ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದಾಗ ಈ ಬಗೆಯ ಚಿಂತನೆ ಅತ್ಯವಶ್ಯಕ. ಇಂತಹ ಒಂದು ಸಂದರ್ಭ ಬರಬಹುದೆಂಬ ಪರಿಕಲ್ಪನೆಯೂ ಯಾರಿಗೂ ಇರಲಿಲ್ಲ. ಆದರೆ ಇದು ಇಡೀ ಮನುಕುಲಕ್ಕೆ ಬಂದೊದಗಿರುವ ವಿಪತ್ತು, ನಮಗೆ ಮಾತ್ರ ಬಂದೆರಗಿರುವ ಸಂಕಷ್ಟವಲ್ಲ ಎಂಬ ಅಲೋಚನೆಯೇ ನಾವು ಸದ್ಯಕ್ಕೆ ಮಾಡಬಹುದಾದ ಸಕಾರಾತ್ಮಕ ಚಿಂತನೆ.
* ಎಚ್.ಎಸ್.ನವೀನಕುಮಾರ್ ಹೊಸದುರ್ಗ
ಸಕಾರಾತ್ಮಕ ಚಿಂತನೆಯೇ ಬಾಳ ನೆಮ್ಮದಿಯ ಹಾದಿ. ಒಂದು ರಾಜ್ಯದ ರಾಜನಿಗೆ ಒಬ್ಬ ಜ್ಞಾನಿಯಾದ ಮಂತ್ರಿಯಿದ್ದ. ಆತ ಯಾವಾಗಲೂ “ಆಗೋದೆಲ್ಲಾ ಒಳ್ಳೇದಕ್ಕೆ, ದೇವರು ಯಾವಾಗಲೂ ಸರಿಯಾದ್ದನ್ನೇ ಮಾಡುತ್ತಾನೆ” ಎಂದು ಹೇಳುತ್ತಾ, ಎಂತಹ ಸಂದರ್ಭದಲ್ಲೂ ಸಕಾರಾತ್ಮಕವಾಗಿ ಆಲೋಚಿಸುವಂತೆ ರಾಜನನ್ನು ಪ್ರೇರೇಪಿಸುತ್ತಿದ್ದ.
ಒಮ್ಮೆ ರಾಜ, ಮಂತ್ರಿಯಿಬ್ಬರೂ ಬೇಟೆಗೆಂದು ಹೋದಾಗ, ಕಾಡು ಪ್ರಾಣಿಯೊಂದು ರಾಜನ ಮೇಲೆರಗಿ ಬಂತು. ಅದರಿಂದ ರಾಜನನ್ನು ಮಂತ್ರಿ ರಕ್ಷಿಸಿದ. ಆದರೆ ಈ ಘಟನೆಯಲ್ಲಿ ರಾಜನ ಒಂದು ಕೈ ಬೆರಳು ತುಂಡಾಯಿತು. ಆಗ ಮಂತ್ರಿ ಎಂದಿನ0ತೆ, “ಆಗೋದೆಲ್ಲಾ ಒಳ್ಳೇದಕ್ಕೆ, ದೇವರು ಯಾವಾಗಲೂ ಸೂಕ್ತವಾದ್ದನ್ನೇ ಮಾಡುತ್ತಾನೆ” ಎಂದ. ತನ್ನ ಕೈ ಬೆರಳು ತುಂಡಾಗಿದ್ದರೂ, ಮಂತ್ರಿ ಆಗೋದೆಲ್ಲಾ ಒಳ್ಳೇದಕ್ಕೆ ಅಂತ ಹೇಳ್ತಾ ಇರೋದು ನೋಡಿ, ರಾಜನಿಗೆ ತಡೆಯಲಾಗದ ಕೋಪ ಬಂತು.
