ಶ್ರೀ ಕ್ಷೇತ್ರ ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರು ಷಷ್ಠಿ, ನಾಗಮಂಡಲೋತ್ಸವ

ಕುಂದಾಪುರ: ಶ್ರೀ ಕ್ಷೇತ್ರ ಗುಡ್ಡಮ್ಮಾಡಿ, ಸೇನಾಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜನವರಿ 19 ರಂದು ಷಷ್ಠಿ ಪ್ರಯುಕ್ತ ಕಿರುಷಷ್ಠಿ ಮಹೋತ್ಸವ, ನಾಗಮಂಡಲೋತ್ಸವ ಸೇವೆ ನಡೆಯಿತು. ಕೊರೊನಾ ಕಾರಣದಿಂದ ಈ ಬಾರಿ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಬಾರಿಯ ಕಿರುಷಷ್ಠಿ ಕಾರ್ಯಕ್ರಮವನ್ನು ವೀಕ್ಷಿಸಲು ಯೂ ಟ್ಯೂಬ್‌ನಲ್ಲಿ https://youtu.be/8cJTHMMoBMg ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

ಉಡುಪಿ ಜಿಲ್ಲೆ ಕುಂದಾಪುರ ಭಾಗದ ಜನತೆಗೆ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಷ್ಟೇ ಪುಣ್ಯಕ್ಷೇತ್ರ ಎನಿಸಿಕೊಂಡಿರುವ ಶ್ರೀ ಕ್ಷೇತ್ರ ಗುಡ್ಡಮ್ಮಾಡಿಯಲ್ಲಿ ವರ್ಷಂಪ್ರತಿ ಕಿರು ಷಷ್ಠಿ ನಡೆಯುವುದು ಪ್ರಸಿದ್ಧ. ಈ ದಿನದಂದು ಸಾವಿರಾರು ಭಕ್ತರು ಬೈಂದೂರು, ಶಿರೂರು ಹಾಗೂ ಕುಂದಾಪುರ ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದು ಭಾಗವಹಿಸಿ ಶ್ರೀ ದೇವರ ದರ್ಶನ ಪಡೆಯುತ್ತಾರೆ.

ದೇಗುಲದಲ್ಲಿ ನಡೆಯುವ ವಿವಿಧ ಸೇವೆಗಳು: ಶ್ರೀಕ್ಷೇತ್ರದಲ್ಲಿ ಪ್ರತಿ ದಿನ ಪೂಜೆ ಮಂಗಳಾರತಿ ನಡೆಯುತ್ತದೆ. ಅಲ್ಲದೇ ಪ್ರತಿ ಮಕರಸಂಕ್ರಮಣದಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ.

ಇತರ ಸೇವೆಗಳು: ಮಂಗಳಾರತಿ, ಹರಿವಾಣ ನೈವೇದ್ಯ, ತುಲಾಭಾರಸೇವೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ತೊಟ್ಟಿಲು ಸೇವೆ, ಹಣ್ಣುಗೊನೆ ಕಾಣಿಕೆ, ಮಡೆ ಪ್ರದಕ್ಷಿಣೆ, ಹೂ ಕಾಯಿ ಕಾಣಿಕೆ, ಪಂಚಕಜ್ಜಾಯ, ಕರ್ಪೂರದಾರತಿ ಸೇವೆ ಕೂಡಾ ನಡೆಯುತ್ತದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಭಾಗಗಳಲ್ಲಿ ಕಂಡು ಬರುವ ನಾಗಮಂಡಲೋತ್ಸವ ಸೇವೆ ಷಷ್ಠಿಯಂದು ಶ್ರೀಕ್ಷೇತ್ರದಲ್ಲಿ ನಡೆಯುವುದು ಬಹಳ ವಿಶೇಷ.

ನಾಗಮಂಡಲೋತ್ಸವ:

ನಾಗಾರಾಧನೆ ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ಕರಾವಳಿಯ (ತುಳುನಾಡ) ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ. ಪುರಾಣದಲ್ಲಿ ಒಂದು ಕತೆಯಿದೆ. ಗರುಡನಿಗೂ ವಾಸುಕಿಗೂ ಬದ್ದ ಧ್ವೇಷ. ಗರುಡನಿಗೆ ಹೆದರಿ ವಾಸುಕಿ ಗುಹೆಯಲ್ಲಿ ಅಡಗಿ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವನು ವಾಸುಕಿಗೆ ಅಭಯ ಹಸ್ತವನ್ನಿತ್ತು ತನ್ನ ಮಗನಾದ ಸುಬ್ರಮಣ್ಯನು ದುಷ್ಟ ನಿಗ್ರಹಕ್ಕಾಗಿ ಹುಟ್ಟಿ ಬರುವನೆಂದು, ಅವನ ಒಂದಂಶ ವಾಸುಕಿಯೊಂದಿಗೆ ಸೇರಿದಾಗ ವಾಸುಕಿಯೂ ಪೂಜಾರ್ಹನಾಗುವನೆಂದು ವರ ನೀಡುತ್ತಾನೆ. ಅಂದಿನಿಂದಲೇ ನಾಗಪೂಜೆ ನಡೆದುಕೊಂಡು ಬಂದಿದೆಯಂದು ಪ್ರತೀತಿ.

