ತುಮಕೂರು: ರಾಮಮಂದಿರವನ್ನು ಕಟ್ಟುವುದಕ್ಕಾಗಿ ಎಂದಾಗಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ ಎಂದಾಗಲಿ ದುಡ್ಡು, ದೇಣಿಗೆ, ವಂತಿಗೆಯನ್ನು ಕೊಡಬೇಕಿಲ್ಲ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದಕ್ಕಾಗಿ ದೇಣಿಗೆಯನ್ನು ಕೊಡಬೇಕಿದೆ ಎಂದು ತುಮಕೂರು ಹಿರೇಮಠದ ಶ್ರೀಗಳಾದ ಡಾ. ಶಿವಾನಂದ ಶಿವಾಚಾರ್ಯ ಅವರು ಅಭಿಪ್ರಾಯಪಟ್ಟರು.
“ಅಯೋಧ್ಯಾ ರಾಮನಿಗೆ ತುಮಕೂರಿನ ಹನುಮ ಬಳಗ’ ಜನವರಿ 11ರಂದು ತುಮಕೂರಿನ ಕೋತಿತೋಪು ‘ಸಾಧನ’ ದಲ್ಲಿ ಏರ್ಪಡಿಸಿದ್ದಅಯೋಧ್ಯಾ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ತುಮಕೂರು ನಗರ ಮತ್ತು ಗ್ರಾಮಾಂತರ ಕಾರ್ಯಾಲಯ ಲೋಕಾರ್ಪಣೆ ಮಾಡಿದರು. ನಂತರ ಕರಪತ್ರ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
“ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನನ್ನದೂ ಪಾತ್ರ ಇದೆ, ನನ್ನದೂ ಒಂದಷ್ಟು ಭೂಮಿಕೆ ಇದೆ, ನನ್ನ ಅಳಿಲುಸೇವೆಯೂ ಸೇರಿಕೊಂಡಿದೆ ಎಂದು ನಾಳಿನ ದಿನಗಳಲ್ಲಿ ಹೆಮ್ಮೆಯಿಂದ ನಮ್ಮ ಬಂಧು-ಮಿತ್ರರ ಮುಂದೆ, ದೇಶಬಾಂಧವರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕಾಗಿ ಮತ್ತು ಹಾಗೆಂದು ಹೆಮ್ಮೆಪಟ್ಟುಕೊಳ್ಳುವುದಕ್ಕಾಗಿ ದೇಣಿಗೆಯನ್ನು ಕೊಡಬೇಕಿದೆ. ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯನ್ನು ಕೊಡುವುದೆಂದರೆ, ಅದು ನಮ್ಮನ್ನೇ ನಾವು ಸನ್ಮಾನಿಸಿಕೊಂಡ ಹಾಗೆ. ಅದು ನಮ್ಮನ್ನೇ ನಾವು ಗೌರವಿಸಿಕೊಂಡ ಹಾಗೆ. ನಾವು ಭಾರತೀಯರು,`ರಾಮ ರಾಜನಾಗಿದ್ದ’ ಎಂಬ ಕಾರಣದಿಂದ ಆತನನ್ನು ಗೌರವಿಸುತ್ತಿಲ್ಲ. ‘ರಾಮ ಅಯೋಧ್ಯಾಧೀಶನಾಗಿದ್ದ’ ಎಂಬ ಕಾರಣದಿಂದ ಆತನನ್ನು ಪೂಜಿಸುತ್ತಿಲ್ಲ. ನಾವು ರಾಮನನ್ನು ಪೂಜಿಸುತ್ತಿರುವುದು ಮತ್ತು ರಾಮನನ್ನು ಗೌರವಿಸುತ್ತಿರುವುದು ಆತ ‘ಮರ್ಯಾದಾಪುರುಷೋತ್ತಮ’ ಎಂಬ ಕಾರಣದಿಂದಾಗಿ! ರಾಮ ಆದರ್ಶ ಪುತ್ರ, ರಾಮ ಒಳ್ಳೆಯ ಅಣ್ಣ, ರಾಮ ಆದರ್ಶ ಪತಿ, ರಾಮ ಒಳ್ಳೆಯ ರಾಜ, ರಾಮ ಯಾರಲ್ಲೂ ದೋಷವನ್ನು ಕಾಣದೆ ಎಲ್ಲರಲ್ಲೂ ಒಳಿತನ್ನು ಹುಡುಕಿಕೊಂಡು ಹೋಗುವ ವ್ಯಕ್ತಿ ಎಂಬ ಕಾರಣದಿಂದ ದೇಶವಿದು ರಾಮನನ್ನು ಗೌರವಿಸುತ್ತಿದೆ, ರಾಮನನ್ನು ಪೂಜಿಸುತ್ತಿದೆ. ರಾಮ ನಮ್ಮೆಲ್ಲರ ಆದರ್ಶ, ಆರಾಧ್ಯ ಅಷ್ಟೇ ಅಲ್ಲ; ರಾಮ ನಮ್ಮೆಲ್ಲರ ಅಹಮ್ಮು ಮತ್ತು ಅಸ್ಮಿತೆ ಎಂದರು.