ಮಂತ್ರಿಯನ್ನು ಬಂಧಿಸಿ ಸೆರೆಮನೆಗೆ ತಳ್ಳಿಸಿದ. ಆಗಲೂ ಮಂತ್ರಿ “ಆಗೋದೆಲ್ಲಾ ಒಳ್ಳೇದಕ್ಕೆ” ಎಂದು ಹೇಳುತ್ತಲೇ ಸೆರೆಮನೆಗೆ ತೆರಳಿದ. ಕೆಲವು ದಿನಗಳ ನಂತರ ರಾಜನೊಬ್ಬನೇ ಬೇಟೆಗೆ ಹೋದ. ಈ ಬಾರಿ ಕಾಡು ಮನುಷ್ಯರು, ರಾಜನನ್ನು ತಮ್ಮ ದೇವಿಗೆ ಬಲಿ ಕೊಡಲು ಹೊತ್ತೊಯ್ದರು. ಇನ್ನೇನು ರಾಜನ ತಲೆ ತುಂಡರಿಸಿ, ಬಲಿ ಕೊಡಬೇಕು ಎನ್ನುವಷ್ಟರಲ್ಲಿ, ಅವರು ಅವನ ತುಂಡಾಗಿದ್ದ ಬೆರಳನ್ನು ಗಮನಿಸಿದರು. ತಮ್ಮ ದೇವಿಗೆ ಬಲಿ ಕೊಡುವ ವ್ಯಕ್ತಿಗೆ ಯಾವುದೇ ಸಣ್ಣ ವೈಕಲ್ಯವಿದ್ದರೂ, ಅವನು ಪರಿಪೂರ್ಣನಲ್ಲ ಹಾಗೂ ಬಲಿಗೆ ಸೂಕ್ತನಲ್ಲ ಎಂಬ ನಂಬಿಕೆ ಅವರಲ್ಲಿತ್ತಾದ್ದರಿಂದ, ಅವರು ರಾಜನನ್ನು ಬಿಟ್ಟು ಬಿಟ್ಟರು.
“ಬದುಕಿದೆಯಾ ಬಡಜೀವವೇ” ಎಂದು ರಾಜ್ಯಕ್ಕೆ ಮರಳಿದ ರಾಜನಿಗೆ, ಮಂತ್ರಿಯ ಮಾತು ನೆನಪಾಗಿ ಜ್ಞಾನೋದಯವಾಯ್ತು. ಆತ ತಕ್ಷಣ ಮಂತ್ರಿಯನ್ನು ಬಂಧಮುಕ್ತನಾಗಿಸಿ, ಅವನನ್ನು ಬಾಚಿ ತಬ್ಬಿಕೊಂಡು “ನೀನು ಆ ದಿನ ನನ್ನ ಬೆರಳು ಕತ್ತರಿಸಿದ್ದರಿಂದ ನಾನು ಬಲಿಯಾಗದೇ ಉಳಿದುಕೊಂಡೆ. ನೀನು ಹೇಳುವುದು ನೂರಕ್ಕೆ ನೂರು ಸತ್ಯ. ಆಗೋದೆಲ್ಲಾ ಒಳ್ಳೇದಕ್ಕೆ. ಆದರೆ ನಿನ್ನ ವಿಷಯದಲ್ಲಿ ಯಾಕೆ ಹೀಗಾಯ್ತು? ನೀನು ವೃಥಾ ಸೆರೆವಾಸ ಅನುಭವಿಸಬೇಕಾಯ್ತಲ್ಲಾ..” ಎಂದು ಪರಿತಪಿಸಿದ.
ಆಗ ಮಂತ್ರಿ “ಮಹಾರಾಜರೇ ಆಗೋದೆಲ್ಲಾ ಒಳ್ಳೇದಕ್ಕೆ. ನೀವು ನನ್ನನ್ನು ಸೆರೆಮನೆಗೆ ಹಾಕಿಸದಿದ್ದರೆ, ನಾನೂ ನಿಮ್ಮ ಜೊತೆಗೆ ಬೇಟೆಗೆ ಬರುತ್ತಿದ್ದೆ. ಆಗ ಕಾಡು ಮನುಷ್ಯರು ನಿಮ್ಮ ಬದಲು ಎಲ್ಲಾ ಅಂಗಾ0ಗಗಳೂ ಪರಿಪೂರ್ಣವಾಗಿರೋ ನನ್ನನ್ನೇ ಬಲಿ ಕೊಡುತ್ತಿದ್ದರು” ಎಂದು ನುಡಿದ.
