ಶ್ರೀ ಗಣೇಶ ಕೊಲೆಕಾಡಿಯವರ ‘ವಿಷ್ಣುಸಹಸ್ರನಾಮ’ (ಭೀಷ್ಮಾವಸಾನ) ಯಕ್ಷಗಾನ ಪ್ರಸಂಗ

ಯಕ್ಷಗಾನ ಗುರು, ಪ್ರಸಂಗಕರ್ತ, ಛಾಂದಸ ಕವಿಯಾಗಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಗಣೇಶ ಕೊಲೆಕಾಡಿ ಅವರು, ಉಡುಪಿ ಯಕ್ಷಗಾನ ಕಲಾರಂಗ, ಯಕ್ಷವಿದ್ವಾಂಸರಿಗೆ ನೀಡುವ ತಲ್ಲೂರು ಕನಕ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿದ್ದಾರೆ.

ಛಂದಸ್ಸಿನ ಗುರು, ತಾಳಮದ್ದಳೆ ಅರ್ಥಧಾರಿ, ಪ್ರಸಂಗ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿ, ಪತ್ರಕರ್ತ, ಅಂಕಣಕಾರ, ಲೇಖಕ, ನಾಟಕ ರಚನೆ, ನಿರ್ದೇಶನ, ಹಿನ್ನೆಲೆ ಗಾಯಕ, ಭಕ್ತಿಗೀತೆ ರಚನೆ, ಸಂಘಟನೆ … ಇವು ಗಣೇಶ ಕೊಲೆಕಾಡಿ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.

* ಕೃಷ್ಣಪ್ರಕಾಶ ಉಳಿತ್ತಾಯ

ಭೀಷ್ಮಾವಸಾನವೆಂಬ ಹೆಸರಿನ ಪುಟ್ಟ ಯಕ್ಷಗಾನ ಪ್ರಬಂಧವನ್ನು ಶ್ರೀ ಗಣೇಶ ಕೊಲೆಕಾಡಿಯವರು ರಚಿಸಿದ್ದಾರೆ. ಪ್ರಸಂಗ ಸಣ್ಣದಾದರೂ ಅದರ ಸತ್ತ್ವದ ಆಳ-ಹರವು ದೊಡ್ಡದೇ!.

ಮಹಾಭಾರತದ ಅನುಶಾಸನ ಪರ್ವದಲ್ಲಿ ಭೀಷ್ಮ ಧರ್ಮರಾಯನಿಗೆ ಉಪದೇಶಿಸಿದ “ವಿಷ್ಣುಸಹಸ್ರನಾಮ” ಪ್ರಸಿದ್ಧವಾದುದು. ಅದು ತನ್ನ ಅಂತರ್ಯದ ಓಜಸ್ಸು ಮತ್ತು ಜನರ ಶ್ರದ್ಧೆಯಿಂದ ಹಿಂದೂ ಸಂಸ್ಕೃತಿಯ ಭಾಗವಾಗಿ ಸೇರಿದೆ.
ವಿಷ್ಣುಸಹಸ್ರನಾಮವನ್ನು ಕುರಿತಾಗಿ ಶಂಕರಾಚಾರ್ಯ, ಪರಾಶರ ಭಟ್ಟರ ವ್ಯಾಖ್ಯಾನ ತುಂಬಾ ಮಹತ್ತ್ವದ್ದು. ಭಾರತೀಯ ರಂಗ ಕಲೆಗಳಲ್ಲಿ ವಿಷ್ಣುಸಹಸ್ರನಾಮವು ವಸ್ತುವಾಗಿ ಬಂದ ರಂಗನಿರೂಪಣೆಗಳು ವಿರಳ. ಕೇವಲ ಬಾದರಾಯಣ ಸಂಬಂಧವೆಂದು ಹೇಳುವ ವ್ಯಾಸಪೀಠದೆದುರು ಕುಳಿತ ವ್ಯಾಖ್ಯಾನಕಾರರ ಪ್ರವಚನಗಳಲ್ಲೇ ಪ್ರಾಯಶಃ ಅದು ಅಭಿವ್ಯಕ್ತಿಗೊಂಡದ್ದು. ಯಕ್ಷಗಾನ ತಾಳಮದ್ದಳೆಯಾಗಿ “ಭಗವದ್ಗೀತೆ” ಬಂದದ್ದಿದೆ. ಆದರೆ ವಿಷ್ಣುಸಹಸ್ರನಾಮ ಬಂದದ್ದು
ಪ್ರಾಯಶಃ ಮೊದಲಬಾರಿಗೆ 2016 ನೇ ವರುಷದಲ್ಲಿ ಕಟೀಲು ತಾಳಮದ್ದಳೆ ಸಪ್ತಾಹದಲ್ಲಿ. ವಿದ್ವಾನ್ ಕಮಲಾದೇವಿ ಪ್ರಸಾದ ಅಸ್ರಣ್ಣರು ಒದಗಿಸಿದ ಕಥಾಸಾರವನ್ನು ಅಳವಡಿಸಿ ಪ್ರಸಂಗವನ್ನು ಕವಿ ರಚಿಸಿದ್ದಾರೆ.

ಇದಾದ ಮೇಲೆ 2020ರಲ್ಲಿ ಅದೂ ಕಟೀಲು ದೇವಳದಲ್ಲೇ. ಭೀಷ್ಮಾವಸಾನವೆಂಬ ಹೆಸರಿನ ಪುಟ್ಟ ಯಕ್ಷಗಾನ ಪ್ರಬಂಧವನ್ನು ಶ್ರೀ ಗಣೇಶ ಕೊಲೆಕಾಡಿಯವರು ರಚಿಸಿದ್ದಾರೆ. ಪ್ರಸಂಗ ಸಣ್ಣದಾದರೂ ಅದರ ಸತ್ತ್ವದ ಆಳ-ಹರವು ದೊಡ್ಡದೇ!.
ಧರ್ಮರಾಯ, ಕೃಷ್ಣ ಮತ್ತು ಭೀಷ್ಮ ಪಾತ್ರಗಳ ಮೂಲಕ ಮಹಾಭಾರತದ ಅನುಶಾಸನ ಪರ್ವದಲ್ಲಿನ ಧರ್ಮಶ್ರವಣ ಮತ್ತು ವಿಷ್ಣುಸಹಸ್ರನಾಮದ ವಿವೃತಿ ಇಲ್ಲಿವೆ. ಹಾಗೆಂದು ಸಕಲ ಸಹಸ್ರನಾಮಗಳ ವಿವೃತಿ ಇದೆ ಎಂದು ತಿಳಿಯಬಾರದು ಅದು ರಂಗಕ್ರಿಯೆಗೆ ಅಪೇಕ್ಷಿತವೂ ಅಲ್ಲ. ಆಖ್ಯಾನದ ಆಶಯದ ಸಂವಹನ ಮತ್ತು ಅದು ಸಹೃದಯರಯಲ್ಲಿ ಉಂಟುಮಾಡುವ ಧರ್ಮ ಪ್ರಜ್ಞೆ ಮತ್ತು ರಸಾಸ್ವಾದ ಇವೇ ಮುಖ್ಯವಾಗುತ್ತದೆ.

