ಮುನವಳ್ಳಿ: ಸವದತ್ತಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ವಿಭಾಗದಲ್ಲಿ ವಿಕಲಚೇತನ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ. ಕಡಕೋಳ ಅವರನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾಗವಾಡದಲ್ಲಿ ಜನವರಿ 31 ರವಿವಾರ 4ಗಂಟೆಗೆ ಜರುಗಲಿರುವ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.
ವೈ.ಬಿ.ಕಡಕೋಳ ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತಿಯಾಗಿ ಸಾವು ಬದುಕಿನ ನಡುವೆ (ಕಥಾ ಸಂಕಲನ). ಸ0ಸ್ಕಾರಫಲ (ಮಕ್ಕಳ ಕಥಾ ಸಂಕಲನ), ಚರಿತ್ರೆಗೊಂದು ಕಿಟಕಿ (ಅಂಕಣ ಬರಹ ಸ್ಥಳನಾಮ ಅಧ್ಯಯನ), ಕಥೆಯಲ್ಲ ಜೀವನ (ಲೂಸಿ ಸಾಲ್ಡಾನಾ ಗುರುಮಾತೆಯ ಜೀವನ ಚಿತ್ರಣ), ಅಮೃತಧಾರೆ (ಸಂಪಾದಿತ ಕೃತಿ), ದೇಗುಲ ದರ್ಶನ (ದೇವಾಲಯಗಳ ಕುರಿತ ಬರಹಗಳು), ಒಂಟಿ ಪಯಣ(ಸಂಪಾದಿತ) ಗುರು ಶಿಷ್ಯರ ಅಪೂರ್ವ ಸಂಗಮ (ಸ0ಪಾದಿತ) ಕೃತಿಗಳನ್ನು ಪ್ರಕಟಿಸಿದ್ದಾರೆ. ಸಹ ಸಂಪಾದಕರಾಗಿ ನೂರು ಶಿವಾನುಭವಗಳು ಮತ್ತು ಮುನಿಪುರಾಧೀಶರರು ಕೃತಿಗಳಲ್ಲಿ ತಮ್ಮ ಸಾಹಿತ್ಯದ ಬರಹವನ್ನು ರೂಪಿಸಿದ್ದು ಹಾರೂಗೇರಿಯ ಅಜೂರ ಪ್ರತಿಷ್ಠಾನದಿಂದ ಪಯಣಿಗೆ ಕೃತಿಗೆ ಜಿಲ್ಲಾ ಮಟ್ಟದ ಪುರಸ್ಕಾರ ಮತ್ತು ಚರಿತೆಗೊಂದು ಕಿಟಕಿ ಕೃತಿಗೆ ಗುಲ್ಬರ್ಗ ಜಿಲ್ಲೆಯ ಮೇದಕದ “ಅಕ್ಷರ ಲೋಕದ ನಕ್ಷತ್ರ” ರಾಜ್ಯ ಪ್ರಶಸ್ತಿ ದೊರೆತಿದೆ. ಇವರ ‘ಹಚ್ಚು ದೀಪವ ಗೆಳತಿ’ ಕವನಕ್ಕೆ ಬೆಳಗಾವಿ ಜಿಲ್ಲಾ ಸಿರಿಗನ್ನಡ ವೇದಿಕೆಯ ರಾಜ್ಯ ಪ್ರಶಸ್ತಿ ದೊರೆತಿದೆ.
ಶಿಕ್ಷಕರಾಗಿ ಕೂಡ ವಿಶೇಷ ರಾಜ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಇವರಿಗೆ ಕಳೆದ ವರ್ಷ ಧಾರವಾಡದ ಡೆಪ್ಯುಟಿ ಚನ್ನಬಸಪ್ಪ ಸಂಸ್ಥೆಯ ಕಟ್ಟೀಮನಿ ಪ್ರತಿಷ್ಠಾನದವರು ವಿಭಾಗ ಮಟ್ಟದ ಶಿಕ್ಷಕ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಿರುವರು. ನಾಡಿನ ಎಲ್ಲ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಪ್ರವಾಸ ಬರಹ, ಲಲಿತ ಪ್ರಬಂಧ, ವ್ಯಕ್ತಿ ಚಿತ್ರಣ, ಧಾರ್ಮಿಕ ಸ್ಥಳಪುರಾಣ ಹೀಗೆ ಸಾಹಿತ್ಯದ ಎಲ್ಲ ಮಗ್ಗಲುಗಳಲ್ಲಿ ಚಲನಶೀಲ ಬರಹಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾ.ವ್ಹಿ.ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ವಿಷಯಕ್ಕೆ ಎಂ.ಫಿಲ್ ಪದವಿ ಪಡೆದಿದ್ದು, ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ.ಅಧ್ಯಯನ ಕೈಗೊಂಡಿದ್ದಾರೆ.