ಜ.25 ರಂದು ಮುನವಳ್ಳಿಯಲ್ಲಿ ಗುರು ಶಿಷ್ಯರ ಅಪೂರ್ವ ಸಂಗಮ

ಮುನವಳ್ಳಿಯಲ್ಲಿ ದಿವಂಗತ ವ್ಹಿ.ಪಿ.ಜೇವೂರ ಸ್ಮಾರಕ ಪ್ರತಿಷ್ಠಾನದ ವತಿಯಿಂದ ದಿವಂಗತ ಶ್ರೀ ವ್ಹಿ.ಪಿ.ಜೇವೂರ ಗುರುಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಜನವರಿ 25 ರಂದು ಬೆಳಗ್ಗೆ 9.30 ಕ್ಕೆ ನಡೆಯಲಿದೆ. ಇದೇ ಸಂದರ್ಭ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ಮತ್ತು ದಿವಂಗತ ಶ್ರೀ ದಿಲೀಪ ಜಂಬಗಿ ಮೂರ್ತಿ ಅವರ ಪ್ರತಿಷ್ಠಾಪನೆಗೊಳ್ಳಲಿದೆ.

ಭಂಡಾರಹಳ್ಳಿ ಸೋಮಶೇಖರ ಮಠದ ಶ್ರೀ.ಮ.ನಿ.ಪ್ರ.ಸ್ವ ಮುರುಘೇಂದ್ರ ಮಹಾಸ್ವಾಮಿಗಳು ಮತ್ತು ಶಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಜೇವೂರ ಗುರುಗಳ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಆರ್.ಗೋಮಾಡಿ ಅಧ್ಯಕ್ಷತೆ ವಹಿಸುವರು.

ಸಂಜೆ 5.30 ಕ್ಕೆ ಶ್ರೀ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗುರು ಶಿಷ್ಯರ ಅಪೂರ್ವ ಸಂಗಮ” ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿಯ ಬಿ.ಡಿ.ಸಿ.ಸಿ. ಬ್ಯಾಂಕ ನಿರ್ದೇಶಕ ಆನಂದ ಮಾಮನಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುನವಳ್ಳಿಯ ಹಿರಿಯ ವೈದ್ಯರಾದ ಡಾ.ಮೋಹನ ಬಾಳಿ ಅಧ್ಯಕ್ಷತೆ ವಹಿಸುವರು. ಎಸ.ಪಿ.ಜೆ.ಜಿ.ಪಿ.ಯು.ಕಾಲೇಜ ಮುನವಳ್ಳಿಯ ವಿಶ್ರಾಂತ ಉಪನ್ಯಾಸಕರಾದ ಪ್ರೊ.ಎಸ್.ವ್ಹಿ.ಚವಡಾಪೂರ ಕಾಉಪನ್ಯಾಸ ನೀಡುವರು.

ಸವದತ್ತಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಯಲಿಗಾರ, ಮುನವಳ್ಳಿ ಜನತಾ ಶಿಕ್ಷಣ ಪ್ರಸಾರಕ ಸಂಘದ ಅಧ್ಯಕ್ಷರಾದ ಎಂ.ಆರ್.ಗೋಪಶೆಟ್ಟಿ, ಮುನವಳ್ಳಿಯ ಗಣ್ಯ ವರ್ತಕರು ಹಿರಿಯ ಮುಖಂಡರು ರಮೇಶ ಗೋಮಾಡಿ, ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಮಹಾಮಂಡಳ ನಿರ್ದೇಶಕರಾದ ಉಮೇಶ ಬಾಳಿ, ಬಿ.ಡಿ.ಸಿ.ಸಿ ಬ್ಯಾಂಕ್ ಬೆಳಗಾವಿ ನಿರ್ದೇಶಕರಾದ ಪಂಚನಗೌಡ ದ್ಯಾಮನಗೌಡರ ಇವರು ಉಪಸ್ಥಿತರಿರುವರು.

