ವರಗುಣ ಪಾಂಡಿಯನ್ ಎಂಬ ರಾಜ ಬಲು ಕೋಪದಿಂದ ತನ್ನ ಶತ್ರುಗಳನ್ನು ಸದೆ ಬಡಿಯಲೆಂದು ವೇಗವಾಗಿ ತನ್ನ ಕುದುರೆಯ ಮೇಲೆ ತೆರಳುತ್ತಿದ್ದ. ಆಕಸ್ಮಾತಾಗಿ ಬ್ರಾಹ್ಮಣನೊಬ್ಬ ಅವನ ದಾರಿಗೆ ಅಡ್ಡ ಬರಲು, ದುರದೃಷ್ಟವಶಾತ್ ಅಪಘಾತ ಸಂಭವಿಸಿ ಅದರಲ್ಲಿ ಬ್ರಾಹ್ಮಣ ತೀರಿ ಹೋದ. ಇದರಿಂದ ರಾಜನಿಗೆ ಬ್ರಾಹ್ಮಣ ಹತ್ಯಾದೋಷ ಉಂಟಾಯಿತು.
ಹೀಗೆ ಬ್ರಾಹ್ಮಣ ಹತ್ಯಾ ದೋಷದಿಂದ ಬಳಲುವಂತಾದ ರಾಜನಿಗೆ ಮೈಯಲೆಲ್ಲ ಕಂಪನಗಳು ಅಂದರೆ ನಡುಕ ಉಂಟಾಯಿತು.ಯಾವ ರೀತಿಯ ಔಷಧೋಪಚಾರಗಳು ನೆರವಿಗೆ ಬರಲಿಲ್ಲ. ಇದರಿಂದ ಚಿಂತೆಗೊಂಡ ರಾಜ ತನ್ನೊಳಗೆ ಹೊಕ್ಕಿದ ಆ ಆತ್ಮದಿಂದ ಮುಕ್ತಿ ಪಡೆಯಲೆಂದು ಶಿವನನ್ನು ಅತಿ ಭಕ್ತಿ ಹಾಗೂ ನಂಬಿಕೆಯಿಂದ ಆರಾಧಿಸಿದ. ಹೀಗೆ ಶಿವನನ್ನು ಆರಾಧಿಸಿದ ಆ ರಾಜನಿಗೆ ಅತಿ ಶೀಘ್ರದಲ್ಲಿಯೆ ನಡುಗುವ ಶಿಕ್ಷೆಯಿಂದ ಮುಕ್ತಿ ಸಿಕ್ಕಿತು.
ರಾಜ ಆರಾಧಿಸಿದ ಆ ಶಿವನೆ ಕಂಪಾಹರೇಶ್ವರ. ಅಂದರೆ ಕಂಪನಗಳನ್ನು ಅಥವಾ ನಡುಕವನ್ನು ದೂರ ಮಾಡುವ ದಾತ. ಅವನ ಆ ಸನ್ನಿಧಾನವೆ ಇಂದು ಕಂಪಾಹರೇಶ್ವರ ದೇವಾಲಯ ಎಂದು ಕರೆಸಿಕೊಳ್ಳುತ್ತದೆ. ಮಾನಸಿಕವಾಗಿ ಭಯದಿಂದ ಬಳಲುವವರು ಶಿವನ ಈ ದೇವಾಲಯಕ್ಕೆ ಬಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಅವರ ಎಲ್ಲ ಭಯ ನಿವಾರಣೆಯಾಗುತ್ತದೆಂದು ಭಕ್ತರ ನಂಬಿಕೆಯಾಗಿದೆ.
