ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಕ್ಷೇತ್ರದಲ್ಲಿದ್ದುಕೊಂಡೇ ಒಂದಲ್ಲ ಒಂದು ರೀತಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ. ಅದರಲ್ಲಿ ಚಿತ್ರ ಕಲಾವಿದರೂ ಹಿಂದೆ ಬಿದ್ದಿಲ್ಲ.
ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಚಿತ್ರ ಬರೆಯುತ್ತಿದ್ದ ಕಲಾವಿದರಿಗೆ, ಲಾಕ್ಡೌನ್ನಿಂದಾಗಿ ಚಿತ್ರ ಬರೆಯಲು ಮತ್ತಷ್ಟು ಅವಕಾಶ ಸಿಕ್ಕಿದೆ ಎಂಬುದು ಕಲಾವಿದ ಜಗದೀಶ್ ಅವರ ಅಭಿಪ್ರಾಯ.
ಈ ಸಂದರ್ಭದಲ್ಲಿ ಜಿ.ಜಗದೀಶ್ ಅವರು ಬದರಿನಾಥ ಹಾಗೂ ನರಸಿಂಹ ದೇವರ ಚಿತ್ರ ಬರೆದ್ದಾರೆ. ಬದರಿನಾಥ ದೇವರ ಚಿತ್ರ ಬರೆದುದರ ಹಿಂದೆ ಒಂದು ಕಾರಣವೂ ಇದೆ.
ಬದರಿನಾಥ ದೇಗುಲದ ಪ್ರಧಾನ ಅರ್ಚಕ ಕೇರಳ ಮೂಲದವರು. ಒಂದು ದಿನ ಅ ವರಿಗೆ ಬದರಿನಾಥ ದೇವರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅದನ್ನವರು ಕಲಾವಿದ ಜಗದೀಶ್ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಅದರಂತೆ ಜಗದೀಶ್ ಅವರು ಬದರಿನಾಥ ದೇವರ ಚಿತ್ರವನ್ನು ಬರೆದಿದ್ದಾರೆ. ಸ್ವತಃ ನಂಬೂದರಿ ಅವರು ಜಗದೀಶ್ ಅವರ ಮನೆಯಲ್ಲಿ ವರು ರಚಿಸಿದ ಬದರಿನಾಥನ ಚಿತ್ರವನ್ನು ಇತ್ತೀಚೆಗೆ ಅನಾವರಣಗೊಳಿಸಿದ್ದರು. ಅಲ್ಲದೇ ನರಸಿಂಹ ದೇವರ ಚಿತ್ರವನ್ನು ಇದೇ ಸಂದರ್ಭದಲ್ಲಿ ಬಿಡಿಸಿದ್ದಾರೆ.
ಚಾರ್ಧಾಮ್ ಯಾತ್ರೆಗಳಲ್ಲಿ ಒಂದಾದ ಬದರಿನಾಥ ಕ್ಷೇತ್ರ ಮೇ ೧೫ರಿಂದ ಸೀಮಿತ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ, ಈ ಸಂದರ್ಭದಲ್ಲಿ ನಾನು ಬಿಡಿಸಿದ ದೇವರ ಚಿತ್ರ ಅನಾವರಣಗೊಂಡಿರುವುದು ಖುಷಿ ನೀಡಿದೆ ಎನ್ನುತ್ತಾರೆ ಕಲಾವಿದ ಜಗದೀಶ್.
ಕಲಾವಿದರ ಪರಿಚಯ: ತನ್ನ ಹತ್ತನೇ ವಯಸ್ಸಿನಲ್ಲಿಯೇ ಲ್ಯಾಂಡ್ಸ್ಕೇಪ್ ಕುರಿತ ಚಿತ್ರಗಳನ್ನುಪ್ರದರ್ಶನ ಮಾಡಿದ ಕಲಾವಿದ ಜಗದೀಶ್ ಮೂಲತಃ ಬೆಂಗಳೂರಿನವರು. ಅವರು ಚಿತ್ರಗಳು ರಾಷ್ಟçಮಟ್ಟದಲ್ಲಿ ಪ್ರದರ್ಶನ ಕಂಡಿವೆ. ದೇವರ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡುವ ಅವರು ಈಗಾಗಲೇ ಶ್ರೀ ರಾಘವೇಂದ್ರ ಸ್ವಾಮಿಗಳ ಹಲವು ಚಿತ್ರ, ಭಗವಾನ್ ಶ್ರೀಕೃಷ್ಣ, ವಿಷ್ಣು, ತಿರುಪತಿ ವೆಂಕಟೇಶ, ಸತ್ಯಾತ್ಮ ತೀರ್ಥರು, ದಾಸ ಶ್ರೇಷ್ಠರ ಚಿತ್ರಗಳಿಗೆ ಬಣ್ಣದ ಮೂಲಕ (ಆಯಿಲ್ ಪೇಂಟಿ0ಗ್) ಜೀವ ತುಂಬಿದ ಹೆಗ್ಗಳಿಕೆ ಇವರದ್ದು.
ಅಲ್ಲದೇ ಹಲವಾರು ದಿನಪತ್ರಿಕೆ, ಮಾಸಪತ್ರಿಕೆ, ವಾರಪತ್ರಿಕೆಗಳಲ್ಲಿ ಅವರು ಬರೆದ ಚಿತ್ರಗಳು ಪ್ರಕಟಗೊಂಡಿವೆ. ಅವರ ಕಲಾಸಾಧನೆಗೆ ಫ್ಲೋರಿಡಾದ ಯೋಗ ಸಂಸ್ಕೃತ ವಿವಿಯಿಂದ ಗೌರವ, ಕೆಂಪೇಗೌಡ ಪ್ರಶಸ್ತಿ, ಆರ್ಯಭಟ, ಕಲಾಜ್ಯೋತಿ, ಕುಂಚ ಕಲಾನಿ, ಕರ್ನಾಟಕ ರತ್ನಶ್ರೀ, ಕನ್ನಡ ಸೇವಾರತ್ನ, ಸದ್ಗುರು ಸಾಧನ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನರಸಿ ಬಂದಿವೆ.