ಇದೇ ಸಂದರ್ಭ ಸಾಧಕರಿಗೆ ಸಮ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೇವೂರ ಪ್ರತಿಷ್ಠಾನದ ವತಿಯಿಂದ ಪುರುಷ ಹಾಗೂ ಮಹಿಳೆಯರಿಗಾಗಿ ಹಮ್ಮಿಕೊಂಡ ಜಾನಪದ ಗೀತೆ ಮತ್ತು ಭಕ್ತಿಗೇತೆ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಪ್ರೇಮಿ ದಿ. ಜೇವೂರ ಗುರುಗಳು : ಶಿಕ್ಷಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ಇಂಥ ನದಿಗೆ ಆಣೆಕಟ್ಟು ಕಟ್ಟಿ ಅದರ ನಾನಾ ವಿಧದ ಪ್ರಯೋಜನ ಪಡೆದವರು ಬಹಳ ಕಡಿಮೆ. ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಇನ್ನೂ ವಿರಳ, ಅಂಥ ಮಹಾನುಭಾವರ ಸ್ಮರಣೆ ಇಂದಿಗೂ ಇರುವುದಾದರೆ ಅದು ಅವರು ನೀಡಿದ ಕೊಡುಗೆಯ ಸ್ಮರಣೆ. ಮುನವಳ್ಳಿ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ವೈಶಿಷ್ಷö್ಯ ಹೊಂದಿದ ಸ್ಥಳವಾಗಿದೆ.
ಇದೇ ಸ್ಥಳದಲ್ಲಿ ಒಂದು ಕಾಲಕ್ಕೆ ಶಿಕ್ಷಣ ಮರೀಚಿಕೆಯಂತಾಗಿದ್ದು ಆ ಸಂದರ್ಭದಲ್ಲಿ ವ್ಹಿ.ಪಿ. ಜೇವೂರ ಗುರುಗಳ ಆಗಮನದಿಂದ ಈ ಭಾಗದ ಜನರಿಗೆ ಶಿಕ್ಷಣ ಮರೀಚಿಕೆ ಎಂಬುದನ್ನು ದೂರ ಮಾಡುವ ಹಾಗಾಯಿತು. ಇಲ್ಲಿಯ ಜೇವೂರ ಗುರುಗಳು ಮತ್ತು ಸರ್ವಿ ಗುರುಗಳು ಸೇರಿ ನದಿಯ ದಡದಲ್ಲಿ ಮರದ ನೆರಳಲ್ಲಿ ಪ್ರೌಢಶಾಲೆ ಪ್ರಾರಂಭಿಸಿದರು. ಶ್ರೀ ಪಂಚಲಿ0ಗೇಶ್ವರ ಜನತಾ ಗುರುಕುಲ ಶಿಕ್ಷಣ ಸಂಸ್ಥೆಯಾಗಿ ಪ್ರಾರಂಭಗೊ0ಡು ಕ್ಲಿಷ್ಟ ಸಮಯದಲ್ಲಿ ವಿದ್ಯಾದಾನಕ್ಕೆ ಪ್ರಮುಖ ಪಾತ್ರ ವಹಿಸಿದ್ದು ಚಾರಿತ್ರಿಕ ದಾಖಲೆ. ಈ ಕಾರ್ಯಕ್ಕಾಗಿ ಅವರು ಗ್ರಾಮದಲ್ಲಿ ನಾಟಕ, ವಿವಿಧ ಕಾರ್ಯಗಳ ಮೂಲಕ ದೇಣಿಗೆ ಸಂಗ್ರಹಿಸಿ ಸಂಸ್ಥೆಗೆ ಒಂದು ರೂಪ ನೀಡಿದರು.