ಸಕಾರಾತ್ಮಕ ಮನಸ್ಥಿತಿ
ಯಾವಾಗಲೂ ನಮ್ಮಲ್ಲಿ ಈ ಬಗೆಯ ಸಕಾರಾತ್ಮಕ ಚಿಂತನೆ ಇರಬೇಕು. ಎದುರಾಗುವ ಸನ್ನಿವೇಶ, ಸಮಸ್ಯೆಗಳನ್ನು ನಾವು ಸಕಾರಾತ್ಮಕ ಮನಸ್ಥಿತಿಯಿಂದ ಎದುರಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. “ಅಯ್ಯೋ ಅದು ಹಾಗಾಗಬೇಕಿತ್ತು, ಇದು ಹೀಗಾಗಬೇಕಿತ್ತು” ಎಂದು ಕೊರಗುತ್ತಾ ಕೂರುವುದರ ಬದಲು, ಒದಗಿರುವ ಸನ್ನಿವೇಶವನ್ನು, “ಆಗೋದೆಲ್ಲಾ ಒಳ್ಳೇದಕ್ಕೆ” ಎಂದು ಸ್ವೀಕರಿಸಿದಾಗ ನಮ್ಮ ಮನಸ್ಸು ಆನಂದದ ಸ್ಥಿತಿಯಲ್ಲಿರುತ್ತದೆ.
ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಹೀಗೆನ್ನುತ್ತಾರೆ,
ಇದು ನಡೆಯಲಿಲ್ಲವದು ನಿಂತು ಹೋಯಿತೆನ್ನುತ್ತ
ಎದೆಯುಬ್ಬಗವನೊಂದಿ ಕುದಿಯುತಿಹುದೇಕೋ?
ಅಧಿಕಾರ ಪಟ್ಟವನು ನಿನಗಾರು ಕಟ್ಟಿದರು?
ವಿಧಿಯ ಮೇಸ್ತಿçಯೆ ನೀನು- ಮಂಕುತಿಮ್ಮ||
ಆ ಕೆಲಸ ನಡೆಯಲಿಲ್ಲ, ಈ ಕೆಲಸ ನಿಂತುಹೋಯಿತು ಎಂದು ಉದ್ವೇಗಕ್ಕೊಳಗಾಗಿ ನಾವೇಕೆ ಕುದಿಯಬೇಕು? ಏನಾಗಬೇಕೋ ಅದು ಆಗಿಯೇ ತೀರುತ್ತದೆ. ಅದರ ಮೇಲುಸ್ತುವಾರಿ ನೋಡಿಕೊಳ್ಳುವ ವಿಧಿ, ನಮಗೇನು ಕೆಲಸ ಹೇಗೆ ನಡೆಯುತ್ತಿದೆ ಎಂದು ನೋಡಿಕೊಳ್ಳುವ ಮೇಸ್ತಿçಯ ಕೆಲಸ ಕೊಟ್ಟಿದ್ದಾನೆಯೇ? ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡಬೇಕು. ಗೀತೆಯಲ್ಲಿ ಹೇಳಿದಂತೆ ಫಲಿತಾಂಶದ ಕುರಿತು ತಲೆಕೆಡಿಸಿಕೊಳ್ಳಬಾರದು.
ಒಳ್ಳೆಯ ಫಲಿತಾಂಶಕ್ಕೆ
ಆಗುವುದೆಲ್ಲಾ ಒಳ್ಳೇದಕ್ಕೆ ಎಂದು ಸಕಾರಾತ್ಮಕವಾಗಿ ಆಲೋಚಿಸುವುದೆಂದರೆ, ಏನೂ ಮಾಡದೇ ಸುಮ್ಮನೇ ಕುಳಿತು ಎಲ್ಲವೂ ವಿಧಿ ನಡೆಸಿದಂತಾಗುತ್ತದೆ ಎಂದು ಯೋಚಿಸುವುದಲ್ಲ. ನಮ್ಮ ಪುರುಷ ಪ್ರಯತ್ನವನ್ನು ನಾವು ಮಾಡಲೇಬೇಕು. ಅದಕ್ಕೆ ಬೇಕಾದ ಶ್ರದ್ಧೆ, ಪ್ರಾಮಾಣಿಕತೆಗಳನ್ನು ನಾವು ತೋರಿಸಲೇಬೇಕು. ಆಗ ಅದು ಒಳ್ಳೆಯ ಫಲಿತಾಂಶವನ್ನು ಖಂಡಿತಾ ನೀಡುತ್ತದೆ.
