ಆಲ್‌ಟೈಮ್ ಫೇವರಿಟ್..! ಗುಮ್ಮಟ ಬೆಟ್ಟ

ಸಂಜೆಯ ತಂಗಾಳಿಗೆ ಮೈಯೊಡ್ಡುತ್ತಾ ಸುಂದರ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದಲ್ಲಿ ಹಲವು ತಾಣಗಳಿವೆ. ಅವುಗಳಲ್ಲಿ ಕಾರ್ಕಳದ ಗೊಮ್ಮಟ ಬೆಟ್ಟವೂ ಒಂದು. ಸೂರ್ಯಾಸ್ತ ವೀಕ್ಷಣೆಗೆ `ಆಲ್‌ಟೈಮ್ ಫೇವರಿಟ್’ ಆಗಿರುವ ಇಲ್ಲಿ ಪ್ರತಿನಿತ್ಯ ನೂರಾರು ಮಂದಿ ಪ್ರವಾಸಿಗರು ಸೂರ್ಯಾಸ್ತ ನೋಡಲು ಬರುತ್ತಾರೆ.

*ಶಶಿಧರ ಬೆಳ್ಳಾಯರು

ಬದುಕಿನ ಭಾವನೆಗಳಿಗೆ ಬಣ್ಣ ತುಂಬುವ, ಸಾಧನೆಯ ಕಡೆ ಸಾಗುವಂತೆ ಪ್ರೇರೇಪಿಸುವ ಪ್ರತಿಯೊಂದು ಸೂರ್ಯಾಸ್ತವೂ ಭಿನ್ನ. ಹೀಗಾಗಿಯೇ ಸೂರ್ಯಾಸ್ತ ಅನ್ನೋ ಪ್ರಕೃತಿ ವಿಸ್ಮಯವನ್ನು ನೋಡಿ ಮನದಣಿಯೆ ಸವಿಯಲು ಜನರು ಆಸೆ ಪಡುತ್ತಾರೆ.

ಸಂಜೆಯ ತಂಗಾಳಿಗೆ ಮೈಯೊಡ್ಡುತ್ತಾ ಸುಂದರ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದಲ್ಲಿ ಹಲವು ತಾಣಗಳಿವೆ. ಅವುಗಳಲ್ಲಿ ಕಾರ್ಕಳದ ಗೊಮ್ಮಟ ಬೆಟ್ಟವೂ ಒಂದು. ಸೂರ್ಯಾಸ್ತ ವೀಕ್ಷಣೆಗೆ `ಆಲ್‌ಟೈಮ್ ಫೇವರಿಟ್’ ಆಗಿರುವ ಇಲ್ಲಿ ಪ್ರತಿನಿತ್ಯ ನೂರಾರು ಮಂದಿ ಪ್ರವಾಸಿಗರು ಸೂರ್ಯಾಸ್ತ ನೋಡಲು ಬರುತ್ತಾರೆ.
ಗುಮ್ಮಟ ಬೆಟ್ಟದ ಸುತ್ತ ಆಳವಾದ ಪ್ರಪಾತವಿದ್ದು, ವಿಸ್ತಾರವಾದ ಬಂಡೆ ಹಬ್ಬಿರುವ ಕಾರಣ ಪ್ರೇಮಿಗಳ ಪ್ರಣಯ ಗೀತೆಗೆ ಹೇಳಿ ಮಾಡಿಸಿದ ತಾಣ. ಮುಸ್ಸಂಜೆಯ ವೇಳೆ ಪ್ರೇಮಿಗಳು ಜೋಡಿಹಕ್ಕಿಗಳಾಗಿ ಬಂಡೆಯ ಮೇಲೆ ಅಲ್ಲಲ್ಲಿ ಒರಗಿ ಕುಳಿತು ಮುಳುಗುವ ನೇಸರನ ಅದ್ಭುತ ಬಣ್ಣವನ್ನು ಕಣ್ತುಂಬಿಕೊಳ್ಳುತ್ತಾರೆ. ಇಲ್ಲಿ ಸೂರ್ಯಾಸ್ತದ ದೃಶ್ಯ ನೇರವಾಗಿ ಕಾಣಲು ಸಿಗುವುದರಿಂದ ಸೂರ್ಯನ ಕೆಂಬಣ್ಣ ಬೆಟ್ಟದ ಮೇಲಿರುವವರ ಮೈಯನ್ನು ತೋಯಿಸುವ ದೃಶ್ಯವೇ ಸುಂದರ.

