ಸ್ಥಳ ಅಗೆದು ನೋಡಿರಿ’ ಎಂದು ಹೇಳಿ ದೇಹತ್ಯಾಗ ಮಾಡಿದನಂತೆ. ಆ ಪ್ರಕಾರ ಅಲ್ಲಿ ಅಂತ್ಯಸ0ಸ್ಕಾರ ನೆರವೇರಿಸಲಾಯಿತು.
ಇವರ ನುಡಿಗಳನ್ನು ಕೇಳಿದ್ದ ಜನಕ್ಕೆ ಕುತೂಹಲ ತಡೆಯಲಾರದೇ ಆ ಸಮಾಧಿ ನಾಲ್ಕನೆಯ ದಿನ ಅಗೆಯಲು, ಅಲ್ಲಿ ಲಿಂಗ, ವಿಭೂತಿ, ಬೆತ್ತ ಇತ್ಯಾದಿ ಇದ್ದು ಮನುಷ್ಯ ಶರೀರದ ಅವಯವದ ಯಾವ ಗುರುತುಗಳಿರದಿದ್ದುದನ್ನು ಕಂಡು ನಿಜಕ್ಕೂ ಇವನು ದೇವರ ಸ್ವರೂಪ ಎಂದುಕೊoಡು ಅವನ ಹೆಸರಲ್ಲಿ ಕರ್ತೃ ಗದ್ದುಗೆ ನಿರ್ಮಿಸಿ ದೇವಾಲಯ ಕಟ್ಟಿಸಿ ನಿತ್ಯವೂ ಆ ಗದ್ದುಗೆಯನ್ನು ಪೂಜಿಸತೊಡಗಿದರು. ಅಷ್ಟೇ ಅಲ್ಲ ಜಡೆಯಪ್ಪನ ಹೆಸರಲ್ಲಿ ದವನದ ಹುಣ್ಣಿಮೆ ಆದ ನಾಲ್ಕನೆಯ ದಿನಕ್ಕೆ ರಥೋತ್ಸವ ಜರುಗಿಸುತ್ತ ಬರತೊಡಗಿದರು.
ಮೊದಲು ಈ ರಥವನ್ನು ಹಗ್ಗ ಬಳಸಿಯೇ ಎಳೆಯುತ್ತಿದ್ದರಂತೆ ಆಗ ಬ್ರಿಟಿಷ ಆಡಳಿತದ ಕಾಲ, ಈ ರಥವು ಮಾಮೂಲಿ ರಥೋತ್ಸವದಂತೆ ಹಗ್ಗ ಬಳಸಿಯೇ ಎಳೆಯುವ ವಾಡಿಕೆ. ಒಂದು ಸಲ ಈ ಭಾಗ ಪ್ಲೇಗ್ ರೋಗಕ್ಕೆ ತುತ್ತಾಗಿ ಅಪಾರ ಜನರ ಸಾವುಗಳಿಗೆ ಕಾರಣವಾದ ಸಂದರ್ಭ ಅದೇ ವರ್ಷ ಈ ಜಾತ್ರೆ ಬಂದಾಗ ಬ್ರಟಿಷರು ಜನರು ಜಾತ್ರೆ ಎಂದುಕೊ0ಡು ವಿವಿಧ ಭಕ್ಷಭೋಜನದಲ್ಲಿ ತೊಡಗಿ ರೋಗ ಉಲ್ಬಣವಾಗಬಹುದು ಎಂದುಕೊ0ಡು ಆ ವರ್ಷದ ರಥೋತ್ಸವ ಜಾತ್ರೆಗೆ ಅವಕಾಶ ನೀಡಲಿಲ್ಲ.

ಆಗ ಹಿರಿಯರು ವರ್ಷ ವರ್ಷ ಜಾತ್ರೆ ಮಾಡುತ್ತ ಬಂದಿದ್ದೇವೆ. ಈ ವರ್ಷ ರಥೋತ್ಸವ ಸಮಯಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೊಡಿ ಎಂದು ಬ್ರಿಟಿಷ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರ0ತೆ, ಆಗ ಬ್ರಿಟಿಷ್ ಅಧಿಕಾರಿಗಳು ಒಪ್ಪಲು, ಜಾತ್ರೆಯ ದಿನ ಸಂಪ್ರದಾಯದ0ತೆ ಗ್ರಾಮದ ಮುಖಂಡರು ಪೂಜಾರಿಯೊಂದಿಗೆ ರಥದ ಬಳಿ ತೆರಳಿ ಪೂಜೆ ಸಲ್ಲಿಸಿ ಕರ್ಪೂರ ಬೆಳಗಿ ಕಾಯಿ ಒಡೆದು “ಹರಹರ ಮಹಾದೇವ” ಎನ್ನಲು ಈ ರಥ ಚಲಿಸತೊಡಗಿತಂತೆ. ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ, ರಥ ಪ್ರತಿ ವರ್ಷವೂ ಯಾವ ಸ್ಥಳದವರೆಗೂ ಎಳೆಯಲ್ಪಡುತ್ತಿತ್ತೋ ಆ ಸ್ಥಳದವರೆಗೂ ತನ್ನಷ್ಟಕ್ಕೆ ತಾನೇ ಚಲಿಸಿ ಬಂದು ಮೊದಲಿನ ಸ್ಥಳದಲ್ಲಿ ನಿಲ್ಲಲು ಈ ಪವಾಡ ಎಲ್ಲೆಡೆ ಹರಡಿತು.
ಅಂದಿನಿ0ದ ಇಂದಿನವರೆಗೂ ಪ್ರತಿವರ್ಷವೂ ಈ ರಥ ತನ್ನಷ್ಟಕ್ಕೆ ತಾನೇ ಚಲಿಸುತ್ತಿದ್ದು ದಾಖಲಾರ್ಹ ಸಂಗತಿ. ಪ್ರತಿವರ್ಷ ದವನದ ಹುಣ್ಣಿಮೆ ಆದ ನಾಲ್ಕನೆಯ ದಿನ ಈ ರಥೋತ್ಸವವು ವಿಜೃಂಭಣೆಯಿ0ದ ಸಾವಿರಾರು ಭಕ್ತ ಸಮೂಹದೊಂದಿಗೆ ವಿವಿಧ ಗ್ರಾಮಗಳ ಡೊಳ್ಳು , ಹೆಜ್ಜೆಮೇಳ, ಪಲ್ಲಕ್ಕಿ ಉತ್ಸವದೊಂದಿಗೆ ಜರುಗುವುದು. ಎಲ್ಲ ಜಾತ್ರೆಗಳಲ್ಲಿ ರಥ ಚಲಿಸುವಾಗ ಬಾಳೆ ಹಣ್ಣು ಅದರ ಕಳಶಕ್ಕೆ ಎಸೆಯುವ ವಾಡಿಕೆ ಇದ್ದರೆ ಇಲ್ಲಿ ಮಾತ್ರ ತೆಂಗಿನ ಕಾಯಿ ಎಸೆಯುವ ಮೂಲಕ ಹರಹರ ಮಹಾದೇವ ಎಂಬ ಜೈಕಾರ ಹಾಕುತ್ತಾ ಭಕ್ತಿಸಮರ್ಪಿಸುವುದು ವಾಡಿಕೆ. ರಥ ತನ್ನಿಂದ ತಾನೇ ಎಳೆಯುವ ದೃಶ್ಯ ನೋಡಲೆಂದು ಗೋಕಾಕ ಮೂಡಲಗಿ ಬೆಳಗಾವಿ ಕೊಲ್ಲಾಪುರ, ಪುಣೆ, ಜಮಖಂಡಿ ಹೀಗೆ ನಾಡಿನ ವಿವಿಧ ಭಾಗಗಳಿಂದ ಜನ ಆಗಮಿಸಿ ಎಲ್ಲಿ ನೋಡಿದಲ್ಲೂ ಭಕ್ತ ಜನಸಾಗರ. ವರ್ಷದಿಂದ ವರ್ಷಕ್ಕೆ ಜನಸಾಗರ ಈ ಕ್ಷಣ ನೋಡಲು ಅಪಾರ ಸಂಖ್ಯೆಯಲ್ಲಿ ಹರಿದು ಬರುತ್ತಿರುವುದು.
ಈ ದೇವಾಲಯದಲ್ಲಿ ನಿತ್ಯವೂ ದೇವರಿಗೆ ರುದ್ರಾಭೀಷೇಕ ಪೂಜೆಯು ಜರುಗುತ್ತಿರುವುದು. ಪ್ರತಿ ಹುಣ್ಣಿಮೆಯಂದು ಶಿವಾನುಭವವು ಇಲ್ಲಿನ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಜರುಗುವ ಜೊತೆಗೆ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳು, ಶಿವರಾತ್ರಿಯಂದು “ಓಂ ನಮ: ಶಿವಾಯ” ಎನ್ನುತ್ತ ಐದು ದಿನ ಜಾಗರಣೆ ಕರ‍್ಯಕ್ರಮ ಜರುಗಿಸುವ ಮೂಲಕ ಭಕ್ತಿಭಾವ ಸಮರ್ಪಿತವಾಗುತ್ತಿದ್ದು,ಭಕ್ತರು ತಮ್ಮ ಇಷ್ಟಾರ್ಥದಂತೆ ಇನ್ನು ಅನೇಕ ವಿಧದ ಪೂಜಾ ಕಾರ್ಯಗಳನ್ನು ಸಮರ್ಪಿಸುತ್ತಿದ್ದು, ನಿತ್ಯವೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗುವ ಜೊತೆಗೆ ಜಾತ್ರೆಯಂದು ವಿಶೇಷ ಅನ್ನಸಂತರ್ಪಣೆ ದೇವಾಲಯ ಆವರಣದಲ್ಲಿ ಜರುಗುವುದು. ಇಂಥ ಜಡೆಸಿದ್ದೇಶ್ವರ ದೇವಾಲಯಕ್ಕೆ ನೀವೂ ಒಮ್ಮೆ ಬನ್ನಿ.

ಈ ದೇವಾಲಯದಲ್ಲಿ ನಿರಂತರ ರುದ್ರಾಭಿಷೇಕಕ್ಕೆಂದು 501 ರೂ ಹಾಗೂ 1001 ರೂ ಗಳನ್ನು ಡಿಪಾಜಿಟ್ ರೂಪದಲ್ಲಿ ಪಡೆದು ಸರತಿ ಪ್ರಕಾರ ನಿತ್ಯವೂ ಅಭಿಷೇಕ ಜರುಗಿಸುತ್ತಿದ್ದು, ಹೊರಗಿನ ಭಕ್ತ ಜನರು ಕೂಡ ಅಭಿಷೇಕ ಮಾಡಿಸುವುದಾದದಲ್ಲಿ ಕನಿಷ್ಠ ೧೦೧ ರೂ ನೀಡುವ ಮೂಲಕ ಅಭಿಷೇಕ ಮಾಡಿಸುವರು. ಇನ್ನುಳಿದಂತೆ ವಾಹನ ಪೂಜೆ. ಜವುಳ ಇಳಿಸುವುದು ಇತ್ಯಾದಿ ಕಾರ‍್ಯಕ್ರಮಗಳಿಗೆ ಭಕ್ತಿಯ ಕಾಣಿಕೆ ಮಾತ್ರ ಸ್ವೀಕರಿಸುವರು ಇವುಗಳಿಗೆ ನಿಗದಿತ ದರ ನಿಗದಿಪಡಿಸಿರುವುದಿಲ್ಲ, ಈ ದೇವಾಲಯದಲ್ಲಿ ಭಕ್ತರಿಗೆ ನಿತ್ಯವೂ ಅನ್ನದಾಸೋಹ ಇರುವುದು.

ಹೋಗುವುದು ಹೀಗೆ: ಬೆಳಗಾವಿ ಜಿಲ್ಲೆ ಗೋಕಾಕಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ರೈಲು ಅನುಕೂಲವಿದೆ. ಗೋಕಾಕದಿಂದ ಸುಣಧೋಳಿಗೆ ನೇರವಾಗಿ ಬಸ್ ಸಂಚಾರವಿದ್ದು, ರಾಮದುರ್ಗ, ಕುಲಗೋಡ ಇತ್ಯಾದಿ ಸ್ಥಳಗಳಿಗೆ ಚಲಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಕೂಡ ಸುಣಧೋಳಿ ಕ್ರಾಸ್ ಮೂಲಕ ಚಲಿಸುತ್ತವೆ. ಅಲ್ಲಿಂದ ಕೂಡ ತೆರಳಲು ಅನುಕೂಲವಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles