* ವೈ.ಬಿ.ಕಡಕೋಳ
ಸವದತ್ತಿ ತಾಲೂಕಿನ ಗೊರವನಕೊಳ್ಳ ವಟ್ನಾಳ ಗ್ರಾಮಗಳ ಹತ್ತಿರ ನವಿಲುತೀರ್ಥ ಅಣೆಕಟ್ಟೆಗೆ ಹೋಗುವ ರಸ್ತೆಯೊಂದಿಗೆ ಇದು ನಿರ್ಭಂದಿತ ಪ್ರದೇಶ. ಸುತ್ತಲೂ ನೀಲಗಿರಿ ಗಿಡಗಳು. ಒಂದೆಡೆ ಅಣೆಕಟ್ಟಿನಿಂದ ಹಿನ್ನೀರನ್ನು ಹೊಂದಿದ ಮಲಪ್ರಭೆಯ ಒಡಲು. ವಟ್ನಾಳ ಗುಡ್ಡದಲ್ಲಿ ಹನಸಿ ಶಿಕ್ಷಣ ಸಂಸ್ಥೆಯ ಸಮೂಹ ಶಿಕ್ಷಣ ಶಾಲೆಗಳು ಇಲ್ಲಿ ನೆಲೆನಿಂತಿವೆ. ಅಲ್ಲಿ ಒಂದು ಮಠವಿದೆ. ಇದೊಂದು ಬಿದರಿ ಕುಮಾರಸ್ವಾಮಿಗಳು ತಪಾನುಷ್ಠಾನಗೈದ ಪವಿತ್ರ ಸ್ಥಳ.
ನವಿಲುತೀರ್ಥ(ವಡಕಹೊಳಿ)ದಲ್ಲಿ ಅನುಷ್ಠಾನ
ಸವದತ್ತಿ ಶ್ರೀ ಕಲ್ಮಠದ ಬಿದರಿ ಶ್ರೀ ಕುಮಾರ ಶಿವಯೋಗಿಗಳ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ವೀರಶೈವ ಧರ್ಮ ಸ್ಥಾಪನೆಗೊಂಡಾಗ ಅದಕ್ಕೆ ಚಲನಶೀಲತೆ ಒದಗಿಸಿ ಮತ್ತೆ ಅದು ಜನಮಾನಸದ ಹೃದಯಕ್ಕೆ ಹರಿದು ಬರುವಂತೆ ಮಾಡಿದವರು ಬಿದರಿ ಶ್ರೀ ಕುಮಾರ ಶಿವಯೋಗಿಗಳು. ಸವದತ್ತಿಗೆ ಬಂದ ಶ್ರೀಗಳು ಲೋಕದ ಗದ್ದಲದಿಂದ ದೂರವಿದ್ದು ತಪಸ್ಸುಗೈಯುವ ಮನಸಾಯಿತು. ಅವರ ಮನಸ್ಸು ಸದಾ ಧ್ಯಾನ ಮಾಡುತ್ತ ಚಿನ್ಮಯಾನಂದದಲ್ಲಿ ಮುಳುಗಿರಲು ಬಯಸುತ್ತಿತ್ತು.