ಗುಮ್ಮಟ ಬೆಟ್ಟ ಹೆಸರಿಗೆ ಕಾರಣ…
ಎತ್ತರದ ಬೆಟ್ಟದ ಮೇಲೆ ಭಗವಾನ್ ಬಾಹುಬಲಿಯ ಕಪ್ಪು ಬಣ್ಣದ ಏಕಶಿಲಾ ವಿಗ್ರಹ ಇಲ್ಲಿನ ವಿಶೇಷ. ಹಿಂದಿನ ಕಾಲದಲ್ಲಿ ಕಾರ್ಕಳವನ್ನು ಜೈನರಾಜರು ಆಳುತ್ತಿದ್ದರು. ಇದೇ ಕಾರಣಕ್ಕೆ ಕಾರ್ಕಳವನ್ನು ಪಾಂಡ್ಯನಗರಿ' ಎಂದೂ ಕರೆಯುತ್ತಿದ್ದರು. ಭೈರರಸ ಒಡೆಯರ ಕಾಲದಲ್ಲಿ ೧೩-೧೬ ಶತಮಾನದಲ್ಲಿ ಇಲ್ಲಿ ಬಸದಿಗಳು ನಿರ್ಮಾಣಗೊಂಡಿವೆ ಎನ್ನಲಾಗುತ್ತಿದೆ. ವೀರಪಾಂಡ್ಯ ರಾಜನು ತನ್ನ ಗುರು ಲಲಿತಕೀರ್ತಿಯ ಪ್ರೇರಣೆಯಿಂದಾಗಿ ಫೆಬ್ರವರಿ 13, 1432ನೇ ಇಸವಿಯಲ್ಲಿ ಇಲ್ಲಿ ಬಾಹುಬಲಿಯ ಬೃಹತ್ ವಿಗ್ರಹವನ್ನು ನಿಲ್ಲಿಸಿದ. ೪೨ ಅಡಿ ಉದ್ದದ ಈ ವಿಗ್ರಹ ರಾಜ್ಯದ ಎರಡನೇ ಅತೀ ದೊಡ್ಡ ಏಕಶಿಲಾ ವಿಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ 1436ನೇ ಇಸವಿಯಲ್ಲಿ ವೀರಪಾಂಡ್ಯನು ಬ್ರಹ್ಮದೇವ ಕಂಬವನ್ನು ನಿರ್ಮಿಸಿರುವುದಾಗಿ ಇತಿಹಾಸದಲ್ಲಿ ಉಲ್ಲೇಖವಿದೆ. ತುಳುನಾಡಿನ ಜನರು ಗೋಮಟೇಶ್ವರನನ್ನುಗುಮ್ಮಟ ದೇವೆರ್’ ಎಂದು ಆಡುಮಾತಿನಲ್ಲಿ ಭಕ್ತಿ ಸೂಚಿಸುತ್ತಿದ್ದ ಕಾರಣ ಈ ಬೆಟ್ಟಕ್ಕೆ `ಗುಮ್ಮಟ ಬೆಟ್ಟ’ ಎಂದು ಕರೆಯಲಾಗುತ್ತದೆ.

ಅಲ್ಲೇನಿದೆ?
ಗುಮ್ಮಟ ಬೆಟ್ಟದಲ್ಲಿ ಗೋಮಟೇಶ್ವರನ ವಿಗ್ರಹದ ಜೊತೆಗೆ ಜೈನ ತೀರ್ಥಂಕರರ ವಿಗ್ರಹಗಳಿವೆ. ತೀರ್ಥಮಂಟಪ, ಭಕ್ತರಿಗೆ ಕುಳಿತುಕೊಳ್ಳಲು ವಿಶಾಲವಾದ ಪ್ರಾಂಗಣ ನಿರ್ಮಿಸಲಾಗಿದೆ. ಹೊರಗಡೆ ದೀಪಸ್ತಂಭ ಹಾಗೂ ಹಲವು ತಲೆಮಾರುಗಳ ಹಿಂದೆ ನಿರ್ಮಾಣ ಮಾಡಲಾಗಿರುವ ದೇವರ ಜಳಕದ ಕೆರೆಯಿದೆ. ಪ್ರವಾಸಿಗರು, ಭಕ್ತರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿದ್ದು ಇಲ್ಲಿಂದ ಸೂರ್ಯಾಸ್ತ ವೀಕ್ಷಿಸಲು ಅವಕಾಶವಿದೆ.

ಚತುರ್ಮುಖ ಬಸದಿ
ಗೊಮ್ಮಟ ಬೆಟ್ಟದಲ್ಲಿ ನಿಂತು ಮುಂಭಾಗದತ್ತ ಕಣ್ಣು ಹಾಯಿಸಿದರೆ ಚತುರ್ಮುಖ ಬಸದಿ ಕಾಣುತ್ತದೆ. ಬೆಟ್ಟದಿಂದ ಇಳಿದು ಕಾಲ್ನಡಿಗೆಯ ಮೂಲಕ ಅಲ್ಲಿಗೆ ಹೋಗಬಹುದು. ವಿಶಾಲವಾದ ಬೆಟ್ಟದ ಮೇಲೆ ನಿರ್ಮಿಸಲಾದ ಬಸದಿಯನ್ನು ಚತುರ್ಮುಖ ತೀರ್ಥಂಕರ ಬಸದಿ ಎಂದೂ ಕರೆಯುತ್ತಾರೆ.


