*ರೂಪಾಪ್ರಸಾದ ಕೋಡಿಂಬಳ ಮಲಗು ಮಲಗೆನ್ನ ಮುದ್ದಿನ ಕೂಸೆ ಲಾಲಿಯ ಹಾಡುವೆನು ನಲಿದು ಒಲಿದು ನಿದ್ದೆಯು ಬರಲಿ ಜೋಗುಳ ಹೇಳುವೆನು || ಪದಗಳ ಪುಂಜವ ಹೆಣೆಯುವೆ ಚಂದದಿ ಕವನದ ಸಾಲಿನಲಿ ಮುದಗಳ ತರಿಸುವೆ ಎರೆಯುತ ಅಂದದ ಕನಸಿನ ತೇರಿನಲಿ || ಸ್ವರ್ಗದ ಲೋಕವು ಕಾಣಲಿ ಮಗುವೆ ನಿದಿರೆಯ ಕಣ್ಗಳಿಗೆ ಹಗ್ಗವ ಜಗ್ಗುತ ತೊಟ್ಟಿಲ ತೂಗುವೆ ಕೆಲಸವು ಕೈಗಳಿಗೆ || ನಿದಿರಾ ದೇವಿಯು ಮೆಲ್ಲನೆ ಕಾಡಲಿ ಮುದ್ದಿನ ಮಗುವಿನಲಿ ಬೆದರುವ ಕನಸದು ನಿಲ್ಲದೆ ಓಡಲಿ ಸದ್ದಿಗೆ ಹೆದರುತಲಿ || ಚಂದಮಾಮನ ಕಥೆಯನು ಹೇಳುವೆ ತೊಟ್ಟಿಲ ಜೀಕುತಲಿ ಹಠವನು ಮಾಡದೆ ದಿಟದಲಿ ಮಲಗು ಕಥೆಯನು ಕೇಳುತಲಿ || ನಾಳೆಯ ಬೆಳಕು ನೀನಾಗು ಮಗುವೆ ಅಮ್ಮನ ಬಾಳಿನಲಿ ಧ್ಯೇಯದಿ ಸಲಹುವೆ ಒಳಿತಾಗು ಜಗಕೆ ನ್ಯಾಯದ ಮಾರ್ಗದಲಿ ||