ವರ್ಣವೈಭವದ ಮಂಟಪದ ಒಳಗೆ ವಿಶಾಲವಾದ ವೇದಿಕೆಯೊಂದನ್ನು ಸಿದ್ಧಗೊಳಿಸಲಾಗುತ್ತದೆ. ವೇದಿಕೆಯ ಮಧ್ಯಭಾಗದಲ್ಲಿ ದೊಡ್ಡದಾದ ಮಂಡಲವನ್ನು ರಚಿಸಲಾಗುತ್ತದೆ. ಅದೇ ನಾಗಮಂಡಲ. ಅದರ ಸುತ್ತ ಮುಖ್ಯ ಆಚರಣೆ ನಡೆಯುವುದು. ಅಷ್ಟು ದೊಡ್ಡದಾದ ಮಂಡಲವನ್ನು ರಚಿಸುವುದೂ ವಿಶೀಷ್ಟವಾದ ಕಲೆಗಾರಿಕೆಯೆ ಆಗಿರುತ್ತದೆ. ಅದನ್ನು ಬರೆಯುವವರು ವೈದ್ಯರೆಂಬ ಜನಾಂಗದವರು. ಅದು ಅವರ ವಂಶದ ಹಕ್ಕು. ಕಾಲುಬಲಿ (ನಾಲ್ಕುಮಂಡಲಗಳೂ) ಅರ್ಧಬಲಿ (ಎಂಟು ಮಂಡಲಗಳು) ಪೂರ್ಣಬಲಿ (ಹದಿನಾರು ಮಂಡಲ) ಹೀಗೆ ಯಾವ ರೀತಿಯ ಆರಾಧನೆ ನಡೆಯುತ್ತದೋ ಅದಕ್ಕೆ ಹೊಂದಿಕೊಂಡು ಚೌಕಾಕಾರದ, ಆಯತಾಕಾರದ ಅಥವ ಅಷ್ಟಭುಜಾಕೃತಿಯ ಮಂಡಲಗಳನ್ನು ರಚಿಸಲಾಗುತ್ತದೆ. ಕೆಲವೊಮ್ಮೆ ವೃತ್ತಾಕಾರದಲ್ಲೂ ಮಂಡಲದ ರಚನೆ ಇರುತ್ತದೆ.

ಮಂಡಲವನ್ನು ರಚಿಸುವಾಗ ಸಹಾ ಕೆಂಪು, ಬಿಳಿ, ಹಸಿರು, ಹಳದಿ ಮತ್ತು ಕಪ್ಪು ಬಣ್ಣಗಳನ್ನು ಮಾತ್ರ ಉಪಯೋಗಿಸಬೇಕು ಮತ್ತು ಬಣ್ಣಗಳನ್ನೂ ಸಹ ನೈಸರ್ಗಿಕ ವಿಧಾನದಿಂದ ಪಡೆದುದಾಗಿರಬೇಕು ಎಂಬ ಕಟ್ಟಲೆ ಇದೆ. ಹಾಗಾಗಿ ಅರಿಶಿನ ಮತ್ತು ಸುಣ್ಣವನ್ನು ಬೆರೆಸಿ ಕೆಂಪು ಬಣ್ಣವನ್ನೂ, ಬಿಳಿ ಶೇಡಿ ಮಣ್ಣಿನಿಂದ ಬಿಳಿ ಬಣ್ಣವನ್ನೂ, ಎಲೆಗಳ ಪುಡಿಯಿಂದ ಹಸಿರು ಬಣ್ಣವನ್ನೂ, ಭತ್ತದ ಹೊಟ್ಟನ್ನು ಸುಟ್ಟು ಕಪ್ಪು ಬಣ್ಣವನ್ನೂ ತಯಾರಿಸಿಕೊಳ್ಳುತ್ತಾರೆ. ಹೀಗೆ ಪಂಚವರ್ಣದಿಂದ ರಚಿತವಾದ ಮಂಡಲದ ಸುತ್ತ ಅಕ್ಕಿ, ಅಡಿಕೆ ಸಿಂಗಾರ, ಬಾಳೆಗೊನೆಗಳನ್ನಿರಿಸಿ ಅದರ ಸುತ್ತಲೂ ದೀಪದ ಕಂಭಗಳನ್ನಿರಿಸುತ್ತಾರೆ.