ಮಲಪ್ರಭಾ ನದಿ ದಂಡೆಯ ಮೇಲೆ ವಡಕು ಹೊಳೆ ಅಥವ ಇಂದಿನ ನವಿಲುತೀರ್ಥ ಎಂದು ಗುರುತಿಸುವ ಗಿಡಮರ ಬಳ್ಳಿಗಳಿಂದ ಕೂಡಿದ ಕಾಡನ್ನು ನಡೆದರು. ಅದು ಜನಸಂಚಾರವಿಲ್ಲದ ದುರ್ಗಮ ಕಾಡು. ಯೋಗಿಗೆ ಇದಕ್ಕಿಂತ ಯೋಗ್ಯವಾದ ಜಾಗ ಮತ್ತೊಂದಿಲ್ಲ ಎನಿಸಿತು. ಅಲ್ಲಿ ತಪ್ಪಸ್ಸಾರಂಭವಾಯಿತು. ಆದರೆ ಸವದತ್ತಿಯ ಜನರು ಬಿಡಬೇಕಲ್ಲ ಅಲ್ಲಿಗೂ ಬರತೊಡಗಿದರು. ಅಂಥ ದುರ್ಗಮ ಕಾಡಿನಲ್ಲಿ ಧ್ಯಾನಾಸಕ್ತರಾಗಿ ಕುಳಿತಿದ್ದನ್ನು ಶ್ರೀಗಳನ್ನು ಗೊರನವಕೊಳ್ಳದ ಹನುಮನಾಯಕ ಬೇಟೆಗಾರನು ನೋಡಿದ. ಆತ ಹೃದಯದಲ್ಲಿ ಭಕ್ತಿವಂತನಾಗಿದ್ದ. ಅವನು ಬಿಸಿಲು ಮಳೆಗಳೆನ್ನದೇ ತಪಸ್ಸಿನಲ್ಲಿ ತೊಡಗಿದ್ದ ಶ್ರೀಗಳನ್ನು ಕಂಡು ಅವರಿಗೊಂದು ಗುಡಿಸಲು ನಿರ್ಮಿಸಿಕೊಡಲು ತನ್ನ ಮನದಾಳವನ್ನು ಅವರಲ್ಲಿ ನಿವೇದಿಸಿಕೊಂಡ. ಅವನ ಭಕ್ತಿಗೆ ಮಣಿದ ಶ್ರೀಗಳು ಆಯಿತು ಕಟ್ಟು ಎಂದು ಒಪ್ಪಿಗೆ ಕೊಟ್ಟರು.
ಇತ್ತ ಸವದತ್ತಿಗೆ ಬರುವಂತೆ ಸವದತ್ತಿಯ ಭಕ್ತರು ಕೋರಿಕೊಳ್ಳುತ್ತಿದ್ದರು. ಎರಡು ತಿಂಗಳು ಕಾಲ ಅನುಷ್ಠಾನಗೈದು ಸವದತ್ತಿಯತ್ತ ಶ್ರೀಗಳು ಹೊರಟು ನಿಂತಾಗ ಕಾಡಿನಲ್ಲಿದ್ದ ಹುಲಿಯೊಂದು ಇವರನ್ನು ಹಿಂಬಾಲಿಸತೊಡಗಿತು. ಆಗ ಅದಕ್ಕೆ “ಎಲೆ ಮಗ, ಇಲ್ಲೇ ಇದ್ದು ಜೀವ ಸವೆಸು” ಎಂದು ಆಜ್ಞಾಪಿಸಿದರು. ಇಡೀ ಜನತೆ ಇದನ್ನು ಕಂಡು ದಿಗ್ಬಾçಂತರಾದರು. ಹುಲಿ ಮೌನವಾಗಿ ಹಿಂದೆ ಸರಿಯಿತು. ಪೂಜ್ಯರು ಸವದತ್ತಿಗೆ ಆಗಮಿಸಿದರು. ಹೀಗೆ ಗೊರವನಕೊಳ್ಳ ವಟ್ನಾಳ ಹತ್ತಿರದ ಮಲಪ್ರಭೆಯ ಒಡಲ ತಟದಲ್ಲಿ ಅನುಷ್ಠಾನಗೈದ ಸ್ಥಳ ಇಂದಿಗೂ ಕೂಡ ತೆಪ್ಪೋತ್ಸವ ಮತ್ತು ರಥೋತ್ಸವದ ಮೂಲಕ ಅವರ ನೆನಪನ್ನು ಹಚ್ಚಹಸಿರಾಗಿಸಿದೆ.
