*ಕೃಷ್ಣ ಪ್ರಕಾಶ್ ಉಳಿತ್ತಾಯ
ಸರ್ವಾರುಣಾನವದ್ಯಾಂಗೀ ಸರ್ವಾಭರಣಭೂಷಿತಾ
ಶಿವಕಾಮೇಶ್ವರಾಂಕಸ್ಥಾ ಶಿವಾ ಸ್ವಾಧೀನವಲ್ಲಭಾ||
ಶಿರದಿಂದ ಕಾಲಬೆರಳಿನವರೆಗಿನ ವರ್ಣನೆಯನ್ನು ಮಾಡಿದ ಋಷಿಗೆ ಮತ್ತೆ ತಾಯಿಯ ಇಡೀಯ ತೇಜಸ್ಸಿನ ಬಗೆಗೆ ಮನಸ್ಸು ಹರಿಯುತ್ತದೆ. ತೇಜಸ್ಸೇ ಮನವನ್ನು ತುಂಬಿ ಋಷಿ ಅದನ್ನೇ ಚಿಂತಿಸುವಂತೆ ಮಾಡಿ ವರ್ಣಿಸುತ್ತಾರೆ.
“ಸರ್ವಾರುಣಾ” ಋಷಿಗೆ ದೇವಿಯು ಅರುಣವರ್ಣದಲ್ಲಿ ಕಾಣುತ್ತಾಳೆ. ಹಿತವಾದ ಅರುಣಕಾಂತಿಯನ್ನು ಪಸರಿಸಿಕೊಂಡು ಸಾಕ್ಷಾತ್ಕರಿಸಿಕೊಂಡ ಋಷಿಗೆ ದರ್ಶನವನ್ನು ಕೊಡುತ್ತಾಳೆ ಜನನಿ ಲಲಿತೆ.
“ಅನವದ್ಯಾಂಗೀ” ಲಲಿತೆ ದೋಷವೇ ಇಲ್ಲದವಳು. ದೋಷರಹಿತವಾದ ಅಂಗವುಳ್ಳವಳು. ಆಕೆಯ ದೇಹದ ಅಂಗಾಗಗಳು ಅತ್ಯಂತ ಪರಿಶುದ್ಧವೂ ಸಮನ್ವಿತವೂ ಅಕಲಂಕಿತವೂ ಆಗಿದೆ. ಸುಲಕ್ಷಣವಾದ ದೇಹಾವಯವಗಳನ್ನು ಹೊಂದಿ ತಪಸ್ವಿಗಳಿಗೆ ಕಾಣುವವಳು.
“ಸರ್ವಾಭರಣಭೂಷಿತಾ” ಲಲಿತೆ ಸಕಲ ಮಂಗಲವಾದ ಭೂಷಣಗಳಿಂದಲೂ ಆಭರಣಗಳಿಂದಲೂ ಶೋಭಿಸುತ್ತಿರುವವಳು.
“ಶಿವಕಾಮೇಶ್ವರಾಂಕಸ್ಥಾ” ಶಿವಕಾಮೇಶ್ವರನ ಅಂಕದಲ್ಲಿ (ತೊಡೆಯಲ್ಲಿ) ಕುಳಿತಿರುವವಳು.
“ಶಿವಾ” ಶಿವೆಯು, ಶಿವನ ಪತ್ನಿಯು, ಮಂಗಲಸ್ವರೂಪಿಯೂ ಆಗಿರುವವಳು.
“ಶಿವಾಸ್ವಾಧೀನವಲ್ಲಭಾ” ಶಿವನು ಲಲಿತೆಗೆ ಅಧೀನ. ಅಂಥ ಕಾಮೇಶ್ವರನನ್ನು ವಲ್ಲಭನನ್ನಾಗಿಸಿದವಳು. ಇಲ್ಲಿ ವಿವಕ್ಷೆ, ಶಿವನ ತಪಸ್ಸಿನ ಫಲ ಲಲಿತೆ. ಅಂದರೆ ಶಿವನ ಆತ್ಮಜ್ಞಾನ ಈಕೆ. ಹಾಗಾಗಿಯೇ ಈಕೆಗೆ ಅಧೀನ ಆತ. ಹಾಗಾಗಿ ಆತನು ಈಕೆಯ ವಲ್ಲಭ. ಆತ ಈಕೆಯ ಜತೆಗಿದ್ದರೆ ಮಾತ್ರವೇ ಸೃಷ್ಟಿ. ಆಕೆ ಶಕ್ತಿ; ಈತ ಶಿವ. ಶಕ್ತಿ ಆತನ್ನಲ್ಲಿ ಸಂಚಾರವಾದರೆ ಸ್ಪಂದ. ಸ್ಪಂದದಿಂದ ಚಲನೆ. ಜಗದ ಚಲನೆ.
ಅದೇ ನಮ್ಮಲ್ಲೂ ಪ್ರತಿಬಿಂಬಿತವಾಗುವುದು. ಈಕೆಯ ಧ್ಯಾನ ನಮ್ಮನ್ನೂ ಕ್ರಿಯಾಶೀಲರನ್ನಾಗಿತ್ತದೆ. ಕರ್ತವ್ಯದ ಕಡೆಗೆ ದೂಡುತ್ತದೆ. ಕ್ರಿಯಾಶೀಲತೆ ಅಭ್ಯುದಯಕ್ಕೆ ಕಾರಣವಾಗುತ್ತದೆ. ಇದು ಈಕೆಯ ಸ್ಮರಣೆಯ ಫಲ.