ಶಿಕ್ಷಕರ ಮಗನ ಶಿಕ್ಷಣ ಕ್ರಾಂತ
ಜೇವೂರ ಗುರುಗಳು ನಿಜಕ್ಕೂ ಶ್ರೇಷ್ಠದಾರ್ಶನಿಕರು. 1931 ಜನವರಿ 25 ರಂದು ಪ್ರಭುದೇವ ಹಾಗೂ ರಾಚಮ್ಮ ದಂಪತಿಗಳಿಗೆ ಮಗನಾಗಿ ಜನ್ಮತಳೆದ ಇವರ ಬಾಲ್ಯ ಶಿಕ್ಷಣ ಬೈಲಹೊಂಗಲದಲ್ಲಿ ಪ್ರೌಢಶಿಕ್ಷಣ ಬೆಳಗಾವಿಯಲ್ಲಿ ಪೂರೈಸಿದರು. ಜೇವೂರ ಗುರುಗಳ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು.ಇವರ ಬಹುತೇಕ ಸೇವೆ ಬೈಲವಾಡ ಗ್ರಾಮದಲ್ಲಿ ಆಯಿತು. ಇಲ್ಲಿ ಜೇವೂರ ಗುರುಗಳಿಗೆ ಅವರ ಪಾಠ ಪ್ರವಚನ. ಒಳ್ಳೆಯ ಸಂಸ್ಕಾರಗಳು ಪ್ರಭಾವ ಬೀರಿದ್ದವು. ತಂದೆಯ0ತೆ ತಾನೂ ಶಿಕ್ಷಕನಾಗಬೇಕೆಂದು ಬಯಸಿದ್ದರು. ಆದರೆ ಅವರನ್ನು ಉದ್ಯೋಗ ಪುಣೆಯತ್ತ ಆಕರ್ಷಿಸಿತು. ಅಲ್ಲಿ ಸೇನೆಯಲ್ಲಿ ಕೆಲವು ವರ್ಷ ಸೇವೆಗೈದರು. ನಂತರ ಬ್ರಿಟಿಷ್ ಆಡಳಿತದ ಆ ಹುದ್ದೆ ಇವರ ಮನಸ್ಸಿಗೆ ಪ್ರಾಮಾಣಿಕತೆಗೆ ಸರಿ ಬರದಿರುವುದನ್ನು ಅಂದಿನ ಸ್ವಾತಂತ್ರö್ಯ ದಿನಗಳಲ್ಲಿ ಬ್ರಿಟಿಷರು ಭಾರತೀಯರನ್ನು ಕಾಣುವ ರೀತಿಯನ್ನು ಇವರು ಕಂಡಿದ್ದರು. ನಂತರ ಕಂದಾಯ ಇಲಾಖೆಯಲ್ಲಿ ಕೆಲ ಅವಧಿಗೆ ಸೇವೆ ಸಲ್ಲಿಸಿದರು.
ಧಾರವಾಡದಲ್ಲಿ ಕಂದಾಯ ಇಲಾಖೆಯಲ್ಲಿ ಇದ್ದಾಗ ಅಲ್ಲಿ ಮುನವಳ್ಳಿಯ ಜನರು ತಮ್ಮ ಕೆಲಸಕ್ಕೆಂದು ಬರುತ್ತಿದ್ದರು. ಮೂಲತಃ ಮುನವಳ್ಳಿಯವರಾಗಿದ್ದ ಇವರಿಗೆ ಮುನವಳ್ಳಿ ಜನರು ಬಂದಾಗ ಅವರೊಂದಿಗೆ ಬಹಳ ಆತ್ಮೀಯತೆಯಿಂದ ಮಾತನಾಡುವುದು. ಶಿಕ್ಷಣಕ್ಕಾಗಿ ಸವದತ್ತಿ ಧಾರವಾಡ ಬೆಳಗಾವಿಗೆ ಹೋಗುವ ಅನಿವಾರ್ಯತೆಯಿಂದ ಬಹಳಷ್ಟು ಜನ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಕಂಡರು. ನಂತರ ಇಲ್ಲಿ ಪ್ರೌಢಶಾಲೆ ಇಲ್ಲವೆಂಬುದನ್ನು ಮನಗಂಡರು.ತಮ್ಮ ನೌಕರಿ ತ್ಯಜಿಸಿ ಸಮಾಜದ ಎಲ್ಲ ಜಾಡ್ಯಗಳಿಗೆ ದಿವ್ಯ ಔಷಧ ಶಿಕ್ಷಣವೆಂದು ಬಗೆದು ಮುನವಳ್ಳಿಗೆ ಬಂದರು. ಇಲ್ಲಿ ಸರ್ವಿ ಗುರುಗಳ ಸ್ನೇಹ ಅವರನ್ನು ಈ ಕಾರ್ಯಕ್ಕೆ ಕೈ ಜೋಡಿಸಲು ನೆರವಾಯಿತಷ್ಟೇ ಅಲ್ಲ ಸರ್ವಿ ಗುರುಗಳು ಗಣಿತ ವಿಷಯದಲ್ಲಿ ಬಹಳಷ್ಟು ತಮ್ಮದೇ ಆದ ವೈಶಿಷ್ಟö್ಯತೆಯನ್ನು ಹೊಂದಿದ್ದರು.