ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಟು ಪುತ್ತೂರು ಮಾರ್ಗವಾಗಿ 13 ಕಿಮೀ ಪ್ರಯಾಣಿಸಿದರೆ ಬಳ್ಪ ಗ್ರಾಮ ಸಿಗುತ್ತದೆ. ಅಲ್ಲಿ ಪಾಂಡವರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುವ ಸಂಪೂರ್ಣವಾಗಿ ಶಿಲೆಯಿಂದಲೇ ನಿರ್ಮಾಣಗೊಂಡಿರುವ ಶಕ್ತಿ ದೇವತೆಯ ಆರಾಧನಾ ಕೇಂದ್ರವಿದೆ. ಇಲ್ಲಿ ದುರ್ಗಾಪರಮೇಶ್ವರಿ ದೇವಿಯನ್ನು ಶಿಲೆಯಿಂದ ಮಾಡಿರುವ ತ್ರಿಶೂಲದ ಮೂಲಕ ಆರಾಧಿಸಲಾಗುತ್ತದೆ.
ಬಳ್ಪ (ದಕ್ಷಿಣಕನ್ನಡ ಜಿ.): ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆಯಲ್ಲಿರುವ ಶಿಲಾಮಯ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮವನವರ ವಾರ್ಷಿಕೋತ್ಸವ ಜ.6ರಿಂದ 10 ರವರೆಗೆ ನಡೆಯಲಿದೆ.
ಜ. 9 ರಂದು ಬ್ರಹ್ಮರಥೋತ್ಸವ ಹಾಗೂ 10 ರಂದು ಅವಭೃತೋತ್ಸವ ನಡೆಯಲಿದೆ.
2017ರಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡಿತು. ಈ ಸಂದರ್ಭದಲ್ಲಿ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಂರಕ್ಷಕರಾದ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದೇವಳಕ್ಕೆ ಆಗಮಿಸಿ ಆಶೀರ್ವಚನ ನೀಡಿದ್ದರು.
ಶಿಲಾ ತ್ರಿಶೂಲಕ್ಕೆ ಪೂಜೆ: ಈ ದೇವಸ್ಥಾನದಲ್ಲಿ ತ್ರಿಶೂಲಕ್ಕೆ ಪೂಜೆ ನೆರವೇರುವುದೇ ವಿಶೇಷತೆ. ಇಲ್ಲಿ ಪ್ರಮುಖವಾಗಿ ಶಿಲೆಯ ತ್ರಿಶೂಲವೇ ದೇವರಾಗಿದ್ದು, ದಕ್ಷಿಣ ಭಾರತದ ಏಕೈಕ ಶಕ್ತಿ ಕ್ಷೇತ್ರ ಎಂದು ನಂಬಲಾಗಿದೆ.
ಐತಿಹ್ಯ: ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆಯಲ್ಲಿರುವ ಶಿಲಾಮಯ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನ ರಾಜರ ಕಾಲದಲ್ಲಿ ಶಿಲೆಗಳಿಂದ ನಿರ್ಮಿತವಾದದ್ದು. ಒಂದು ಕಾಲದಲ್ಲಿಶಕ್ತಿ ಕ್ಷೇತ್ರವಾಗಿ ಅತ್ಯಂತ ಪ್ರಸಿದ್ಧಿ ಪಡೆದಿದ್ದ ಈ ದೇಗುಲ ಇದೀಗ ವಿಶಿಷ್ಟ ಶೈಲಿಯಲ್ಲಿ ಪುನರುತ್ಥಾನಗೊಂಡು ಮತ್ತೆ ವಿಜೃಂಭಿಸುತ್ತಿದೆ.
ಸಂಪೂರ್ಣ ಶಿಲಾಮಯ: ತ್ರಿಶೂಲಿನಿ ದೇವಾಲಯದ ಚಾವಣಿ, ಮೂರ್ತಿ, ಸ್ತಂಭಗಳು, ಗರ್ಭಗೃಹ, ಸುತ್ತುಪೌಳಿ, ಪ್ರಧಾನ ಗೋಪುರ, ಮಂಟಪ, ಬಾವಿ, ಕೆರೆ ಇತ್ಯಾದಿಗಳು ಶಿಲೆಗಳಿಂದಲೇ ನಿರ್ಮಿತವಾಗಿದೆ. ಇಂತಹ ದೇವಸ್ಥಾನ ಜಿಲ್ಲೆಯಲ್ಲಿಇನ್ನೊಂದಿಲ್ಲ.
ಇಲ್ಲಿನ ವಾಸ್ತುಶೈಲಿಯು ದಕ್ಷಿಣ ಭಾರತದ ದೇವಸ್ಥಾನಗಳಲ್ಲೇ ಅತ್ಯಂತ ವಿಶಿಷ್ಟತೆಯನ್ನು ಹೊಂದಿದೆ. ಈ ದೇವಾಲಯವು ಸುಮಾರು 1200 ವರ್ಷಗಳ ಇತಿಹಾಸ ಹೊಂದಿದ್ದು, ಅಲುಪ ಅರಸರು, ಕದಂಬ ಅರಸರು, ವಿಜಯನಗರ ಅರಸರು, ಕೆಳದಿ ಅರಸರ ಕಾಲದಲ್ಲಿಅತೀ ವೈಭವದಲ್ಲಿದ್ದ ಬಗ್ಗೆ ದಾಖಲೆಗಳು ಕಂಡುಬಂದಿವೆ. ವಿಜಯನಗರ ಅರಸ ಕಾಲದಲ್ಲಿಈ ದೇವಾಲಯ ಜೀರ್ಣೋದ್ಧಾರಗೊಂಡ ಬಗ್ಗೆಯೂ ದಾಖಲೆ ಇದೆ. ಬಳಿಕ ಸುಮಾರು 500 ವರ್ಷಗಳ ಹಿಂದೆ ಕಡಬ ಅರಸರ ಕಾಲದಲ್ಲಿಈ ದೇವಾಲಯ ಜೀರ್ಣೋದ್ಧಾರಗೊಂಡ ಬಗ್ಗೆ ಶಾಸನಗಳು ತಿಳಿಸುತ್ತದೆ.
ಚೆನ್ನಾಗಿದೆ ಅಕ್ಮಾ. ನಮ್ಮ ಮನೆಯಿ್ದ 16 km ದೂರ ಇದೆ ಅಲ್ಲಿಗೆ
thnak you