* ಕೃಷ್ಣಪ್ರಕಾಶ ಉಳಿತ್ತಾಯ
ಕಾಮೇಶ್ವರಪ್ರೇಮರತ್ನಮಣಿಪ್ರತಿಪಣಸ್ತನೀ|ನಾಭ್ಯಾಲವಾಲರೋಮಾಲಿಲತಾಫಲಕುಚದ್ವಯೀ||
ಈ ಹಾಡಿನಲ್ಲಿ ಸ್ತುತಿಯನ್ನು ಮಾಡುವ ಋಷಿಗೆ ತಾಯಿಯು ಮಗುವಿನ ಮನಸ್ಸನ್ನುಕೊಟ್ಟ ಕಾರಣವೇ ಹೀಗೆ ವರ್ಣಿಸಲು ಶಕ್ಯವಾಗಿರುವುದು. ಅಂದರೆ ಲಲಿತಾ ಸಹಸ್ರನಾಮವನ್ನು ಹಾಡುವವರಲ್ಲಿಇರಬೇಕಾದ ಮನೋಭೂಮಿಕೆಯನ್ನುಇಲ್ಲಿ ಸ್ಪಷ್ಟವಾಗಿ ಸೂಚಿಸುತ್ತದೆ. ಒಮ್ಮೆ ಈ ಮನಃಸ್ಥಿತಿಯನ್ನು ಪಡೆದುಕೊಂಡರೆ ಮತ್ತೆ ಮಾಡಿದ ಸ್ತುತಿಯಲ್ಲಿ ಸೌಂದರ್ಯವೇ ಮಡುಗಟ್ಟಿ ನಿಲ್ಲುತ್ತದೆ.
ಯಾವುದೇ ಅಡೆತಡೆಗಳಿಲ್ಲದೆ ಓತಃಪ್ರೋತವಾಗಿ ಹರಿಯುವ ಸೌಂದರ್ಯಾತ್ಮಕ ಭಾವ ವ್ಯಂಜಕ ವರ್ಣನೆಗಳನ್ನು ಇಲ್ಲಿ ನೋಡಬಹುದು. ಪ್ರಕೃತಿ ಯಾವತ್ತಿಗೂ ಜೀವರಿಗೆ ಮುಕ್ತಿಯನ್ನು ಕೊಡಲು (ತನ್ನೊಡಲನ್ನು ತೋರಲು) ಕಾದಿರುತ್ತದೆ. ಇದಕ್ಕೆ ಬೇಕಾದ ಮನಃಪಾಕವೇ ಬಾಗುವಿಕೆ; ಮಗುವಿನ ಮನವನ್ನು ಹೊಂದಿರುವದು. ಇಷ್ಟನ್ನು ಸಾಧಿಸುವದೇ ಜೀವನದ ಪರಮ ಲಕ್ಷö್ಯ. ಇದು ಕಷ್ಟವೇ ಸರಿ. ಒಂದೊಮ್ಮೆ ಪಡೆದರೆ, ಜೀವರುಗಳು ಪ್ರಕೃತಿಯ ಕೂಸಾಗಿ ಬೆಳೆಯುತ್ತೇವೆ. ಅಲ್ಲಿಯವರೆಗೂ ನಾವೇನನ್ನೂ ‘ಮುಕ್ತಿ’ ‘ಪರಮಪದ’ ಎಂದೆಲ್ಲ ಚಿಂತಿಸಿದರೂ ಅವೆಲ್ಲವೂ ಸಹಜವಾಗಿ ಬಂದಂಥವುಗಳಾಗದೆ ನಮ್ಮ ವಿಚಾರ ಮಾತ್ರವಾಗಿರುತ್ತದೆ. ಆದರೆ ಇಂತಹಾ ಚಿಂತನೆಯ ತರಂಗಗಳೇ ನಮ್ಮನ್ನು ಸಹಜತೆಯೆಡೆಗೆಕೊಂಡೊಯ್ಯಬಲ್ಲವುಗಳು ಆಗಬಹುದು ಎಂಬುದೂ ಇಲ್ಲಿಯ ವಿವಕ್ಷೆ.
