ಕೊಲ್ಲಿಪಾಕಿ(ತೆಲಂಗಾಣ): ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಿವನ ಆರಾಧನೆ ನಡೆಯುತ್ತಲೇ ಬಂದಿದೆ. ಸುಖ, ಶಾಂತಿ ಮತ್ತು ಆತ್ಮಬಲ ಸಂವರ್ಧನೆಗೆ ಭಗವಂತನ ನೆನಹು ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು
ಶ್ರೀ ಜಗದ್ಗುರು ರೇಣುಕಾಚಾರ್ಯ ಆವಿರ್ಭಸಿದ ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಜನವರಿ 5ರಂದು ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನ ಬುದ್ಧಿ ಶಕ್ತಿ ಬೆಳೆಯಿತೇ ವಿನಾಃ ಭಾವನೆಗಳು ಬೆಳೆಯಲಿಲ್ಲ. ನಾನು ನನ್ನದು ಎನ್ನುವ ಸ್ವಾರ್ಥಮನೋಭಾವ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಕಾರಣ ಎಲ್ಲ ರಂಗಗಳಲ್ಲಿ ಅಶಾಂತಿ, ಅತೃಪ್ತಿ ತಾಂಡವಾಡುತ್ತಿವೆ. ದೇಔರಲ್ಲಿ ಶ್ರದ್ಧೆ, ಗುರು ಹಿರಿಯರಲ್ಲಿ ವಿಧೇಯತೆ, ಮಾಡುವ ಕೆಲಸದಲ್ಲಿ ಆಸಕ್ತಿ ಬೆಳೆಸುವ ಅವಶ್ಯಕತೆಯಿದೆ. ಅತಿಯಾದ ವೈಚಾರಿಕತೆ ನಾಸ್ತಿಕ ಮನೋಪ್ರವೃತ್ತಿಯಿಂದ ಮನುಷ್ಯ ಜೀವನದಲ್ಲಿ ತೃಪ್ತಿ ಸಮಾಧಾನ ಕಾಣೂತ್ತಿಲ್ಲ. ವಿಶ್ವಬಂಧುತ್ವ ಸಾರಿದ ಶ್ರೀ ಜಗದ್ಗುರು ರೇಣೂಕಾಚಾರ್ಯರ ಜನ ಹಿತ ಧಾರ್ಮಿಕ, ಸಾಮಾಜಿಕ ಚಿಂತನೆಗಳು ಸರ್ವಕಾಲಕ್ಕೂ, ಸರ್ವರಿಗೂ ಅನ್ವಯಿಸುತ್ತವೆ ಎಂದು ಶ್ರೀಗಳು ನುಡಿದರು.
ಮಂಗಲಗಿ ಹಿರೇಮಠದ ಡಾ.ಶಂಭುಲಿಂಗ ಶಿವಾಚಾರ್ಯರು ಮತ್ತು ತೊಟ್ನಳ್ಳಿ ಹಿರೇಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು.
ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ನ ಉಪಾಧ್ಯಕ್ಷ ಹೈದರಾಬಾದ್ನ ಎಂ.ವೀರಮಲ್ಲೇಶ, ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ವಿಜಯಕುಮಾರ ಹೇರೂರು, ಬಾಬೂರಾವ್ ಬಿರಾದಾರ, ಜಗದೇವಯ್ಯ ಹಿರೇಮಠ, ಅರ್ಚಕ ಸೋಮಯ್ಯ ಮತ್ತು ಗಂಘಾಧರ ಉಪಸ್ಥಿತರಿದ್ದರು.
ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಅವರು ಸಮಾರಂಭದ ನೇತೃತ್ವ ವಹಿಸಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ರುದ್ರಾಭಿಷೇಕ, ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಹಾಗೂ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನೆರವೇರಿತು.
ಸ್ಥಳೀಯ ಹಾಗೂ ವಿವಿಧೆಡೆಯಿಂದ ಬಂದ ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳವರ ದರ್ಶನ ಪಡೆದರು.
ಕಲಬುರ್ಗಿ ನಗರದ ಗಿರಿಯಪ್ಪ ಮುತ್ಯಾ ಅನ್ನದಾಸೋಹ ನೆರವೇರಿಸಿದರು.
ವರದಿ: ಸಿ.ಎಚ್.ಬಾಳನಗೌಡ್ರ, ವಾರ್ತಾ ಸಂಯೋಜನಾಧಿಕಾರಿ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಮಠ ಬಾಳೆಹೊನ್ನೂರು