- ಪ್ರಶಾಂತ್ ಭಟ್ ಕೋಟೇಶ್ವರ
ಸಿಕ್ಕಲ್ಲಿ ಸಿಕ್ಕಿದ್ದನ್ನು ತಿಂದರೆ ಏನು ತೊಂದರೆ ಎಂಬುದನ್ನು ಮಹಾಭಾರತದ ಈ ದೃಷ್ಟಾಂತದ ಮುಖಾಂತರ ನಾವು ತಿಳಿದುಕೊಳ್ಳಬಹುದು. ಮಹಾಭಾರತದ ಯುದ್ಧ ಮುಗಿದಿದೆ . ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಉತ್ತರಾಯಣಕ್ಕಾಗಿ ನಿರೀಕ್ಷಿಸುತ್ತಿದ್ದರು. ಧರ್ಮರಾಜನ ಮನಃಶಾಂತಿಗಾಗಿ ಭೀಷ್ಮರು ಬೇರೆ ಬೇರೆ ಧರ್ಮಗಳನ್ನು ವಿಸ್ತಾರವಾಗಿ ಬೋಧಿಸುವರು.
ಇದನ್ನು ಕೇಳಿದ ದ್ರೌಪದಿ ಭೀಷ್ಮರನ್ನು ಪ್ರಶ್ನಿಸುವಳು: ಧರ್ಮದ ಬಗ್ಗೆ ಧಾರಾಳವಾಗಿ ಉಪದೇಶ ಮಾಡುವ ತಾವು ನನ್ನ ಮಾನಹರಣದಲ್ಲಿ ದುರ್ಯೋಧನಾದಿಗಳು ತೊಡಗಿದಾಗ ಆ ಅನ್ಯಾಯವನ್ನು ಪ್ರತಿಭಟಿಸದೆ ಯಾಕೆ ಸುಮ್ಮನಿದ್ದಿರಿ? ಆಗ ಧರ್ಮಪ್ರಜ್ಞೆ ಯಾಕೆ ಜಾಗೃತವಾಗಲಿಲ್ಲ?
ಇದಕ್ಕೆ ಭೀಷ್ಮರು ಕೊಟ್ಟ ಉತ್ತರವಿದು- ದೌಪದಿ! ಅಂದು ನಾನು ದುರ್ಯೊಧನ ನೀಡುತ್ತಿದ್ದ ಅನ್ನವನ್ನು ಸ್ವೀಕರಿಸುತ್ತಿದ್ದೆ. ಆ ಪಾಪದ ಅನ್ನವನ್ನು ಉಂಡು ಕೊಬ್ಬಿದ್ದ ಈ ದೇಹದಲ್ಲಿ ಧರ್ಮ ಪ್ರಜ್ಞೆಯ ಸುಳಿವೇ ಇರಲಿಲ್ಲ. ದುಷ್ಟ ಆಹಾರದ ಪರಿಣಾಮವಾದ ತಾಮಸ ವೃತ್ತಿಯ ಅಬ್ಬರದಲ್ಲಿ ಧರ್ಮದ ದನಿಯೇ ಆಗ ಕೇಳಿಸದಂತಿತ್ತು. ಆದರೆ ಮಹಾಭಾರತ ಯುದ್ಧದಲ್ಲಿ ಅರ್ಜುನನ ಬಾಣ ವರ್ಷಗಳಿಂದ ನನ್ನ ಶರೀರದಿಂದ ರಕ್ತಧಾರೆಯೆಲ್ಲ ಹೊರಗೆ ಹರಿದಿದೆ, ದುರ್ಯೋಧನನು ನೀಡಿದ ಆಹಾರವನ್ನು ಸೇವಿಸಿ ಸಿದ್ಧವಾದ ರಕ್ತಧಾರ ಹರಿದು ಹೋಗಿ ಅಸ್ಥಿ ಮಾತ್ರವಾದ ನನ್ನ ಶರೀರವು ಈಗ ಪರಿಶುದ್ಧವಿದೆ. ಆ ದುಷ್ಟ ಆಹಾರದ ಪರಿಣಾಮ ವಿಕೃತಿಗಳಾವೂ ಈಗ ನನ್ನಲ್ಲಿ ಕಂಡುಬರುವುದಿಲ್ಲ. ಆದುದರಿಂದ ನನ್ನಲ್ಲಿ ಸ್ವಾಭಾವಿಕವಾಗಿ ಧರ್ಮಪ್ರಜ್ಞೆ ಜಾಗೃತವಾಗಿದೆ. ಈ ವಿಸ್ತಾರವಾದ ಧರ್ಮೋಪದೇಶವನ್ನು ನಾನು ನೀಡುವಂತಾಗಿದೆ.