“ಕಾಮೇಶ್ವರಪ್ರೇಮರತ್ನಮಣಿಪ್ರತಿಪಣಸ್ತನೀ” ಕಾಮೇಶ್ವರನಿಗೆ ಆತನ ಮಡದಿಯಾದ ಕಾಮೇಶ್ವರಿ (ಲಲಿತಾ ತ್ರಿಪುರ ಸುಂದರಿ) ಯಲ್ಲಿರುವ ಪ್ರೇಮವು ಮಡುಗಟ್ಟಿ ರತ್ನೋಪಾದಿಯಲ್ಲಿ ಮಣಿಯಂತೆ ಋಷಿಯು ಕಂಡು ಅದಕ್ಕೆ ತಾಯಿಯು ತನ್ನ ವಕ್ಷಸ್ಥಲವನ್ನೇ ಧಾರೆಯೆರೆದು ಆತನಿಗೆ ಕೊಟ್ಟಿದ್ದಾಳೆ ಎಂಬ ಅರ್ಥಾನುಸಂಧಾನ ಒಂದು ಬಗೆಯಾದರೆ; ತನ್ನ ಪರಮ ಸೌಭಾಗ್ಯದಾಯಕವಾದ ಕುಚಗಳನ್ನು ಕಾಮೇಶ್ವರನ ಪ್ರೇಮವೆಂಬ ರತ್ನಗಳಿಗೆ ಪ್ರತಿಯಾಗಿ ತಾಯಿ ಕೊಟ್ಟಿದ್ದಾಳೆ ಎಂಬುದು ವಾಚ್ಯಾರ್ಥ. ಇಲ್ಲಿನ ಕಾವ್ಯ ಧ್ವನಿಸುವುದು ಕಾಮೇಶ್ವರನು ತಾಯಿಯ ಮೇಲಿರಿಸಿದ ಪ್ರೇಮಕ್ಕೆ ಪ್ರತಿಯಾಗಿ ತಾಯಿ ತನ್ನ ಹೃದಯವನ್ನೇ ಕೊಟ್ಟಿದ್ದಾಳೆ ಎಂಬುದು.
ಮತ್ತಿನ ನಾಮವಂತೂ ದೀರ್ಘದಂಡ ಸಮಾಸಬೂಯಿಷ್ಠವಾದ ರೂಪಕಾಲಂಕಾರದಿಂದ ತಾಯಿಯ ಸೌಭಾಗ್ಯ ಪ್ರದವಾದ ಕುಚಗಳನ್ನು ವರ್ಣಿಸಿದೆ. “ನಾಭ್ಯಾಲವಾಲರೋಮಾಲಿಲತಾಫಲಕುಚದ್ವಯೀ” ನಾಭಿಯಿಂದ ಹೊರಟ ರೋಮಾಲಿಗಳೆಂಬ ಬಳ್ಳಿಯಿಂದ ಹುಟ್ಟಿದ ಫಲಗಳಂತೆ ತಾಯಿಯ ಕುಚಗಳು ಕಾಣುತ್ತದೆ.
ಈ ನಾಮದ ಅನುಸಂಧಾನದ ಫಲಗಳೇನು?
ಇದು ಭಜಕರಲ್ಲಿ ಮೂಡುವ ಪ್ರಶ್ನೆ. ತಾಯಿಯನ್ನೋ ಅಥವಾ ಪೂಜ್ಯವಾದ ವಸ್ತುಗಳ ಮೇಲೆ ನಾವು ಅಭಿಮಾನವಿರಿಸಿದರೆ ನಮ್ಮಲ್ಲೂ ಆ ವಸ್ತುಗಳಲ್ಲಿರುವ ಗುಣಗಳು ಅಭಿವ್ಯಕ್ತವಾಗುತ್ತದೆ. ಇದು ಸಹಜವಾಗಿ ನಡೆಯುವ ಕ್ರಿಯೆ. ತಾಯಿಯ ಗುಣಗಳನ್ನು ನಾವು ಅಲ್ಪವಾದರೂ ಪಡೆಯಬಲ್ಲೆವೆಂಬ ಭರವಸೆ ಈ ನಾಮಗಳು ಕೊಡುತ್ತವೆ. ಮಗುವಿನಂತೆ ನಡೆದರೆ ತಾಯಿಯಾಗಿ ನಮ್ಮನ್ನು ಪೊರೆಯುತ್ತಾಳೆ. ಅಂದರೆ ಪ್ರಕೃತಿ ನಮ್ಮನ್ನುರಕ್ಷಿಸುತ್ತದೆ ಎಂಬುದು ತಾತ್ಪರ್ಯ. ಇದು ಭಾರತೀಯ ಚಿಂತನಾ ಕ್ರಮ.
(ಲೇಖಕರು ಕರ್ಣಾಟಕ ಬ್ಯಾಂಕ್ ಉದ್ಯೋಗಿ ಯಕ್ಷಗಾನ ಕಲಾವಿದ, ಬರಹಗಾರ, ಖ್ಯಾತ ಮದ್ದಳೆವಾದಕರು. ಮಂಗಳೂರು)