ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ 84 ಅಡಿ ಎತ್ತರದ ‘ಬ್ರಹ್ಮರಥ’ ಉಡುಪಿ ಜಿಲ್ಲೆಯ ಕೋಟೇಶ್ವರದ ‘ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ’ದಲ್ಲಿ ನಿರ್ಮಾಣಗೊಳ್ಳಲಿದೆ.
ರಾಷ್ಟ್ರಪ್ರಶಸ್ತಿ ಪಡೆದ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಅವರ ಪುತ್ರ ರಾಜಗೋಪಾಲ ಆಚಾರ್ಯ ಜೊತೆ ಪಂಪಾ ಕ್ಷೇತ್ರ (ಹಂಪಿ) ಕಿಷ್ಕಿಂದಾಪುರಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಇದೇ 20ರಂದು ರಾಜಗೋಪಾಲ ಆಚಾರ್ಯ ಅವರು ಕಿಷ್ಕಿಂದೆಗೆ ತೆರಳಿ, ರಥದ ವಿನ್ಯಾಸದ ಕುರಿತು ಚರ್ಚಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿರ್ಮಿಸಿಕೊಟ್ಟ ರಥದ ಮಾಹಿತಿಯನ್ನು ಈಗಾಗಲೇ ಪಡೆದುಕೊಂಡಿರುವ ಸ್ವಾಮೀಜಿ, ಅದರಲ್ಲಿ ಏನು ಬದಲಾವಣೆ ಮಾಡಬೇಕೆಂಬ ಬಗ್ಗೆ ಸಲಹೆ ನೀಡಲಿದ್ದಾರೆ. ಮೇ ತಿಂಗಳಲ್ಲಿ ಶುಭ ಮುಹೂರ್ತದಲ್ಲಿ ರಥ ನಿರ್ಮಾಣ ಆರಂಭವಾಗಲಿದೆ. ಎರಡು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ರಾಮಮಂದಿರದ ಜೊತೆಗೇ ಸಮರ್ಪಣೆ ಆಗಲಿದೆ.
ಲಕ್ಷ್ಮೀನಾರಾಯಣ ಆಚಾರ್ಯ ಅವರಿಂದ ಈಗಾಗಲೇ 127ಕ್ಕೂ ಹೆಚ್ಚು ರಥಗಳು ನಿರ್ಮಾಣಗೊಂಡಿವೆ. ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಹೀಗೆ ನೆರೆ ರಾಜ್ಯಗಳ ದೇವಸ್ಥಾನಗಳಿಗೆ ರಥಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಇವರದ್ದು.