ಕೇವಲ ಕಂಪಾಹರೇಶ್ವರ ಮಾತ್ರವಲ್ಲ ಶರಭೇಶ್ವರನನ್ನು ಪೂಜಿಸಿದರೆ ನಾಲ್ಕು ಶಕ್ತಿಗಳನ್ನು ಪೂಜಿಸಿ ಪಡೆವ ಫಲ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಆ ಶಕ್ತಿಗಳೆ ಶಿವ, ವಿಷ್ಣು, ಪ್ರತ್ಯಂಗಿರಾ ದೇವಿ ಹಾಗೂ ದುರ್ಗೆ. ಇದು ಶರಭೇಶ್ವರನಲ್ಲಿ ಅಡಗಿರುವ ಶಕ್ತಿಗಳು. ಶರಭೇಶ್ವರ ಎನ್ನುವುದು ಶಿವನು ಎತ್ತಿದ ಒಂದು ಅವತಾರವಾಗಿದೆ. ಸಿಂಹ, ಮಾನವ, ಗರುಡಗಳ ಸಂಯುಕ್ತ ರೂಪ. ಎರಡು ರೆಕ್ಕೆ ನಾಲ್ಕು ಕೈ ಹಾಗೂ ಎಂಟು ಕಾಲುಗಳುಳ್ಳ ಉಗ್ರರೂಪವೆ ಶರಭ.
ದಂತಕಥೆಯ0ತೆ ವಿಷ್ಣು ಸಿಂಹದ ಮುಖ ಮಾನವ ಶರೀರವಿರುವ ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪು ರಾಕ್ಷಸನನ್ನು ಸಂಹರಿಸಿದ. ತದನಂತರ ಆ ರಾಕ್ಷಸನ ರಕ್ತವು ನರಸಿಂಹನ ಮೈಮೇಲೆಲ್ಲ ಹರಡಿತ್ತು. ಅಲ್ಲದೆ ನರಸಿಂಹ ಕೋಪಾವೇಶದಲ್ಲಿ ಉನ್ಮತ್ತನಾಗಿ ಯಾರಿಂದಲೂ ಸಮಾಧಾನ ಮಾಡಲು ಸಾಧ್ಯವಿಲ್ಲವೆನ್ನುವಂತಾಗಿತ್ತು ಹಾಗೂ ಅವನ ಮೈಮೇಲಿರುವ ರಕ್ತದ ಹನಿಗಳು ಭೂಮಿಗೆ ಬಿದ್ದರೆ ಅವಿನಾಶಿ ರಾಕ್ಷಸರು ಜನ್ಮ ತಳೆಯಬಹುದಾದ ಘನಘೋರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಸರ್ವ ದೇವತೆಗಳು ಶಿವನಿಗೆ ಮೊರೆ ಹೋದಾಗ ಶಿವನು ಎತ್ತಿದ ಅವತಾರವೆ ಶರಭ. ಹೀಗಾಗಿ ಶಿವನನ್ನು ಶರಭೇಶ್ವರ ಎಂತಲೂ ಕರೆಯಲಾಗುತ್ತದೆ.
ಹೀಗೆ ಶರಭ ರೂಪ ಪಡೆದ ಶಿವ, ನರಸಿಂಹನನ್ನು ಗುರುತ್ವ ಕೇಂದ್ರದಿಂದ ಮೇಲೆ ಕರೆದೊಯ್ದು ಅವನ ಮೈಮೇಲಿರುವ ಎಲ್ಲ ರಕ್ತದ ಹನಿಗಳು ಆವಿಯಾಗುವಂತೆ ಮಾಡಿದನು. ಇದರಿಂದ ನರಸಿಂಹನು ಮತ್ತೆ ಪ್ರಸನ್ನಚಿತ್ತನಾಗಿ ಶಿವನಿಗೆ ಗೌರವಾದರಗಳನ್ನು ಸಲ್ಲಿಸಿದನು ಎನ್ನುತ್ತದೆ ಕಥೆ.
ಈ ರೀತಿಯಾಗಿ ಸರ್ವ ಶತ್ರುಗಳಿಂದ ಮುಕ್ತಿ ಪಡೆಯಲು, ಭಯದಿಂದ ಹೊರಬರಲು ಈ ಕಂಪಾಹರೇಶ್ವರ ದೇವಾಲಯಕ್ಕೆ ಭಕ್ತರು ಭೇಟಿ ನೀಡುತ್ತಾರೆ.