ಒಟ್ಟು ಮೂವತ್ತೊಂಭತ್ತು ಪದ್ಯಗಳಲ್ಲಿ ಪ್ರಸಂಗದ ಭಾವ ಹರಡಿದೆ.
ಒಟ್ಟು ಇಪ್ಪತ್ತೊಂಬತ್ತು ವಿಧದ ಛಂದೋಬಂಧಗಳಲ್ಲಿ ಪ್ರಸಂಗ ರಚಿಸಲ್ಪಟ್ಟಿದೆ. ಭಾಮಿನಿ,ಕಂದ, ವಾರ್ಧಿಕ, ದ್ವಿಪದಿ,ಕುಸುಮ ಷಟ್ಪದ, ವಿಷ್ಣು ಷಟ್ಪದ , ತುಜಾವಂತು ಝಂಪೆ, ಯಮುನಾಕಲ್ಯಾಣಿ ತ್ರಿವುಡೆ, ಬೇಗಡೆ ಏಕ, ಕಮಾಚು ತ್ರಿವುಡೆ, ಮಧುಮಾಧವಿ ಏಕ, ಕಾಪಿ ಅಷ್ಟ, ಸಾಂಗತ್ಯ, ಸೌರಾಷ್ಟ್ರ ಅಷ್ಟ, ಮಧ್ಯಮಾವತಿ ಏಕ, ಕೇದಾರಗೌಳ ಅಷ್ಟ, ದೇಶೀ ಏಕ, ಧನ್ಯಾಸಿ ಅಷ್ಟ ಇವಿಷ್ಟು ವಿಧದ ಛಂದೋಬಂಧಗಳಲ್ಲಿ ಪ್ರಸಂಗ ರಚಿಸಲ್ಪಟ್ಟಿದೆ. ಧನ್ಯಾಸಿ ಅಷ್ಟ, ಕಮಾಚು ತ್ರಿವುಡೆ ಇವು ನವೀನ ಛಂದೋಬಂಧಗಳು.

ಶ್ರೀ ಗಣೇಶ ಕೊಲೆಕಾಡಿಯವರ ಪ್ರಸಂಗಗಳ ವೈಶಿಷ್ಟ್ಯವೆಂದರೆ
ಹೊಸದಾದ ಮತ್ತು ಪಾತ್ರದ ಆಯಾ ಸಂದರ್ಭದ ಭಾವಕ್ಕೆ ಅನುಯೋಜ್ಯವಾಗುವ ಛಂದೋಬಂಧಗಳು.

ಅಭಿಜ್ಞ ಭಾಗವತರಿಗೆ ಗಾನಕ್ರಿಯೆಯಲ್ಲಿ ಹೊಸ ದಾರಿಯನ್ನು ತೋರುವ ರಸಸ್ಪಂದಿಯಾಗುವ ರಚನೆಗಳು.
ಕಥಾಸಾರದಂತೆ ಮಹಾಭಾರತ ಯುದ್ಧ ಮುಗಿದು ಧರ್ಮರಾಜನ ಅಂತಃಕರಣದಲ್ಲಿಖೇದ ಮನೆಮಾಡುತ್ತದೆ. ಆಳವಾದ ದುಃಖವನ್ನು ಅನುಭವಿಸುತ್ತಾ ಇರುವ ಧರ್ಮರಾಜನನ್ನು ಕೃಷ್ಣ ಸಮಾಧಾನಿಸಿ ಭೀಷ್ಮರಲ್ಲಿಗೆ ಧರ್ಮಶ್ರವಣ ಮಾಡಿಸಲು ಕರೆದೊಯ್ಯುತ್ತಾನೆ. ರಾಜಧರ್ಮವನ್ನು ಕೇಳಿಸುತ್ತಾನೆ. ಕೊನೆಗೆ ವಿಷ್ಣುಸಹಸ್ರನಾಮದ ಉಪದೇಶವನ್ನು ಧರ್ಮರಾಯನಿಗೆ
ಭೀಷ್ಮರು ಮಾಡುತ್ತಾರೆ. ಇದು ಕತೆಯ ಸಂಕ್ಷಿಪ್ತ ಹರಿವು. ಅತೀತದ ಕಡೆಗಿರುವ ಅಚಲ ತುದಿಗಡಿಯದ ಶ್ರದ್ಧೆಯನ್ನು ಶ್ರೀ ಗಣೇಶ ಕೊಲೆಕಾಡಿಯವರ ಪ್ರಸಂಗದಲ್ಲಿ ಕಾಣಬಹುದು.

(ಮುಂದುವರಿಯುವುದು)

Related Articles

ಪ್ರತಿಕ್ರಿಯೆ ನೀಡಿ

Latest Articles