ಸ್ಟೇ ಮಾಡೋಕೆ ನೋ ಪ್ರಾಬ್ಲಂ!
ಕಾರ್ಕಳ ಗೋಮಟೇಶ್ವರನ ಬೆಟ್ಟದಲ್ಲಿ ಮೈಮರೆತು ಸೂರ್ಯಾಸ್ತ ವೀಕ್ಷಿಸುತ್ತಾ ಕತ್ತಲಾಯಿತೆನ್ನಿ. ಇಲ್ಲಿ ಸ್ಟೇ ಮಾಡಲು ಯಾವುದೇ ಸಮಸ್ಯೆಯಿಲ್ಲ. ಇಲ್ಲಿಂದ ಒಂರೆದಡು ಕಿಮೀ. ಅಂತರದಲ್ಲಿ ಸುಸಜ್ಜಿತ ಲಾಡ್ಜ್ಗಳು, ಪಿಡಬ್ಲ್ಯುಡಿ ಗೆಸ್ಟ್ಹೌಸ್ ಇದೆ. ಇಲ್ಲಿ ಗುಣಮಟ್ಟದ ಸೌಕರ್ಯದೊಂದಿಗೆ ಉಳಿಯಬಹುದಾಗಿದೆ. ಊಟೋಪಚಾರಕ್ಕೂ ಅಷ್ಟೇ, ಸಣ್ಣ ಕ್ಯಾಂಟೀನ್‌ಗಳಿ0ದ ಹಿಡಿದು ಉತ್ತಮ ದರ್ಜೆಯ ಹೋಟೆಲ್, ರೆಸ್ಟೋರೆಂಟ್‌ಗಳೂ ಇಲ್ಲಿವೆ. ಗುಮ್ಮಟ ಬೆಟ್ಟದ ಕೆಳಗೆ ಕ್ಯಾಂಟೀನ್ ಇದೆ. ಆಹಾರ-ಪಾನೀಯ ಸಿಗುತ್ತದೆ.

ಹೋಗೋದು ಹೇಗೆ?
ಗುಮ್ಮಟ ಬೆಟ್ಟ ಕಾರ್ಕಳ ಪೇಟೆಯಿಂದ ಮಂಗಳೂರು ಕಡೆ ಸಾಗುವ ರಸ್ತೆಯಲ್ಲಿ ಒಂದು ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿ0ದ 380ಕಿ.ಮೀ. ದೂರದಲ್ಲಿದ್ದು, ರೈಲು ಮೂಲಕ ಬರುವುದಾದರೆ ಉಡುಪಿ ಜಂಕ್ಷನ್ ತಲುಪಿ ಅಲ್ಲಿಂದ ಕಾರ್ಕಳಕ್ಕೆ ಬಸ್ ಮಾರ್ಗವಾಗಿ ಸಂಚರಿಸಬಹುದು. ಮಂಗಳೂರಿನಿ0ದ 53 ಕಿ.ಮೀ. ದೂರದಲ್ಲಿದ್ದು, ಖಾಸಗಿ ಎಕ್ಸ್ಪ್ರೆಸ್ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಚಾರಕ್ಕೆ ಯಾವುದೇ ಸಮಸ್ಯೆ ಇರಲಾರದು. ಪ್ರವಾಸಿಗರ ಓಡಾಟಕ್ಕೆ ಟ್ಯಾಕ್ಸಿ ಸೇವೆಯೂ ಲಭಿಸುತ್ತದೆ. ಕಾರ್ಕಳ ಗೋಮಟೇಶ್ವರನ ದರ್ಶನಕ್ಕೆ ಬಂದವರು ಇಲ್ಲಿಗೆ ಸಮೀಪದ ಹಿರಿಯಂಗಡಿ ಜೈನ ಬಸದಿ, ಆನೆಕೆರೆ ಬಸದಿ, ಶಿರ್ಲಾಲು ಬಸದಿ ಹಾಗೂ ವರಂಗ ಕೆರೆಬಸದಿಯನ್ನು ಸಂದರ್ಶಿಸಬಹುದಾಗಿದೆ.

(ಚಿತ್ರಗಳು: ಶಶಿಧರ ಬೆಳ್ಳಾಯರು)

Related Articles

ಪ್ರತಿಕ್ರಿಯೆ ನೀಡಿ

Latest Articles