ಹುಚ್ಚುರಾಯಸ್ವಾಮಿ ಎಂದೇ ಪ್ರಸಿದ್ದಿ ಪಡೆದ ಆಂಜನೇಯ ದೇವನಿವನು

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನಲ್ಲಿ ಆಂಜನೇಯನ ಪೂಜೆ ಅವ್ಯಾಹತವಾಗಿ ಸಾಗಿ ಬಂದಿದೆ.  ಬಹುತೇಕ ಉರಿನಲ್ಲಿ ಅಂಜನೇಯ ದೇವಾಲಯಗಳು ಸಾಮಾನ್ಯವಾಗಿ ಕಾಣ ಬರುತ್ತವೆ.  ಅದರಲ್ಲು ಶ್ರೀ ವ್ಯಾಸಾರಾಯರು ತಾವು ಹೋದ ಕಡೆಯಲ್ಲಿ ಅವರ ಪ್ರಾಣ ದೇವರಾಗಿದ್ದ ಆಂಜನೇಯ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಅಂತಹ ದೇವಾಲಯಗಳಲ್ಲಿ ಸಾಲಿಗ್ರಾಮವನ್ನು ಮೂಗಿನಲ್ಲಿ ಹೊಂದಿದ ಅಪುರೂಪದ ಆಂಜನೇಯ ದೇವಾಲಯ ದೇವಾಲಯ ಕೂಡಾ ಒಂದು.

ಸಾಲಿಗ್ರಾಮವನ್ನು ಹೊಂದಿದ ನಾಡಿನ ಮೂರು ಆಂಜನೇಯ ದೇವಾಲಯಗಳನ್ನ ಒಂದೇ ದಿನ ದರ್ಶನ ಮಾಡಿದರೆ ಹನುಮನ ಆಶೀರ್ವಾದ ಸಿಗುವುದು ಎಂಬ ನಂಬಿಕೆ ಭಕ್ತರಲ್ಲಿ ಇದೆ. (ಕದರಮಂಡಲಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ ಮತ್ತು ಶಿಕಾರಿಪುರದ ಬ್ರಾಂತೇಶ). ಇವುಗಳಲ್ಲಿ  ಶ್ರೀ ಹುಚ್ಚುರಾಯಸ್ವಾಮಿ ಎಂದೇ ಪ್ರಸಿದ್ದಿ ಪಡೆದ ಶಿಕಾರಿಪುರದ ಆಂಜನೇಯನ ದೇವಾಲಯ ಪ್ರಮುಖವಾದದ್ದು.

ದೇವಾಲಯ ಗರ್ಭಗುಡಿ ಹಾಗು ಅಂತರಾಳ, ನವರಂಗ ಮತ್ತು ಪಡಸಾಲೆ ಹೊಂದಿದೆ. ಗರ್ಭಗುಡಿಯಲ್ಲಿ ಮೈಸೂರು ಅರಸರ ಕಾಲಕ್ಕೆ ಸೇರಿದ ಆಂಜನೇಯನ ಶಿಲ್ಪವಿದೆ. ಇತಿಹಾಸ ಪುಟದಲಿ ಮೈಸೂರಿನ ಅರಸರು ಇಲ್ಲಿಗೆ ಸೇವೆ ನೀಡಿದ ಉಲ್ಲೇಖವಿದೆ. ದೇವಾಲಯದ ಶಿಲ್ಪದಲ್ಲಿ ಉಗ್ರ ನರಸಿಂಹ, ಹುಲಿ ವೇಷದ ಮಾನವ, ಶಿವಲಿಂಗ ಪೂಜೆ ಮಾಡುತ್ತಿರುವ ಮಾನವ, ವಾಲಿ ಸುಗ್ರೀವ ಕಾಳಗ ಹಾಗು ಗಂಡು ಭೇರುಂಡೇಶ್ವರ ಮುಖ್ಯವಾದದ್ದು,  ದ್ವಾರಗಳಲ್ಲಿ ವೈಷ್ಣವ ದ್ವಾರ ಪಾಲಕರಿದ್ದು ದ್ವಾರದಲ್ಲಿ ಗಜಲಕ್ಶ್ಮಿ ಕೆತ್ತನೆ ಇದೆ.

ನವರಂಗ ಮತ್ತು ಪಡಸಾಲೆ ನಂತರ ಕಾಲದ ಸೇರ್ಪಡೆಯಾಗಿದ್ದು.  ಇಲ್ಲಿ ತಾಳಗುಂದ ಗ್ರಾಮದಲ್ಲಿ ಶಿಥಿಲವಾಗಿದ್ದ ದೇವಾಲಯದಲ್ಲಿದ್ದ ಶ್ರೀ ರಾಮ ಲಕ್ಷಣರ ಶಿಲ್ಪಗಳು ಹಾಗು ನೂತನವಾಗಿ ನಿರ್ಮಿಸಿದ್ದ ಸೀತಾ ವಿಗ್ರಹ ಇದೆ.