ಮಲಪ್ರಭೆಯ ತಟದಲ್ಲಿ ಕುಮಾರಸ್ವಾಮಿಗಳು ತಪೋನಿರತರಾಗಿದ್ದ ಸಮಯದಲ್ಲಿ ಗೊರವನಕೊಳ್ಳ ಮತ್ತು ವಟ್ನಾಳ ಗ್ರಾಮದ ಜನತೆಯ ಭಕ್ತಿ ಪರವಶತೆ ಇಂದು ಇಲ್ಲೊಂದು ಮಠದ ಕಟ್ಟಡ ನೆಲೆನಿಂತು ಪ್ರತಿ ವರ್ಷ ಜಮಖಂಡಿಯ ಓಲೆಮಠದ ಪರಮಪೂಜ್ಯ ಡಾ.ಅಭಿನವಕುಮಾರ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಜಾತ್ರೆ ಜರಗುತ್ತಿರುವುದು ವಿಶೇಷ.
ಅಂದ ಹಾಗೆ ಜಮಖಂಡಿ ಓಲೆಮಠದ ಪೂಜ್ಯರು ನಾಡಿನಾದ್ಯಂತ ತಮ್ಮ ಪ್ರವಚನ ಹಾಗೂ ಕೃತಿತತ್ವದಿಂದಾಗಿ ಚಿರಪರಿಚಿತರು. ವಿದ್ಯಾರ್ಥಿದೆಸೆಯಿಂದಲೇ ಎಲ್ಲರಿಂದ “ಕಾಶಿಪಂಡಿತ” ಎಂದು ಕರೆಸಿಕೊಂಡವರು. ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಈ ತಲೆಮಾರಿನ ಮಠಾಧೀಶರು ಹೆಚ್ಚು ಹೆಚ್ಚು ತಮ್ಮನ್ನು ಅಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳೊಂದಿಗೆ ಸಾಹಿತ್ಯ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಸರಿ. ಈಗ ನಾಲ್ಕು ವರ್ಷದ ಹಿಂದೆ ಸವದತ್ತಿ ತಾಲೂಕಿನ ಗಾಣಿಗ ಸಮಾಜದ ನೌಕರರ ಮೊದಲ ಕರ‍್ಯಕ್ರಮಕ್ಕೆ ಪೂಜ್ಯರನ್ನು ದಿವ್ಯಸಾನಿಧ್ಯವನ್ನು ವಹಿಸಲು ಕೋರಿ ಜಮಖಂಡಿಗೆ ಹೋಗಿದ್ದೆವು. ಅಂದು ಪೂಜ್ಯರು ತಮ್ಮ ಸಾಹಿತ್ಯ ಕೃತಿಗಳನ್ನು ನನಗೆ ನೀಡಿದರು.ಒಂದೊ0ದು ಕೃತಿಯೂ ಅಮೂಲ್ಯವಾಗಿದ್ದವು. ಅಷ್ಟೇ ಅಲ್ಲ 2014 ರಲ್ಲಿ ಅವರ ಕೃತಿಗಳ ಅವಲೋಕನ ಕೂಡ ನಡೆದದ್ದು ಕೂಡ ಸ್ಮರಣೀಯ. ಹೀಗಾಗಿ ಇಂದು ಗೊರವನಕೊಳ್ಳ ವಟ್ನಾಳ ಜಾತ್ರೆಯ ಹಿನ್ನಲೆಯಲ್ಲಿ ಪೂಜ್ಯರ ಕಿರು ಪರಿಚಯದೊಡನೆ ಕ್ಷೇತ್ರ ದರ್ಶನ ಮಾಡಹೊರಟಿರುವೆ.
ಪೂಜ್ಯರ ಪರಿಚಯ
ಓಲೇಮಠದ ಪರಮ ಪೂಜ್ಯ ಡಾ.ಅಭಿನವಕುಮಾರ ಚನ್ನಬಸವ ಮಹಾಸ್ವಾಮೀಜಿಯವರದು ವಿಶಿಷ್ಟ ವ್ಯಕ್ತಿತ್ವ. ಸದಾ ಒಂದಿಲ್ಲೊ0ದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜಮಖ0ಡಿ ಓಲೆಮಠದ ಪೂಜ್ಯರು ನಾಡಿನಾದ್ಯಂತ ತಮ್ಮ ಪ್ರವಚನ ಹಾಗೂ ಕೃತಿ ತತ್ವದಿಂದಾಗಿ ಚಿರಪರಿಚಿತರು.
