ಕೋಲಾರ: ಡಿಸೆಂಬರ್ 25ರಂದು ವೈಕುಂಠ ಏಕಾದಶಿ ದಿನದಂದು, ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಪ್ರಸನ್ನ ವೆಂಕಟೇಶ್ವರ ದೇಗುಲ ಹಾಗು ಕೆಜಿಎಫ್ ತಾಲೂಕಿನ ಗುಟ್ಟಹಳ್ಳಿ ಗ್ರಾಮದ ಬಂಗಾರು ತಿರುಪತಿ ದೇಗುಲವನ್ನ ತೆರೆಯಲು ಜಿಲ್ಲಾಧಿಕಾರಿ ಸಿ ಸತ್ಯಭಾಮ ಅನುಮತಿ ನೀಡಿದ್ದಾರೆ.
ಭಕ್ತರ ಧಾರ್ಮಿಕ ಭಾವನೆಗಳ ಹಿತದೃಷ್ಟಿಯಿಂದ ನಿರ್ಧಾರ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಚಿಕ್ಕ ತಿರುಪತಿ ದೇಗುಲ ಮತ್ತು ಬಂಗಾರು ತಿರುಪತಿ ದೇಗುಲ ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳ ಗಡಿಯಲ್ಲೇ ಇರುವುದರಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಕಡ್ಡಾಯವಾಗಿ ಕೋವಿಡ್ 19 ನಿಯಮಗಳನ್ನ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಕೈ ಕಾಲುಗಳನ್ನ ಶುಚಿಗೊಳಿಸಲು ವ್ಯವಸ್ಥೆ, ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರುತ್ತದೆ. ಕೋವಿಡ್ 19 ಹಿನ್ನಲೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ ರದ್ದು ಮಾಡಲಾಗಿದೆ.
ಇನ್ನು ಪ್ರಮುಖವಾಗಿ 65 ವರ್ಷ ಮೆಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವನ್ನ ನಿಷೇಧಿಸಿದೆ. ಮಾರ್ಗಸೂಚಿಗಳನ್ನ ಪಾಲಿಸುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಆದೇಶ ಮಾಡಿದ್ದಾರೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್ಮಸ್ ಹಾಗೂ ಹೊಸವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಬೇಕೆಂದು ಜಿಲ್ಲಾಡಳಿತ ಆದೇಶಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸಿ ಆಚರಣೆ ಮಾಡುವುದನ್ನು ಸಂರ್ಪೂಣ ನಿಷೇಧ ಮಾಡಿರುವುದಾಗಿ ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ.
ಚರ್ಚ್ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ. ಜನರು ಸೇರುವ ಸ್ಥಳದಲ್ಲಿ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧ ಮಾಡಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಗಳಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು 270 ರ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.