ಬಹುತೇಕ ನವೀಕರಣಗೊಂಡಿರುವ ಈ ದೇವಾಲಯಕ್ಕೆ ಬೃಹತ್ತಾದ ರಾಜ ಗೋಪುರವನ್ನು ಈಚೆಗೆ ನಿರ್ಮಿಸಲಾಗಿದೆ. ಹಳೆಯ ಇಟ್ಟಿಗೆ ಮತ್ತು ಗಾರೆಗಳಿಂದ ಕೂಡಿದ ಕಟ್ಟಡಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ. ಆದರೂ ಮೊದಲ ನೋಟಕ್ಕೆ ಗಮನ ಸೆಳೆಯುವ ಅಪುರೂಪದ ಈ ಮೂರ್ತಿಗೆ ಮಾಡುವ ಬೆಣ್ಣೆ ಮತ್ತು ವಿಳ್ಯೆದೆಲೆ ಅಲಂಕಾರ ಪ್ರಸಿದ್ದಿ. ಇಲ್ಲಿ ಏಪ್ರಿಲ್ ಮಾಸದಲ್ಲಿ ಹುಣ್ಣಿಮೆಯಂದು ನಡೆಯುವ ಬ್ರಹ್ಮ ರಥೋತ್ಸವಕ್ಕೆ ಸಾಕಷ್ಟು ಭಕ್ತರು ಸೇರುತ್ತಾರೆ.

ಇಲ್ಲಿ ಬ್ರಹ್ಮ ರಥೋತ್ಸವ ಸಮಯದಲ್ಲಿ ಕೆಳದಿ ಅರಸರ ಕಾಲದಲ್ಲಿ ನೀಡಲಾದ ರಥವನ್ನು ಬಳಸಲಾಗುತ್ತದೆ. ಇಲ್ಲಿನ ಭೂತಪ್ಪಗಳು ದೇವಾಲಯಕ್ಕೆ ನಿರ್ಮಿಸಿರುವುದು ವಿಷೇಶ. ಇಲ್ಲಿನ ಭಗ್ನ ಶಿಲ್ಪಗಳನ್ನು ಶಿವಮೊಗ್ಗದ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

ಇನ್ನು ಇಲ್ಲಿನ ಸ್ಥಳೀಯ ಪುರಾಣದಂತೆ ಶ್ರೀ ವ್ಯಾಸರಾಯರು ಇಲ್ಲಿಗೆ ಬಂದಾಗ ಇಲ್ಲಿನ ಕೆರೆಯ ದಂಡೆಯ ಮೇಲೆ ಸ್ಥಾಪಿಸಲು ಮನಸ್ಸು ಮಾಡಿದರು.  ಆದರೆ ಆ ಸ್ಥಳದಲ್ಲಿ ಶ್ರೀ ಹುಚ್ಚಪ್ಪ ಒಡೆಯರ್ ಎಂಬ ಸ್ವಾಮಿಗಳು ಮಠ ನಿರ್ಮಿಸಿದ್ದರು. ವ್ಯಾಸರಾಯರು ಅವರ ಬಳಿ ವಿನಂತಿಸದಾಗೆ ನನ್ನ ಹೆಸರಂದ ದೇವರನ್ನು ಕರೆಯುವುದಾದರ ಜಾಗ ನೀಡಲು ಸಿದ್ದ ಎಂದರು. ಹಾಗಾಗಿ ಅಂಜನೇಯ ದೇವರಿಗೆ ಹುಚ್ಚರಾಯ ಸ್ವಾಮಿ ಎಂಬ ಹೆಸರು ಬಂದಿತು.  ನಂತರ ಕಾಲದಲಿ ಪರಕೀಯರ ದಾಳಿಯಿಂದ ಮೂರ್ತಿ ಭಿನ್ನವಾದಾಗ ಹೊಸ ಮೂರ್ತಿಯನ್ನ ಸ್ಥಾಪಿಸಲು ಯೋಚಿಸಿದರು. ಇಲ್ಲಿನ ಸ್ವಾಮಿಗೆ ಬಿದ್ದ ಕನಸಿನಂತೆ ಇಲ್ಲಿನ ಕೆರೆಯ ಬಳಿ ಸಿಕ್ಕ ಮೂರ್ತಿಯನ್ನ ಸ್ಥಾಪಿಸಲು ತಿರ್ಮಾನಿಸಲಾಯಿತು, ಆದರೆ ಈ ಮೂರ್ತಿಯ ಮೂಗು ಭಗ್ನವಾಗಿತ್ತು.  ಹಾಗಾಗಿ ಸ್ವಾಮಿಯು ಪೂಜಿಸುತ್ತಿದ್ದ ಸಾಲಿಗ್ರಾಮವನ್ನು ಮೂಗಿನಲ್ಲಿ ಜೋಡಿಸಿ ಪ್ರತಿಷ್ಟಾಪಿಸಲಾಯಿತು.  ಇಲ್ಲಿ ಮೂರ್ತಿ ಸಿಕ್ಕ ಕಾರಣ ಕೆರೆಗೆ ಹುಚ್ಚರಾಯನ ಕೆರೆ ಎಂಬ ಹೆಸರು ಬಂದಿತು. ಮೂಲ ವಿಗ್ರಹ ಭಗ್ನವಾದ ಕಾರಣ ಒಡಕಪ್ಪ ಎಂದು ಕರೆಯಲಾಗುತ್ತಿದ್ದು ಪ್ರಾಕಾರದ ಕೋಣೆಯಲ್ಲಿ ಇರಿಸಲಾಗಿದೆ.

ತಲುಪವ ಬಗ್ಗೆ: ಶಿವಮೊಗ್ಗದಿಂದ  ಶಿಕಾರಿಪುರ ಸುಮಾರು 55 ಕಿಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles