ಒಮ್ಮೆ ಕೃಷ್ಣಾರ್ಜುನರು ಹೀಗೇ ಸಂಚರಿಸುತ್ತಿರುವಾಗ ಭಿಕ್ಷುಕನೊಬ್ಬನನ್ನು ನೋಡುತ್ತಾರೆ. ಅರ್ಜುನ ಮರುಕಪಟ್ಟು ಒಂದು ಚೀಲ ತುಂಬ ಚಿನ್ನದ ನಾಣ್ಯ ಕೊಟ್ಟು “ಇದರಿಂದ ನಿನ್ನ ಜೀವನ ರೂಪಿಸಿಕೋ, ಇನ್ನೆಂದೂ ಭಿಕ್ಷೆ ಎತ್ತಬೇಡ’ ಎನ್ನುತ್ತಾನೆ.
ಬಡವ ಖುಷಿಯಿಂದ ದಾರಿಯಲ್ಲಿ ಬರುತ್ತಿರುವಾಗ ಇನ್ನೊಬ್ಬ ಭಿಕ್ಷೆ ಕೇಳಿ ಇವನತ್ತ ಕೈಚಾಚುತ್ತಾನೆ. ಆದರೆ ಚಿನ್ನದ ನಾಣ್ಯದ ಗಂಟೇ ಸಿಕ್ಕಿದ್ದರಿಂದ ಅಹಂಕಾರಗೊಂಡಿದ್ದ ಈತ ನಿರ್ಲಕ್ಷ್ಯದಿಂದ ಮುಂದೆ ಸಾಗಿದ. ಅಷ್ಟರಲ್ಲಿ ಅದೆಲ್ಲಿಂದಲೋ ಓಡಿಬಂದ ಕಳ್ಳನೊಬ್ಬ ಈತನ ಚೀಲವನ್ನು ಕಸಿದುಕೊಂಡು ಪರಾರಿಯಾದ. ಈತನೀಗ ಮತ್ತೆ ಬಡವ. ಆತ ಮರುದಿನ ಅದೇ ಜಾಗದಲ್ಲಿ ಭಿಕ್ಷೆ ಬೇಡಲಾರಂಭಿಸುತ್ತಾನೆ.
ಅರ್ಜುನ ಪುನಃ ಅದೇ ದಾರಿಯಲ್ಲಿ ಬಂದಾಗ ಆತ ಭಿಕ್ಷೆ ಬೇಡಿದ್ದನ್ನು ಕಂಡು ಕಾರಣ ಕೇಳುತ್ತಾನೆ. ಬಡವ ಎಲ್ಲವನ್ನೂ ವಿವರಿಸಿದಾಗ, ಅರ್ಜುನ ಆತನಿಗೆ ವಜ್ರವೊಂದನ್ನು ಕೊಟ್ಟು ‘ಇದನ್ನು ಮಾರಿ ಬಂದ ಹಣದಲ್ಲಿ ನಿನ್ನ ಜೀವನ ಭದ್ರಪಡಿಸಿಕೋ’ ಎಂದ.
ಬಡವ ವಜ್ರವನ್ನು ಹಿಡಿದು ಬರುತ್ತಿರುವಾಗ ಮತ್ತೆ ದಾರಿಯಲ್ಲೊಬ್ಬ ಭಿಕ್ಷುಕ ಅಂಗಲಾಚುತ್ತಾನೆ. ಆದರೆ ಈ ಸಲವೂ ಸಹಾಯ ಮಾಡಲಿಲ್ಲ. ಮನೆ ಸೇರಿ, ವಜ್ರವನ್ನು ನೀರಿನ ಬಿಂದಿಗೆಯೊಳಗೆ ಬಚ್ಚಿಟ್ಟು ನಿದ್ರೆಗೆ ಜಾರುತ್ತಾನೆ. ಇದನ್ನರಿಯದ ಆತನ ಹೆಂಡತಿ ಹೊಳೆಗೆ ಹೋಗಿ ಬಿಂದಿಗೆಯನ್ನು ನೀರಿನಲ್ಲಿ ತೊಳೆದು ನೀರು ತರುತ್ತಾಳೆ. ಆ ವಜ್ರವನ್ನು ಮೀನೊಂದು ನುಂಗುತ್ತದೆ. ಎಚ್ಚರವಾದಾಗ ಬಡವ ವಿಷಯ ತಿಳಿದು ತನ್ನ ದುರದೃಷ್ಟಕ್ಕೆ ಹಳಿದುಕೊಂಡು ಪುನಃ ಭಿಕ್ಷೆಗಿಳಿಯುತ್ತಾನೆ.
ಆತನನ್ನು ಕಂಡು ಅರ್ಜುನನಿಗೆ ಆಶ್ಚರ್ಯವಾಗುತ್ತದೆ. “ಈ ಬಡವ ಜೀವನದಲ್ಲಿ ಸುಖವಾಗಿರಲು ಸಾಧ್ಯವೇ ಇಲ್ಲವೇ?’ ಎಂದು ಕೃಷ್ಣನಲ್ಲಿ ಕೇಳುತ್ತಾನೆ. ಆಗ ಕೃಷ್ಣ ಬಡವನಿಗೆ ಒಂದು ಚಿನ್ನದ ನಾಣ್ಯ ನೀಡಿ ಕಳುಹಿಸುತ್ತಾನೆ. ಅರ್ಜುನ ಅಚ್ಚರಿಗೊಂಡು ತಾನು ಚಿನ್ನದ ನಾಣ್ಯದ ಚೀಲ ಮತ್ತು ವಜ್ರ ಕೊಟ್ಟರೂ ಸುಖವಾಗಿರದ ಈತ ಒಂದು ಚಿನ್ನದ ನಾಣ್ಯದಿಂದ ಹೇಗೆ ಸುಖವಾಗಿರಬಲ್ಲ ಎಂದು ಪ್ರಶ್ನಿಸುತ್ತಾನೆ.
ಆ ಬಡವನನ್ನು ಹಿಂಬಾಲಿಸುವಂತೆ ಕೃಷ್ಣ ಅರ್ಜುನನಿಗೆ ಸೂಚಿಸುತ್ತಾನೆ. ಬಡವ ದಾರಿಯಲ್ಲಿ ಸಾಗುತ್ತಿದ್ದಾಗ ಮೀನುಗಾರನ ಬಲೆಯಲ್ಲಿ ಮೀನೊಂದು ಒದ್ದಾಡುತ್ತಿರುವುದನ್ನು ಕಂಡು ಮರುಗಿ, ‘ಈ ಒಂದು ನಾಣ್ಯದಲ್ಲಿ ನನ್ನ ಜೀವನವೇನೂ ಸುಧಾರಿಸದು. ಕೊನೇಪಕ್ಷ ಆ ಮೀನಿಗಾದರೂ ಮರುಜೀವ ಕೊಡೋಣ’ ಅಂದುಕೊಂಡು ಮೀನುಗಾರನಿಗೆ ಚಿನ್ನದ ನಾಣ್ಯ ನೀಡಿ ಮೀನನ್ನು ಬಿಡಿಸಿಕೊಂಡು ನೀರಿನ ಪಾತ್ರೆಯಲ್ಲಿ ಹಾಕಿದ. ಮೀನು ನೀರಿಗೆ ಬಿದ್ದ ತಕ್ಷಣ ತನ್ನಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದ ವಜ್ರವನ್ನು ಹೊರಹಾಕಿತು. ಬಡವ ತನ್ನ ವಜ್ರವನ್ನು ಕಂಡು ಸಂತೋಷದಿಂದ ಸಿಕ್ಕಿತು ಎಂದು ಚೀರಿದ.
ಅದೇ ಸಮಯಕ್ಕೆ ದಾರಿಯಲ್ಲಿ ಸಾಗುತ್ತಿದ್ದ ಕಳ್ಳ ಈ ವ್ಯಕ್ತಿ ತನ್ನ ಗುರುತು ಹಿಡಿದನೆಂದು ಭಾವಿಸಿ ಓಡಿಬಂದು ಚಿನ್ನದ ನಾಣ್ಯತುಂಬಿದ ಚೀಲವನ್ನು ಹಿಂದಿರುಗಿಸಿ ಕ್ಷಮೆ ಕೇಳಿದ.
ಇದೆಲ್ಲವನ್ನೂ ಗಮನಿಸಿದ ಅರ್ಜುನ ‘ಈಗ ಅರ್ಥವಾಯಿತು ನಿನ್ನ ಲೀಲೆ, ಅಳತೆ ಮೀರಿ ಸಂಪತ್ತು ನೀಡಿದಾಗ ಅಹಂಕಾರ ಮತ್ತು ನಿರ್ಲಕ್ಷ್ಯಭಾವ ಬರುವುದು ಸಹಜ. ಅದರಿಂದ ಬಡವ ಪಡೆದದ್ದನ್ನು ಕಳೆದ. ಆದರೆ ದಕ್ಕಿದ ಒಂದುನಾಣ್ಯದಲ್ಲಿ ಜೀವವೊಂದನ್ನು ಉಳಿಸಿ ಕೊನೆಗೂ ಕಳೆದದ್ದೆಲ್ಲವನ್ನೂ ಗಳಿಸಿಕೊಂಡ’ ಎಂದು ಕೃಷ್ಣನಿಗೆ ತಲೆಬಾಗುತ್ತಾನೆ. ಕೊಟ್ಟದ್ದು ತನಗೆ ಎಂಬುದು ಶತಃಸಿದ್ಧ. ಆದ್ದರಿಂದ ಕೊಟ್ಟಿದ್ದು ಕೆಟ್ಟಿತೆನ್ನದೇ ಕೊಡುವುದರಲ್ಲಿಯೇ ನೆಮ್ಮದಿ ಕಾಣುವ ಸಹೃದಯ ನಮ್ಮದಾಗಲಿ.
ಸಂಗ್ರಹ: ಹೆಚ್.ಎಸ್.ರಂಗರಾಜನ್
ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇಗುಲ, ಹುಸ್ಕೂರು, ಬೆಂಗಳೂರು