ಜಗಮೆಚ್ಚಿದ ಗುರು ಅವರು ಶ್ರೀವಿಶ್ವೇಶ ತೀರ್ಥರು

ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕೀರ್ತಿಶೇಷರಾಗಿ ಡಿಸೆಂಬರ್ 29ಕ್ಕೆ ಒಂದು ವರುಷ. ಅವರ ಮೊದಲ ಮಹಾ ಆರಾಧನೆ ಡಿಸೆಂಬರ್ 17ರಂದು ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ಶಿಷ್ಯರಲ್ಲೊಬ್ಬರಾದ ಬೆಂಗಳೂರಿನ ಜಯನಗರ 5ನೇ ಬಡಾವಣೆಯ ಶ್ರೀ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಶ್ರೀ ನಂದಕಿಶೋರ್ ಅವರು ಶ್ರೀಗಳೊಂದಿಗಿನ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಶ್ರೀ ಕೃಷ್ಣ ಪರಮಾತ್ಮನ ಅನನ್ಯಭಕ್ತರು. ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ, ವಿಶ್ವದಲ್ಲಿ ಧರ್ಮಕಾರ್ಯಗಳ ನಿರ್ವಹಣೆಯಲ್ಲಿ ಸದಾಕಾಲ ತನ್ಮಯರಾದವರು ಜ್ಞಾನನಿಧಿಗಳು ಆದಂತಹ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ವ್ಯಕ್ತಿತ್ವವನ್ನು ವರ್ಣಿಸಲು ಅಸಾಧ್ಯವಾದುದು. ಅವರ ಅಪಾರ ಅನುಗ್ರಹದಿಂದ ಜೀವನವನ್ನು ಸಾರ್ಥಕ ಪಡಿಸಿಕೊಂಡ ನಾನು ಅಂತಹ ಶ್ರೇಷ್ಠ ಗುರುಗಳ ಬಗ್ಗೆ ಒಂದೆರಡು ಮಾತುಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಮಿಂಚಿನ ಹುಳು ಕತ್ತಲನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಆದರೆ ಕತ್ತಲಿನಲ್ಲಿ ಸ್ವಲ್ಪ ಮಟ್ಟಿಗಾದರು ಬೆಳಕು ಕಾಣಬಹುದೇನೋ. ಹಾಗೆ ಪೇಜಾವರ ಶ್ರೀಗಳವರ ಸಾನ್ನಿಧ್ಯ ಅವರ ಸನ್ಮಾರ್ಗದ ದಾರಿಯಲ್ಲಿ ಖಂಡಿತವಾಗಿ ಮಿಂಚಿನ ಹುಳದಂತೆ ಕತ್ತಲಿನಲ್ಲಿ ಬೆಳಕು ಚೆಲ್ಲಬಹುದು.

ನನ್ನ ಊರು ಕುಗ್ರಾಮ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ತಡಕಲ್ ಎಂಬ ಗ್ರಾಮ. ಆ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬ ನಮ್ಮದೊಂದೆ. ಆ ಊರಿನ ವ್ಯಾಸರಾಜರ ಪ್ರತಿಷ್ಠಿತ ಮುಖ್ಯಪ್ರಾಣ ದೇವರ ಅರ್ಚಕರ ಮನೆತನದವರು. ಪೂಜೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದ ನಮ್ಮಕುಟುಂಬ ಒಂದು ಹೊತ್ತಿನ ಊಟಕ್ಕಾಗಿ ಹಂಬಲಿಸುತ್ತಿದ್ದ ಬಡತನ. ಹಾಗಾಗಿ ನನ್ನತಂದೆ ತಾಯಿ ನನ್ನ ವಿದ್ಯಾಭ್ಯಾಸಕ್ಕಾಗಿ ಬಹಳ ಕಷ್ಟ ಪಡುತ್ತಿದ್ದರು. ಹೀಗೆ ಓದುತ್ತಿರಬೇಕಾದರೆ, ನನ್ನ ತಾತ ರಾಘವೇಂದ್ರರಾವ್ ಪಟವಾರಿ ಇವರು ನನ್ನನ್ನು ಅವರ ಗಬ್ಬೂರಿನ ಮನೆಯಲ್ಲಿ ಇಟ್ಟುಕೊಂಡು ಶಾಲೆಗೆ ಕಳಿಸುತ್ತಿದ್ದರು.