ಪೂಜ್ಯರು 1963 ಜೂನ್ 15 ರಂದು ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಶರಣ ದಂಪತಿಗಳಾದ ಬಸಲಿಂಗಯ್ಯ ಶರಣೆ ಗಂಗಮ್ಮನವರ ಉದರದಲ್ಲಿ ಜನಿಸಿದರು. ಬಿದರಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಬೆಳಗಾವಿಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ, ಮಠಾಧೀಶರಿಗೆ ಅವಶ್ಯಕವಾದ ಅಧ್ಯಾತ್ಮ ಶಿಕ್ಷಣವನ್ನು “ಶಿವಯೋಗ ಮಂದಿರ”ದಲ್ಲಿ ಪಡೆದರು. ಸನಾತನ ಧರ್ಮ ಇಂಟರ ಕಾಲೇಜ ಬನಾರಸದಿಂದ “ಇಂಟರ ಮೀಡಿಯಟ್” ಮುಗಿಸಿ.ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಬಿ.ಎ (ಹಿಂದಿ) ಮತ್ತು ಕಾಶಿ ವಿದ್ಯಾಪೀಠದಿಂದ ಎಂ.ಎ.ಪದವಿ, ತಿರುಪತಿಯ ಸಂಸ್ಕೃತ ವಿದ್ಯಾಪೀಠದಿಂದ ಸಂಸ್ಕೃತ, ಎಂ.ಎ ತಿರುಪತಿಯ ಖೇಮ್ಡ ವಿಶ್ವವಿದ್ಯಾಲಯದಿಂದ “ಶಿವಾನುಭವ ಸೂತ್ರ ಶಿವಾಗಮನುರೊಹದು ಷಟಸ್ಥಲ ಸಮೀಕ್ಷಣಂ” ಎಂಬ ವಿಷಯದಲ್ಲಿ ಸಂಶೋಧನ ಕೈಗೊಂಡರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ಮಗ್ಗಿಯ ಮಾಯಿದೇವನ ಶಿವಾನುಭವ ಒಂದು ಅಧ್ಯಯನ” ಕುರಿತು ಸಂಶೋಧನ ಗ್ರಂಥಕ್ಕೆ ಡಾಕ್ಟರೇಟ್ ಪದವಿ ಲಭಿಸಿತು.
ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡ ಪೂಜ್ಯರು ಇದುವರೆಗೆ 65 ಕೃತಿಗಳನ್ನು ಪ್ರಕಟಿಸಿದ್ದು. ಸದ್ಯ ಇನ್ನೂ 5 ಕೃತಿಗಳು ಮುದ್ರಣ ಹಂತದಲ್ಲಿರುವುದು ಗಮನಾರ್ಹ. ದೇಶ ಸುತ್ತು ಕೋಶ ಓದು ಎಂಬ ನುಡಿಯಂತೆ ವಿವಿಧ ದೇಶಗಳ ಪ್ರವಾಸ ಕೈಗೊಂಡು ಪ್ರವಾಸಕಥನಗಳನ್ನು ಕೂಡ ಪ್ರಕಟಿಸಿದ ಕೀರ್ತಿ ಇವರದು. ಅಂತರ್ಜಾಲದ ಸದುಪಯೋಗ ಪಡೆಯುತ್ತಿರುವ ಸ್ವಾಮೀಜಿಗಳಲ್ಲಿ ಪ್ರಮುಖರು. ಪ್ರತಿದಿನ ಧಾರ್ಮಿಕ ಸಾಂಸ್ಕೃತಿಕ ಯಾವುದೇ ಚಟುವಟಿಕೆಗಳಲ್ಲಿ ಪೂಜ್ಯರು ನಿರತರಾಗುವರೋ ಅದೇ ದಿನ ಅದನ್ನು ವ್ಯಾಟ್ಸಪ್, ಮೆಸೆಂಜರ್, ಫೇಸಬುಕ್‌ಗಳಲ್ಲಿ ಅಳವಡಿಸುವ ಮೂಲಕ ಚಲನಶೀಲತೆಯನ್ನು ಕಾಯ್ದುಕೊಂಡಿರುವರು.
