ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಮಹತ್ವ

ಮಕರಸಂಕ್ರಮಣ ಉತ್ತರಾಯಣದ ಪರ್ವಕಾಲ. ಎಳ್ಳು, ಕಬ್ಬು, ಸಕ್ಕರೆ ಅಚ್ಚುಗಳನ್ನು ದೇವರಿಗೆ ಸಮರ್ಪಣೆ ಮಾಡಿ ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆಯುವುದು ರೂಢಿ. ಉತ್ತರಾಯಣ ಪರ್ವಕಾಲದಲ್ಲಿ ಕರಿಎಳ್ಳು ಅರೆದು ಅದನ್ನು ಹಚ್ಚಿಕೊಂಡು ಎಲ್ಲರೂ ಸ್ನಾನಮಾಡಲೇಬೇಕು. ಹೆoಗಸರು, ಮಕ್ಕಳು ಕೂಡ. ಇದರಿಂದ ಮನುಷ್ಯ ನಿರೋಗಿಯಾಗುವನೆಂದು ಧರ್ಮಶಾಸ್ತ್ರ ಹೇಳುತ್ತದೆ.

‘ರವಿ ಸಂಕ್ರಮಣೆ ಪ್ರಾಪ್ತೇನ ಸ್ನಾಯದ್ಯಸ್ತು ಮಾನವಃ’ ‘ಸಪ್ತಜನ್ಮಸು ರೋಗಿ ಸ್ಯಾತ್ ನಿರ್ಧನಶ್ಚೈವ ಜಾಯತೇ ||’. ಸಂಕ್ರಮಣದಂತಹ ಪರ್ವಕಾಲದಲ್ಲಿ ಸ್ನಾನ ಮಾಡದವನು ಏಳು ಜನ್ಮಗಳಲ್ಲಿ ರೋಗಿಯಾಗಿಯೂಁ ದರಿದ್ರನಾಗಿಯೂ ಹುಟ್ಟುವನು.

ಹೆಣ್ಣುಮಕ್ಕಳು ಭೋಗಿಹಬ್ಬದ ದಿನ ಪ್ರಾತಃಕಾಲದಲ್ಲಿ ಅಭ್ಯಂಗ ಮಾಡಿಕೊಂಡು ಸಿಹಿಕುಂಬಳಕಾಯಿಯನ್ನು ದಾನಕೊಡಬೇಕು. ಉತ್ತರಾಯಣ ಪರ್ವದಿನದಂದು ಹೆಂಗಸರು ತಲೆಯ ಮೇಲೆ ಸ್ನಾನ ಮಾಡಬಾರದು. ಆದರೆ ಎಳ್ಳು ಮೈಗೆ ತಿಕ್ಕಿಕೊಂಡು ಸ್ನಾನ ಮಾಡಬೇಕು. ದೇವರಿಗೆ ಸಮರ್ಪಿತವಾದ ಎಳ್ಳು ಬೆಲ್ಲವನ್ನು ತಿನ್ನಬೇಕು, ಅದನ್ನು ಹಿರಿಯರಿಗೆ ದಾನ ಮಾಡಬೇಕು.

“ತಿಲಸ್ನಾಯಿ ತಿಲೋದ್ವರ್ತಿ ತಿಲಹೋಮಿ ತಿಲೋದಕೀ | ತಿಲಬುಕ್ ತಿಲದಾತ ಚ ಷಟ್ತಿಲ. ಪಾಪನಾಶನಃ ||’ ಮಕರ ಸಂಕ್ರಮಣ ದಂದು ಯಾರು ಎಳ್ಳು ಹಚ್ಚಿ ಸ್ನಾನ, ಎಳ್ಳು ದಾನ, ಎಳ್ಳು ಭಕ್ಷಣ, ಎಳ್ಳಿನಿಂದ ತರ್ಪಣ, ಎಳ್ಳೆಣ್ಣೆಯ ದೀಪ ಹಚ್ಚುವರೋ ಅವರ ಪಾಪಗಳು ನಾಶವಾಗುವುದು.

ಮಕರ ತಿಲದಾನದ ಮಹತ್ವ

ಸಂಕ್ರಮಣದಲ್ಲಿ ಆದರಲ್ಲೂ ಮಕರಸಂಕ್ರಮಣದಲ್ಲಿ ತಿಲ (ಎಳ್ಳು)ದಾನವು ಬಹಳ ಶ್ರೇಷ್ಠವಾದದ್ದು . ಉತ್ತರಾಯಣದಲ್ಲಿ ತಿಲಸ್ನಾನ, ತಿಲಯುಕ್ತವಾದ ಪಂಚಗವ್ಯ ಪ್ರಾಶನ, ತಿಲಭಕ್ಷಣ ತಿಲೋದ್ವರ್ತನ ಪಿತೃಗಳಿಗೆ ತಿಲತರ್ಪಣ, ತಿಲ ಹೋಮ, ಹೀಗೆ ಆರು ಕರ್ಮಗಳು ಕಡ್ಡಾಯ. ಮತ್ತು ತಾಮ್ರ ಪಾತ್ರೆಯಲ್ಲಿ ಎಳ್ಳನ್ನು ಹಾಕಿ ದಕ್ಷಿಣೆ ಸಮೇತ ದಾನ ಮಾಡಬೇಕು.

ಮಕರ ಸಂಕ್ರಮಣದಲ್ಲಿಎಳ್ಳೆಣ್ಣೆಯಿoದ ದೀಪಗಳನ್ನು ಹಚ್ಚಬೇಕು. ಮಕರಮಾಸದಲ್ಲಿ ತಿಲವನ್ನು ಭಕ್ಷಿಸುವುದರಿಂದ ದೇಹವು ಕಾಂತಿಯುಕ್ತವಾಗುವುದು. ಸೂರ್ಯನ ಪ್ರೀತಿಗಾಗಿ ಮಾಣಿಕ್ಯ, ಗೋಧಿ, ಕೆಂಪುವಸ್ತ್ರ, ಬೆಲ್ಲ, ತಾಮ್ರ ಇವುಗಳನ್ನು ದಾನ ಮಾಡಬೇಕು.

* ಫಣೀಂದ್ರ ಕೌಲಗಿ, ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್

Related Articles

ಪ್ರತಿಕ್ರಿಯೆ ನೀಡಿ

Latest Articles