ಕೆಲವು ಸಂದರ್ಭದಲ್ಲಿ ಸೋಲು ಬರಬಹುದು, ಕತ್ತಲು ಕವಿಯಬಹುದು. ಆಗ ಎಲ್ಲಾ ಮುಗಿದು ಹೋಯಿತು ಎಂದು ಕೈ ಚೆಲ್ಲಿ ಕೂರದೇ “ಆಗೋದೆಲ್ಲಾ ಒಳ್ಳೇದಕ್ಕೇ” ಎಂದು ಸಕಾರಾತ್ಮಕವಾಗಿ ಯೋಚಿಸಿ ಎದ್ದು ನಿಲ್ಲಬೇಕು.
ದಾರುಣ ದುರಂತವೊ0ದರಲ್ಲಿ ತನ್ನ ಕಾಲನ್ನೇ ಕಳೆದುಕೊಂಡಿದ್ದ ಅರುಣಿಮಾ ಸಿನ್ಹಾ ಯೋಚಿಸಿದ್ದು ಹೀಗೆಯೇ. ಒಂಟಿಕಾಲಲ್ಲೇ ಎವರೆಸ್ಟ್ ಶಿಖರವೇರಿ ಸಾಧನೆ ಮಾಡಿದ ಆಕೆ ಸಕಾರಾತ್ಮಕ ಚಿಂತನೆಗೆ ಅತ್ಯುತ್ತಮ ಉದಾಹರಣೆ.
“ಮಿಂಚಿ ಹೋಗಿದ್ದರ ಬಗ್ಗೆ ಚಿಂತಿಸಿ ಫಲವೇನು?” ಎಂಬ ಮಾತಿನಂತೆ ಆಗಿ ಹೋಗಿದ್ದರ ಬಗ್ಗೆ ಕೊರಗುತ್ತಾ ಕೂರುವುದರ ಬದಲು, “ಆಗೋದೆಲ್ಲಾ ಒಳ್ಳೇದಕ್ಕೆ” ಎಂದುಕೊ0ಡು ಬರುವುದನ್ನು ಧೈರ್ಯವಾಗಿ ಎದುರಿಸುವುದೇ ಜೀವನದ ಯಶಸ್ಸಿನ ಸೂತ್ರ.
ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದಾಗ ಈ ಬಗೆಯ ಚಿಂತನೆ ಅತ್ಯವಶ್ಯಕ. ಇಂತಹ ಒಂದು ಸಂದರ್ಭ ಬರಬಹುದೆಂಬ ಪರಿಕಲ್ಪನೆಯೂ ಯಾರಿಗೂ ಇರಲಿಲ್ಲ. ಆದರೆ ಇದು ಇಡೀ ಮನುಕುಲಕ್ಕೆ ಬಂದೊದಗಿರುವ ವಿಪತ್ತು, ನಮಗೆ ಮಾತ್ರ ಬಂದೆರಗಿರುವ ಸಂಕಷ್ಟವಲ್ಲ ಎಂಬ ಅಲೋಚನೆಯೇ ನಾವು ಸದ್ಯಕ್ಕೆ ಮಾಡಬಹುದಾದ ಸಕಾರಾತ್ಮಕ ಚಿಂತನೆ. ಈ ಕತ್ತಲಿನ ಸಂದರ್ಭ ಕರಗಿದಾಗ ಭರವಸೆಯ ಹೊಸನಾಳೆ ಖಂಡಿತಾ ಮೂಡಬಹುದು, ಇದು ನಮ್ಮ ಬದುಕನ್ನೇ ಬದಲಾಯಿಸಬಹುದು, ಹಾಗಾಗಿ ಈಗ ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ ಎಂಬ ಚಿಂತನೆಯೇ ನಮ್ಮನ್ನು ಕಾಪಾಡಬಲ್ಲ ಗಟ್ಟಿಗೊಳಿಸಬಲ್ಲ ಸಕಾರಾತ್ಮಕ ಮನಸ್ಥಿತಿ.
ಲೇಖಕರು: ಅಭಿವೃದ್ಧಿ ಅಧಿಕಾರಿ ಭಾರತೀಯ ಜೀವ ವಿಮಾ ನಿಗಮ
ವಿಜಯನಗರ ಬಡಾವಣೆ , ಹೊಸದುರ್ಗ.