ಪೂಜ್ಯರ ಪುಸ್ತಕ ಪ್ರೀತಿ ಎಂತಹುದೆ0ದರೆ ಅನಾರೋಗ್ಯ ಕಾಲದಲ್ಲಿಯೂ ಗುಳಿಗೆಗಳಿಗಿಂತ ಹೆಚ್ಚು ಪುಸ್ತಕಗಳ ಓದು ಮನಸ್ಸನ್ನು ಚಲನಶೀಲವಾಗಿಡಬಲ್ಲದು ಎನ್ನುವ ಇವರು ನವಿಲುತೀರ್ಥದ ವಡಕಹೊಳಿ ಕುರಿತು “ನವಿಲುತೀರ್ಥದ ಯಾತ್ರೆ ಜಾತ್ರೆ” ಎನ್ನುವ ತಮ್ಮ 65ನೇ ಕೃತಿಯಲ್ಲಿ ಪುಟ 32 ರಲ್ಲಿ ನವಿಲುತೀರ್ಥ 15 ಎಂಬ ಶೀರ್ಷಿಕೆಯಲ್ಲಿ ಪೂಜ್ಯರು ಈ ರೀತಿ ಬರೆದಿರುವರು- ನೀರು-ಏರು-ಊರು ಇದ್ದಲ್ಲಿ ವಾಸ ಮಾಡಬೇಕಂತೆ. ವಟ್ನಾಳ ಗೊರವನಕೊಳ್ಳವು ಅಂಥ ಸ್ಥಳವಾಗಿದೆ. ಬೆಟ್ಟದ ಏರಿದೆ. ಏರಿನಲ್ಲಿಯೇ ಊರು ಇದೆ.ನಡುವೆ ಹೆದ್ದಾರಿ ಇದೆ. ಏಳುಕೊಳ್ಳ ಏಳುಕೊಳ್ಳ ಎಂದು ರೇಣುಕೆಯ ಭಕ್ತರು ಉಗ್ಗಡಿಸುತ್ತಿರುತ್ತಾರೆ. ಏಳುಕೊಳ್ಳದಲ್ಲಿ ಒಂದು ಈ ವಟ್ನಾಳ ಗೊರವನಕೊಳ್ಳ ಎಂದು ಈ ಕ್ಷೇತ್ರದ ಪರಿಚಯ ಮಾಡಿರುವರು. ಇಂದು ಇದೊಂದು ಅದ್ಬುತ ತಾಣವಾಗಿದ್ದು, ಮಠವನ್ನು ಪ್ರವೇಶಿಸುತ್ತಲೇ ಮೂವರು ಶರಣರ ಮೂರ್ತಿಗಳು ಬಿದರಿ ಲಿಂ.ಕುಮಾರ ಶಿವಯೋಗಿಗಳು, ಲಿಂ.ಹಾನಗಲ್ ಕುಮಾರ ಶಿವಯೋಗಿಗಳು, ಹಾವೇರಿಯ ಲಿಂ.ಶಿವಬಸವ ಮಹಾಸ್ವಾಮಿಗಳ ಮೂರ್ತಿಗಳು ನಮ್ಮನ್ನು ಆಕರ್ಷಿಸುತ್ತವೆ. ಇವು ಅಮೃತ ಶಿಲೆಯಲ್ಲಿ ಮೂಡಿಬಂದಿವೆ.