ನಾಗಬನದಲ್ಲಿ ಅರಿಸಿನ ಮಿಶ್ರಿತ ಹಾಲು ಮತ್ತು ಅಕ್ಕಿಹಿಟ್ಟು ಮಿಶ್ರಣದ ಅಭಿಷೇಕದ ಸೇವೆಯಿಂದ (ಹಾಲಿಟ್ಟು ಸೇವೆ)ಅರಂಭವಾಗುವ ಸಕಲ ಪೂಜಾವಿಧಿಗಳನ್ನು ಪೂರೈಸಿದ ನಂತರ ನಾಗಮಂಡಲ ನಡೆಸುವ ಕುಟುಂಬದ ಯಜಮಾನ, ಪಾತ್ರಿ, ನಾಗನರ್ತಕ, ವಾದ್ಯಗಾರರು, ಪುರೋಹಿತರು ಹೀಗೆ ಎಲ್ಲರ ಗುಂಪು ವೇದಿಕೆಗೆ ಬರುತ್ತದೆ. ಆ ವೇಳೆಗೆ ಸಂಪೂರ್ಣವಾಗಿ ಕತ್ತಲು ಕವಿದಿದ್ದು ನಾಗನರ್ತನಕ್ಕೆ ಸೂಕ್ತ ವಾತಾವರಣ ನಿರ್ಮಾಣವಾಗಿರುತ್ತದೆ. ನಾಗಪಾತ್ರಿ ಮತ್ತು ನಾಗನರ್ತಕ ಆ ಸಮಯದ ಪ್ರಧಾನ ಪಾತ್ರಧಾರಿಗಳು. ಅದರಲ್ಲಿ ಕೆಂಪು ವಸ್ತ್ರವನ್ನು ಮಾತ್ರ ಧರಿಸಿದ ಪಾತ್ರಿಯು ಮಾಧ್ಯಮವೆನ್ನಿಸಿದರೆ ಪೇಟ, ಕಪ್ಪು ಪೈಜಾಮ, ಸೀರೆ ಮತ್ತು ರವಿಕೆ ಧರಿಸಿದ ಅರ್ಧನಾರಿ ವೇಷದ ನಾಗನರ್ತಕನನ್ನು ಹೆಣ್ಣು ಹಾವೆಂದು ಪರಿಗಣಿಸಲಾಗುತ್ತದೆ. ಹಾಡು ಮತ್ತು ಸಂಗೀತದೊಡನೆ ನರ್ತನ ಆರಂಭವಾಗುತ್ತದೆ. ಕೈಯಲ್ಲಿ ಹಿಡಿದ ಢಕ್ಕೆಯನ್ನು ಬಾರಿಸುತ್ತ ಹಿನ್ನೆಲೆಯ ವಾದ್ಯಗಾರರ ನಾಗಸ್ವರದೊಡನೆ ಹಾವಿನ ಬಳುಕಾಟದಂತಹ ನರ್ತನ ಆರಂಭವಾಗುತ್ತದೆ. ಹಾಗೆ ನರ್ತಿಸುವ ಅರ್ಧನಾರಿ ಅಥವ ನಾಗಕನ್ನಿಕೆಯ ವೇಷಧಾರಿಯು ವೈದ್ಯರೆಂಬ ಜನಾಂಗದವರೆ ಆಗಿರಬೇಕು. ನರ್ತನದ ನಡುವೆ ಪಾತ್ರಧಾರಿಗಳ ನಡುವಲ್ಲಿ ಪ್ರಶ್ನೆ ಉತ್ತರಗಳಿರುತ್ತವೆ. 

ನಾಗಮಂಡಲದ ವಿಧಿಗಳು ಎರಡು ದಿನಗಳ ಕಾಲ ನಡೆಯುತ್ತವಾದರೂ ಮಂಟಪದಲ್ಲಿ ನಡೆಯುವ ನಾಗನರ್ತನ ಪ್ರಧಾನವಾದುದು. ನಾಗಮಂಡಲದ ನಾಗನರ್ತನವು ನಿಜಕ್ಕೂ ನವರಸಗಳ ಸಂಗಮ. ನಾಗ ಮತ್ತು ನಾಗನರ್ತಕಿ ಮುಖಾಮುಖಿಯಾದಾಗ ಉಪಯೋಗವಾಗುವ ಸಾಹಿತ್ಯ ಆಧಾರಿತ ಗೀತೆಗಳು, ಸಾಹಿತ್ಯಮಯವಾದ ಸಂಭಾಷಣೆಗಳು, ಸಿಂಗಾರದಿಂದ ಬಡಿದುಕೊಳ್ಳುವ ನಾಗದೇವನ ಆವೇಶ, ನಾಗನರ್ತಕಿಯ ನರ್ತನ, ಢಮರುವಿನ ವಿಶಿಷ್ಟವಾದ ಲಯಬದ್ಧವಾದ ಸ್ವರ, ಹಿಮ್ಮೇಳದ ವಾದ್ಯಗಳು ಇವೆಲ್ಲವೂ ವಿಶಿಷ್ಟವಾದ ವರ್ಣನಾತೀತವಾದ ಅನುಭವವನ್ನು ನೀಡುತ್ತವೆ.

ನಾಗಮಂಡಲೋತ್ಸವದ ಮಾಹಿತಿ: ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಫೇಸ್‌ಬುಕ್ ಪೇಜ್ https://www.facebook.com/Guddammadi.SriSubramanyaTemple/

Related Articles

ಪ್ರತಿಕ್ರಿಯೆ ನೀಡಿ

Latest Articles