ಗಣಿತ ಕಬ್ಬಿಣದ ಕಡಲೆಯಲ್ಲ ಅದು ಸರಳ ವಿಷಯ ಎಂಬುದನ್ನು ಮಕ್ಕಳಿಗೆ ಬೋಧಿಸುವ ಮೂಲಕ ಗಣಿತದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಿ ಬೋಧಿಸುವ ಗುಣವನ್ನು ಅವರು ಹೊಂದಿದ್ದರು.ಹೀಗೆ ಇಬ್ಬರೂ ತಮ್ಮ ತಮ್ಮ ಆಸಕ್ತಿಯ ವಿಷಯಗಳನ್ನು ಆರಿಸಿಕೊಂಡು ಪಾಠಕ್ಕೆ ತೊಡಗಿದರು.
ಧಾರವಾಡ ತಪೋವನದ ಶ್ರೀ ಕುಮಾರ ಸ್ವಾಮಿಗಳ ಅಂಥಕರಣಕ್ಕೆ ಪಾತ್ರರಾದ ಇವರು ಕನ್ನಡ, ಇಂಗ್ಲೀಷ, ಸಂಸ್ಕೃತ, ಉರ್ದು ಹೀಗೇ ಸಕಲ ಭಾಷಾ ಪ್ರವೀಣರು ಅಷ್ಠೆ ಅಲ್ಲ ಭಾಷೆ, ಸಾಹಿತ್ಯ, ಕಲೆ, ನಾಟಕ ಸಂಗೀತದಲ್ಲಿಯೂ ಪ್ರಬುದ್ದರಾಗಿದ್ದರು. ಸ್ವತಃ ಶಿಕ್ಷಕರಾಗಿ ಸರ್ವಿ ಗುರುಗಳೊಂದಿಗೆ ಕಟ್ಟಿದ ಇವರ ಕನಸಿನ ಜನತಾ ಶಿಕ್ಷಣ ಪ್ರಸಾರಕ ಸಂಸ್ಥೆ ಇಂದು ಮುನವಳ್ಳಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಅಷ್ಟೇ ಅಲ್ಲ ಬಡಜನರ ಕಲ್ಯಾಣಕ್ಕಾಗಿ ಭಾರತೀಯ ಗ್ರಾಮೀಣ ಶಿಕ್ಷಣ ಪ್ರಸಾರಕ ಸಂಸ್ಥೆ ಹುಟ್ಟು ಹಾಕಿದರು. ಗಂಧರ್ವ ಸಂಗೀತ ಸರೋವರ ಪಾಠಶಾಲೆ, ದಲಿತ ಜಾಗೃತಿ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದರು. ಮಾವೋ,ಲೆನಿನ್, ಟ್ಯಾಗೋರ ಮತ್ತು ಬಸವಣ್ಣನವರ ವಿಚಾರಧಾರೆ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಇವರು ತಮ್ಮ ಅಂತ್ಯಕಾಲದವರೆಗೂ ಶಿಕ್ಷಣದ ಚಿಂತನೆಗಾಗಿ ಬದುಕನ್ನು ರೂಪಿಸಿದರು. ಬಡಮಕ್ಕಳಿಗೆ ಇಂಗ್ಲೀಷ ಕಲಿಕೆಯಾಗಲಿ ಉನ್ನತ ವ್ಯಾಸಂಗ ಸಿಗಲಿ ಎಂದು ತಮ್ಮ ಮನೆಯಲ್ಲಿಯೇ ಇಂಗ್ಲೀಷ ಭಾಷಾಂತರ ಪಾಠಮಾಲೆ, ಪ್ರಾರಂಭಿಸಿ ಪುಸ್ತಕ ಕೂಡ ಉಚಿತವಾಗಿ ನೀಡಿ ತಾವೇ ಬೋಧಿಸುವ ಮೂಲಕ ಅಂಥ ವಿದ್ಯಾರ್ಥಿಗಳಿಂದೂ ನಾಡಿನೆಲ್ಲಡೆ ಮುನವಳ್ಳಿಯ ಖ್ಯಾತಿ ಬೆಳೆಸಿ ಉನ್ನತ ಹುದ್ದೆಗಳಲ್ಲಿ ಇರುವುದು ಸ್ಮರಣಾರ್ಹ.

ವರದಿ ಮತ್ತು ಲೇಖನ: ವೈ.ಬಿ.ಕಡಕೋಳ

Related Articles

ಪ್ರತಿಕ್ರಿಯೆ ನೀಡಿ

Latest Articles