ಮಹಾದ್ವಾರದ ಮೇಲೆಯೂ ಕೂಡ ಈ ಮೂರ್ತಿಗಳಿರುವುದು ವಿಶೇಷ. ಇಲ್ಲಿ ಹಚ್ಚ ಹಸುರಿನ ಹುಲ್ಲು ಹಾಸಿದೆ. ಎದುರಿಗೆ ಸಭಾಮಂಟಪವಿದೆ. ಒ0ದೆಡೆ ಜಾತ್ರೆಯ ರಥದ ಕೊಠಡಿಯಿದೆ. ಪಕ್ಕದಲ್ಲಿ ಮಲಪ್ರಭೆಯ ಒಡಲು ಅಲ್ಲಿ ಇತ್ತೀಚಿಗೆ ಬೋಟುಗಳ ಆಗಮನ ಪ್ರವಾಸಿಗರಿಗೆ ನದಿಯಲ್ಲಿ ಸಂಚರಿಸಲು ಅನುಕೂಲ ಮಾಡಿಕೊಟ್ಟಿವೆ. ಜಮಖಂಡಿಯಲ್ಲಿರುವ ಪೂಜ್ಯರು ಪ್ರತಿವರ್ಷ ಸಂಕ್ರಮಣ ಜಾತ್ರೆಗೆ ತಪ್ಪದೇ ಬರುತ್ತಿರುವುದು ಸ್ಮರಣೀಯ. ಇಲ್ಲಿನ ಭಕ್ತರು ಕೂಡ ಪ್ರತಿಯೊಂದು ಕಾರ‍್ಯಕ್ರಮಗಳನ್ನು ಮಾಡುವಾಗ ಪೂಜ್ಯರ ಸಲಹೆಯನ್ನು ಕೇಳುವ ಮೂಲಕ ತಮ್ಮ ಭಕ್ತಪರವಶತೆಯನ್ನು ಉಳಿಸಿಕೊಂಡಿರುವರು. ಪೂಜ್ಯರು ವಿದ್ಯಾರ್ಥಿ ದೆಸೆಯಲ್ಲಿಯೇ ಒಂದು ಸುವರ್ಣ ಪದಕ ಎರಡು ರಜತ ಪದಕ, ಸಾಂತ್ವನ ಪ್ರಶಸ್ತಿ, ಬಸವಕಾರುಣ್ಯ ಪ್ರಶಸ್ತಿಗೆ ಭಾಜನರಾಗಿದ್ದಲ್ಲದೇ ಡಾ. ಪುಟ್ಟರಾಜ ಗವಾಯಿ ರಾಜ್ಯ ಮಟ್ಟದ ಪ್ರಶಸ್ತಿ, ಅಲ್ಲಮ ಪ್ರಭು ಸದ್ಭಾವನಾ ಪ್ರಶಸ್ತಿ, ಚನ್ನಬಸವ ರಾಜ್ಯ ಪ್ರಶಸ್ತಿ ಮಾರ್ಕಂಡೇಯ ದೊಡಮನಿ ಪ್ರತಿಷ್ಠಾನ ಪ್ರಶಸ್ತಿ, ಧರ್ಮರತ್ನ ಪ್ರಶಸ್ತಿ, ಸಿರಿಗನ್ನಡ ಸಾಹಿತ್ಯ ರಾಜ್ಯಪ್ರಶಸ್ತಿ…. ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವರು.
ಅಧ್ಯಾತ್ಮ ಸಾಹಿತ್ಯದ ಸಮಾಜಮುಖಿ ಕಾಯಕದಲ್ಲಿ ತೊಡಗಿರುವ ಪೂಜ್ಯರು ಬರೆದ ಕೃತಿಗಳನ್ನು ಓದುತ್ತಿದ್ದರೆ ಅಧ್ಯಾತ್ಮಕ ಬದುಕನ್ನು ಆಸ್ವಾದಿಸಿದಂತಾಗುತ್ತದೆ. ಅವರ ಕಥಾ ಸಂಕಲನವ0ತೂ ಆಡು ಭಾಷೆಯ ಸೊಗಡನ್ನು ಲೀಲಾಜಾಲವಾಗಿ ಸೆರೆಹಿಡಿದು ಅದರಲ್ಲಿ ಮೂಡಿಬರುವ ಪ್ರತಿ ಘಟನೆಗಳು ನಮ್ಮ ನಡುವೆ ನಡೆಯುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತವೆ. ಲಿಂಗೈಕ್ಯ ಬಿದರಿ ಕುಮಾರ ಸ್ವಾಮಿಗಳ ತಪೋನುಷ್ಠಾನಗೈದ ಗೊರವನಕೊಳ್ಳ ವಟ್ನಾಳ ಗ್ರಾಮದ ಮಲಪ್ರಭೆಯ ಒಡಲು ಇಂದಿಗೂ ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮೀಜಿಯವರ ಅನುಗ್ರಹದ ಮೂಲಕ ಮಠದಲ್ಲಿ ಅನೇಕ ಧಾರ್ಮಿಕ ಚಟುವಟಿಕೆಗಳ ತಾಣವಾಗಿದ್ದು, ಸಂಕ್ರಮಣದ ತೆಪ್ಪೋತ್ಸವ ಮತ್ತು ರಥೋತ್ಸವ ಕೂಡ ಮಹತ್ವದ್ದಾಗಿದೆ.
ಪ್ರಶಸ್ತಿಗಳು ಪೂಜ್ಯರಿಗೆ ವಿವಿಧ ಸಂಘಸ0ಸ್ಥೆಗಳು ಹತ್ತು ಹಲವು ಪ್ರಶಸ್ತಿ ನೀಡಿ ಗೌರವಿಸಿವೆ. ಅವುಗಳಲ್ಲಿ ಹಲವುಗಳನ್ನು ಇಲ್ಲಿ ಹೆಸರಿಸುವೆ. ವಿಶ್ವಪರಬ್ರಹ್ಮಜ್ಞಾನ ಪ್ರಶಸ್ತಿ(2019) ಹುಬ್ಬಳ್ಳಿ. ಶರಣ ಹರಳಯ್ಯ ಪ್ರಶಸ್ತಿ (2018) ಅಭಿನವ ಅಲ್ಲಮ್ಮ ಪ್ರಶಸ್ತಿ (1997), ಅಜೂರ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ (2006). ಅಲ್ಲಮಪ್ರಭು ಸದ್ಭಾವನ ಪ್ರಶಸ್ತಿ (2009) ತೇರದಾಳ, ಭಾರತೀಯ ಸರ್ಕಾರ ಮಾನವ ಸಂಸಾಧನ್ ವಿಕಾಸ್ ಮಂತ್ರಾಲಯ ಸಾಂತ್ವನಾ ಪ್ರಶಸ್ತಿ ಕೋಟದ್ವಾರದ ಪ್ರಶಸ್ತಿ, ಚನ್ನಬಸವ ರಾಜ್ಯೋತ್ಸವ ಪ್ರಶಸ್ತಿ(2014) ಮುದ್ದೇಬಿಹಾಳ(ಜತ್ತಗಿ) ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.
ಇವರ ಚಿಂತನೆಗಳು ರೇಡಿಯೋದಲ್ಲಿ ಪ್ರಸಾರವಾಗಿದ್ದು ಕಸ್ತೂರಿ ವಾಹಿನಿ ಚಂದನ ವಾಹಿನಿಗಳಲ್ಲಿ ವೈಭವ ವಚನ ಚಿಂತನಗಳು ಕೂಡ ಪ್ರಸಾರವಾಗಿರುವವು. ಇವರು ಬರವಣಿಗೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ಜಮಖ0ಡಿ ಓಲೇಮಠ, ಕಡಕೋಳ ಮಠ, ನನಿಲುತೀರ್ಥ ವಡಕಹೊಳಿ ಗೊರವನಕೊಳ್ಳ ಮಠ ಶಿಗ್ಗಾವಿ ತಾಲೂಕಿನ ಹುಲಗೂರ ವಿರಕ್ತಮಠ ಹೀಗೆ ಹಲವು ಮಠಾಧಿಪತಿಗಳಾಗಿ ನಿರಂತರ ಕಾಯಕ, ದಾಸೋಹ, ಶಿಕ್ಷಣ ಜ್ಞಾನಾರ್ಜನೆ, ಜಾತೆ ಉತ್ಸವ ಇತ್ಯಾದಿಗಳಲ್ಲಿ ಕಾರ್ಯತತ್ಪರರಾಗಿ ಭಕ್ತ ಜನಮಾನಸದಲ್ಲಿ ನೆಲೆಯೂರಿರುವರು.
ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು, ಪುರಾಣ ಪ್ರವಚನಗಳು, ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳು, ಹೀಗೆ ಎಡೆಬಿಡದೆ ಸದಾವಕಾಲ ಓಡಾಟ, ಎಲ್ಲದರಲ್ಲೂ ಸಕ್ರಿಯ ಪಾಲ್ಗೊಳ್ಳುವಿಕೆ. ಇದರ ನಡುವೆ ಪ್ರವಾಸಪ್ರಿಯರು ಕೂಡ ತಾವೊಬ್ಬರೇ ಅಲ್ಲ, ಶ್ರೀ ಮಠದ ಭಕ್ತರ ಜೊತೆಗೆ ಸಾಮೂಹಿಕ ಪ್ರವಾಸ ಕ್ಷೇತ್ರಗಳು ಪುಣ್ಯದರ್ಶನ ಮೊದಲಾಗಿ ಪಾದರಸದಂತೆ ಓಡಾಡಿಕೊಂಡಿದ್ದವರು.
ಹಾಸ್ಯಪ್ರಿಯರು
ಪೂಜ್ಯರು ಅರಳು ಹುರಿದಂತೆ ಮಾತನಾಡುವ ಜೊತೆಗೆ ಸಾಂದರ್ಭಿಕ ಹಾಸ್ಯಪ್ರಜ್ಞೆಯನ್ನು ಕೂಡ ಹೊಂದಿದವರು. ಇತ್ತೀಚಿಗೆ ಅವರೊಂದಿಗೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ಅವರ ಪ್ರೀತಿಯ ಭಕ್ತನೊಬ್ಬ “ಅಜ್ಜಾರ ಚಹಾ ಪಹಾ ಕುಡಿಯಾಕ ಏನಾರ ಕೋಡ್ರಿ” ಎಂದ. ತಮ್ಮ ಶಿಷ್ಯನನ್ನು ಕರೆದು “ಏ ಒಳಗ ಚಹಾ ಐತಿಲ್ಲೋ.?” ಎಂದರು. ಅವನು “ಐತಿ ಬುದ್ದೀ” ಎಂದ. “ಹಂಗಾರ ಇವನಿಗೆ ಚಹಾ ಪಹಾ ಕುಡಿಯಲು ಏನು ಬೇಕೋ ಕೇಳಿ ಹಾಕಿಕೊಡು” ಎಂದರು. ಅವನು ಬಂದಿದ್ದು ಸಂಕ್ರಾ0ತಿಯ ಹಬ್ಬಕ್ಕೆ ಹಣದ ರೂಪದ ಕಾಣಿಕೆ ಕೇಳಲು, ಅವನು ಕೇಳಿದ ರೀತಿ ಚಹಾ ಪಹಾ ಕುಡಿಯಾಕ ಏನಾದರೂ ಕೊಡಿ ಎಂದು ಅದು ಅವರಿಗೆ ಗೊತ್ತಿತ್ತು ಕೂಡ. ಆದರೆ ಈ ಸಂದರ್ಭವನ್ನು ಹಾಸ್ಯಪ್ರಜ್ಞೆಗೆ ಬಳಸಿಕೊಂಡು ಚಹಾ ಕುಡಿದು ನಂತರ ನನ್ನ ಶಿಷ್ಯನಿಂದ ಕಾಣಿಕೆ ತಗೆದುಕೊಂಡು ಹೋಗು ಎಂದು ನವಿರಾದ ಹಾಸ್ಯದೊಂದಿಗೆ ಅವನೊಂದಿಗೆ ತಾವೂ ನಕ್ಕು ಕಳಿಸಿದರು.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ.
ತಾಲೂಕಃ ಸವದತ್ತಿ ಜಿಲ್ಲೆಃ ಬೆಳಗಾವಿ