ನಾವು ಸ್ವೀಕರಿಸುವ ಆಹಾರ ನಮ್ಮ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರಬಲ್ಲದೆಂಬುದಕ್ಕೆ ಜ್ಞಾಪಕವಾಗಿ ಇದೊಂದು ಪ್ರಚಲಿತವಿರುವ ಮನೋಜ್ಞ ಕಥೆ. ತಿನ್ನುವುದೆಲ್ಲವೊ ಆಹಾರವಲ್ಲ. ಸಾತ್ವಿಕ ಆಹಾರ, ರಾಜಸ ಆಹಾರ, ತಾಮಸ ಆಹಾರ: ಹೀಗೆ ಆಹಾರದಿಂದ ಹೇಗೆ ವ್ಯಕ್ತಿಯನ್ನು ಗುರುತಿಸಬಹುದು ಎನ್ನುವ ವಿಧಾನವನ್ನು ವಿವರಿಸಿದ ಕೃಷ್ಣ, ಮುಂದೆ ನಮ್ಮ ಆಚಾರದಿಂದ (ಯಜ್ಞ, ತಪಸ್ಸು, ದಾನ) ವ್ಯಕ್ತಿಯ ಸ್ವಭಾವವನ್ನು ಅರಿಯುವ ವಿಧಾನವನ್ನು ವಿವರಿಸುತ್ತಾನೆ.
ಮಹಾಭಾರತದ ಯುದ್ಧಕ್ಕೆ ಮೊದಲು ಸಂಧಾನಕ್ಕೆ ಬಂದಿದ್ದ ಶ್ರೀಕೃಷ್ಣನಿಗೂ ಕೂಡ ದುರ್ಯೋಧನಾದಿಗಳು ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಿದಾಗ ಶ್ರೀಕೃಷ್ಣನು ಹೇಳಿದ ಮಾತು: “ಇನ್ನೊಬ್ಬರ ಮನೆಯಲ್ಲಿ ಊಟ ಮಾಡಬೇಕಾದರೆ ಎರಡು ಕಾರಣದಿಂದ. ಒಂದು ಪ್ರೀತಿ, ಇನ್ನೊಂದು ಹಸಿವಿಂದ ಪ್ರಾಣರಕ್ಷಣೆ. ಇದ್ಯಾವುದು ನನಗಿಲ್ಲ” ಎಂದು!
ನಾವು ತಿಂದ ಅನ್ನ ಮೂರು ಭಾಗವಾಗುತ್ತದೆ. ಒಂದು ರಕ್ತಮಾಂಸವಾದರೆ, ಸ್ಥೂಲಭಾಗ ಕಷ್ಮಲವಾಗಿ ಹೋಗುತ್ತದೆ. ಸೂಕ್ಷ್ಮ ಭಾಗ ನಮ್ಮ ಮನಸ್ಸಾಗಿ ಪರಿಣಮಿಸುತ್ತದೆ. ಅನ್ನ ನೀಡುವವರ ಗುಣವು ಅದರಲ್ಲಿ ಸೇರಿರುತ್ತದೆ.
ಸಜ್ಜನರೇ ದುಷ್ಟ ಅನ್ನಕ್ಕೆ ಮರುಳಾಗಿ ಚಿನ್ನವಾದ ಬದುಕನ್ನೇ ನಾಶಮಾಡಬೇಡಿ. ಆಹಾರದ ಶುದ್ಧಿಯೇ ನಮ್ಮ ಸತ್ತ್ವ ಶುದ್ಧಿಗೆ ನಾಂದಿ ಎಂದು ಮರೆಯದಿರಿ!!
ಎಲ್ಲ ಅವನೇ ಕೊಟ್ಟಿದ್ದು, ಆದರೆ ನಮಗೆ ಉಪನಿಷತ್ತಿನ ಎಚ್ಚರಿಕೆ “ತೇನ ತ್ಯಕ್ತೇನ ಭುಂಜೀತಾಃ” ಇದರರ್ಥವು ಭಗವಂತನು ಕೊಟ್ಟಿದ್ದನ್ನು ತಿನ್ನಿ ಎಂದು. ತಿನ್ನುವ ಮೊದಲು ಸಾತ್ವಿಕ ಆಹಾರವನ್ನು ತಯಾರಿಸಿ ಎಲ್ಲ ಪದಾರ್ಥಗಳಲ್ಲೂ ಅವನ ವಿಭೂತಿರೂಪಗಳನ್ನು ಸ್ಮರಿಸಿ ಅವನಿಗೆ ಅರ್ಪಿಸಿ, ನಂತರ ಪ್ರಸಾದವೆಂದು ನಾವು ಸ್ವೀಕರಿಸಬೇಕು.