ಹೀಗೆ ಇರುವಾಗ ಒಂದು ಸಲ ಈಗಿನ ಸ್ವಾಮಿಗಳಾದ ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು (ಪೂರ್ವಾಶ್ರಮದ ನನ್ನ ಸಂಬಂಧಿಗಳಾದ ಶ್ರೀಗುರುವೆಂಕಟಾಚಾರ್ಯರು) ಅವರಲ್ಲಿ ನನ್ನ ಬಗ್ಗೆ ಮಾತನಾಡಿ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಗಬಹುದು ಎಂದು ತೀರ್ಮಾನಿಸಿದರು. ಆಗ ನನ್ನನ್ನು ಕೇಳಿದರು, ಬೆಂಗಳೂರಿಗೆ ಬರುತ್ತೀಯ ವಿದ್ಯಾಪೀಠದಲ್ಲಿ ಓದಲಿಕ್ಕೆ ಎಂದು. ಆಗ ನಾನು ಬೆಂಗಳೂರು ನೋಡಬೇಕು ಎಂಬ ಆಸೆಯಿಂದ ಬರುತ್ತೇನೆ ಎಂದು ನಮಸ್ಕರಿಸಿದೆ ಪೂಜ್ಯ ಆಚಾರ್ಯರಿಗೆ. ನಂತರ ನನ್ನ ಉಪನಯನ ಶ್ರೀ ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ನೆರವೇರಿಸಿ, ಬೆಂಗಳೂರಿಗೆ ಕರೆದುಕೊಂಡು ಬಂದು ವಿದ್ಯಾಪೀಠಕ್ಕೆ ಸೇರಿಸಿದರು. ಆಗ ಇನ್ನುಚಿಕ್ಕ ಹುಡುಗ. ನಾನು ಪುನಃ ನಮ್ಮೂರಿಗೆ ಹೋಗುತ್ತೇನೆ, ಎಂದು ತಾತನ ಹತ್ತಿರ ಹಠ ಮಾಡಿದೆ. ಆಗ ಪೂಜ್ಯ ( ಶ್ರೀ ಗುರು ವೆಂಕಟಾಚಾರ್ಯ) ರು ನಿನಗೆ ಏನು ತೊಂದರೆ ಇಲ್ಲ, ಇಲ್ಲೆ ಇರು ಅಂತ ಹೇಳಿ ಸಮಾಧಾನ ಪಡಿಸಿದರು.

ಮುಂದಿನ ನನ್ನ ಊಟ, ಪಾಠ, ಆಟಗಳನ್ನು ಒಳಗೊಂಡ ನನ್ನ ವಿದ್ಯಾಭ್ಯಾಸಕ್ಕೆ ಹೆಚ್ಚು ಹೆಚ್ಚು ಶ್ರೀ ಆಚಾರ್ಯರು ಪ್ರೋತ್ಸಾಹಿಸಿದರು. ಇಷ್ಟೆಲ್ಲ ಆದರೂ ನಾನು ಪೂಜ್ಯ ಪೇಜಾವರ ಶ್ರೀಗಳವರನ್ನು ನೋಡೆ ಇರಲಿಲ್ಲ. ಕೊನೆಗೆ ಮೂರು ಅಥವಾ ನಾಲ್ಕು ತಿಂಗಳಲ್ಲಿ ಅವರನ್ನು ದೂರದಿಂದ ನೋಡಿದ ನೆನಪು. ಇವರೆ ಸ್ವಾಮಿಗಳು ಎಂದು ನಮಸ್ಕರಿಸಿದೆ. ಆ ಸಮಯದಲ್ಲಿ ಪೇಜಾವರ ಶ್ರೀಗಳು ಎಂದು ಹೇಳುವುದಕ್ಕೂ ಬರುತ್ತಿರಲಿಲ್ಲ. “ಬೇಜಾವರ” ಶ್ರೀ ಗಳವರು ಎಂದು ಹೇಳುತ್ತಿದ್ದದ್ದು ನನ್ನ ನೆನಪು, ಆಚಾರ್ಯರು ಶ್ರೀಗಳವರಲ್ಲಿ ಕರೆತಂದು ನಮಸ್ಕರಿಸುವಂತೆ ತಿಳಿಸಿದರು. ನಂತರ ಶ್ರೀಗಳು ನನ್ನನ್ನು ಆಶೀರ್ವದಿಸಿದರು. ಆ ದಿನ ಬಿಟ್ಟರೆ ಮತ್ತೆ ಶ್ರೀಗಳವರ ಜೊತೆ ಸೇರಿದ್ದು, ದೀಪಾವಳಿ ಹಬ್ಬದ ದಿನ.

ಮಕ್ಕಳೊಂದಿಗೆ ಮಗುವಾಗುವ ಗುರುಗಳು

ಅಷ್ಟರಲ್ಲಿ ನನಗೆ ವಿದ್ಯಾಪೀಠದಲ್ಲಿ ಇರುವುದಕ್ಕೆ ಕಷ್ಟವಾಗುತ್ತಿತ್ತು. ವಿದ್ಯಾಪೀಠವನ್ನು ತೊರೆದು ಬಿಡೋಣ ಎಂದು ತೀರ್ಮಾನಿಸಿದೆ. ಆಗ ಆಚಾರ್ಯರು ನನಗೆ ಸಮಾಧಾನಪಡಿಸಿ, ಚಿಕ್ಕ ಮಕ್ಕಳ ಆಸೆಯನ್ನು ನೆರವೇರಿಸಿ ಸಮಾಧಾನಪಡಿಸುತ್ತಿದ್ದರು. ಇದಾಗಿ 2 ತಿಂಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಪೇಜಾವರ ಪೂಜ್ಯ ಶ್ರೀಗಳಿಗೆ ಎಣ್ಣೆಯಿಂದ ಅಭ್ಯಂಜನವನ್ನು ಎಲ್ಲ ಹುಡುಗರು ಸೇರಿ ಮಾಡಿಸುವುದು ಹಬ್ಬದ ವಾತಾವರಣ,ಆಗ ನಾನು ದೂರದಲ್ಲಿ ನಿಂತಿದ್ದೆ. ಅವರನ್ನು ಮುಟ್ಟಲೋ ಬೇಡವೋ ಎಂಬ ಭಯದಿಂದ ದೂರದಲ್ಲಿ ನಿಂತಿದ್ದೆ. ಆ ಸಮಯದಲ್ಲಿ ಶ್ರೀಗಳವರೇ ದೂರನಿಂತಿದ್ದ ನನ್ನನ್ನು ಹತ್ತಿರ ಕರೆದು, ನೀನು ಹಚ್ಚು ಬಾ ಎಂದು ಮಂದಹಾಸದಿಂದ ಹೇಳುತ್ತ ನೀನು ಗುರುವೆಂಕಟಾಚಾರ್ಯರ ಸಂಬಂಧಿ ಅಲ್ವಾ ಎಂದು ಕೇಳಿ ಅವರು ತಮ್ಮ ಅಮೃತಹಸ್ತದಿಂದ ನನ್ನನ್ನು ಮೊದಲ ಬಾರಿಗೆ ಕೈ ಹಿಡಿದು ಕರೆದರು. ಆಗ ನನ್ನ ಮನಸ್ಸಿಗೆ ಏನೋ ಒಂಥರಾ ಖುಷಿಯಾಗಿತ್ತು. ಅಷ್ಟರಲ್ಲಿ ನನ್ನ ಒಬ್ಬ ಗೆಳೆಯ ಶ್ರೀಗಳವರಿಗೆ “ಸ್ವಾಮಿ ನಿಮಗೆ ಈ ಹುಡುಗ “ಬೇಜಾವರ” ಸ್ವಾಮಿಗಳು ಅಂತ ಕರೆಯುತ್ತಾನೆ ಎಂದು ಗೇಲಿ ಮಾಡಿ ಹೇಳಿದ. ಆಗ ಶ್ರೀಗಳು ಹಸನ್ಮುಖರಾಗಿ ನಾನು “ಬೇಜಾರು ಸ್ವಾಮಿಗಳೇನಪ್ಪ”? ಅಂತ ನಗುತ್ತಾ ನನ್ನ ಕೈಯಿಂದ ತಮ್ಮ ದೇಹಕ್ಕೆಅಭ್ಯಂಜನ ಮಾಡಿಸಿಕೊಂಡು” ಮಗು ಈಗ ನಿನ್ನ ಬೇಜಾರು ಹೋಯಿತಾ” ಎಂಬುದಾಗಿ ಕೇಳಿದ ಆ ನೆನಪು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೆಯೇ ಉಳಿದಿದೆ. ಆಗ ಅವರ ಸ್ಪರ್ಶ ಮಾತ್ರದಿಂದಲೇ, ನನ್ನ ದೇಹ ಪವಿತ್ರವಾಯಿತು ಈ ಜನ್ಮಸಾರ್ಥಕವಾಯಿತು ಅಂತ ಆಮೇಲೆ ತಿಳಿಯಿತು.

