ಉಡುಪಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಳೆದ 55 ವರ್ಷಗಳಿಂದ ರಾಷ್ಟ್ರೀಯ ವಿಚಾರಗಳ ಹಿನ್ನಲೆಯಲ್ಲಿ ದೇಶದಲ್ಲಿ ಕಾರ್ಯವನ್ನು ಮಾಡುತ್ತಾ ಬಂದಿದೆ. ಕರ್ನಾಟಕದಲ್ಲಿ ಕೂಡಾ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯವನ್ನು ನಡೆಸುತ್ತಾ ಇಂದು ಬಲಿಷ್ಠ ಸಾಹಿತ್ಯ ಸಂಘಟನೆಯಾಗಿ ರೂಪುಗೊಂಡಿದೆ. ಐದು ಶತಮಾನಗಳ ಸುದೀರ್ಘ ಹೋರಾಟದ ಫಲವಾಗಿ ಈಗ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಅದು ರಾಷ್ಟ್ರಮಂದಿರವಾಗಲಿದೆ. ಈ ಸಮಯದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ಎಲ್ಲೆಡೆ ನಡೆಯಲು ಸಿದ್ದತೆಗಳು ಪೂರ್ಣಗೊಂಡಿವೆ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಿಧಿ ಅಭಿಯಾನಕ್ಕೆ ಪೂರಕವಾಗಿ ರಾಜ್ಯದಲ್ಲಿ ಸ್ಪರ್ಧಾತ್ಮಕ ಕವಿಗೋಷ್ಠಿಯನ್ನು ಸಂಘಟಿಸಿದೆ. ಮೂರು ಹಂತಗಳಲ್ಲಿ ಕವಿಗೋಷ್ಠಿಗಳು ನಡೆಯಲಿವೆ.
ವಿಷಯ : ಅಯೋಧ್ಯೆಯಲ್ಲಿ ರಾಮ ಮಂದಿರ ಹೃದಯದಲ್ಲಿ ರಾಮ ಚಂದಿರ. ಆಯ್ಕೆಯಾದ ಕವನಗಳಿಗೆ ಬಹುಮಾನವನ್ನು ನೀಡಲಾಗುತ್ತದೆ ಹಾಗೂ ಕವನ ಸಂಕಲನ ಕೂಡಾ ಪ್ರಕಟಗೊಳ್ಳಲಿದೆ. ಮೊದಲ ಸುತ್ತಿನಲ್ಲಿ ಜಿಲ್ಲೆಯ ಎಲ್ಲಾ ಘಟಕಗಳು, ಸಮಿತಿಗಳು ಒಟ್ಟು ಸೇರಿ ಕವಿಗೋಷ್ಠಿಯನ್ನು ಆಯೋಜಿಸುತ್ತವೆ. ಜಿಲ್ಲೆಯಲ್ಲಿ ಆಯ್ಕೆಯಾದ ಹತ್ತು ಕವನಗಳು ಎರಡನೆಯ ಸುತ್ತಿಗೆ ಆಹ್ವಾನಿತವಾಗುತ್ತವೆ. ಎರಡನೆಯ ಸುತ್ತು ವಿಭಾಗ ಮಟ್ಟದಲ್ಲಿ ಆಯಾ ವಿಭಾಗ ಕೇಂದ್ರದಲ್ಲಿ ನಡೆಯುತ್ತವೆ. ಪ್ರತಿ ವಿಭಾಗದಲ್ಲಿ ಹತ್ತು ಕವನಗಳು ಮೂರನೆಯ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತವೆ. ಮೂರನೆಯ ಸುತ್ತಿನಲ್ಲಿ ಒಟ್ಟು ಐವತ್ತು ಕವನಗಳು ಪ್ರಕಟಣೆಗೆ ಆಯ್ಕೆಯಾಗುತ್ತವೆ. ಅವುಗಳಲ್ಲಿ ಮೂರು ಕವನಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಪಾತ್ರ ವಾಗುತ್ತವೆ. ಏಳು ಕವನಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿ ಕವಿಗೋಷ್ಠಿ ಜನವರಿ 24ರಂದು ನಡೆಯಲಿದೆ. ಕವನಗಳನ್ನು ಸ್ಪಷ್ಟವಾದ ಕೈಬರಹದಲ್ಲಿ ಬರೆದು ಅಥವಾ ಟೈಪ್ ಮಾಡಿ (PDF ), ಸ್ವವಿವರಗಳೊಂದಿಗೆ (ಹೆಸರು, ವಿಳಾಸ, ವಾಟ್ಸ್ಆಪ್ ನಂಬರ್) ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗೆ ವಾಟ್ಸ್ಆಪ್ ಮೂಲಕ ಕಳುಹಿಸಬೇಕು ಅಥವಾ ಕೆಳಗೆ ನೀಡಿರುವ mail idಗೆ ಕಳುಹಿಸಬಹುದು. ದೂರವಾಣಿ ಸಂಖ್ಯೆ – 9964246665.
E-mail – [email protected]
ಕವನಗಳನ್ನು ಕಳುಹಿಸಲು ಕೊನೆಯ ದಿನಾಂಕ : 21.01.2021 ಕವನಗಳ ಆಯ್ಕೆಯಲ್ಲಿ ಸಮಿತಿಯ ತಿರ್ಮಾನವೇ ಅಂತಿಮ. ಒಬ್ಬರು ಒಂದು ಕವನವನ್ನು ಮಾತ್ರವೇ ಕಳುಹಿಸಬಹುದು. ಕವನಗಳು ಗರಿಷ್ಠ 250 ಪದಗಳ ಮಿತಿಯೊಳಗಿರಬೇಕು. ಆಯ್ಕೆಯಾದ ಕವಿಗಳಿಗೆ ದಿನಾಂಕ 22.01.2021ರಂದು ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಸದವಕಾಶವನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಭಾಸಾಪ ಅಪೇಕ್ಷಿಸುತ್ತದೆ.