ಗುರುವಿನ ಹಾದಿಯಲ್ಲಿ ಶಿಷ್ಯರ ಸಾಧನೆ ಇರಬೇಕು: ಮುರುಘೇಂದ್ರ ಮಹಾಸ್ವಾಮಿ

ಸವದತ್ತಿಃ “ಜಂಬಗಿಯವರು ಸರ್ವಜನಾಂಗವನ್ನು ಪ್ರೀತಿಸಿ, ಎಲ್ಲರ ವಿಶ್ವಾಸ ಗಳಿಸಿದ್ದರು. ಶಿಕ್ಷಣ ಪ್ರೇಮಿಗಳಾದ ಇವರು ವಿಕಲಚೇತನ ಮಕ್ಕಳೂ ಕೂಡಾ ಇತರರಂತೆ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಮಹದಾಸೆಯಿಂದ ಜೇವೂರ ಗುರುಗಳ ಹೆಸರಿನಲ್ಲಿ ಕಿವುಡು ಮಕ್ಕಳಿಗಾಗಿ ವಿಶೇಷ ವಸತಿ ಶಾಲೆಯನ್ನು ತೆರೆದಿದ್ದರು. ಗುರು ಶಿಷ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಇಂದಿನ ಪೀಳಿಗೆಗೆ ದಾರಿದೀಪ” ಎಂದು ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಮಹಾಸ್ವಾಮಿಗಳು ನುಡಿದರು.

ಅವರು ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ದಿವಂಗತ ವ್ಹಿ.ಪಿ.ಜೇವೂರ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಜ.25 ರಂದು ದಿವಂಗತ ಶ್ರೀ ವ್ಹಿ.ಪಿ.ಜೇವೂರ ಗುರುಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ಮತ್ತು ದಿವಂಗತ ಶ್ರೀ ದಿಲೀಪ ಜಂಬಗಿ ಗುರು ಶಿಷ್ಯರ ಮೂರ್ತಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಪೂಜ್ಯರು ಆಶೀರ್ವಚನ ನೀಡಿ “ಒಬ್ಬ ಯೋಗ್ಯ ಗುರುಗಳಾದ ಶ್ರೀ ವಿ.ಪಿ.ಜೇವೂರ ಅವರನ್ನು ಗುರುವಾಗಿ ಸ್ವೀಕರಿಸಿ, ಸಕಲ ಸಾಧನೆ ಮಾಡಿ, ಗುರುವಿನ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಅನೇಕರ ಬಾಳಿಗೆ ಆಶಾಕಿರಣವಾದ ಶ್ರೀ ದಿಲೀಪ ಜಂಬಗಿಯವರ ಜೀವನ ಅದ್ಭುತವಾದದ್ದು. ಅವರ ವಿಚಾರಧಾರೆಗಳು ಗುರುವಿಗೆ ತಕ್ಕ ಶಿಷ್ಯನಾಗಿ ರೂಪಿಸಿದ್ದವು. ಈ ಪರಂಪರೆ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾದುದು” ಎಂದರು.

ಯಕ್ಕುಂಡಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ರಮೇಶ ಮುರಂಕರ ಮಾತನಾಡಿ, “ಜೀವನದಲ್ಲಿ ಯಶಸನ್ನು ಸಾಧಿಸಲು, ಜೀವನ್ಮುಕ್ತರಾಗಲು ಗುರುವಿನ ಮಾರ್ಗದರ್ಶನ, ಗುರುವಿನ ಕೃಪಾಕಟಾಕ್ಷ ಅವಶ್ಯ. ಅದಕ್ಕೆಂದೆ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ಹೇಳಲಾಗಿದೆ. ಯೋಗ್ಯ ಗುರುಗಳನ್ನು ಪಡೆದು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.” ಎಂದರು.

“ದಿವಂಗತ ಜಂಬಗಿಯವರು ಬದುಕಿದ ರೀತಿ ಕೆಳಹಂತದಿ0ದ ಮೇಲಿನ ಹಂತದವರೆಗೆ ಬಡವರು ದೀನ ದಲಿತರ ಏಳಿಗೆಯನ್ನು ಕಂಡರು.ಜೇವೂರ ಗುರುಗಳ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಅವುಗಳನ್ನು ತಮ್ಮ ಒಡನಾಡಿಗಳಿಗೂ ತುಂಬಿದರು” ಎಂದು ರೇಣುಕಪ್ರಸಾದ ಜಂಬಗಿ ತಂದೆಯವರ ಸ್ಮರಣೆ ಮಾಡಿದರು.

ಜೇವೂರ ಗುರುಗಳ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಂ.ಆರ್.ಗೋಮಾಡಿ ಅಧ್ಯಕ್ಷತೆ ವಹಿಸಿದ್ದರು. ಗುರುಮಾತೆ ಜಯಶ್ರೀ ಕುಲಕರ್ಣಿ, ರೇಣುಕಪ್ರಸಾದ ಜಂಬಗಿ ವ್ಹಿ.ಪಿ.ಜೇವೂರ ಶಾಲೆಯ ಶಿಕ್ಷಕವೃಂದ, ಪ್ರತಿಷ್ಠಾನದ ಪದಾಧಿಕಾರಿಗಳು ಜೇವೂರ ಗುರುಗಳ ಅಭಿಮಾನಿಗಳು, ಜಂಬಗಿಯವರ ಸುಪುತ್ರಿ ರಾಜೇಶ್ವರಿ ಪೂಜೇರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸುಜಾತಾ.ಎಂ.ಬಡ್ಲಿ(ಕಾಟಿ) ಪ್ರಾರ್ಥಿಸಿದರು. ಸಂಸ್ಕೃತ ಶಿಕ್ಷಕ ಶೇಷಗಿರಿ ಕಾರ್ಯಕ್ರಮ ನಿರೂಪಿಸಿದರು. ಬಾಳು ಹೊಸಮನಿ ಸ್ವಾಗತಿಸಿ, ಶಿವುಕುಮಾರ ಕಾಟಿ ವಂದಿಸಿದರು.

ವರದಿಃ ವೈ.ಬಿ.ಕಡಕೋಳ

Related Articles

ಪ್ರತಿಕ್ರಿಯೆ ನೀಡಿ

Latest Articles