ಶ್ರೀ ವಿಶ್ವೇಶತೀರ್ಥ ಪೇಜಾವರ ಶ್ರೀಗಳು ಎಂದು ಹೇಳಲಿಕ್ಕೆ ಆಗದಿರುವಂತಹ ನನ್ನನ್ನು ಆ ಮಿಂಚು ಹುಳು ಕತ್ತಲಿನಲ್ಲಿ ಬೆಳಕು ಚೆಲ್ಲಿದಂತೆ ಕತ್ತಲು ಕವಿದ ನನ್ನಜೀವನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವಂತೆ ಮಾಡಿದ ಮಹಾತ್ಮರು, ಪುಣ್ಯಾತ್ಮರು ಪೂಜ್ಯ ವಿಶ್ವೇಶತೀರ್ಥ ಪೇಜಾವರ ಶ್ರೀಗಳವರು. ಶ್ರೀಗಳವರನ್ನು ನಾವು ಹತ್ತಿರದಿಂದ ನೋಡುವ ಸಂದರ್ಭ ಎರಡು ಬಾರಿ, ಒಂದು ದೀಪಾವಳಿ ಹಬ್ಬದಲ್ಲಿ, ಇನ್ನೊಮ್ಮೆ ವಾರ್ಷಿಕ ಪರೀಕ್ಷೆ ಜರುಗುವಾಗ. ವಾರ್ಷಿಕ ಪರೀಕ್ಷೆಯಲ್ಲಿ, ಪರೀಕ್ಷೆಗಿಂತ ವೈಯಕ್ತಿಕವಾಗಿ ನಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಮುಂದಿನ ಜೀವನದ ಮಾರ್ಗದರ್ಶನ ಜೊತೆಗೆ ನಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಚಾರಿಸುತ್ತಿದ್ದರು.

ಜೀವನ ಪಾಠ

ಮೊದಲನೆ ವರ್ಷದ ಮಕ್ಕಳಿಗೆ ಎಲ್ಲಾ ವಿಷಯವನ್ನು ಪರೀಕ್ಷೆ ಮಾಡಿ ಕಳಿಸುತ್ತಿದ್ದರು. ಅವರು ಅಂದು ಮೊದಲು ಮಾಡಿದ ಪರೀಕ್ಷೆಯೇ ನಮ್ಮ ಜೀವನದಲ್ಲಿ ಹೇಗೆ ಇರಬೇಕೆಂದು ಅವರ ಅಂತಃಕರಣದಿಂದ ಕೂಡಿದ ಮಾತಿನಿಂದ ಅಷ್ಟು ಪರಿಪಕ್ವರನ್ನಾಗಿ ನಮ್ಮನ್ನು ಮಾಡುತ್ತಿದ್ದರು ಪರಮಪೂಜ್ಯ ಶ್ರೀಪಾದಂಗಳವರು. ಕೆಲವು ವರ್ಷಗಳೂ ಕಳೆಯಿತು. ಊಟಕ್ಕೆ, ಓದುವುದಕ್ಕೆ ಕಷ್ಟಪಡುತ್ತಿದ್ದ, ನನ್ನಂತಹ ನೂರಾರು ಮಕ್ಕಳಿಗೆ ಆಶ್ರಯದಾತರು. ಶ್ರೀ ಪೂಜ್ಯ ಪೇಜಾವರ ಶ್ರೀಗಳವರು. “ದೀಪಾವಳಿ” ಹಬ್ಬದ “ಗಂಜಿ ಊಟ” ನಾವು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಪೂಜ್ಯ ಶ್ರೀಗಳು ಮಂದಹಾಸದಿಂದ ತಮ್ಮ ಅಮೃತವಾದ ಕೈಯಿಂದ, ತುಪ್ಪವನ್ನು ಸುರಿಯುತ್ತಿದ್ದರು. ಆಗ ಮಕ್ಕಳು ಪಡುವ ಆನಂದ ನೋಡಿ ಶ್ರೀಗಳವರಿಗೆ ಖುಷಿಯೋ ಖುಷಿ. ಇದು ನಮ್ಮ ಭಾಗ್ಯ. ಅಂದು ಅವರ ಮುಖದಲ್ಲಿ ಎಷ್ಟು ಆತ್ಮೀಯತಾ ಭಾವ ಎಂದರೆ ತಂದೆ ತಾಯಿಗಿಂತ ಜಾಸ್ತಿ, ಹೃದಯತುಂಬಿ ಪ್ರೀತಿಸುತ್ತಿದ್ದರು ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು ಸಂತೋಷ ಪಡಿಸುತ್ತಿದ್ದರು.

ಅಮ್ಮನಂತಹ ಅಕ್ಕರೆ

‘ಒಂದು ಮಾತು ಇದೆ’ ತಾಯಿಗಿಂತ ಮಿಗಿಲಾದ ಪ್ರೀತಿ ಈ ಪ್ರಪಂಚದಲ್ಲಿಇನ್ನೊಂದಿಲ್ಲ ಅಂತ. ಆದರೆ ಶ್ರೀ ಪೂಜ್ಯ ಶ್ರೀ ವಿಶ್ವೇಶತೀರ್ಥ ಪೇಜಾವರ ಶ್ರೀಗಳವರು ತಾಯಿಗಿಂತ ಹೆಚ್ಚಿನ “ಪ್ರೀತಿಯನ್ನೇ” ತೋರಿಸುತ್ತಿದ್ದರು. ಹಾಗೆಯೇ ತಂದೆ ತಾಯಿಗಿಂತ ಇಂತಹ ಹೆಚ್ಚಿನ ಪ್ರೀತಿಯನ್ನು ಪ್ರಸ್ತುತ ನಮ್ಮ ಆಶ್ರಯದಾತರು, ಶ್ರೀ ಗುರುವರೇಣ್ಯರಾದ, ಮಂತ್ರಾಲಯದ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಕರುಣಿಸುತ್ತಿರುವವರು.