ನಮ್ಮ ಮನಸ್ಸು, ನಮ್ಮ ವರ್ತನೆ, ಕಾರ್ಯ ಎಲ್ಲವೂ ಆಹಾರದಿಂದಲೇ ಆಗುತ್ತದೆ. ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳುತ್ತ ಹೋದರೆ ಅರಿವಿಗೆ ಬರುತ್ತದೆ. ಎಂತಹ ಅನ್ನವೋ ಅಂತಹ ಬುದ್ದಿ ಎಂದು. ತಿಂದ ಆಹಾರ ನಮ್ಮ ದೈಹಿಕ ಭಾಷೆಯಾಗಿ ಬಿಂಬಿಸುತ್ತದೆ.
ನಾವು ತಿನ್ನುವ ಆಹಾರದಿಂದ ನಮ್ಮ ಗುಣದಲ್ಲೂ, ವ್ಯಕ್ತಿತ್ವದಲ್ಲೂ ಬದಲಾವಣೆಯಾಗುತ್ತದೆ ಎನ್ನುವುದಕ್ಕೆ ಶ್ರೀ ರಾಮಕೃಷ್ಣರು ಕಥೆಯೊಂದನ್ನು ಹೇಳುತ್ತಿದ್ದರಂತೆ. ಸನ್ಯಾಸಿಯೊಬ್ಬರು ಒಬ್ಬ ಧನಿಕನ ಆಹ್ವಾನದ ಮೇರೆಗೆ ಭಿಕ್ಷೆಗೆ ಹೋದರಂತೆ. ಆಹಾರವನ್ನು ಸ್ವೀಕರಿಸಿ ಬರುವಾಗ ಊಟ ಬಡಿಸಿದ್ದ ಬೆಳ್ಳಿಯ ಬಟ್ಟಲನ್ನು ಜೋಳಿಗೆಗೆ ಹಾಕಿಕೊಂಡು ಬಂದರಂತೆ. ನಂತರ ಆ ಧನಿಕ ಬಂದು ಬೆಳ್ಳಿಯ ಬಟ್ಟಲನ್ನು ಹಿಂತಿರುಗಿಸುವಂತೆ ಕೇಳಿ ಕೊಂಡನಂತೆ. ಸನ್ಯಾಸಿಗೆ ಆಶ್ಚರ್ಯ ! ತನ್ನೊಂದಿಗೆ ಹೇಗೆ ಈ ಬಟ್ಟಲನ್ನು ತಂದೆ? ನನ್ನಲ್ಲೇ ಏನೋ ಆಗಿರಬೇಕು ಇಲ್ಲಾಂದ್ರೆ ಅವನು ನೀಡಿರುವ ಆಹಾರ ಸರಿಯಾದುದಲ್ಲವೆಂದು. ನಂತರ ಅವನಲ್ಲೇ ನಿನ್ನ ಸಂಪಾದನೆಯ ಹಾದಿ ಯಾವುದು? ಎಂದು ಪ್ರಶ್ನಿಸಿದರು. ಅವನು ತನ್ನ ಗಳಿಕೆಯ ಮಾರ್ಗವನ್ನು ತಿಳಿಸಿದನಂತೆ. ಸನ್ಯಾಸಿಗೆ ಇವನದ್ದು ಕಳ್ಳಮಾರ್ಗದಲ್ಲಿ ಶೇಖರಿಸಿದ ಸಂಪತ್ತು. ಇವನು ನೀಡಿದ್ದ ಅನ್ನವು ಕಳ್ಳ ಅನ್ನವೇ. ಅದಕ್ಕಾಗಿಯೇ ತಾನೂ ಆ ಅನ್ನವನ್ನು ತಿಂದದ್ದರಿಂದ ನನಗೂ ಕಳ್ಳ ಬುದ್ದಿ ಬಂತು ಎಂದು; ಪ್ರಾಯಶ್ಚಿತ ಮಾಡಿಕೊಂಡರಂತೆ. ಆಹಾರವೇ ಎಲ್ಲದಕ್ಕೂ ಕಾರಣ ಎನ್ನುವುದಕ್ಕೆ ಇದೊಂದು ನಿದರ್ಶನ.
ಹಾಗಾದರೆ ಆಹಾರ ಹೇಗಿರಬೇಕು? ಒಳ್ಳೆಯ ಮನಸ್ಸು, ಹೃದಯ ಬೇಕಾದರೆ ಸಾತ್ವಿಕ ಆಹಾರವನ್ನು ಸ್ವೀಕರಿಸಬೇಕು. ಅತ್ಯಂತ ಕಹಿ, ಹುಳಿ, ಉಪ್ಪು, ಬಿಸಿ, ಕಾರ, ಒಣಗಿದುದು, ಬಾಯಾರಿಕೆಯನ್ನು ಉಂಟು ಮಾಡುವ ಆಹಾರಗಳು. ದುಃಖ, ಶೋಕ, ಕೋಪ, ಸಿಟ್ಟು, ಚಿಂತೆ ಎಲ್ಲವನ್ನು ತಂದೊಡ್ಡುತ್ತದೆ. ಎಲ್ಲವೂ ಹಿತಮಿತವಾಗಿರಬೇಕು.