ಹೀಗೆ ಕೆಲವು ವರ್ಷಗಳು ಕಳೆಯಿತು. ನನ್ನ ವೇದಾಭ್ಯಾಸ ಮುಂದುವರೆಯಿತು. ಹೀಗೆ ಇರಬೇಕಾದರೆ ಇದ್ದಕ್ಕಿದ್ದ ಹಾಗೆ ನನ್ನ ಮನಸ್ಸಿಗೆ ಮಾತಾಪಿತೃಗಳ ನೆನಪು ಬಾಧಿಸಿತು. ಅವರು ಆ ಕುಗ್ರಾಮದಲ್ಲಿ ಕಷ್ಟ ಪಡುತ್ತಿದ್ದಾರೆ. ನಾನು ಇಲ್ಲಿ ಸುಖವಾಗಿದ್ದೇನೆ, ಇನ್ನು ಮುಂದೆ ಅವರನ್ನು ಕಷ್ಟಪಡಿಸುವುದು ಬೇಡ ಎಂದು ತಂದೆತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ನೋಡಿಕೊಳ್ಳಬೇಕೆಂದು ನಿರ್ಧರಿಸಿಬಿಟ್ಟೆ. ನನ್ನ ಮನಸ್ಸಿನ ತೊಳಲಾಟವನ್ನು ಹಾಗು ವಿದ್ಯಾಪೀಠ ಬಿಡುವ ವಿಚಾರ ಎಲ್ಲವನ್ನು ತಿಳಿಸಿದೆ. ಶ್ರೀಪೂಜ್ಯ ಆಚಾರ್ಯರಿಗೆ ಆಗ ಏನು ತಿಳಿಯಿತೋ ಏನೋ ಅವರು ವಿದ್ಯಾಪೀಠದ ರಜೆಯ ಸಂದರ್ಭದಲ್ಲಿ ಜಯನಗರದ 5ನೇ ಬಡಾವಣೆಗೆ (ಈಗ ನಾನು ಇರುವ) ಶ್ರೀರಾಯರ ಸನ್ನಿಧಿಗೆ ನನ್ನನ್ನು ಕಳುಹಿಸಿ, ನಮ್ಮರಾಯರ ಮಠದ ಎಲ್ಲಾ ಸಂಪ್ರದಾಯವನ್ನು ತಿಳಿದುಕೋ ಎಂದು ರಾಯರ ಸೇವೆಗೆ ಕಳಿಸಿದ್ದರು. ಪುನ: ರಜೆ ಮುಗಿದ ಮೇಲೆ ವಿದ್ಯಾಪೀಠದಲ್ಲಿ ಓದು ಎಂದಿನಂತೆ ಮುಂದುವರೆಸಿದೆ. ಆದರೆ ನನಗೆ ಸಮಾಧಾನವೇ ಇರಲಿಲ್ಲ. ಮಾತಾಪಿತೃಗಳ ಕಷ್ಟದ ಆ ನೆನಪುಗಳು ಮತ್ತೆ ನನ್ನ ಕಣ್ಣು ಎದುರಿಗೆ ಬಂದು ಬಾಧಿಸಿದವು. ಆದ್ದರಿಂದ ವಿದ್ಯಾಪೀಠವನ್ನು ಬಿಟ್ಟುಬಿಡೋದು ಅಂತ ನಿರ್ಧರಿಸಿ, ಗಿರಿನಗರದ ಶ್ರೀರಾಯರ ಸನ್ನಿಧಿಗೆ ಸೇವೆಗಾಗಿ ಹೋದೆ. ಏಕೆಂದರೆ ಮನೆ ಕೊಡುತ್ತಾರೆ ಅಪ್ಪಅಮ್ಮನನ್ನು ಕರೆದುಕೊಂಡು ಬಂದು ನೋಡಿಕೊಳ್ಳಬಹುದು ಎಂದು ನಿರ್ಧರಿಸಿ ವಿದ್ಯಾಪೀಠ ಬಿಟ್ಟು ಬಿಟ್ಟೆ. ಅಷ್ಟರಲ್ಲಿ (ಶ್ರೀ ಸುವಿದ್ಯೇಂದ್ರತೀರ್ಥರು) ಆಚಾರ್ಯರು ನೀನು ಮಂತ್ರಾಲಯದ ಶ್ರೀ ರಾಯರ ಮಠಕ್ಕೆ ಸೇರು ನಾನು ಹೇಳುತ್ತೇನೆ ಎಂದು ಆಗ ನನ್ನನ್ನು ಶ್ರೀ ಜಯನಗರ, ಐದನೆ ಬಡಾವಣೆಯಲ್ಲಿರುವ ಶ್ರೀ ರಾಯರ ಸೇವೆಗೆ ಅನುಕೂಲ ಮಾಡಿದರು ಶ್ರೀಪೂಜ್ಯ ಆಚಾರ್ಯರು. ವಿದ್ಯಾಪೀಠ ಬಿಟ್ಟಿದ್ದು ಈ ಯಾವ ಘಟನೆಗಳು ಶ್ರೀ ಪೇಜಾವರ ಶ್ರೀಗಳವರಿಗೆ ಗೊತ್ತೇ ಇರಲಿಲ್ಲ. ಕೊನೆಗೆ ನನ್ನ ವಿಚಾರ ತಿಳಿದ ಶ್ರೀಗಳವರು, ನನ್ನನ್ನು ಕರೆಸಿ ಒಂದು ಮಾತು ಹೇಳಿದರು, ನಿನ್ನ ವಿದ್ಯೆಯನ್ನು ಮುಂದುವರೆಸು, ವಿದ್ಯಾಪೀಠಕ್ಕೆ ಬಾ, ಆದರೆ ನಿಮ್ಮ ತಂದೆ ತಾಯಿ ಬಗ್ಗೆ ಚಿಂತಿಸಬೇಡ. ನಾವು ಅವರ ಯೋಗಕ್ಷೇಮ ನೋಡಿಕೊಳ್ಳುತ್ತೇವೆ ಎಂದರು. ಒಂದುಕ್ಷಣ ನನಗೆ ಆನಂದಭಾಷ್ಪವಾಗಿ ಅಂದುಕೊಂಡೆ. ಎಂಥಾ ಸಹೃದಯದ ಭಾವನೆ ನೋಡಿ ಶ್ರೀಗಳವರದ್ದು, ವಿದ್ಯೆ, ಓದು ಬಿಡಬೇಡ, ಎಂದು ನನ್ನ ಸಂಸಾರವನ್ನೂ ನೋಡಿಕೊಳ್ಳುತ್ತೇನೆ ಎಂದು ಹೇಳುವ ಯಾವ ಗುರುಗಳು ಸಿಗುತ್ತಾರೆ? ನೀವೆ ಹೇಳಿ, ಶ್ರೀ ಪೇಜಾವರ ಶ್ರೀಗಳವರಿಗೆ ನಮಸ್ಕರಿಸಿ ನನ್ನ ತೊಂದರೆಗಳನ್ನು ಹೇಳಿಕೊಂಡೆ. ಆಗ ಗುರುಗಳು ಒಂದು ಮಾತು ಹೇಳಿದರು. ‘ನೀನು ಶಾಸ್ತ್ರ ಓದಲಿಲ್ಲ ಎಂದು ಚಿಂತೆ ಮಾಡಬೇಡ, ಶ್ರೀಗುರುರಾಯರ ಸೇವೆ ಮಾಡುತ್ತಿದ್ದೀಯಅಲ್ಲವೆ. ಮಂತ್ರಾಲಯ ಪ್ರಭುಗಳು ನಂಬಿದವರನ್ನುಯಾರನ್ನು ಕೈ ಬಿಡುವುದಿಲ್ಲ, ನೀನು ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆ ಮಾಡುವುದೇ ಶಾಸ್ತ್ರ. ಓದಿದ ಫಲ ಸಿಗುತ್ತೆ ಎಂದು ಆಶೀರ್ವದಿಸಿ ಶ್ರೀಗಳು ಫಲಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದ್ದು ಶ್ರೀರಾಯರ ಸನ್ನಿಧಿ 5ನೇಬಡಾವಣೆಯ ಜಯನಗರ ಶ್ರೀಮಠದಲ್ಲಿ.

ಇಂಥಾ ಅನುಗ್ರಹಕ್ಕೆ ಪಾತ್ರನಾದನಾನೇ ಪುಣ್ಯಶಾಲಿ ಎಂದು ಭಾವಿಸುವೆ. ಇಂಥ ಗುಣನಿಧಿಗಳಾದಂತಹ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರಂತೆಯೇ ಇರುವ ಸದ್ಗುಣಗಳನ್ನು ಹೊಂದಿದ ನನ್ನ ಗುರುಗಳು ಪರಮಪೂಜ್ಯ ಮಂತ್ರಾಲಯದ ಮಠದ ಪ್ರಸ್ತುತ ಪೀಠಾಧಿಪತಿಗಳಾದ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ 108 ಶ್ರೀ ಪರಮಪೂಜ್ಯ “ಸುಬುಧೇಂದ್ರತೀರ್ಥರಲ್ಲಿ” ನಾವು ಕಂಡಿದ್ದು. ವಿಶ್ವೇಶತೀರ್ಥ ಪೇಜಾವರರೇ ಶ್ರೀ ಸುಬುಧೇಂದ್ರತೀರ್ಥರು. ಗುರುಗಳ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ. ಬೆಂಕಿಪೊಟ್ಟಣದಲ್ಲಿ ಒಂದುಕಡ್ಡಿ ತೆಗೆದು ಗೀಚಿದರೆ, ಬೆಳಕು ಹೇಗೆ ಚೆಲ್ಲುವುದೋ ನನ್ನಂಥ ಕಡ್ಡಿಗಳಿಂದ ಬೆಳಕು ಬರುವಂತೆ ಮಾಡಿದ ಪೂಜ್ಯ ಶ್ರೀಗಳವರಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

ಕ್ಷಮಿಸಿ, ಒಂದು ವಿಷಯ ಮರೆತುಬಿಟ್ಟೆ. ನನ್ನಚಿಕ್ಕ ವಯಸ್ಸಿನ ಕೈಗಳಿಂದ ಅಭ್ಯಂಜನ ಮಾಡಿಸಿಕೊಂಡ, ಕೈಗಳಿಂದಲೇ ಅವರು ವೃಂದಾವನಸ್ಥರಾದಾಗ ಅಭಿಷೇಕ ಸಂದರ್ಭದಲ್ಲಿ, ಇದೇ ನನ್ನ ಕೈಗಳಿಂದ ಅವರದೇಹ ಸ್ಪರ್ಶ ಆಗುವ ಹಾಗೆ ಮಾಡಿದ ಪರಮಪೂಜ್ಯ ಶ್ರೀಗಳವರು. ಇದ್ದಾಗಲೂ, ಇಲ್ಲದಿದ್ದಾಗಲೂ ನನ್ನಂಥ ಪಾಮರರನ್ನುಅನುಗ್ರಹಿಸುತ್ತಿದ್ದಾರೆ. ಅವರು ನಮ್ಮಲ್ಲಿ ಬಿಟ್ಟು ಹೋದ ನೆನಪುಗಳೇ ಆಶೀರ್ವಾದ ಎಂಬುದಾಗಿ ತಿಳಿಯೋಣ.

ಶ್ರೀ ಪೇಜಾವರ ಶ್ರೀಗಳವರಿಗೆ ಮಂತ್ರಾಲಯದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರಲ್ಲಿ ಬಹಳ ಅಭಿಮಾನ. ಹೀಗೆ ಕೆಲವು ಬಾರಿ ಭಕ್ತರ ಎದುರಿನಲ್ಲಿ ನಾನು ಇರುವಾಗ ಹೇಳಿದ ಒಂದು ಮಾತು ನೆನಪಿದೆ, ‘ಶ್ರೀಸುಬುಧೇಂದ್ರತೀರ್ಥರು’ ಲೋಕಸಂಚಾರವನ್ನು ಮಾಡುತ್ತ ಲೋಕಕಲ್ಯಾಣ ಮಾಡುವರು. ಅವರಲ್ಲಿ ‘ವಿಶೇಷ ಭಕ್ತಿ ಮಾಡಿ’ ಎಂದು ಆಶೀರ್ವದಿಸಿದ್ದರು. ಅಭಿನವ ಶ್ರೀವಿಶ್ವೇಶತೀರ್ಥ ಶ್ರೀಪೇಜಾವರ ಶ್ರೀಗಳೇ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಇಂತಹ ನಮ್ಮಗುರುವರ್ಯರಾದ ಶ್ರೀ ಸುಬುಧೇಂದ್ರತೀರ್ಥರಲ್ಲಿಯು ನಾವು ವಿಶೇಷವಾದ, ಜ್ಞಾನ, ಅಂತಃಕರಣವನ್ನು ಕಣ್ಣಾರೆ ನೋಡುತ್ತಿದ್ದೇವೆ. ಸರ್ವೋತ್ತಮನ ಭಕ್ತ ಶ್ರೀವಿಶ್ವೇಶತೀರ್ಥರು, ಭುವಿಗೊಡೆಯ ಶ್ರೀಕೃಷ್ಣನ ಅನನ್ಯ ಸೇವಕರು. ಭವ್ಯಪರಂಪರೆ ಪಾಲಿಸಿದ ಯತಿವರರು. ಅವರ ನೆನಪುಗಳನ್ನು ನಾವೆಲ್ಲರೂ ಸ್ಮರಿಸೋಣ.

ಲೇಖನ: ನಂದಕಿಶೋರ್ ಆಚಾರ್ಯ, ಎನ್. ಎಸ್. ಆರ್.ಎಸ್. ಮಠ, 5ನೇ ಬಡಾವಣೆ, ಜಯನಗರ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles